ಸಿಲಿಕಾನ್ ಸಿಟಿಯಲ್ಲಿ ತಣ್ಣಗಾಗಿದ್ದ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದೆ. ಬೆಂಗಳೂರಿನ ಹೊರಭಾಗದಲ್ಲಿ ಒಂದೇ ದಿನ ಸರಣಿ ಸರಗಳ್ಳತನ ನಡೆದಿದ್ದು, ಬ್ಲಾಕ್ ಫಲ್ಸರ್ ಬೈಕಿನಲ್ಲಿ ಬಂದ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ.
48 ಗಂಟೆಗಳಲ್ಲಿ ಸರ್ಜಾಪುರ, ಆಡುಗೋಡಿ, ಸೂಲಿಬೆಲೆ, ತಿರುಮಲ ಶೆಟ್ಟಿ ಹಳ್ಳಿ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಸರಗಳ್ಳತನ ನಡೆದಿರುವುದು ವರದಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಸುಮಾರು ಒಂದು ಕೆಜಿಯಷ್ಟು ಚಿನ್ನದ ಆಭರಣಗಳನ್ನು ಎಗರಿಸಿಕೊಂಡು ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ, ಒಂದೇ ದಿನದಲ್ಲಿ ಒಂದು ಕೆ.ಜಿ ಚಿನ್ನಾಭರಣ ಕಳ್ಳತನ!
ಬೆಂಗಳೂರಿನ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಿದ್ದರು. ಹೀಗಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಪೊಲೀಸ್ ಸಿಬ್ಬಂದಿ ನಿರತರಾಗಿದ್ದರು. ಇದೇ ಸಮಯವನ್ನು ಸಾಧಿಸಿದ ಖರೀಮರು ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ಕೈಚಳಕ ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಸಿ ಕ್ಯಾಮರಾದಲ್ಲಿ ಕಳ್ಳರು ಸೆರೆ:
ಬೆಂಗಳೂರಿನ ಹೊರವಲಯದಲ್ಲಿ ನಡೆದಿರುವ ಸರಣಿ ಸರಗಳ್ಳತನದ ಹಿಂದೆ ಕುಖ್ಯಾತ ಭವಾಡಿಯಾ ಗ್ಯಾಂಗ್ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿರುವ ಕಳ್ಳರ ಕುಕೃತ್ಯವನ್ನು ಆಧಾರವಾಗಿ ಇಟ್ಟುಕೊಂಡು ಖದೀಮರನ್ನು ಬಂಧಿಸಲು ಬಲೆ ಬೀಸಿದ್ದಾರೆ.