ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವು
ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಭಾರವಾರದಂದು ನಡೆದ ಟೋಕಿಯೊ ಒಲಿಂಪಿಕ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಆಟಗಾರ್ತಿ ಪುಲಿಕರ್ಪೋವಾ ವಿರುದ್ಧ ಗೆಲುವನ್ನು ಸಾಧಿಸಿದ್ದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭವನ್ನು ಮಾಡಿದ್ದ ಪಿವಿ ಸಿಂಧು ಇದೀಗ ತಮ್ಮ ಎರಡನೇ ಪಂದ್ಯವನ್ನು ಸಹ ಗೆಲ್ಲುವುದರ ಮೂಲಕ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರದಂದು ನಡೆದ ಪಂದ್ಯದಲ್ಲಿ ಭಾರತದ ಪಿ ವಿ ಸಿಂಧು ಮತ್ತು ಹಾಂಗ್‌ಕಾಂಗ್‌ನ ಚ್ಯುಂಗ್ ಗಾನ್ ಯಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಮೊದಲ ಸೆಟ್‌ನಲ್ಲಿ 21-9 ಅಂತರದಲ್ಲಿ ಲೀಲಾಜಾಲವಾಗಿ ಜಯ ಸಾಧಿಸಿದ ಪಿವಿ ಸಿಂಧುಗೆ ಎರಡನೇ ಸುತ್ತಿನಲ್ಲಿ ಹಾಂಗ್‌ಕಾಂಗ್ ಆಟಗಾರ್ತಿ ದಿಟ್ಟ ಪೈಪೋಟಿ ನೀಡಿದರು. ಹಾಂಗ್‌ಕಾಂಗ್ ಆಟಗಾರ್ತಿ ತೀವ್ರ ಹೋರಾಟ ನಡೆಸಿದರೂ ಸಹ ಕೊನೆಯ ಹಂತದಲ್ಲಿ ಪಿವಿ ಸಿಂಧು ಎದುರು ತಲೆಬಾಗಬೇಕಾಯಿತು.
ಎರಡನೇ ಸೆಟ್‌ನಲ್ಲಿ ಪಿವಿ ಸಿಂಧು 21-16 ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಇದೀಗ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ವಿಭಾಗದಲ್ಲಿ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಅತ್ತ ಇದಕ್ಕೂ ಮುನ್ನ ನಡೆದ ಮಹಿಳಾ ಹಾಕಿ ಪಂದ್ಯವೊಂದರಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ವಿರುದ್ಧ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ 4-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.