ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕೆಂಬ ಒತ್ತಾಯ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ದೇವಸ್ಥಾನಗಳಿಗೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬೋರ್ಡ್ ಹಾಕಿವೆ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಬಳಿಕ,ಇದೀಗ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬ್ಯಾನರ್ ಹಾಕಲಾಗಿದೆ.
ಕೇರಳ ರೀತಿಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು. ಹಿಂದೂ ಸಂಪ್ರದಾಯದಂತೆ ಭಕ್ತರು ವಸ್ತ್ರ ಧರಿಸಬೇಕು. ದೇವಸ್ಥಾನದ ಪಾವಿತ್ರ್ಯ ಉಳಿಸುವಂತಹ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಸಂಘಟನೆಗಳು ತಾವೇ ದೇವಸ್ಥಾನಗಳ ಎದುರು ವಸ್ತ್ರ ಸಂಹಿತೆಯ ಬಗ್ಗೆ ಬೋರ್ಡ್ ಹಾಕಿವೆ.
ಪುರುಷರು ಧೋತಿ, ಪಂಚೆ ಅಥವಾ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಿ ದೇವಸ್ಥಾನಕ್ಕೆ ಬರಬೇಕು ಎಂಬ ನಿಯಮ ಹಾಕಲಾಗಿದೆ. ಧಾರ್ಮಿಕ ದತ್ತಿ ಇಲಾಖೆಗೂ ವಸ್ತ್ರ ಸಂಹಿತೆ ಜಾರಿ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬ್ಯಾನರ್ ಹಾಕಲಾಗಿದೆ. ಹೀಗಾಗಿ ಭಕ್ತರು ಗೊಂದಲದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣ, ಸರ್ಕಾರ ಅಥವಾ ಧಾರ್ಮಿಕ ದತ್ತಿ ಇಲಾಖೆಗಳು ವಸ್ತ್ರ ಸಂಹಿತೆಯನ್ನು ಇನ್ನೂ ಜಾರಿ ಮಾಡಿಲ್ಲ. ಆದರೆ ಭಕ್ತರ ಹಿತರಕ್ಷಣೆಯ ದೃಷ್ಟಿಯಿಂದ ಬ್ಯಾನರ್ ಅಳವಡಿಸಿದ್ದೇವೆ. ಇದು ಕಡ್ಡಾಯವಲ್ಲ. ಕ್ಷೇತ್ರದ ವತಿಯಿಂದ ದೇವಳದ ಭಕ್ತರಿಗೆ ಮಾಡುವ ಮನವಿ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಭಕ್ತರಿಗೆ ಏಕಾಏಕಿ ನಿಯಮ ರೂಪಿಸಿದರೆ ಅನುಷ್ಠಾನಕ್ಕೆ ತರುವುದು ಕಷ್ಟವಾಗಲಿದೆ ಎನ್ನುವುದು ಭಕ್ತರ ಅಭಿಪ್ರಾಯ.
ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಬೇಕೆಂದು ಹಿಂದೂ ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದವು. ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು, ಆಗಮಿಸುತ್ತಾರೆ. ಹೀಗಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕೆಂದು ಕೇಳಿಕೊಂಡಿದ್ದವು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಇತರೆ ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಚರ್ಚೆ ಜೋರಾಗಿ ಸಾಗಿದೆ.