“ರಾಜ್ಯದಲ್ಲಿ ಮಿನಿ ವಿಧಾನಸೌಧ ಎಂಬ ಪದ ಬದಲಿಗೆ ತಾಲೂಕು ವಿಧಾನಸೌಧ ಎಂಬ ಹೆಸರನ್ನು ಇಡಲು ಕ್ರಮಕೈಗೊಳ್ಳುತ್ತೇನೆ” ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು. ಗುರುವಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಶಿವನಕಟ್ಟೆ ಸರ್ವೆ ನಂ 32ರ 8 ಎಕರೆ ಜಮೀನಿನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಶಂಕುಸ್ಥಾಪನೆ ಭೂಮಿಪೂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಅಶೋಕ, “ಮಿನಿ ಎಂಬುದು ಸರಿಯಿಲ್ಲ. ಮಿನಿ ಎಂಬುದು ಇಂಗ್ಲಿಷ್ ಪದ. ಮಿನಿ ಎಂದರೆ ಚಿಕ್ಕದು, ಅದನ್ನು ತೆಗೆದು ಹಾಕಿ ತಾಲೂಕುಸೌಧ ಮಾಡಲು ಚಿಂತನೆ ನಡೆಸಲಾಗಿದೆ” ಎಂದರು.

“ಈಗಾಗಲೇ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ವಿಧಾನಸೌಧ ಉದ್ಘಾಟನೆಗೆ ಸಿದ್ದಗೊಂಡಿದೆ. ಹಿರಿಯೂರು, ಹೊಳಲ್ಕೆರೆ ತಾಲೂಕಿನಲ್ಲಿ ಸಹ 10 ಎಕರೆ ಜಾಗ ಗುರುತಿಸಲಾಗಿದೆ” ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
“ತಾಲೂಕು ಕಚೇರಿಗಳಲ್ಲಿ ಬರುವ ಬಡ ಜನರಿಗೆ ಸೌಲಭ್ಯ ಸಿಗುವಂತಾಗಬೇಕು. ತಾಲೂಕು ಕಚೇರಿಗೆ ವಯಸ್ಸು ಆದವರು ವೃದ್ಯಾಪ್ಯ ವೇತನಕ್ಕೆ ಬರ್ತಾರೆ, ಅಂಗವಿಕಲರ ವೇತನ, ವಿಧವಾ ವೇತನಕ್ಕೆ ಬರ್ತಾರೆ. ವಯಸ್ಸು ಆದವರ ಗೋಳನ್ನು ನೋಡೋಕೆ ಆಗುವುದಿಲ್ಲ” ಎಂದು ಸಚಿವರು ತಿಳಿಸಿದರು.
“ವೃದ್ಧಾಪ್ಯ ವೇತನಕ್ಕೆ ಬಂದವರ ಕೆಲಸವನ್ನು ಬಗೆಹರಿಸಬೇಕು. ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ದಾರಿಯಲ್ಲಿ ಯಾರು ಅರ್ಜಿ ಹಿಡಿದು ನಿಂತುಕೊಳ್ಳಬಾರದು, ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ವೇತನ ಮಾಡಿ ಕೊಡಬೇಕು” ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
“ಇನ್ನುಮುಂದೆ ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್‌ನಲ್ಲಿ 60 ವರ್ಷ ದಾಟಿದ ಮೇಲೆ, ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಹೋಗಿ ವೃದ್ಧಾಪ್ಯ ವೇತನ ಆದೇಶ ಪತ್ರ ನೀಡಿ ಬರಬೇಕು. ಈಗಾಗಲೇ 30 ಸಾವಿರ ಜನರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಕೊಡಲಾಗಿದೆ. ಒಟ್ಟು ರಾಜ್ಯದಲ್ಲಿ 68 ಲಕ್ಷ ಜನರಿಗೆ ವೇತನ ಕೊಡಲಾಗುತ್ತಿದೆ” ಎಂದು ಸಚಿವರು ವಿವರಿಸಿದರು.






