ಕೊರೋನಾವೈರಸ್ ತನ್ನ ಅಟ್ಟಹಾಸವನ್ನು ಎಲ್ಲಾ ಕ್ಷೇತ್ರಗಳಿಗೂ ಸಹ ತೋರಿಸಿಬಿಟ್ಟಿತು. ಐಪಿಎಲ್ ಮುಂದೂಡಲ್ಪಟ್ಟಿತು, ಇತ್ತೀಚೆಗಷ್ಟೇ ಬಿಗ್ ಬಾಸ್ ಕೂಡ ಅರ್ಧಕ್ಕೆ ನಿಂತುಹೋಯಿತು ಹಾಗೂ ಹಲವು ದಿನಗಳ ಹಿಂದೆಯೇ ಸಿನಿಮಾಮಂದಿರಗಳನ್ನು ಮುಚ್ಚಲಾಯಿತು.
ಕೊರೋನಾವೈರಸ್ ಮೊದಲ ಅಲೆ ಮುಗಿದ ನಂತರ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ತೆರೆಯಲಾಯಿತು. ಸುಮಾರು ಮೂರೂವರೆ ತಿಂಗಳುಗಳ ಕಾಲ ಚಿತ್ರಮಂದಿರಗಳಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗಿ ಒಳ್ಳೆ ದುಡ್ಡು ಮಾಡಿಕೊಂಡು ತದನಂತರ ಮತ್ತೆ ಚಿತ್ರಮಂದಿರ ಮುಚ್ಚಲ್ಪಟ್ಟ ಮೇಲೆ ಓಟಿಟಿ ಯಲ್ಲಿಯೂ ಸಹ ಬಿಡುಗಡೆಯಾಗಿ ಕೋಟಿ ಕೋಟಿ ಹಣವನ್ನು ಕೊಳ್ಳೆ ಹೊಡೆದಿವೆ. ಕನ್ನಡದ ಯುವರತ್ನ ಮತ್ತು ರಾಬರ್ಟ್ ಚಿತ್ರಗಳು ಚಿತ್ರಮಂದಿರದಲ್ಲಿಯೂ ಬಿಡುಗಡೆಯಾಗಿ ದುಡ್ಡು ಮಾಡಿದವು ಮತ್ತು ಒಟಿಟಿ ಯಲ್ಲಿಯೂ ಸಹ ಬಿಡುಗಡೆಯಾಗಿ ಕೋಟಿ ಕೋಟಿ ದುಡ್ಡು ಮಾಡಿವೆ.
ಆದರೆ ಇದೀಗ ಸಂಕಷ್ಟ ಎದುರಾಗಿರುವುದು ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ. ಹೌದು ಸದ್ಯ ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆ ಎಂಬುದರ ಸುಳಿವು ಯಾರಿಗೂ ಇಲ್ಲ. ಕೊರೋನಾವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಕೋಟಿಗೊಬ್ಬ 3 ಚಿತ್ರದ ನಿರ್ದೇಶಕ ಸೂರಪ್ಪ ಬಾಬು ಚಿತ್ರವನ್ನು ಓಟಿಟಿ ಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.ಆದರೆ ವಿಪರ್ಯಾಸವೆಂದರೆ ಚಿತ್ರಕ್ಕೆ ಒಳ್ಳೆಯ ಬೆಲೆಯನ್ನು ಯಾರೂ ಸಹ ನೀಡಲು ಮುಂದೆ ಬರುತ್ತಿಲ್ಲವೆಂಬುದು.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಿರ್ಮಾಪಕ ಸೂರಪ್ಪ ಬಾಬು ‘ನಾನು ನನ್ನ ಕೋಟಿಗೊಬ್ಬ 3 ಚಿತ್ರವನ್ನು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲು ಸಿದ್ಧನಾಗಿದ್ದೇನೆ. ಆದರೆ ಯಾರೂ ಸಹ 35 ಕೋಟಿ ಕೊಟ್ಟು ಚಿತ್ರವನ್ನು ಖರೀದಿಸಲು ಮುಂದೆ ಬರುತ್ತಿಲ್ಲ. 35 ಕೋಟಿ ಗಿಂತ ಕಡಿಮೆಗೆ ಮಾರಾಟ ಮಾಡಿದರೆ ನಮಗೆ ನಷ್ಟವಾಗುತ್ತದೆ. ಯಾರಾದರೂ 35 ಕೋಟಿಗಿಂತ ಅಧಿಕ ಮೊತ್ತವನ್ನು ಕೊಟ್ಟರೆ ಖಂಡಿತವಾಗಿಯೂ ಸಿನಿಮಾವನ್ನು ನೀಡುತ್ತೇನೆ’ ಎಂದು ಸೂರಪ್ಪ ಬಾಬು ಬೇಸರ ವ್ಯಕ್ತಪಡಿಸಿದರು.