ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

Date:

ಹಾಲ್ ನಲ್ಲಿದ್ದ ಗಡಿಯಾರದ ಮುಳ್ಳು ಸರಿಯಾಗಿ ಹನ್ನೆರಡು ತೋರಿಸುತ್ತಿತ್ತು. ಪಲ್ಲವಿಯ ಮನೆ ಬಂಧುಗಳು,ಆಪ್ತರು,ಅಕ್ಕಪಕ್ಕದವರಿಂದ ತುಂಬಿ ಹೋಗಿದ್ದು,ಎಲ್ಲಾರೂ ಗೋಳೋ ಎಂದು ಅಳುತ್ತಿದ್ದರು. ದೂರದಲ್ಲಿ ನಿಂತಿದ್ದ ಪಲ್ಲವಿ ಇದನ್ನೆಲ್ಲಾ ನೋಡುತ್ತಿದ್ದಳು.ಏನಾಗಿದೆ ಇವರಿಗೆಲ್ಲಾ..ಯಾಕೆ ಹೀಗೆ ಸೂರು ಕಿತ್ತು ಹೋಗೋ ತರ ಅಳುತ್ತಿದ್ದಾರೆ?ಅರೆರೆ..ಇದೇನು ಮಾಡುತ್ತಿದ್ದಾರೆ? ಇವರೆಲ್ಲಾ ನನ್ನ ಮೇಲೆ ಬಿದ್ದು ಏಕೆ ಅಳುತ್ತಿದ್ದಾರೆ? ಏನಾಗಿದೆ ಇಲ್ಲಿ? ನಾನಿನ್ನೂ ಇಲ್ಲೇ ಇದ್ದೇನೆ‍ ‍….‍ಮತ್ತೆ ಈ ರೀತಿ ಮಲಗಿರುವುದಾದರೂ ಏಕೆ????
ಪಕ್ಕದ ಹಿರಿಯ ಹೆಂಗಸೊಬ್ಬರು…ಪಲ್ಲವಿ ನೀನು ಹೀಗೆ ಮಾಡ್ಬಾರ್ದಿತ್ತವ್ವ..ಹೋಗೋದು ಹೋದಿ..ಜೊತೆಗೆ ಎಲ್ಲಾರ ನೆಮ್ಮದಿನ ಕಿತ್ಕೊಂಡೋದ್ಯಲ್ಲ? ರಾಜೀವನಿಗೆ ಇನ್ಯಾರವ್ವಾ ದಿಕ್ಕು? ಇನ್ನೂ 5 ವರುಷ ತುಂಬದ ಆ ಹಸುಗಂದಮ್ಮನ ತಬ್ಬಲಿ ಮಾಡಿ ಹೊರಟೇ ಹೋದ್ಯಲ್ಲ? ಪಲ್ಲವಿಗೆ ಏನೆಂಬುದೇ ಅರ್ಥವಾಗುತ್ತಿರಲಿಲ್ಲ.. ಎಲ್ಲಾ ಗೊಂದಲಮಯ..ತೀರಾ ಸೋಜಿಗವೆನಿಸಿತು..ಆಕೆಯ ದೇಹಕ್ಕೆ ಅದೇನೋ ಶಾಸ್ತ್ರ ಮಾಡುತ್ತಿದ್ದಾರೆ? ಆಕೆಗೇನು ಅನ್ನಿಸುತ್ತಿಲ್ಲ ಏಕೆ? ಅಮ್ಮನ ಆರ್ತನಾದ ಮುಗಿಲು ಮುಟ್ಟಿದೆ.ರಾಜೀವ ಸ್ವಲ್ಪವೂ ವಿಚಲಿತನಾಗದೆ ಅದೆತ್ತಲೋ ಶೂನ್ಯದಲ್ಲಿ ದೃಷ್ಟಿ ನೆಟ್ಟು ಕೂತಿದ್ದಾನೆ.ಒಡ ಹುಟ್ಟಿದವರ ದುಃಖ ಹೇಳ ತೀರದು.ಅತ್ತೆ ಮಾವನವರು ನೋವಿನಲ್ಲಿ ಕುಗ್ಗಿ ಹೋಗಿದ್ದಾರೆ.ಪಕ್ಕದ ಮನೆಯ ಅಂಕಲ್ ಮಾವನವರ ಬಳಿ ರಾಯರೇ..ನಿಮ್ಮ ಮನೆಗೆ ಇನ್ನು ಯಾರು ದಿಕ್ಕು? ಏನನ್ನೂ ಯೋಚನೆ ಮಾಡದೆ ನಿಮ್ಮನ್ನೆಲ್ಲಾ ಅನಾಥಳನ್ನಾಗಿ ಮಾಡಿ ಹೊರಟೇ ಹೋದಳಲ್ಲಾ? ಕೈ ಹಿಡಿದು ನಡೆಸಿ ಸಲಹುವವಳು ಇನ್ನಿಲ್ಲವಾದರೆ ಹೇಗೆ ಮುಂದಿನ ಜೀವನ? ಎನ್ನುತ್ತಿದ್ದರೆ, ಇದ್ಯಾವುದರ ಪರಿವೆ ಇರದ 5 ವರುಷದ ಪಲ್ಲವಿಯ ಕಂದ ಪಕ್ಕದ ಕೋಣೆಯಲ್ಲಿ ಗಾಢವಾಗಿ ನಿದ್ದೆ ಮಾಡುತ್ತಿತ್ತು; ‍ಎಲ್ಲವನ್ನೂ, ಎಲ್ಲಾರನ್ನೂ ಪಲ್ಲವಿ ಗಮನಿಸುತ್ತಿದ್ದಾಳೆ,ಆದ್ರೆ ಏನಾಗಿದೆ ಎಂದು ಇನ್ನೂ ಅರಿವಾಗುತ್ತಿಲ್ಲ ಆಕೆಗೆ.
ಪಲ್ಲವಿಯ ತಂದೆಯವರು ಪೋಲೀಸರ ಜೊತೆಯಲ್ಲಿ ಅದೇನೋ ಮಾತಾಡುತ್ತಿದ್ದರು,ಎಲ್ಲಾವು ಅಸ್ಪಷ್ಟ..ಸರಿಯಾಗಿ ಕೇಳಿಸುತ್ತಿಲ್ಲ,ಏನಾಗಿರಬಹುದೆಂದು ಪಕ್ಕದಲ್ಲಿ ಹೋಗಿ ಅಪ್ಪಾ..ಅನ್ನುತ್ತಿದ್ದರೆ ಅವಳ ಕೂಗು‍ ಅವರ್ಯಾರಿಗೂ ಕೇಳಿಸಲೇ ಇಲ್ಲ..ಬದಲಾಗಿ ಅನ್ನುತ್ತಿದ್ದರು,ಅವಳ ಪಕ್ಕದಲ್ಲಿ ಇಲಿ ಪಾಷಾಣ ಸಿಕ್ಕಿತ್ತು, ಇದೇ ಅವಳ ಸಾವಿಗೆ ಕಾರಣವಾಯಿತು.ಅಂದರೆ ನಾನು ಸತ್ತು ಹೋಗಿದ್ದೇನೆಯೇ? ಹೇಗೆ? ಯಾವಾಗ ಅನ್ನುತ್ತಿದ್ದಂತೆ ಪಲ್ಲವಿಗೆ ತಾನು ದು:ಖದಲ್ಲಿ ಇಲಿ ಪಾಷಾಣ ಸೇರಿಸಿದ್ದು ನೆನಪಾಯ್ತು. ಹೌದು..ಸಂಶಯವೇ ಇಲ್ಲ,ನಾನು ಸತ್ತು ಹೋಗಿದ್ದೇನೆ.ಅಯ್ಯೋ..ಛೆ..ಆವೇಶದಲ್ಲಿ ಇದೆಂತಹಾ ಕೆಲಸ ಮಾಡಿಬಿಟ್ಟೆ…ಒಂದೇ ಒಂದು ಕ್ಷಣದಲ್ಲಿ ಎಲ್ಲಾ ನಡೆದು ಹೋಯಿತೇ? ಆತ್ಮಹತ್ಯೆ ಮಾಡುವಷ್ಟು ಹೇಡಿಯಾದೆನೇ ? ಕೆಲವೊಂದು ದುರ್ಬಲ ಕ್ಷಣಗಳಲ್ಲಿ, ಉದ್ವೇಗಕ್ಕೊಳಗಾಗಿ ಆತುರದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಈ ಆತ್ಮಹತ್ಯೆ, ಜೀವನದಲ್ಲಿ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಎಂದು ಶಾಲೆ ಕಾಲೇಜುಗಳಲ್ಲಿ ದೊಡ್ದದಾಗಿ ಆತ್ಮಹತ್ಯೆಯ ಬಗ್ಗೆ ಭಾಷಣ ಮಾಡಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದ ನಾನೇ…ಸ್ವತಃ ನಾನೇ ಆತ್ಮಹತ್ಯೆ ಮಾಡಿದೆನೇ?? ನನ್ನ ಪುಟ್ಟ ಕಂದಮ್ಮ..ಅದಕ್ಕಿನ್ಯಾರು ಗತಿ?? ನಾನು ಕೈ ಚಾಚಿದಷ್ಟು ನನಗೆ ಏಕೆ ಅದು ಎಟಕುತ್ತಿಲ್ಲವಲ್ಲ?
ಆದ್ರೆ ಇದೇನಿದು? ಎಲ್ಲಾರ ನಡುವೆ ಅವನು…ಹೌದು ಅದೇ ವ್ಯಕ್ತಿ… ಉದ್ದ ಮೂಗಿನ ಅಜಾನು ಬಾಹು.ಮುಖ ಮನಸ್ಸಿನ ಕನ್ನಡಿ ಅಂತಾರೆ..ಆದ್ರೆ ಈತನ ಮುಖಕ್ಕೂ ಮನಸ್ಸಿಗೂ ಯಾವುದೇ ಸಂಬಂಧವಿಲ್ಲ..ಮುಗ್ಧತೆಯ ಮುಖವಾಡ ಹಾಕಿದ ಧೂರ್ತ ಈತ.ಮೊಸಳೆ ಕಣ್ಣಿರಿಡುತ್ತಿದ್ದಾನಲ್ಲವೇ??ಈ ಕೆಟ್ಟ ಮನುಷ್ಯ ಕಾಲೇಜು ದಿನಗಳಲ್ಲೇ ನನ್ನನ್ನು ಮದುವೆಯಾಗಬೇಕೆಂದು ಬೆಂಬಿದ್ದಿದ್ದ. ಅವನು ನನಗೆ ಯಾವುದಕ್ಕೂ ಸರಿಸಾಟಿ ಎನಿಸಲಿಲ್ಲ. ಅವನನ್ನು ಕಂಡರೆ ನನಗಾಗದು. ಮನೆಯವರೆದುರು ತೀರಾ ಆತ್ಮೀಯನಂತೆ ವರ್ತಿಸಿ ನನಗೆ ಮಾತಿನಲ್ಲಿ ಕಾಟಕೊಡುತ್ತಿದ್ದ ಏಕೈಕ ವ್ಯಕ್ತಿ. ಕಾಲೇಜು ಮುಗಿದು ನನ್ನ ಮದುವೆಯಾಗುತ್ತಿದ್ದಂತೆ ಇನ್ನೇನು ಅಬ್ಬಾ ಎಲ್ಲಾ ಪರಿಹಾರವಾಗೇ ಹೋಯ್ತು ಅನ್ನೋಷ್ಟರಲ್ಲಿ ನಮ್ಮ 6 ವರುಷದ ಸುಂದರ ದಾಂಪತ್ಯ ಹಾಳುಗೆಡವಲು ಅದೆಲ್ಲಿದ್ದನೋ ಮತ್ತೆ ಮರಳಿ ಬಂದ. ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷಿ ಅನ್ನೋ ತರಹ ,ನನ್ನ ಪತಿಯವರೊಡನೆ ಸ್ನೇಹದ ಮಾತನಾಡಿ ಮನೆಯವರೊಂದಿಗೆ ಮತ್ತೆ ಆತ್ಮೀಯವಾಗಿ ವರ್ತಿಸಿ ನನ್ನನ್ನು ತೀರಾ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ.
ಈಗ ಆತನ ಡಿಮಾಂಡ್ ಆತನ ಜೊತೆ ಹೋಗಬೇಕೆಂದಾಗಿತ್ತು, ಕೇಳದಿದ್ದಲ್ಲಿ,ನಮ್ಮ ಮನೆಯವರಿಗೆ ಸುಳ್ಳು ಪ್ರಚಾರ ಮಾಡಿ ನನ್ನ ಮೇಲೆ ಅಪವಾದ ಹಾಕುತ್ತೇನೆಂಬ ಬ್ಲಾಕ್ ಮೈಲ್ ಬೇರೆ. ಬಿಸಿ ತುಪ್ಪ ಉಗುಳಲೂ ಸಾಧ್ಯವಿಲ್ಲ, ನುಂಗಲೂ ಸಾಧ್ಯವಿಲ್ಲವಲ್ಲ ಅಂತಿರುವಾಗ ಮನೆಯವರ ಬಳಿ ಈತನ ಬಗ್ಗೆ ಹೇಳಲು ಧೈರ್ಯ ಸಾಲದೆ, ಹೇಳಿದರೆ ಮತ್ತೆ ನನ್ನ ನಂಬುವರೆ ಎಂಬ ಅನುಮಾನದೊಂದಿಗೆ ಯೋಚಿಸುತ್ತಿದ್ದಾಗ, ಕಣ್ಣಿಗೆ ಬಿದ್ದಿದ್ದು ಇಲಿ ಪಾಷಾಣ.ಅಯ್ಯೋ…ನನ್ನ ದುರ್ವಿಧಿಯೇ..ನನ್ನ ಈ ದುಡುಕು ನಿರ್ಧಾರದಿಂದ ಕೊನೆಗೆ ಆದದ್ದಾದರೂ ಏನು? ಸತ್ಯ ಎದುರಿಸಲಾರದ ಹೇಡಿಯಂತಾದೆನೆ? ಸುಳ್ಳಿಗೆ ಜಯ ದೊರಕಿಸಿಕೊಡುವಂತಾದೆನೇ? ಕಡೆಗೂ ಅಸತ್ಯ ಗೆಲ್ಲುವಂತೆ ಮಾಡಿದೆನಲ್ಲ? ಹೀಗೆ ಹಲವಾರು ಪ್ರಶ್ನೆಗಳು ಪಲ್ಲವಿಯನ್ನು ಕಿತ್ತು ತಿನ್ನುತ್ತಿರಲು ತಪ್ಪು ಮಾಡಿದೆ ಪಲ್ಲವಿ ನೀನು ತಪ್ಪು ಮಾಡಿದೆ.ನಿನ್ನ ಜೀವನ ನೀನೆ ಹಾಳು ಮಾಡಿಕೊಂಡು ಬಿಟ್ಟೆ ಎಂದು ಆಕೆಗೆ ಅನ್ನಿಸತೊಡಗಿತು.ಅಷ್ಟರಲ್ಲಾಗಲೇ ಆ ಧೂರ್ತ ಮುಖದ ತುಂಬ ಕಪಟ ನಾಟಕದೊಂದಿಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದ ದೃಷ್ಯ..ಬೇಡ ಬೇಡ ವೆಂದರೂ ಅವಳ ಕಣ್ಣ ಮುಂದೆ ಸುಳಿಯುತ್ತಿರಲು ಅವಳು ಹುಚ್ಚಿಯಂತಾದಳು…ಇಲ್ಲ ಹೀಗಾಗಲು ಬಿಡುವುದಿಲ್ಲ,ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ…
ನನಗೀ ಸಾವು ಬೇಡ…ನನಗೆ ಬದುಕಬೇಕು ..ನನ್ನಕಂದನಿಗಾಗಿ, ನನ್ನ ‍ರಾಜೀವನಿಗಾಗಿ, ನನ್ನನ್ನು ಸಾಕಿ ಸಲಹಿದ ಅಪ್ಪ ಅಮ್ಮನಿಗಾಗಿ ನಾನು ಮತ್ತೊಮ್ಮೆ ಬದುಕುವಂತಿದ್ದರೆ..?ಅಯ್ಯೋ ದೇವರೆ..ನಾನು ಸಾಯಲ್ಲ..ಬದುಕಬೇಕು ..ಬದುಕಬೇಕು..ಏನೇನೋ ಅಸ್ಪಷ್ಟ ಚಿತ್ರಣ ಕಣ್ಣ ಮುಂದೆ..ಪಲ್ಲವಿ ಕೂಗಾಡುತ್ತಿ‍ದ್ದಾಳೆ..ಆದರೆ ಅವಳ ಕೂಗು ಯಾರಿಗೂ ಕೇಳಿಸುತ್ತಿಲ್ಲ..ಅಯ್ಯೋ ಇದೇನು..ಅವಳ ಸ್ವರ ಗಂಟಲಿನಿಂದ ಹೊರಗೆ ಹೋಗುತ್ತಿಲ್ಲ..ಅಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾಮ್ಮಾ….ಎಂದು ಕಿರುಚುತ್ತಾಳೆ.ಅಷ್ಟೇ..ರಾಜೀವ ಕಣ್ಣ ಮುಂದೆ ಬಂದರು..ಪಲ್ಲವಿ ಏಳು ಎದ್ದೇಳು..ಕಣ್ಣ ಬಿಡು..ಏನಾಯ್ತು ನಿಂಗೆ ..ಯಾಕೆ ಹೀಗೆ ಕಿರುಚಿದೆ? ಎಂಬ ಪತಿಯ ಧ್ವನಿ ಅವಳನ್ನು ಬಡಿದೆಬ್ಬಿಸಿತು.ಅಂದರೆ..ಅವಳು ಕಂಡದ್ದು ಒಂದು ಕೆಟ್ಟ ಕನಸೇ??ಇಷ್ಟು ಹೊತ್ತು?ಎಂದು ವಾಸ್ತವದ ಅರಿವಾಗುತ್ತಿದ್ದಂತೆ ನಿರಾಳವಾಗಿ ಉಸಿರು ಬಿಟ್ಟಳು.ಒಂದು ಕ್ಷಣ ಹೋದ ಜೀವ ಮರಳಿ ಬಂದಂಗಾಯ್ತು.ಕಾಣದ ದೇವರಿಗೆ ಕೈ ಮುಗಿದಳು.ರಾಜೀವ ಹೇಳಿದ ಮಾತು ಕಿವಿಯಲ್ಲಿ ಗುಂಯಿಗುಟ್ಟುತ್ತಿತ್ತು. ಹಗಲೆಲ್ಲಾ ಟೀವಿ ಜಾಸ್ತಿ ನೊಡ ಬೇಡ ಅನ್ನೋದು ಇದಕ್ಕೆ ಎಂದು ನಯವಾಗಿ ಗದರಿ ,ಮುಂಗುರುಳನ್ನು ನೇವರಿಸಿ, ಹಣೆಗೆ ಹೂ ಮುತ್ತೊಂದನ್ನಿತ್ತು, ಹೊದಿಕೆಯನ್ನು ಹೊದಿಸಿ, ಸುಮ್ಮನೆ ಕಣ್ಣು ಮುಚ್ಚಿ ನಿದ್ದೆ ಮಾಡು ಎಂದರು….ಅಷ್ಟೇ ಅವಳಿಗಷ್ಟೇ ಸಾಕು..ರಾಜೀವನ ತುಂಬು ಮನಸ್ಸಿನ ನಿರ್ಮಲ ಪ್ರೀತಿ ಅವಳ ನಾಳಿನ ಸುಂದರ ಜೀವನಕ್ಕೆ ಭದ್ರವಾದ ಭರವಸೆಯನ್ನಿತ್ತಿತು. ಅವಳ ನಿರ್ಧಾರ ದೃಢ ವಾಯಿತು.. ಹೌದು ನಾಳೆ ಬೆಳಗಾಗುತ್ತಿದ್ದಂತೆ ಪತಿಗೆ ನಡೆದ ಎಲ್ಲಾ ವಿಚಾರ ಹೇಳಿ ಒಮ್ಮೆ ಮನಸ್ಸನ್ನು ತಿಳಿಯಾಗಿಸಬೇಕು..ರಾಜೀವ ಖಂಡಿತ ನನ್ನ ನಂಬುತ್ತಾರೆ ಎಂಬ ದೃಡ ನಿರ್ಧಾರದೊಂದಿಗೆ ಪಲ್ಲವಿ ನೆಮ್ಮದಿಯಾಗಿ ನಿದ್ದೆ ಮಾಡಿದಳು.
ಸ್ನೇಹಿತರೇ… ಪಲ್ಲವಿ ಕಥೆ ಏನನ್ನಿಸಿತು? ಸುಪ್ತ ಮನಸ್ಸಿನ ಭಾವನೆಗಳೇ ನಮ್ಮ ಕನಸಾಗಿ ಮಾರ್ಪಡುತ್ತದಂತೆ. ದೃಢ ಮನಸ್ಸಿನ ಪಲ್ಲವಿಗೇನೋ ಜೀವನದ ಸಾಕ್ಷಾತ್ಕಾರವಾಯಿತು ಆದ್ರೆ ಬಾಕಿ ಉಳಿದವರು ಆತುರದಲ್ಲಿ ದುಡುಕಿ ತಗೊಳ್ಳೋ ಅತ್ಮಹತ್ಯೆಯಂತಹ ನಿರ್ಧಾರದಿಂದ ಪ್ರಪಂಚದಲ್ಲಿ ನೀಚತನವನ್ನೇ ಗೆಲ್ಲಲು ಬಿಟ್ಟಂತಲ್ಲವೇ? ಪಲ್ಲವಿಯಂತೆ ಅದೆಷ್ಟು ಜನ ತನ್ನ ಜೀವನದ ಸೋಲನ್ನು ಎದುರಿಸರಲಾರದೆ,ಅಂತ್ಯ ಕಾಣುತ್ತಾರೆ??ಎಲ್ಲರೂ ಪಲ್ಲವಿಯಂತೆ ಯಾಕೆ ಯೋಚಿಸಲಾರರು? ಅದಕ್ಕೇ ಈಗ ಗ್ಯಾಂಗ್ ರೇಪ್ ಗಳಂತಹ ಪ್ರಕರಣಗಳು ಹೆಚ್ಚುತ್ತಿರುವುದು..ಹೇಡಿಗಳಂತೆ ಮರ್ಯಾದೆಗೆ ಅಂಜುವ ಹೆಂಗಸರು ಕಡೆಗೆ ಸಾವಿಗೆ ತನ್ನ ಹೆಗಲು ಕೊಡುತ್ತಾರೆ..ಇದು ನೀಚರಿಗೆ ನೀಚತನಕ್ಕೆ ಇನ್ನಷ್ಟು ಎಡೆ ಮಾಡಿಕೊಟ್ಟಂತಲ್ಲವೇ??
ಸಾವಿನ ಸಾನ್ನಿಧ್ಯಕ್ಕೆ ಹೋದ ಪ್ರತಿಯೊಬ್ಬ ಮನುಷ್ಯನೂ ತಾನು ಮತ್ತೆ ಬದುಕಬೇಕೆಂದು ಕೊಳ್ಳುತ್ತಾನೆ..ಸಾವನ್ನು ತೀರಾ ಸಮೀಪದಿಂದ ಕಂಡ ಓರ್ವ ವ್ಯಕ್ತಿಯ ಅನುಭವ ನೀವು ಕೇಳಬೇಕೆಂದಿದ್ದೀರಾ? ಹಾಗಿದ್ರೆ,ಕೊನೆ ಕ್ಷಣಗಳನ್ನೆಣಿಸುತ್ತಿರೋ ಯಾವುದಾದ್ರೂ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಬಳಿ ಹೋಗಿ ಕೇಳಿ… ಸಾವಿನ ಸಾಂಗತ್ಯದಲ್ಲಿ ಬದುಕಿನ ಯತಾರ್ಥತೆಯ ಬಗ್ಗೆ ಚೆನ್ನಾಗಿ ತಿಳಿದಿರೋ ವ್ಯಕ್ತಿ ಇವನೇನೆ? ಇಂದು ಸಿಕ್ಕ ಸಿಕ್ಕ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡೋವ್ರೆ. ದೌರ್ಜನ್ಯಕ್ಕೊಳಗಾಗೋ ಹೆಣ್ಣಿನಿಂದ ತೊಡಗಿ, ಸಾಲದ ಬಾಧೆ ಹೊರಲಾರದೆ ರೈತರ ಆತ್ಮಹತ್ಯೆ, ಸ್ಕೂಲ್ ಟೀಚರ್ ಬೈದ್ರು ಅಂತ ವಿದ್ಯಾರ್ಥಿಗಳ ಆತ್ಮಹತ್ಯೆ, ಪರೀಕ್ಷೆಯಲ್ಲಿ ಫೇಲಾದ್ರೂ ಆತ್ಮಹತ್ಯೆ, ಹಿರಿಯ ಅಧಿಕಾರಿಗಳ ಕಾಟ ತಾಳಲಾರದೆ ಆತ್ಮಹತ್ಯೆ, ಅಬ್ಬಬ್ಬಾ..ಒಂದೋ ಎರಡೋ ಇಂತಹ ಪ್ರಕರಣಗಳು ಹಲವಾರು..ಸಾವಿರಾರು, ಲಕ್ಷಾಂತರ..ನಮ್ಮ ಮುಂದಿನ ಭವಿಷ್ಯ ನೆನೆದೇ ಭಯ ಹುಟ್ಟಿಸುತ್ತದೆ..ಮುಂದೆ ಬರುವ ಎಲ್ಲಾ ಪ್ರಶ್ನಾರ್ಥಕ ಚಿಹ್ನೆಗೂ ಆತ್ಮಹತ್ಯೆಯೊಂದೇ ಉತ್ತರವಾಗುತ್ತದೆಯೇ?? ಛೀ.ಛೀ..ಖಂಡಿತ ಹಾಗಾಗಬಾರದು..ಹಾಗಿದ್ದಲ್ಲಿ..ಇದಕ್ಕೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರ ನಮ್ಮ ನಮ್ಮಲ್ಲಿಯೇ ಇದೆ. ನಾವು ಅರಿತುಕೊಳ್ಳಬೇಕಷ್ಟೇ..ಅರಿತುಕೊಂಡು ಬಾಳಬೇಕು…
ಹೀಗೆ ನಮ್ಮ ಕಥಾ ನಾಯಕಿ ಪಲ್ಲವಿಯೇನೋ ಎಚ್ಚೆತ್ತು ಕೊಂಡಳು.ಆದ್ರೆ ಅವಳಂತಹ ಅನೇಕರು ಎಚ್ಚೆತ್ತುಕೊಳ್ಳಬೇಕಾಗಿದೆ ಅಲ್ಲವೇ? ಜೀವನ ಸಿಹಿ ಕಹಿಯ ಸಮ್ಮಿಶ್ರಣ. ಒಂದು ದಾರಿ ಕ್ಲೋಸ್ ಆದ್ರೆ ಏನಾಯ್ತು, ನಿಮಗೆ ಹುಡುಕ ಹೊರಟರೆ ಇನ್ನೂ ಹಲವು ಹಾದಿಗಳು ಸಿಗುವುದು ಖಂಡಿತ. ಹುಡುಕುವ ಉತ್ಸಾಹವಿರಬೇಕು,ಕೆಚ್ಚೆದೆ ಇರಬೇಕು..ಅಷ್ಟೇ..ಹಿಂಜರಿದು ಅರ್ಧಕ್ಕೇ ಕೈಬಿಟ್ಟು ಹೊರಟರೆ ಕಷ್ಟದ ಹಿಂದಿರೋ ಸುಖ, ಸೋಲಿನ ಹಿಂದಿರೋ ಗೆಲುವಿನ ರುಚಿ ಯಾವತ್ತೂ ನಿಮಗರಿವಾಗಲ್ಲ. ಇತಿಹಾಸದ ಪುಟಗಳಲ್ಲಿ ನೀವು ತೀರಾ ಕೆಟ್ಟ ಹೆಸರಿನೊಂದಿಗೆ ಸೇರಿ ಹೋಗ್ತೀರಾ ಜೋಕೆ.

  • ಸ್ವರ್ಣಲತ ಭಟ್

POPULAR  STORIES :

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!

ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

 

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...