ರಾಹುಲ್ ದ್ರಾವಿಡ್ ಶ್ರೀಲಂಕಾಗೆ ತೆರಳಿರುವ ಭಾರತ ತಂಡದ ಕೋಚ್ ಆಗಿರುವ ಬಗ್ಗೆ ಸಾಕಷ್ಟು ಯುವ ಆಟಗಾರರು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಯುವ ಕ್ರಿಕೆಟಿಗ ಕೇರಳ ಮೂಲದ ಸಂಜು ಸ್ಯಾಮ್ಸನ್ ಕೂಡ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ದೊರೆತಿರುವ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ ‘ಫಾಲೋ ದಿ ಬ್ಲ್ಯೂಸ್’ ವಿಶೇಷ ಕಾರ್ಯಕ್ರಮದಲ್ಲಿ ಸಂಜು ಸ್ಯಾಮ್ಸನ್ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿದರು.
“ಭಾರತ ಎ ತಂಡ ಅಥವಾ ಅಂಡರ್ 19 ತಂಡದ ಪ್ರತಿಯೊಬ್ಬ ಆಟಗಾರರು ಕೂಡ ಅದೃಷ್ಟವಶಾತ್ ರಾಹುಲ್ ದ್ರಾವಿಡ್ ಎಂಬ ವ್ಯಕ್ತಿಯ ಮಾರ್ಗದರ್ಶನದಲ್ಲಿ ಸಾಗಿ ಬರಬೇಕಿದೆ. ನಾವು ನಮ್ಮ ಕ್ರಿಕೆಟ್ ಪಾಠಗಳನ್ನು ರಾಹುಲ್ ದ್ರಾವಿಡ್ ಅವರಿಂದ ಕಲಿಯಲು ಅದೃಷ್ಟ ಮಾಡಿದ್ದೇವೆ” ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರಿಂದ ಆಡಲು ಆಹ್ವಾನ ಪಡೆದ ಕ್ಷಣವನ್ನು ಸಂಜು ಸ್ಮರಿಸಿಕೊಂಡಿದ್ದಾರೆ. “ನನಗಿನ್ನೂ ನೆನಪಿದೆ, ರಾಜಸ್ಥಾನ್ ರಾಯಲ್ಸ್ ತಂಡದ ಟ್ರಯಲ್ಸ್‌ಗೆ ನಾನು ಹೋಗಿದ್ದೆ. ಆ ದಿನ ನಾನು ನಿಜಕ್ಕೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆ. ನಂತರ ರಾಹುಲ್ ದ್ರಾವಿಡ್ ಅವರು ನನ್ನ ಬಳಿಗೆ ಬಂದು ನಮ್ಮ ತಂಡದ ಪರವಾಗಿ ಆಡುತ್ತೀಯಾ ಎಂದು ಕೇಳಿದ್ದರು. ಅದು ನನ್ನ ಜೀವನದ ಅತ್ಯಂತ ದೊಡ್ಡ ಕ್ಷಣವಾಗಿದೆ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಅದು ಅವರು ಶ್ರೇಷ್ಠತೆಯಾಗಿದೆ. ಅವರ ಇರುವಿಕೆಯನ್ನು ನಾನು ಯಾವಾಗಲೂ ಆನಂದಿಸುತ್ತೇನೆ” ಎಂದು ಸಂಜು ಸ್ಯಾಮ್ಸನ್ ವಿವರಿಸಿದ್ದಾರೆ.