ರಾಜ್ಯದಲ್ಲಿ ಮತಾಂತರ ಕಾಯ್ದೆ ಸಂಬಂಧ ಚರ್ಚೆ ಜೋರಾಗಿರುವ ಹೊತ್ತಲ್ಲೇ ಶಾಲೆಯೊಂದಕ್ಕೆ ನುಗ್ಗಿದ ಹಿಂದೂ ಪರ ಸಂಘಟನೆಗಳು ಕ್ರಿಸ್ಮಸ್ ಆಚರಣೆಗೆ ತಡೆಯೊಡ್ಡಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಈ ಘಟನೆ ವರದಿಯಾಗಿದೆ. ವಿಜಯ ವಿದ್ಯಾ ಸಂಸ್ಥೆ ಹಾಗೂ ನಿರ್ಮಲ ಅನುದಾನಿತ ಶಾಲೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುತ್ತಿಗೆ ಹಾಕಿದ್ದಾರೆ.
ಜೊತೆಗೆ ಕ್ರಿಶ್ಚಿಯನ್ ಆಡಳಿತ ಮಂಡಳಿ ನಡೆಸುವ ಶಾಲೆ ಇದಾಗಿದ್ದು, ಕ್ರಿಸ್ಮಸ್ ಹಬ್ಬದ ನೆಪದಲ್ಲಿ ಮತಾಂತರ ನಡೀತಾ ಇದೆ ಅಂತ ಆರೋಪಿಸಿವೆ. ಜೊತೆಗೆ ಕ್ರಿಸ್ಮಸ್ ಆಚರಿಸುವ ಹಾಗೆ ಹಿಂದೂ ಹಬ್ಬಗಳನ್ನು ಯಾಕೆ ಆಚರಿಸಲ್ಲ.. ಗಣಪತಿ ಕೂರಿಸಲ್ಲ.. ಕೃಷ್ಣ ವೇಷ ಹಾಕಿಸಲ್ಲ.. ಹೀಗಿರುವಾಗ ಸಂತಾ ಕ್ಲಾಸ್ ವೇಷ ಹಾಕಿಸಿ ಮಕ್ಕಳಿಗೆ ಚಾಕಲೇಟ್ ಕೊಟ್ಟಿದ್ದು ಯಾಕೆ ಅಂತ ಪ್ರಶ್ನಿಸಿದ್ಧಾರೆ. ಈ ವೇಳೆ ವ್ಯಕ್ತಿಯೊಬ್ಬ, ನಿಮ್ಮ ಶಾಲೆಗೆ ಬಂದ ಹುಡುಗನೊಬ್ಬ ಮನೆಗೆ ಬಂದು ಕಪಾಟಿನ ಮೇಲೆ ಏಸು ಫೋಟೋ ಅಂಟಿಸಿದ್ದಾನೆ. ನೀವು ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮ ಕಲಿಸ್ತಿದ್ದೀರಿ ಅಂತ ಬೆದರಿಕೆ ಹಾಕಿದ್ದಾರೆ. ಅಂದಹಾಗೆ ಹೀಗೆ ಅನುದಾನಿತ ಶಾಲೆಗಳಲ್ಲಿ ಹಬ್ಬ ಆಚರಿಸಲು ಸಂವಿಧಾನದಲ್ಲಿ ಅನುಮತಿ ಇದೆ. ಆದ್ರೆ ಇದ್ರಲ್ಲಿ ಮಕ್ಕಳು ಭಾಗಿಯಾಗಲೇಬೇಕು ಅಂತ ಬಲವಂತ ಮಾಡುವಂತಿಲ್ಲ.