ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮೀಸಲು . ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆ ಆಗಿದ್ದಾಳೆ . ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದು.
ದುರ್ಗಾ ದೇವಿಯ ಸ್ವರೂಪಳಾದ ಕಾತ್ಯಾಯಿನಿ ದೇವಿ ಋಷಿಯಾಗಿದ್ದ ಕಾತ್ಯಾಯನ್ ಮಗಳು. ಕಾತ್ಯಾಯನ್ ಎನ್ನುವ ಋಷಿ ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕು ಎಂದು ಪ್ರಾರ್ಥಿಸುತ್ತಾನೆ . ಈ ಹಿನ್ನೆಲೆಯಲ್ಲಿಯೇ ಭಕ್ತಿಯಿಂದ ತಪಸ್ಸನ್ನು ಕೈಗೊಂಡನು. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯನಿ ಎಂದು ಹೆಸರಿಟ್ಟರು . ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸನ ಸಂಹಾರಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂಬ ನಂಬಿಕೆಯೂ ಜನಮಾನಸದಲ್ಲಿದೆ. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾರ್ಕಲೆಯ ಅಲಂಕಾರವನ್ನು ಹೊಂದಿರುತ್ತಾಳೆ. ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಜೊತೆಗೆ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುತ್ತದೆ. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಒಳಗಾಗಬಹುದು ಎಂಬ ನಂಬಿಕೆ ಭಕ್ತರದ್ದು.
ದೇವಿಯ ಪೂಜೆ ಹೇಗೆ ?
ಕಾತ್ಯಾಯಿನಿಯನ್ನ ಪೂಜೆಮಾಡುವಾಗ ಸ್ನಾನಾದಿಗಳನ್ನ ಮಾಡಿಕೊಂಡು , ಶುಭ್ರವಾದ ಬಟ್ಟೆ ಧರಿಸಬೇಕು . ಇಂದಿನ ಬಣ್ಣ ಬೂದು ಬಣ್ಣ . ಬೂದು ಬಣ್ಣದ ವಸ್ತ್ರ ಧರಿಸುವುದು ಸೂಕ್ತ . ನಂತರ ದೇವಿಯ ಮೂರ್ತಿ ಇದ್ದರೆ ಪಂಚಾಮೃತ ಅಭಿಷೇಕ ಮಾಡಬೇಕು . ಇಲ್ಲದಿದ್ದಲ್ಲಿ ದೇವಿಯ ಚಿತ್ರಕ್ಕೆ ಕುಂಕುಮಾರ್ಚನೆ ಮಾಡಿದರು ಒಳ್ಳೆಯದು .
ಗುಲಾಬಿ ಹೂಗಳಿಂದ ಕಾತ್ಯಾಯಿನಿ ದೇವಿಗೆ ಪೂಜೆ ಮಾಡಿದರೆ ಒಳಿತು . ಹಾಗೂ ಬೆಲ್ಲದಿಂದ ಮಾಡಿದ ಸಿಹಿಯನ್ನ ದೇವಿಗೆ ಅರ್ಪಿಸಬೇಕು .
ಮಂತ್ರ
ಓಂ ದೇವಿ ಕಾತ್ಯಾಯಿನಿ ನಮಃ
ಓಂ ದೇವಿ ಕಾತ್ಯಾಯಿನಿ ನಮಃ
ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ
ದಾನವಘಾತಿನಿ ||
ದೇವಿಯ ಧ್ಯಾನ
“ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ
ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್
ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್
ಕಾತ್ಯಾಯನಿ ದೇವಿಯ ಸ್ತುತಿ
ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.