ಅದೇನೋ ಅಂತಾರೆ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆಯುತ್ತಾರೆ ಎಂದು. ಈ ಪ್ರಸಿದ್ಧ ಗಾದೆಯನ್ನು ಮಾನ್ಯ ಸಿದ್ದರಾಮಯ್ಯನವರಿಗೆ ಹೋಲಿಸಬಹುದು. ಯಾಕಂದರೆ ಮುಖ್ಯಮಂತ್ರಿ ಪದವಿನ್ನೇರಿದಾಗ ಕರ್ನಾಟಕ ಮೂಢನಂಬಿಕೆ ಆಚರಣೆ ತಡೆಗಟ್ಟುವಿಕೆ ಕಾಯ್ದೆ-2013 ಜಾರಿಗಾಗಿ ಹೊರಟವರು ಈಗ ಸ್ವತಃ ಮೂಢನಂಬಿಕೆ ಆಚರಣೆಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಇಂಬು ನೀಡುವಂತೆ ಇತ್ತೀಚಿಗೆ ನಡೆದ ಕಾಗೆ- ಕಾರು ಪ್ರಹಸನ.
ಮುಖ್ಯಮಂತ್ರಿಗಳ ಓಡಾಟಕ್ಕೆ ಬಳಸುತ್ತಿದ್ದ ಸರಕಾರಿ ಕಾರಿನ ಮೇಲೆ ನಿತ್ರಾಣಗೊಂಡಿದ್ದ ಕಾಗೆ ಮರಿಯೊಂದು ಸುಮಾರು ಹತ್ತು ನಿಮಿಷಗಳವರೆಗೂ ಕುಳಿತುಕೊಂಡಿದ್ದು, ಇದು ಅಶುಭದ ಲಕ್ಷ್ಯಣಗಳು ಎಂದು ಕೇಳಿ ಬಂದಿದ್ದರಿಂದ ಮರುದಿನವೇ ಮುಖ್ಯ ಮಂತ್ರಿಗಳ ಮನೆ ಮುಂದೆ ಹೊಸ ಕಾರು ಪ್ರತ್ಯಕ್ಷವಾಗಿದೆ. ಮೊದಲೇ ಸಣ್ಣ ಪುಟ್ಟ ಸುದ್ದಿಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಸುದ್ದಿಮಾಧ್ಯಮಗಳಿಗೆ ಈ ಪ್ರಕರಣ ಹೋಳಿಗೆ ಊಟವನ್ನೇ ಬಡಿಸದಂತಾಯಿತು ಎಂದರೆ ತಪ್ಪಾಗುವುದಿಲ್ಲ. ಕಾಗೆ ಕುಳಿತುಕೊಳ್ಳುವುದಕ್ಕೂ ಕಾರು ಬದಲಾಯಿಸುವುದಕ್ಕೂ ಏನೂ ಸಂಬಂಧವಿಲ್ಲ ಎಂದು ಖುದ್ದು ಮುಖ್ಯಮಂತ್ರಿಗಳು ಹೇಳಿಕೊಂಡರೂ ಜನರನ್ನು ನಂಬದಂತೆ ಈ ಮಾಧ್ಯಮಗಳು ಮಾಡಿವೆ. ಇದರಿಂದ ಕಳೆದ ವರ್ಷ ಸುದ್ದಿ ಮಾಧ್ಯಮಗಳಲ್ಲಿ ಜ್ಯೋತಿಷಿಗಳಿಗೆ ನಿರ್ಬಂಧ ಹೇರಬೇಕು ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗೆ ಇವರು ಸರಿಯಾಗಿ ಸೇಡು ತೀರಿಸಿಕೊಂಡಂತಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ಹಲವಾರು ದಶಕಗಳಿಂದ ರಾಜ್ಯದಲ್ಲಿದ್ದ ಅನೇಕ ಮೂಢನಂಬಿಕೆಗಳ ಆಚರಣೆಗಳಿಗೆ ಪೂರ್ಣ ವಿರಾಮ ಹಾಕಿದ ಶ್ರೇಯಸ್ಸು ಇವರಿಗೆ ಸಂದಿದೆ. ಆದರೆ, ಈ ಕಾಗೆ-ಕಾರು ಪ್ರಹಸನದಿಂದಾಗಿ ಇವೆಲ್ಲವೂ `ಇರುವ ಹುಣಸೆಹಣ್ಣು ಹೊಳೆ ನೀರಿನಲ್ಲಿ ಕೊಚ್ಚಿ ಕೊಂಡು ಹೋಯಿತು’ ಎಂಬ ಪ್ರಸಿದ್ದ ಗಾದೆ ಮಾತಿನಂತಾಗಿದೆ. `ಕೆಟ್ಟ ಗಳಿಗೆಯಲ್ಲಿ ಒಳ್ಳೆಯದನ್ನೆಲ್ಲಾ ಜನ ಮರೆಯುತ್ತಾರೆ’ ಎಂಬಂತೆಯೇ ಇವರದ್ದೂ ಅದೇ ಕಥೆಯಾಗಿದೆ ಎಂಬ ನನ್ನ ಅನಿಸಿಕೆ. ಸೋಜಿಗ ಎಂಬಂತೆ ಇವರು ಮೌಢ್ಯ ನಂಬಿಕೆಗಳ ವಿರುದ್ಧ ಧ್ವನಿಯೆತ್ತಿದ್ದಾಗ ಕ್ಯಾರೇ ಎನ್ನದ ಸುದ್ದಿ ಮಾಧ್ಯಮಗಳು ಈಗ ಇವರ ಖಾಸಗಿ ವಿಚಾರದಲ್ಲಿ ಯಾಕೆ ಮೂಗು ತೂರಿಸುತ್ತಿವೆ ಎನ್ನುವುದು ಸ್ಪಷ್ಟೀಕರಣ ನೀಡಬೇಕಿದೆ.
1. ಇವರು ಅಧಿಕಾರದ ಗದ್ದುಗೆಯನ್ನೇರಿ ಕೇವಲ ಒಂದು ತಿಂಗಳ ಅವಧಿಯಲ್ಲೇ ವಿಧಾನಸೌಧದ ಮುಖ್ಯ ಮಂತ್ರಿ ಕಚೇರಿಯ ಎದುರಿಗಿದ್ದ `ಶಾಪಗ್ರಸ್ಥ ಬಾಗಿಲು’ ಎಂದೇ ಕರೆಯಲ್ಪಟ್ಟಿದ್ದ, ವಾಸ್ತು ದೋಷವಿದೆ ಎಂಬ ಕಾರಣಕ್ಕಾಗಿ ಕಳೆದ 14 ವರ್ಷಗಳಿಂದ ಮುಚ್ಚಲಾಗಿದ್ದ ಬಾಗಿಲನ್ನು ಒಡೆಯಲು ಆಜ್ಞಾಪಿಸಿದರು. ಆಗಿನ ಸಂದರ್ಭದಲ್ಲಿ ಅದೆಷ್ಟೋ ಜ್ಯೋತಿಷಿಗಳು ಇವರು ಶೀಘ್ರದಲ್ಲಿ ಪದವಿ ಕಳೆದು ಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದರೂ ಅದು ಹಾಗಾಗಲಿಲ್ಲ.
2. ರಾಜ್ಯದಲ್ಲಿ ಮುಖ್ಯ ಮಂತ್ರಿಗಳಿಗೆ ತಂಗಲೆಂದೇ ಸುಸಜ್ಜಿತ ಮನೆ `ಕಾವೇರಿ’ ಬಂಗಲೆಯಿದೆ. ಆದರೆ ಇಲ್ಲಿಯವರೆಗೂ ಯಾವ ಮುಖ್ಯ ಮಂತ್ರಿಗಳೂ ಇಲ್ಲಿ ಹೆಚ್ಚು ತಂಗಿಲ್ಲ. ಕಾರಣ ಮತ್ತದೇ ಮೂಢ ನಂಬಿಕೆ. ಇಲ್ಲಿದ್ದರೆ ಕುರ್ಚಿ ಅಲ್ಲಾಡುವುದೆಂದು. ಆದರೆ, ಅದಕ್ಕೂ ಇವರು ಕ್ಯಾರೇ ಅನ್ನದೇ ಅಲ್ಲಿಯೇ ತಂಗಿದ್ದಾರೆ.
3. ಇನ್ನು ಚಾಮರಾಜನಗರ ವಿಷಯಕ್ಕೆ ಬಂದರೆ ಕಳೆದ ಎರಡು ದಶಕಗಳಿಂದ ಇಲ್ಲಿಯವರೆಗೂ ಯಾವ ಮುಖ್ಯ ಮಂತ್ರಿಯೂ ಆ ಜಿಲ್ಲೆಗೆ ಭೇಟಿ ನೀಡಿಲ್ಲ. ಇಲ್ಲಿಗೆ ಭೇಟಿ ನೀಡುವವರೆಲ್ಲಾ ಅಧಿಕಾರದಿಂದ ಕೆಳಗಿಳಿದಿದ್ದಾರೆ ಎಂಬ ಭಯ. ಆದರೆ ಇದಕ್ಕೂ ಅವರು ತಡೆ ಹಾಕಿ ಅಲ್ಲಿಗೆ ಭೇಟಿ ನೀಡಿ ಎಲ್ಲರಿಂದ ಭೇಷ್ ಎನಿಸಿಕೊಂಡವರು.
4. ದಿನಬೆಳಗಾಗುತ್ತಿದ್ದಂತೆ ಸಾಕು ರಾಜ್ಯದ ಪ್ರತಿಯೊಂದು ಸುದ್ದಿ ವಾಹಿನಿಯಲ್ಲೂ ಭವಿಷ್ಯ, ಜ್ಯೋತಿಷಿಗಳದ್ದೇ ಪಾರುಪತ್ಯ. ಸೋಜಿಗ ಎಂಬಂತೆ ಇವುಗಳಿಗೆ ಹೆಚ್ಚು ಜನ ಮಾರು ಹೋಗುತ್ತಿದ್ದರಿಂದ ಪ್ರೈಂ ಟೈಂಗಳಲ್ಲೇ ಇವುಗಳನ್ನು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಜನರನ್ನು ಅಡ್ಡ ದಾರಿಗೆ ತಳ್ಳಿ ಸಾಕಷ್ಟು ದುಡ್ಡು ಮಾಡುತ್ತಿವೆ. ಈ ಕಾರ್ಯಕ್ರಮಗಳನ್ನು ನೋಡುತ್ತಿರುವ ಪಾಲಿನಲ್ಲಿ ಮುಖ್ಯ ಮಂತ್ರಿಯವರ ಕುಟುಂಬವೂ ಹಿಂದೆ ಬಿದ್ದಿಲ್ಲ. ಈಗ ಅವುಗಳನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ಸ್ವತಃ ಮುಖ್ಯಮಂತ್ರಿಯೇ ಕಳೆದ ವರ್ಷ ಹೇಳಿಕೊಂಡಿದ್ದರು. (ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ ಎಂಬುದು ಬೇರೆ ಮಾತು).
ಇಷ್ಟೆಲ್ಲಾ ನಡೆಗಳಿಂದ ಅನೇಕರಿಂದ ಭೇಷ್ ಎನಿಸಿಕೊಂಡಿದ್ದ ಮುಖ್ಯಂತ್ರಿಗಳ ಈ ನಡೆಗಳನ್ನು ಈಗ ಎಲ್ಲರೂ ಮರೆತಂತಿದೆ ಕಾರಣ ಈಗ
ಮಾಧ್ಯಮಗಳು ಮುಖ್ಯಮಂತ್ರಿಯ ಕಾಗೆ ಪ್ರಸಂಗವನ್ನು ಪದೇ ಪದೇ ತೋರಿಸುತ್ತಿರುವುದು. ಯಾರಿಗೆ ಗೊತ್ತು ಮುಖ್ಯಮಂತ್ರಿಯವರು ತಮ್ಮ ಕಾರನ್ನು ಬದಲಾಯಿಸುವುದಕ್ಕೆ ತಾಂತ್ರಿಕ ದೋಷವೇ ಕಾರಣವಿರಬಹುದೇನೋ. ಆದರೆ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಕಾರಣ ಸುದ್ದಿ ವಾಹಿನಿಗಳ ಕಾರಣದಿಂದಾಗಿ. ಅಷ್ಟೊಂದು ಆಳವಾಗಿ ನಮ್ಮ ಜನರ ಮನಸಿನಲ್ಲಿ ಈ ಖಾಸಗಿ ಕಾರ್ಯಕ್ರಮಗಳು ಅಚ್ಚೊತ್ತಿಬಿಟ್ಟಿವೆ. ಈ ಪ್ರಸಂಗದಿಂದ ಮುಖ್ಯಮಂತ್ರಿಗೆ ಕೊಂಚ ಹಿನ್ನಡೆಯಾಗಿದ್ದರೂ, ಅವರು ಫೀನಿಕ್ಸ್ ಹಕ್ಕಿಯಂತೆ ಎದ್ದು ಬರಲೇಬೇಕಿದೆ. ಆದಷ್ಟು ಬೇಗ ಕರ್ನಾಟಕ ಮೂಢನಂಬಿಕೆ ಆಚರಣೆ ತಡೆಗಟ್ಟುವಿಕೆ ಕಾಯ್ದೆಯನ್ನುಜಾರಿಗೆ ತರುವುದರ ಮೂಲಕ ಎಲ್ಲರ ಬಾಯಿ ಮುಚ್ಚಿಸಲೇ ಬೇಕಾಗಿದೆ.
ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪರಸ್ಪರ ವೈಮನಸ್ಸಿನಿಂದ ಪಕ್ಷ ಒಡೆದು ಹೋಳಾಗಿದೆ. ಮುಖ್ಯಮಂತ್ರಿಗಳ ಅನೇಕ ಕಾರ್ಯಗಳು ರಾಜ್ಯಕ್ಕೆ ಹಿನ್ನಡೆ ತಂದು ಕೊಟ್ಟಿರಬಹುದು. ಆದರೆ, ಮೂಢನಂಬಿಕೆಗಳಿಗೆ ವಿರುದ್ಧ ನಿಲುವುಗಳನ್ನು ತೋರಿರುವುದು ಇವರೊಬ್ಬರೇ ಮಾತ್ರ. ಆದರೂ ಇವರು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಸಂದರೂ ಇನ್ನೂ ಮೂಢನಂಬಿಕೆ ಕಾಯ್ದೆ ಮರೀಚಿಕೆಯಾಗಿರುವುದೇಕೆ ಎಂಬುದು ಹಲವರ ಪ್ರಶ್ನೆಯಾಗಿದೆ.
ಇದನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳು ಸಫಲರಾಗುತ್ತಾರೆಯೇ ಎಂದು ಸಮಯವೇ ನಿರ್ಧರಿಸಬೇಕಿದೆ.
- ವಿಶ್ವನಾಥ. ಶೇರಿಕಾರ್
POPULAR STORIES :
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ