ಎಂಎಸ್ ಧೋನಿ ಕ್ರಿಕೆಟ್ ಜಗತ್ತು ಕಂಡ ದಂತಕತೆ. ಭಾರತ ತಂಡದ ಬಹುತೇಕ ಎಲ್ಲಾ ಕನಸಿನ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ನಾಯಕ ಎಂಎಸ್ ಧೋನಿ. ಧೋನಿ ಟೀಮ್ ಇಂಡಿಯಾ ತಂಡದ ನಾಯಕನಾದ ಮೇಲೆ ತಂಡದಿಂದ ಅತ್ಯುತ್ತಮ ಪ್ರದರ್ಶನ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಧೋನಿ ನಾಯಕತ್ವದ ಕುರಿತು ಹಲವಾರು ದಿಗ್ಗಜ ಕ್ರಿಕೆಟಿಗರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಹಲವಾರು ಕಿರಿಯ ಕ್ರಿಕೆಟಿಗರು ಎಂಎಸ್ ಧೋನಿ ರೀತಿಯ ಆಟಗಾರನಾಗಬೇಕು ಎಂಬ ಕನಸನ್ನು ಹೊತ್ತಿದ್ದಾರೆ.
ಇಷ್ಟರ ಮಟ್ಟಿಗೆ ನಾಯಕನಾಗಿ ಪ್ರಭಾವವನ್ನು ಬೀರಿರುವ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದರೂ ಸಹ ಅವರ ಸಾಧನೆ ಮತ್ತು ಕೊಡುಗೆಗಳ ಕುರಿತು ಇತರರು ಮಾತನಾಡುತ್ತಲೇ ಇರುತ್ತಾರೆ. ಇದೀಗ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಯಾಸಿರ್ ಅರಫಾತ್ ಕೂಡ ಎಂಎಸ್ ಧೋನಿ ನಾಯಕತ್ವದ ಕುರಿತು ಮಾತನಾಡಿದ್ದು ಕೊಂಡಾಡಿದ್ದಾರೆ.
‘ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿರಬಹುದು ಆದರೆ ಅವರು ಭಾರತ ತಂಡಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಎಂಎಸ್ ಧೋನಿ ತಂಡದ ಆಟಗಾರರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತಹ ಕಲೆ ಬಲ್ಲ ಚಾಣಾಕ್ಷ ನಾಯಕ. ಪ್ರಸ್ತುತ ಪಾಕಿಸ್ತಾನದ ತಂಡಕ್ಕೂ ಕೂಡ ಎಂಎಸ್ ಧೋನಿ ರೀತಿಯ ಚಾಣಾಕ್ಷ ನಾಯಕನ ಅಗತ್ಯವಿದೆ. ಪಾಕಿಸ್ತಾನದ ಆಟಗಾರರು ಸರಿ ಇದ್ದಾರೆ ಆದರೆ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳಬಲ್ಲ ನಾಯಕ ಮಾತ್ರ ಇಲ್ಲ’ ಎಂದು ಯಾಸಿರ್ ಅರಫಾತ್ ಹೇಳಿದ್ದಾರೆ.