ಕೋಲಾರ: ಕೊರೊನಾ ಸಂಕಷ್ಟ ನಡುವೆಯೂ ಅಕ್ಕ-ತಂಗಿಯನ್ನು ಮದುವೆಯಾಗುವ ಮೂಲಕ ರಾಜ್ಯದಲ್ಲಿ ಸುದ್ದಿಯಾಗಿದ್ದ ವರನ ವಿರುದ್ಧ ಪೊಲೀಸರು ದೂರು ದಾಖಲಿಸಿ ಬಂಧನ ಮಾಡಿದ್ದಾರೆ.
ಮೇ.07 ರಂದು ಜಿಲ್ಲೆಯ ಉಮಾಪತಿ ಎಂಬಾತ ಅಕ್ಕ-ತಂಗಿಯನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದ. ಇವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಫೋಟೋ ಹೆಚ್ಚು ವೈರಲ್ ಆದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಇಬ್ಬರು ಸಹೋದರಿಯರಲ್ಲಿ ತಂಗಿ ಇನ್ನು ಅಪ್ರಾಪ್ತೆ ಎಂಬುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವರ ಉಮಾಪತಿ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ. ಮನೆಯ ಹೆಣ್ಣು ಮಕ್ಕಳಿಬ್ಬರನ್ನು ಮದುವೆಯಾಗ ಬೇಕು ಎಂದು ವಧುವಿನ ತಂದೆ ಬೇಡಿಕೆ ಇಟ್ಟ ಕಾರಣಕ್ಕೆ ವರ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ.