ನಟಿ ವಿಜಯಲಕ್ಷ್ಮಿ ಆಗಿದ್ದಾಂಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು, ನಾನು ಕಷ್ಟದಲ್ಲಿದ್ದೇನೆ, ಸಹಾಯದ ಅವಶ್ಯಕತೆ ಇದೆ ಎನ್ನುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಲೈವ್ ಮಾಡಿ, ನನ್ನನ್ನು ಕನ್ನಡಿಗರು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದೆಲ್ಲಾ ದೂರಿದ್ದರು. ಆದರೆ ಇಂದು ಹಠಾತ್ತನೆ ಸುದ್ದಿಗೋಷ್ಠಿ ನಡೆಸಿ ನನಗೆ ಕನ್ನಡಿಗರು ಸಾಕಷ್ಟು ನೆರವು ನೀಡಿದ್ದಾರೆ ಎಂದು ಹೇಳಿದ್ದಾರೆ.
ವಿಜಯಲಕ್ಷ್ಮಿಯ ತಾಯಿ ಕೆಲವು ದಿನಗಳ ಹಿಂದಷ್ಟೆ ಮೃತಪಟ್ಟಿದ್ದರು. ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ವಿಜಯಲಕ್ಷ್ಮಿ ತನಗೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಅದನ್ನು ಕಂಡು ಸಾಕಷ್ಟು ಮಂದಿ ವಿಜಯಲಕ್ಷ್ಮಿಗೆ ಸಹಾಯ ಮಾಡಿದ್ದು, 6 ಲಕ್ಷಕ್ಕೂ ಹೆಚ್ಚು ಹಣವನ್ನು ವಿಜಯಲಕ್ಷ್ಮಿಗೆ ಕಳಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ವಿಜಯಲಕ್ಷ್ಮಿ ನಾನು ನನ್ನ ಜೀವನದಲ್ಲಿ ಇಷ್ಟೊಂದು ಹಣ ನೋಡಿಲ್ಲ. ನನಗೆ ಕರ್ನಾಟಕದವರು ಬಹಳ ಸಹಾಯ ಮಾಡಿದ್ದಾರೆ. ಶಿವರಾಜ್ ಕುಮಾರ್, ಯಶ್ ಎಲ್ಲರೊಟ್ಟಿಗೆ ಮಾತನಾಡಿದ್ದೇನೆ, ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆರು ಲಕ್ಷ ಹಣ ನನಗೆ ಬಹಳ ದೊಡ್ಡದು ಹಾಗಾಗಿ ನನಗೆ ಅದು ಬೇಡ ಎಂದು ವಿಜಯಲಕ್ಷ್ಮಿ ಆ ಹಣವನ್ನು ವಾಣಿಜ್ಯ ಮಂಡಳಿ ಮುಖೇನ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ನೀಡಿದರು. ‘ನಾನು ಕರ್ನಾಟಕದಲ್ಲಿ ಭಿಕ್ಷುಕಿ. ನಾನು ಭಿಕ್ಷೆ ಬೇಡುತ್ತೇನೆ ನನಗೆ ಮುಜುಗರವಿಲ್ಲ. ನನ್ನ ಅಕ್ಕ, ಅಮ್ಮನನ್ನು ಉಳಿಸಿಕೊಳ್ಳಲು ನಾನು ಭಿಕ್ಷೆ ಬೇಡಿದೆ. ಕರ್ನಾಟಕದ ಜನ ನನಗೆ ಸಾಕಷ್ಟು ನೀಡಿದ್ದಾರೆ. ಇಷ್ಟೊಂದು ಹಣ ನಾನು ನೋಡಿಲ್ಲ. ನನಗೆ ಈಗ ಇದು ಬೇಡ” ಎಂದಿದ್ದಾರೆ ವಿಜಯಲಕ್ಷ್ಮಿ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದವನ್ನೂ ಹೇಳಿದ್ದಾರೆ.