ನಟಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಆತ್ಮಹತ್ಯೆ ಪ್ರಕರಣ ಸಂಬಂಧ ಬಾಯ್ ಫ್ರೆಂಡ್ ಹಾಗೂ ಮೇಕಪ್ ಮೆನ್ ನನ್ನು ಕುಂಬಳಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೌಜನ್ಯ ಗೆಳೆಯ ಕಿರುತೆರೆ ನಟ ವಿವೇಕ್ ಹಾಗೂ ಮೇಕಪ್ ಬಾಯ್ ಮಹೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೃತ ಸೌಜನ್ಯಾ ತಂದೆ ಪ್ರಭು ಮಾದಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಿರುತೆರೆ ನಟ ವಿವೇಕ್ ಹಾಗೂ ಮೇಕಪ್ ಬಾಯ್ ಮಹೇಶ್ ನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯ ಆತ್ಮಹತ್ಯೆಗೂ ಒಂದು ತಾಸು ಮೊದಲು ನಡೆದಿದ್ದ ಆ ಘಟನೆಯೇ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಲು ಕಾರಣವಾಗಿದೆ. ಹಾಗಾದರೆ ಸೌಜನ್ಯ ಆತ್ಮಹತ್ಯೆಗೂ ಮುನ್ನ ನಡೆದಿದ್ದ ಘಟನೆ ಏನು ? ಸೌಜನ್ಯ ಅವರ ತಂದೆ ಆ ಘಟನೆ ಉಲ್ಲೇಖಿಸಿ ದೂರು ನೀಡಿದ ನಂತರ ಪೊಲೀಸ್ ತನಿಖೆಯಲ್ಲಿ ಆದ ಬೆಳವಣಿಗೆ ವಿವರ ಇಲ್ಲಿದೆ.
ಸೆ. 30 ರಂದು ದೊಡ್ಡಬೆಲೆ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದ ಸವಿ ಮಾದಪ್ಪ ಆತ್ಮಹತ್ಯೆಗೂ ಕೆಲವು ಮಹತ್ವದ ಬೆಳವಣಿಗಳು ನಡೆದಿವೆ. ಈ ಎಲ್ಲಾ ಘಟನೆಗಳನ್ನು ಆಧರಿಸಿ ಸೌಜನ್ಯ ಅವರ ತಂದೆ ಪ್ರಭು ಮಾದಪ್ಪ ಅವರು ದೂರು ನೀಡಿದ್ದಾರೆ. ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟನೆ ಮಾಡುವ ಸಂಬಂಧ ನನ್ನ ಮಗಳು ಐದು ವರ್ಷದಿಂದಲೂ ಬೆಂಗಳೂರಿನಲ್ಲಿದ್ದಳು. ಎರಡು ವರ್ಷದಿಂದ ಸನ್ವರ್ಥ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ನನ್ನ ಮಗಳಿಗೆ ವಿವೇಕ್ ಎಂಬಾತ ಪರಿಚಯವಾಗಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ವಿಚಾರ ನನ್ನ ಮಗಳು ನನ್ನ ಪತ್ನಿ ರೇಣುಕಾ ಬಳಿ ಹೇಳಿದ್ದಳು.
ಸೆ. 30 ರಂದು ನನ್ನ ಮಗಳು ಆತ್ಮಹತ್ಯೆಗೂ ಒಂದು ತಾಸು ಮುನ್ನ ಆಕೆಯ ಗೆಳೆಯ ಅಂತ ಹೇಳಿಕೊಂಡಿದ್ದ ವಿವೇಕ್ ನನ್ನ ಪತ್ನಿ ರೇಣುಕಾಗೆ ಕರೆ ಮಾಡಿದ್ದ. ನಿಮ್ಮ ಮಗಳು ನನ್ನನ್ನು ಮುದುವೆಯಾಗದಿದ್ದರೆ ತಲೆ ಹೊಡೆದು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಹೀಗೆ ಬೆದರಿಕೆ ಬಂದ ಒಂದು ತಾಸಿನ ಬಳಿಕ ನನ್ನ ಹಿರಿಯ ಮಗಳು ಭಾಗ್ಯಶ್ರೀ ನಮಗೆ ಕರೆ ಮಾಡಿ ನನ್ನ ಪುತ್ರಿ ಸಾವನ್ನಪ್ಪಿದ್ದಾಳೆ ಎಂಬ ಸಂಗತಿಯನ್ನು ತಿಳಿಸಿದಳು. ನನ್ನ ಮಗಳನ್ನು ಮದುವೆಯಾಗುವಂತೆ ವಿವೇಕ್ ಪೀಡಿಸುತ್ತಿದ್ದ. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಮಹೇಶ್ ಕಾರಣ. ಇವರ ಕಿರುಕುಳ ತಾಳಲಾರದೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರ್ಥಿಕವಾಗಿ ಅವಳಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಅವಳ ಬಳಿ ಆರು ಲಕ್ಷ ರೂ. ಹಣವಿತ್ತು. ಎರಡು ದಿನದ ಹಿಂದಷ್ಟೇ ನಾನೇ ಒಂದು ಲಕ್ಷ ರೂ. ಹಣವನ್ನು ಕೊಟ್ಟು ಕಳಿಸಿದ್ದೆ ಎಂದು ಮೃತ ಸೌಜನ್ಯಾಳ ತಂದೆ ಪ್ರಭು ಮಾದಪ್ಪ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರನ್ನು ಆಧರಿಸಿಯೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.