ಬೆಂಗಳೂರು, ಜೂನ್ 15: ಚಿನ್ನ ಅಂದರೆ ಎಲ್ಲರಿಗೂ ಇಷ್ಟ, ಅದರಲ್ಲೂ ಈ ಹಳದಿ ಲೋಹ ಹೆಣ್ಣುಮಕ್ಕಳ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಹೆಣ್ಮಕ್ಕಳ ಈ ಚಿನ್ನದ ಪ್ರೀತಿಗೆ ಕೊರೊನಾ ಎಂಬ ಕರಿ ನೆರಳು ಬಿದ್ದಾಗಿನಿಂದ ಬೆಲೆ ಏರಿಳಿತದ ಆಟವಾಡುತ್ತಲೇ ಇದೆ.
ಹೌದು ಕೊರೊನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು. ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು. ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು. ಆದರೀಗ ಎರಡನೇ ಅಲೆ ಕೊರೊನಾ ಹಾವಳಿ ಆರಂಭವಾದ ಬೆನ್ನಲ್ಲೇ ಮತ್ತೆ ಚಿನ್ನ ದುಬಾರಿಯಾಗಲಾರಂಭಿಸಿದೆ. ಆದರೀಗ ಬಹುದಿನಗಳ ಬಳಿಕ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಕೊಂಚ ಇಳಿಕೆಯಾಗಿದೆ.
ಮಂಗಳವಾರ ಜೂನ್ 15ರಂದು ದೇಶದ ಹಲವೆಡೆ ಚಿನ್ನದ ಬೆಲೆ ಕಡಿಮೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿಯಲಾರಂಭಿಸಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 48493 ರೂಪಾಯಿಗೆ ಇಳಿದು, ಮೂರನೇ ದಿನವು ನಷ್ಟವನ್ನು ಮುಂದುವರಿಸಿದೆ.ಈ ತಿಂಗಳ ಆರಂಭದಲ್ಲಿ 5 ತಿಂಗಳ ಗರಿಷ್ಠ 49,700 ರೂಪಾಯಿ ಮುಟ್ಟಿದ ನಂತರ ಚಿನ್ನವು ತನ್ನ ಲಾಭವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು ದಾಖಲೆಯ ಗರಿಷ್ಠ, 56,200 ಕ್ಕೆ ಮುಟ್ಟಿತ್ತು. ಅಂದಿಗೆ ಹೋಲಿಸಿದರೆ ಚಿನ್ನವು ಗರಿಷ್ಠ ಮಟ್ಟಕ್ಕಿಂತ 8,000 ರೂಪಾಯಿ ಕಡಿಮೆಯಿದೆ.