ನಿರೂಪಕಿ ಅನುಶ್ರೀ ಡ್ರಗ್ ಕೇಸ್ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರನ್ನು ಕೈಬಿಟ್ಟಿರುವ ಪೊಲೀಸರು 6 ಮಂದಿ ಆರೋಪಿಗಳ ವಿರುದ್ದ ಅಂತಿಮ ವರದಿ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಅನುಶ್ರೀಗೆ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಆದರೆ ಈ ನಡುವೆ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಕಿಶೋರ್ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಳು ಎಂದು ಹೇಳಿಕೆ ನೀಡಿದ್ದು ಇದೀಗ ಸಂಚಲನ ಸೃಷ್ಟಿಸಿದೆ.
ಡ್ರಗ್ ಪ್ರಕರಣದಲ್ಲಿ ಆ್ಯಂಕರ್ ಅನುಶ್ರೀಗೆ ಕೊಂಚ ರಿಲೀಫ್ ಸಿಕ್ಕದಂತಾಗಿದೆ. ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಆ ಅಂತಿಮ ವರದಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರು ಕೈಬಿಡಲಾಗಿದೆ. ಆದರೆ ಪ್ರಕರಣದ ಎ2 ಆರೋಪಿ ಕೊರಿಯೊಗ್ರಾಫರ್ ಕಿಶೋರ್ ಅಮನ್ ತನ್ನ ಹೇಳಿಕೆಯಲ್ಲಿ ಅನುಶ್ರೀ, ತರುಣ್ ಹಾಗೂ ತಾನು ಜೊತೆಯಾಗಿ ಸೇರಿ ಡ್ರಗ್ ಪಾರ್ಟಿ ಮಾಡುತ್ತಿದ್ದೆವು ಎಂದು ಹೇಳಿದ್ದಾನೆ. ಇದರ ಜೊತೆ ಪಾರ್ಟಿಗೆ ಅನುಶ್ರೀ ಡ್ರಗ್ ತಗೊಂಡು ಬರುತ್ತಿದ್ದರು ಅಂತಾ ಚಾರ್ಚ್‌ಶೀಟ್‌ನಲ್ಲಿ ಹೇಳಿಕೆ ನೀಡಿದ್ದಾನೆ.
ಆದರೆ ಕಿಶೋರ್ ಅಮನ್ ಅವನದ್ದೇ ಎನ್ನಲಾದ ಸಹಿ ಇರುವ ಈ ಚಾರ್ಜ್‌ಶೀಟ್‌ನಲ್ಲಿರುವ ಹೇಳಿಕೆ ಇದು ಯಾವುದು ನನ್ನದಲ್ಲ, ಇದರ ಬಗ್ಗೆ ನನಗೇನು ಗೊತ್ತಿಲ್ಲ, ನಮ್ಮ ಡ್ರಗ್ ಕೇಸ್‌ಗೂ ಅನುಶ್ರೀಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾನೆ. ಅನುಶ್ರೀಯವರಿಗೆ ಡ್ಯಾನ್ಸ್ ಶೋ ಕೊರಿಯೋಗ್ರಾಫ್ ಮಾಡಿದ್ದೇನೆ. ಆಮೇಲೆ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಡ್ಯಾನ್ಸ್ ಶೋ ಗೆದ್ದ ಸಂಧರ್ಭದಲ್ಲಿ ಅನುಶ್ರೀ ನಮಗೆಲ್ಲಾ ಒಂದು ರೆಸ್ಟೋರೆಂಟ್‌ನಲ್ಲಿ ಪಾರ್ಟಿ ನೀಡಿದ್ದರು. ಆ ಬಳಿಕ ನಾನು ಅನುಶ್ರೀಯವರನ್ನು ಭೇಟಿಯಾಗಿಲ್ಲ.
ಚಾರ್ಚ್ ಶೀಟ್‌ನಲ್ಲಿ ಇರೋದು ನನ್ನ ಹೇಳಿಕೆಯಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅನುಶ್ರೀ ಗೂ ಡ್ರಗ್ಸ್ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ. ನಾನು ಅನುಶ್ರೀ ವಿರುದ್ಧ ಆ ಥರ ಯಾವುದೇ ಹೇಳಿಕೆ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಬಂದಿರುದೆಲ್ಲವೂ ಸಂಪೂರ್ಣ ಸುಳ್ಳು. ನಾವು ಯಾವುದೇ ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀ ಅಂತಹ ಹುಡುಗಿಯೂ ಅಲ್ಲ. ಅನುಶ್ರೀ ಜೊತೆ ಡ್ರಿಂಕ್ಸ್, ಡ್ರಗ್ಸ್ ಪಾರ್ಟಿ ಮಾಡಿಲ್ಲ. ನಾನು ಅನುಶ್ರೀಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಆಮೇಲೆ ಅನುಶ್ರೀಯವರ ಜೊತೆ ಸಂಬಂಧ ಇಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್‌ಗೆ ಹಾಜರಾಗುತ್ತಿದ್ದೇನೆ ಅಂತಾ ಕಿಶೋರ್ ಅಮನ್ ಹೇಳಿದ್ದಾನೆ.
“ಕಿಶೋರ್ ಅಮನ್ ಹೇಳಿಕೆಯಲ್ಲಿ ಅನುಶ್ರೀ ವಿರುದ್ದ ಡ್ರಗ್ ಸೇವನೆ, ಮಾರಾಟ ಆರೋಪಿ ಕೇಳಿ ಬಂದಿದ್ದರು ಸಹ ವಿಚಾರಣೆ ನಡೆಸಿದ ಪೊಲೀಸರಿಗೆ ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷಿ, ಪುರಾವೆಗಳು ಸಿಕ್ಕಿರಲಿಲ್ಲ. ಹೀಗಾಗಿ ಸಂಪೂರ್ಣ ವಿಚಾರಣೆ ನಡೆಸಿಯೇ ಈ ಅಂತಿಮ ವರದಿಯನ್ನು ಒಂಬತ್ತು ತಿಂಗಳ ಹಿಂದೆಯೇ ಸಲ್ಲಿಕೆ ಮಾಡಿದ್ದೇವೆ” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
“ಆರೋಪಿಗಳಿಗೆ ಚಾರ್ಜ್‌ಶೀಟ್ ಬಗೆಗೆ ಇರುವ ಆರೋಪಗಳನ್ನು ತಮ್ಮ ವಕೀಲರ ಮೂಲಕ ಕೋರ್ಟ್‌ನಲ್ಲಿ ಹೇಳಿಕೊಳ್ಳಬಹುದು. ಇದರ ಹೊರತು ಆರೋಪಿ ಮಾಡಿರುವ ಆರೋಪದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ” ಎಂದು ಆಯುಕ್ತರು ತಿಳಿಸಿದ್ದಾರೆ