ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ ಎಂದು ಹೇಳಿರುವ ಬೂತ್ ಮಟ್ಟದ ಅಧ್ಯಕ್ಷರೊಬ್ಬರು ನಡು ರಸ್ತೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗದ ಅಶೋಕನಗರದಲ್ಲಿ ಈ ಘಟನೆ ನಡೆದಿದೆ.
ಮನೆ ಬಳಿಗೆ ಬಂದಿದ್ದ ಬಿಜೆಪಿ ಮುಖಂಡರನ್ನು ಬಾಗಿಲಲ್ಲೇ ನಿಲ್ಲಿಸಿದ ಬೂತ್ ಅಧ್ಯಕ್ಷ ಎಲ್.ಶೇಖರ್ ರಾಜೀನಾಮೆ ಪತ್ರ ಕೈಗಿಟ್ಟಿದ್ದಾರೆ. ಅಲ್ಲದೇ ಇನ್ನು ಮುಂದೆ ತಾವು ಪಕ್ಷದ ಪರವಾಗಿ ಪ್ರಚಾರ ನಡೆಸಲು ಅಸಾಧ್ಯ ಅಂತಲೂ ಕಡ್ಡಿ ಮುರಿದ ಹಾಗೆ ಹೇಳಿ ಕಳುಹಿಸಿದ್ದಾರೆ. ನಾಮಫಲಕ ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ನಾಮಫಲಕ ವಿತರಣೆ ಮಾಡಲು ಬೂತ್ ಅಧ್ಯಕ್ಷರಾದ ಎಲ್. ಶೇಖರ್ ಮನೆಗೆ ಬಂದಿದ್ದರು. ಈ ವೇಳೆ ರಾಜೀನಾಮೆ ಪತ್ರ ನೀಡಿರುವ ಬೂತ್ ಅಧ್ಯಕ್ಷರು, ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜೀನಾಮೆ ಪತ್ರದಲ್ಲೂ ಸಕಾರಣವನ್ನು ವಿವರಿಸಿದ್ದಾರೆ.