ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲೊಬ್ಬರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿಯೂ ಸಾಕಷ್ಟು ದಾಖಲೆಗಳನ್ನು ಈಗಾಗಲೇ ನಿರ್ಮಿಸಿರುವ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‍ನಲ್ಲಿ ತಮ್ಮದೇ ಆದ ದೊಡ್ಡ ಹೆಸರನ್ನು ಮಾಡಿದ್ದಾರೆ. ವಿಶ್ವದ ಬಹುತೇಕ ಎಲ್ಲಾ ತಂಡಗಳ ವಿರುದ್ಧವೂ ಅಬ್ಬರಿಸಿರುವ ವಿರಾಟ್ ಕೊಹ್ಲಿ 5 ಬಾರಿ ಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಕೂಡ ಸಾಲು ಸಾಲು ಮರೆಯಲಾಗದಂತಹ ಇನ್ನಿಂಗ್ಸ್‌ಗಳನ್ನಾಡಿದ್ದಾರೆ.
ಇದೀಗ ಇತ್ತೀಚಿಗಷ್ಟೆ ನಡೆದ ಒಂದು ಸಂದರ್ಶನದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ್ದಾರೆ. ‘ವಿರಾಟ್ ಕೊಹ್ಲಿ ಆಟವನ್ನು ನೋಡಿದಾಗ ಪ್ರತಿಯೊಬ್ಬ ಕ್ರಿಕೆಟಿಗನೂ ಸಹ ಇಂತಹ ಆಟಗಾರ ನಮ್ಮ ತಂಡದಲ್ಲೂ ಇರಬೇಕು ಎಂದುಕೊಳ್ಳುತ್ತಾರೆ. ಅಂತಹ ಅದ್ಭುತ ಆಟವನ್ನಾಡುವ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್‌ಮನ್’ ಎಂದು ಟಿಮ್ ಪೇನ್ ಹೇಳಿದ್ದಾರೆ.
ಎದುರಾಳಿ ತಂಡದ ವಿರುದ್ಧ ಕಠಿಣ ಪೈಪೋಟಿಯನ್ನು ನಡೆಸುವ ವಿರಾಟ್ ಕೊಹ್ಲಿ, ತಮ್ಮ ಅಮೋಘ ಆಟದಿಂದ ಎದುರಾಳಿ ತಂಡವನ್ನು ಒತ್ತಡಕ್ಕೆ ತಳ್ಳುವಂತಹ ಚಾಣಾಕ್ಷ ಆಟಗಾರ ಹಾಗೂ ಎಂದಿಗೂ ಸಹ ಮರೆಯಲಾಗದಂತಹ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಟಿಮ್ ಪೇನ್ ಕೊಹ್ಲಿ ಅವರ ಬ್ಯಾಟಿಂಗ್ ಕುರಿತು ಕೊಂಡಾಡಿದರು. ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೂ 19 ಟೆಸ್ಟ್ ಪಂದ್ಯಗಳನ್ನಾಡಿ 1604 ರನ್‌ಗಳನ್ನು ಬಾರಿಸಿದ್ದು 7 ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.