ಮೂರು ಮಹಾನಗರಪಾಲಿಕೆಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆ, ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಬರುವ ಫಲಿತಾಂಶ ಎನ್ನುವುದು ಸತ್ಯವಾದರೂ, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು. ಸ್ಥಳೀಯ ನಾಯಕರು ಮತ್ತು ರಾಜ್ಯದ ನಾಯಕರೂ ಆಗಿರುವಂತವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಜವಾಬ್ದಾರಿಯನ್ನು ವಹಿಸಿತ್ತು. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಇದೇ ಸಮಯದಲ್ಲಿ ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಇನ್ನು, ಮಾಜಿ ಸಿಎಂ ಯಡಿಯೂರಪ್ಪನವರ ಸಾರಥ್ಯವಿಲ್ಲದೇ ಬಿಜೆಪಿ ಚುನಾವಣೆ ಎದುರಿಸಿತ್ತು.
ಬಿಜೆಪಿ ತಮ್ಮ ಪಕ್ಷದ ಚಿಹ್ನೆಯೊಂದಿಗೆ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯ ಕಣಕ್ಕೆ ಇಳಿದಿತ್ತು. ಒಟ್ಟು 58 ವಾರ್ಡ್ ಗಳ ಪೈಕಿ 35ರಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ, ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿದೆ. ಇದಕ್ಕೆ, ಬಿಜೆಪಿ ಗೆಲ್ಲಲು ರೂಪಿಸಿದ ತಂತ್ರಗಾರಿಕೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯ ಗೆಲುವಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತೊಡಕಾಗಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡಿದಿದೆ. ಸದಾ, ಕನ್ನಡ ಮತ್ತು ಕನ್ನಡಿಗರ ವಿರುದ್ದ ತಂಟೆಗೆ ಬರುವ ಎಂಇಎಸ್ ಪಕ್ಷಕ್ಕೆ ಬೆಳಗಾವಿ ಮತದಾರ ಮುಟ್ಟಿ ನೋಡುವಂತಹ ಉತ್ತರವನ್ನು ಕೊಟ್ಟಿದ್ದಾನೆ.