ಜನ್ಮದಿನದಂದೇ ಯುವಕನ ದಾರುಣ ಸಾವು

1
36

ಅಯ್ಯೋ ವಿಧಿಯೇ ನೀನೆಂಥಾ ಕ್ರೂರಿ? ಮಗನ ಹುಟ್ಟು ಹಬ್ಬದ ಸಂಭಮ್ರದಲ್ಲಿದ್ದ ಹೆತ್ತವರ ಒಡಲಿಗೆ ಬೆಂಕಿ ಇಟ್ಟು ಬಿಟ್ಯಲ್ಲಾ…

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಶರತ್​ನ ಸಾವಿನ ಸುದ್ದಿ ಕೇಳಿದ ಪ್ರತಿಯೊಬ್ಬರೂ ವಿಧಿಗೆ ಹಿಡಿಶಾಪ ಹಾಕದೆ ಇರಲಾರರು.

ರಾಗಿಬೊಮ್ಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಗೀತಾ ದಂಪತಿ ಪುತ್ರ ಶರತ್​, ಡಿ.23ರಂದು 19 ವರ್ಷ ತುಂಬಿ 20ನೇ ವಸಂತಕ್ಕೆ ಕಾಲಿಟ್ಟಿದ್ದ. ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಈತ, ಜನ್ಮ ದಿನದಂದೂ ಕಾಲೇಜಿಗೆ ತೆರಳಿದ್ದ. ಕಾಲೇಜಿನಲ್ಲಿ ಸಹಪಾಠಿಗಳೆಲ್ಲರೂ ಶರತ್​ಗೆ ಶುಭ ಕೋರಿದ್ದರು. ತರಗತಿ ಮುಗಿದ ಬಳಿಕ ಖುಷಿಯಿಂದಲೇ ಸಹಪಾಠಿಗಳ ಜತೆ ಶರತ್​ ವಾಪಸ್​ ಮನೆಗೆ ಬರುತ್ತಿದ್ದ. ಮಾರ್ಗಮಧ್ಯೆ ದುರಂತ ಸಂಭವಿಸಿದ್ದು, ಶರತ್​ ಬಾರದ ಲೋಕಕ್ಕೆ ಹೋಗಿಬಿಟ್ಟ.

ಕಾಲೇಜು ಮುಗಿದ ಬಳಿಕ ಮನೆಗೆ ಹೋಗಲೆಂದು ಸಹಪಾಠಿಗಳಾದ ಶಶಾಂಕ್​ ಮತ್ತು ಸುದರ್ಶನ್​ ಜತೆ ಶರತ್ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಕುಕ್ಕುಟ ಸಂವರ್ಧನಾ ಕೇಂದ್ರದ ಸಮೀಪ ಈ ಮೂವರು ವಿದ್ಯಾರ್ಥಿಗಳಿಗೂ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶರತ್​, ಶಶಾಂಕ್ ಮತ್ತು ಸುದರ್ಶನ್ ಮೂವರನ್ನು ಜಿಲ್ಲಾಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಈ ಪೈಕಿ ಶರತ್​ಗೆ ತೀವ್ರ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶರತ್​​ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಉಳಿವಿಗಾಗಿ ಪಾಲಕರು ಕಣ್ಣೀರಿಡುತ್ತಾ, ದೇವರಿಗೂ ಪರಿಪರಿಯಾಗಿ ಬೇಡಿಕೊಂಡಿದ್ದರು. ಆಸ್ಪತ್ರೆಯಲ್ಲೂ ಮಗನನ್ನು ಉಳಿಸಿಕೊಡಿ ಎಂದು ವೈದ್ಯರನ್ನ ಅಂಗಲಾಚಿ ಬೇಡಿಕೊಂಡಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಫಲಿಸಲಿಲ್ಲ. ವಿಧಿಯಾಟವೇ ಬೇರೆಯಾಗಿತ್ತು. ಶರತ್​ನ ಮಿದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಮಗ ಬದುಕಿ ಬರಲಾರ ಎಂದರಿತ ಪಾಲಕರು ನೋವಿನಲ್ಲೂ ಶರತ್​​ನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಅತ್ತ ಶರತ್​ ಮತ್ತು ಈತನ ಸಹಪಾಠಿಗಳಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಸಂಭವಿಸಿದ ವೇಳೆ ಕಾರನ್ನು ಚಾಲನೆ ಮಾಡುತ್ತಿದ್ದವ ಪೊಲೀಸ್​ ಸಿಬ್ಬಂದಿ ಎನ್ನಲಾಗಿದೆ. ಆರೋಪಿ ಇಲಾಖೆ ಸಿಬ್ಬಂದಿಯಾದ ಕಾರಣ ಪೊಲೀಸರು ಆತನ ರಕ್ಷಣೆಗೆ ನಿಂತಿದ್ದಾರೆ ಆಕ್ರೋಶ ಹೊರಹಾಕಿದ್ದ ಜಿಪಂ ಮಾಜಿ ಸದಸ್ಯ ಆರ್​.ಎನ್​.ವಿಶ್ವಾಸ್​, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here