‘ಕೆಜಿಎಫ್’ ನಂತರ ಯಶ್‌ರ ದಶೆಯೇ ಬದಲಾಗಿದೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ‘ಕೆಜಿಎಫ್’ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಯಶ್ ಇದೀಗ ವಿಶೇಷ ಗೌರವೊಂದಕ್ಕೆ ಪಾತ್ರರಾಗಿದ್ದಾರೆ.
ನಟ ಯಶ್ ಪೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಫೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಮೊದಲ ನಟ ಎಂಬ ಖ್ಯಾತಿಗೆ ನಟ ಯಶ್ ಪಾತ್ರರಾಗಿದ್ದಾರೆ.
ಫೋರ್ಬ್ಸ್ ಮ್ಯಾಗಜೀನ್ ಈ ಬಾರಿ ದಕ್ಷಿಣ ಭಾರತ ಸಿನಿಮಾಗಳು, ಸಿನಿಮಾಗಳ ಕತೆಗಳು ಬದಲಾದ ರೀತಿ, ದಕ್ಷಿಣ ಭಾರತದ ಸಾಮಾಜಿಕ ಜಾಲತಾಣ ತಾರೆಗಳು ಹೀಗೆ ದಕ್ಷಿಣ ಭಾರತ ಮನೊರಂಜನಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಸಂಚಿಕೆ ಹೊರತಂದಿದ್ದು, ದಕ್ಷಿಣ ಭಾರತದ ಚಿತ್ರರಂಗದ ಪ್ರತಿನಿಧಿಯಂತೆ ನಟ ಯಶ್‌ರ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿದ್ದಾರೆ.
ನಟ ಯಶ್ ಬಗ್ಗೆ ಫೋರ್ಬ್ಸ್ ಮುಖಪುಟ ಲೇಖನವನ್ನೂ ಪ್ರಕಟಿಸಿದ್ದು, ‘ಫೀಲ್ಡ್ಸ್ ಆಫ್ ಗೋಲ್ಡ್’ ಎಂಬ ಹೆಡ್‌ಲೈನ್ ನೀಡಿದೆ. ‘ಮೈಸೂರಿನಿಂದ ಬೆಂಗಳೂರಿಗೆ ಬಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯ ನಟರಾದ ಯಶ್ ಜೀವನದ ಬಗ್ಗೆ ಆಳವಾದ ಮಾಹಿತಿ” ಎಂದು ಫೋರ್ಬ್ಸ್ ಹೇಳಿದೆ. ನಟ ಯಶ್‌ರ ಜೀವನ ಪಯಣ, ಯಶ್ ಎದುರಿಸಿದ ಅಡೆ-ತಡೆಗಳು, ಅವಕಾಶಗಳು, ‘ಕೆಜಿಎಫ್’ ತಂದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಫೋರ್ಬ್ಸ್ ಜೊತೆ ಮಾತನಾಡಿದ್ದಾರೆ ಯಶ್.