ಶಾಲಿನಿಯ ಬದುಕಿನ ದೀಪ ಇನ್ನೇನು ಆರಿಯೇ ಹೋಯಿತು ಅನ್ನೋಷ್ಟ್ರೊಳಗೆ ಅದು ಮತ್ತೆ ಪ್ರಕಾಶಮಾನವಾಗಿ ಉರಿಯ ತೊಡಗಿದ್ದು, ಹೇಗೇ???

Date:

ಶಾಲಿನಿ ಒಂದೇ ಸಮನೆ ನೋಯುತ್ತಿದ್ದ ತನ್ನ ತಲೆಯನ್ನು ಅಂಗೈಯಲ್ಲಿ ಒತ್ತಿ ಹಿಡಿಯುತ್ತಾ ನೋವಿಗೆ ಪರಿಹಾರ ನೀಡುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು.
ಹೌದು !ಅವಳ ಪಾಲಿಗೆ ಇದು ವ್ಯರ್ಥ ಪ್ರಯತ್ನನೇ! ಎಂದೂ ನಿಲ್ಲದ ಈ ತಲೆನೋವು ಆಕೆಯದ್ದು,ಆಕೆ ಕಳೆಯುವ ಒಂದೊಂದು ದಿನವೂ ಆಕೆಯ ಪಾಲಿಗೆ ಕೆಲವೇ ಕೆಲವು ಕ್ಷಣಗಳಷ್ಟೇ,ಜೀವನವನ್ನು ಹಿಂದೆಂದೂ ನೋಡದವಳಂತೆ ಆಕೆ ನೋಡುತ್ತಿದ್ದಾಳೆ, ನಿಜ! ಆಕೆಯ ಪಾಲಿಗೆ ಉಳಿದಿರೋದು ಕೆಲವೇ ಕೆಲವು ದಿನಗಳು,ಅಷ್ಟರಲ್ಲಿ ಆಕೆ ಮಾಡಿ ಮುಗಿಸಬೇಕಾದದ್ದು ಬೇಕಾದಷ್ಟಿದೆ ಎಂದೆನ್ನಿಸಿತವಳಿಗೆ. ತನ್ನ ಪುಟಾಣಿ ಆರಾಧ್ಯಳ ಮುಂದಿನ ಭವಿಷ್ಯ ಹಾಗೂ ಪತಿ ವಿಕಾಸ್ ನ ಜೀವನಕ್ಕೊಂದು ಆಸರೆ ನೀಡಿದ ಮೇಲೆನೆ ನನಗೆ ನಿಟ್ಟುಸಿರು ,ಆದರೆ ನಾನಿಲ್ಲದ ಜೀವನದಲ್ಲಿ ಅವರು ಹೇಗಿರುತ್ತಾರೋ? ತನ್ನ ಆರಾಧ್ಯನಂತೂ ಊಹಿಸಲೂ ಅಸಾಧ್ಯ. ಎಲ್ಲಾದಕ್ಕೂ ಅಮ್ಮನೇ ಬೇಕು ಆಕೆಗೆ! ದೇವರು ನಂಗೆ ಇಷ್ಟು ಮೋಸ ಮಾಡಿದ್ನ? ನನ್ನ ಆರಾಧನೆಯಲ್ಲಿ ಏನಾದರೂ ತಪ್ಪಿತ್ತೇ? ಇನ್ನೇನು ಮಾಡಿದ್ರೇನು ಬಂತು? ಅನ್ನಿಸಿತವಳಿಗೆ…
ಯಾವ ಸಮಯದಲ್ಲಾದರೂ ಏನಾದ್ರೂ ಆಗಬಹುದು ಅಂದಿದ್ದಾರೆ ಡಾಕ್ಟರ್! ಹೌದು ಶಾಲಿನಿ ಮೂರು ದಿನಗಳ ಹಿಂದೆಯಷ್ಟೆ ತನ್ನನ್ನು ಕಾಡುತ್ತಿರೋ ಈ ತಲೆನೋವಿಗೆ ಡಾಕ್ಟರ್ ಹತ್ತಿರ ತಪಾಸಣೆಗೊಳಗಾಗಿದ್ದಳು.
ಅದೊಂದು ಪ್ರತಿಷ್ಟಿತ ಹಾಸ್ಪಿಟಲ್, ಅಲ್ಲಿ ಆಕೆಯನ್ನು ಪರೀಕ್ಷೆಗೊಳಪಡಿಸಿದ ಡಾಕ್ಟರ್ ಆಕೆಯ ರಿಪೋರ್ಟ್ ನೋಡಿ ಆಕೆಗೆ ಬ್ರೈನ್ ಟ್ಯೂಮರ್ ಇದೆ ಎಂದರು. ಇನ್ನು ಆಕೆಯ ಬದುಕು ಕೇವಲ ಮೂರು ತಿಂಗಳಷ್ಟೇ…ಮನುಷ್ಯ ಖಾಯಿಲೆಯಿಂದ ಸಾಯುವುದಕ್ಕಿಂತಲೂ ತನಗೆ ಇಂತಹ ಕಾಯಿಲೆಯಿದೆ ಎಂಬ ಕೊರಗಿನಿಂದ ಸಾಯುವುದೇ ಹೆಚ್ಚು ನೋಡಿ! ಶಾಲಿನಿ ಬದುಕಿನಲ್ಲೂ ಅದೇ ನಡೆಯುತ್ತಿದೆ..ದಿನೇ ದಿನೇ ಕೊರಗಿನಿಂದಲೇ ಶಾಲಿನಿ ಕೃಶವಾಗುತ್ತಿದ್ದಾಳೆ; ಹೀಗೆ ಸಾಗುತ್ತಿದ್ದ ಶಾಲಿನಿಯ ಯೋಚನಾ ಲಹರಿಗೆ ಅಚಾನಕ್ಕಾಗಿ ಭಂಗ ತಂದವನೇ ಆಕೆಯ ಪತಿ ವಿಕಾಸ್! ಆಫೀಸಿನಿಂದ ಬಂದವನೇ ಪತ್ನಿಗೆ ತನ್ನ ದೂರದ ಸಂಬಂದಿ ಹಾಗೂ ವಿದೇಶದಲ್ಲಿ ಪ್ರತಿಷ್ಟಿತ ನ್ಯೂರಾಲಜಿಸ್ಟ್ ಆಗಿರೋ ಶ್ರೇಯಸ್ ನ ಬರುವಿಕೆಯ ಬಗ್ಗೆ ಸಂತಸದಿಂದ ಹೇಳಿಕೊಳ್ಳುತ್ತಾನೆ, ಶ್ರೇಯಸ್ ವಿಕಾಸ್ ಗಿಂತಲೂ ಒಂದೆರಡು ವರುಷ ಸಣ್ಣವನಿರಬಹುದು, ಆತನೊಂದಿಗಿನ ಸಂಬಂಧವೇನೋ ದೂರದ್ದೇ ಆದರೆ ಭಾಂಧವ್ಯ ತೀರಾ ಹತ್ತಿರದ್ದು ಅಣ್ಣ ತಮ್ಮಂದಿರಂತೆ ಬಾಲ್ಯದಿಂದಲೇ ಜೊತೆಯಲ್ಲಿದ್ದು ಆಡಿ ಬೆಳೆದವರು.
ಮನೆಯಲ್ಲಿ,ಮನದಲ್ಲಿ ಹೆಪ್ಪುಗಟ್ಟಿರೋ ಬೇಸರದ ವಾತಾವರಣದಿಂದ ಶಾಲಿನಿಗೇಕೋ ಆತನ ಬರುವಿಕೆ ಇಷ್ಟವಾಗದಿದ್ದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಆತನನ್ನು ಬರಮಾಡಿಕೊಳ್ಳುತ್ತಾಳೆ. ಈತನ ಆಗಮನವು ಇವರಿಗೆ ಬಂದೊದಗಿದ ಅದೃಷ್ಟವೋ ಅಥವಾ ದೈವೇಚ್ಛೆಯೋ ಅಂತೂ ಮನೆಗಾಗಮಿಸಿದ ಶ್ರೇಯಸ್ ತನ್ನ ಶಾಲಿನಿ ಅತ್ತಿಗೆಯು ಎಂದಿನಂತಿಲ್ಲವೆಂಬುದನ್ನು ಬೇಗನೇ ಅರಿತುಕೊಳ್ಳುತ್ತಾನೆ ಹಾಗೂ ನಿಜ ವಿಷಯವನ್ನು ವಿಕಾಸ್ ನಿಂದ ತಿಳಿದುಕೊಳ್ಳುತ್ತಾನೆ.ಆಕೆಯ ರಿಪೋರ್ಟ್ಗಳೆಲ್ಲವನ್ನೂ ಪರೀಶೀಲಿಸಿದ ಶ್ರೇಯಸ್ ಮನದಲ್ಲೇನೋ ಸಂದೇಹ. ಪ್ರಸಿದ್ದ ನ್ಯೂರಾಲಜಿಸ್ಟ್ ಆಗಿರೋ ಶ್ರೇಯಸ್ ಗೆ ತನ್ನ ವೃತ್ತಿಗೆ ಇದೊಂದು ಸವಾಲೆನಿಸುತ್ತಿದೆ ಹೇಗಾದರೂ ಸರಿ ತನ್ನಅಣ್ಣ ಅತ್ತಿಗೆಯ ಜೀವನದಲ್ಲಿ ಮತ್ತೆ ಹೊಂಗಿರಣ ಮೂಡಿಸಬೇಕೆಂಬ ದೃಢ ನಿರ್ಧಾರದೊಂದಿಗೆ ಮತ್ತೆ ಆಕೆಯನ್ನು ಪರೀಕ್ಷೆಗೊಳಪಡುವಂತೆ ಕೇಳಿಕೊಳ್ಳುತ್ತಾನೆ.ಪರೀಕ್ಷೆ ನಡೆದು ಆಕೆಯ ರಿಪೋರ್ಟ್ ನ್ನು ಪರೀಶೀಲಿಸಿದ ಅತನ ಮುಖದಲ್ಲಿಸಣ್ಣದೊಂದು ನಗು ಅರಳುತ್ತದೆ.ಏನನ್ನೋ ಗೆದ್ದೆನೆಂಬ ಸಂತೋಷ…
ಸಂಜೆ ಶಾಲಿನಿಯ ಜೊತೆಯಲ್ಲಿರೋ ವಿಕಾಸ್ ಗೆ ಶ್ರೇಯಸ್ ನಿಂದ ಕರೆ ಬರುತ್ತದೆ,ಫೋನ್ ನಲ್ಲಿ ಮಾತಾಡುತ್ತಿದ್ದಂತೆ ವಿಕಾಸ್ ನ ಮುಖ ಭಾವ ಬದಲಾಗುತ್ತಿದ್ದದ್ದನ್ನು ಗಮನಿಸಿದ ಶಾಲಿನಿಗೆ ಅವನ ಕಣ್ಣುಗಳಲ್ಲಿ ಫಳಕ್ಕನೇ ಹೊಳೆದ ಮಿಂಚು ಏನನ್ನೋ ಹೇಳಲು ಕಾತರಿಸುತ್ತಿರುವಂತೆ ಭಾಸವಾಗುತ್ತದೆ, ಕರೆಯನ್ನು ಮುಗಿಸಿ ಬಂದವನೇ ವಿಕಾಸ್ ಶಾಲಿನಿಯ ಕೈಹಿಡಿದು ಕುಣಿದಾಡಿ ಬಿಡುತ್ತಾನೆ. ನೀನು ಗೆದ್ದು ಬಿಟ್ಟೆ ಶಾಲಿನಿ, ನೀನು ಗೆದ್ದು ಬಿಟ್ಟೆ ಎನ್ನುತ್ತಾನೆ, ಕ್ಷಣ ಏನು ಅರ್ಥವಾಗದೆ ಗಲಿಬಿಲಿ ಕಣ್ಣುಗಳಿಂದ ಅವನನ್ನೇ ನೋಡುತ್ತಿರೋ ಶಾಲಿನಿಗೆ ನಿನಗೆ ಯಾವ ಟ್ಯೂಮರ್ ಗೀಮರ್ ಇಲ್ಲ ಕಣೇ ಅನ್ನುತ್ತಿದ್ದಂತೆ ಶಾಲಿನಿ ತಾನೇನೋ ಕನಸು ಕಾಣುತ್ತಿರುವಂತೆ ಅಚ್ಚರಿ ಪಡುತ್ತಾಳೆ,ನೆಮ್ಮದಿಯ ನಿಟ್ಟುಸಿರಿನೊಂದಿಗೆ ವಿಕಾಸ್ ಎದೆಗೊರಗುತ್ತಾಳೆ.ಇನ್ನೇನು ಆರಿಯೇ ಹೋಯಿತು ಅನ್ನೋ ಶಾಲಿನಿಯ ಬಾಳಿನ ದೀಪ ಮತ್ತೆ ಪೂರ್ಣ ಪ್ರಕಾಶದೊಂದಿಗೆ ಉರಿಯಲಾರಂಭಿಸುತ್ತದೆ.
ಇತ್ತ ವಿಕಾಸ್ ಹಾಗೂ ಶ್ರೇಯಸ್ ಆ ಪ್ರತಿಷ್ಟಿತ ಹಾಸ್ಪಿಟಲ್ ಗ್ ತೆರಳಿ ಅಲ್ಲಿರೋ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ,ತಮ್ಮ ಅಜಾಗರೂಕತೆಯಿಂದ
ಶಾಲಿನಿ.ವಿ ಯ ಬದಲಾಗಿ ಶಾಲಿನಿ ಎಂ ಎಂಬವಳ ರಿಪೊರ್ಟ್ ನೀಡಿ ಆದ ಅವಾಂತರಕ್ಕಾಗಿ ಕ್ಷಮೆಯಾಚಿಸುತ್ತಾರೆ, ಒಬ್ಬರ ಜೀವನದ ಅಸ್ತಿತ್ವಕ್ಕೇ ಹಾನಿಕಾರಕವಾದ ಈ ಅಜಾಗರೂಕತೆ ಕೇವಲ ಒಂದು ಕ್ಷಮೆಕೇಳುವುದರಿಂದ ಸರಿಹೋಗುತ್ತದೆಯೇ? ಅವಳಿಗಾದ ಅ ಮಾನಸಿಕ ವೇದನೆಯನ್ನು ಮತ್ತೆ ಭರಿಸಲು ಇವರಿಂದ ಸಾಧ್ಯವೇ?? ನೀವೇ ಹೇಳಿ?? ಇನ್ನೇನು ತನ್ನ ಜೀವನ್ದಲ್ಲಿ ಸಂಪೂರ್ಣ ಕತ್ತಲೆ ಎಂದೂ ಬೆಳಕಾಗಲಾರದು ಎಂದು ಅಂದುಕೊಂಡಿದ್ದ ಶಾಲಿನಿ ಸತ್ತು ಬದುಕಿದವಳು.
ಫ್ರೆಂಡ್ಸ್ !ಆದರೆ ಇದು ಕೇವಲ ಶಾಲಿನಿಯ ಕಥೆಯೊಂದೇ ಅಲ್ಲ,ಈ ತರಹದ ತಪ್ಪು ನಮ್ಮ ನಿಮ್ಮಜೀವನದಲ್ಲೂ ನಡೆದಿರಬಹುದು, ನಮ್ಮ ಬಂಧು ಬಳಗದವರಲ್ಲಿ ಸ್ನೇಹಿತರಲ್ಲೂ ನಡೆದಿರಬಹುದು.
ನನಗೆ ತೀರಾ ಹತ್ತಿರದ ಸಂಬಂಧಿಕರೊಬ್ಬರಿಗೆ ಆದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ…ಕೇಳಿ…
ವಯಸ್ಸು ಸರಿಸುಮಾರು 40 ದಾಟಿರದ ಆಕೆಗೆ ಹಠಾತ್ ಅಗಿ ರಾತ್ರಿ ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಕೆಯ ಪತಿ ಒಂದು ಹೆಸರಾಂತ ಹಾಸ್ಪಿಟಲ್ ಗೆ ಆಕೆಯನ್ನುಕರೆದೊಯ್ಯುತ್ತಾನೆ,ಅಕೆಗೆ ಚೆಕ್ ಮಾಡಿದ ಡಾಕ್ಟರ್ ಆಕೆಗೆ ಹೃದಯದ ಖಾಯಿಲೆ ಇದೆ ಎಂದೂ ಅದಕ್ಕೆ ಬೇಕಾದ ಹೆವಿ ಡೋಸ್ ಮಾತ್ರೆ ಮದ್ದುಗಳನ್ನು ಬರೆದು ಕೊಟ್ಟು ಎರಡು ದಿನ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿಸಿಕೊಳ್ಳುತ್ತಾರೆ,ಅವರ ಅದೃಷ್ಟ ಚೆನ್ನಾಗಿತ್ತೋ ಏನೋ ಡಾಕ್ಟರ್ ಆಕೆಗೆ ಆಪರೇಷನ್ ಗೆ ಸಲಹೆ ಯೊಂದನ್ನು ನೀಡಲಿಲ್ಲ ನೋಡೀ! ಆಮೇಲೆ ಒಂದು ದಿನ ಕಳೆಯುತ್ತಿದ್ದಂತೆ ಆಕೆಗೆ ತಾನು ತೆಗೆದುಕೊಳ್ಳುವ ಮಾತ್ರೆಯಿಂದ ತೀರಾ ವಾಕರಿಕೆ ಬರುತ್ತಿರುವಂತೆ ಅನ್ನಿಸಿದಾಗ,ಆಕೆಯ ಪತಿಯು ಯಾವುದೋ ಸಂಶಯದಿಂದ ತನ್ನ ಪರಿಚಿತರೊಬ್ಬರ ಸಹಾಯದಿಂದ ಇನ್ನೊಂದು ಕಡೆಗೆ ಹೋಗಿ ಆ ರಿಪೋರ್ಟ್ ನ ತೋರಿಸಿದಾಗ ಎಲ್ಲಾ ನಾರ್ಮಲ್ ಇದೆ,ಕೇವಲ ಅಸಿಡಿಟಿಯಿಂದ ಆಕೆಗೆ ಎದೆನೋವು ಬಂದಿತ್ತು ಅಂತ ಹೇಳುತ್ತಾರೆ..ಇಷ್ಟಕ್ಕೆ ಆಕೆಯ ಪತಿಯು ಡಾಕ್ಟರ್ ಬಳಿ ಹೋಗಿ ಕೇಳಲು ಅವರು ಬೇರೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಬಡವನ ಕೋಪ ದವಡೆಗೆ ಮೂಲ ಎಂಬಂತೆ ಬೇರೆ ದಾರಿ ಕಾಣದೇ ಅಕೆಯ ಪತಿಯು ಸುಮ್ಮನಾಗಿ ಮನೆಗೆ ತೆರಳುತ್ತಾರೆ.ಇನ್ನೊಂದು ಘಟನೆಯು ಉತ್ತರ ಭಾರತದಲ್ಲಿ ನಡೆದಿತ್ತು, ಅಪೆಂಡಿಸೈಟಿಸ್ ಬಾಧಿತನಾದ ವ್ಯಕ್ತಿ ಸಿಂಪಲ್ ಆಪರೇಷನ್ ನಿಂದ ಹೊರಬರುವ ಬದಲು ಸತ್ತೇ ಹೋಗಿದ್ದ, ಕಾರಣ ಡಾಕ್ಟರ್ ಗಳ ಅವಾಂತರದಿಂದ ಆಪರೇಷನ್ ಮಾಡಿ ಸ್ಟಿಚ್ ಹಾಕುವಾಗ ಪೆರಿಟೋನಿಯಂ(ಹೊಟ್ಟೆಯನ್ನು ಒಳಗೊಂಡಿರೋ ತೆಳುವಾದ ಪದರ)ಎಂಬ ಭಾಗವನ್ನೂ ಹೊಲಿಯಲಾಗಿದ್ದು ಅಲ್ಲಿ ಆದ ಇನ್ಫೆಕ್ಷನ್ (ಪೆರಿಟೋನೈಟಿಸ್ ಎಂದು ಕರೆಯಲಾಗುತ್ತದೆ)ನಿಂದ ಅತನ ಜೀವಕ್ಕೇ ಅಪಾಯವಾಯಿತು.
ಪ್ರಪಂಚದೆಲ್ಲೆಡೆ ವೈದ್ಯರ ಅಚಾತುರ್ಯದಿಂದ ಭಾರೀ ಅನಾಹುತಗಳೇ ಉಂಟಾಗಿದೆ ಹಾಗೂ ಉಂಟಾಗುತ್ತಲೂ ಇದೆ ನೋಡಿ! ಡುಪ್ಲಿಕೇಟ್ ಡಿಗ್ರ್ರಿ ಯ ಹಣೆ ಪಟ್ಟಿ ಅಂಟಿಸಿಕೊಂಡು ಹಣದಾಸೆ ಪೂರೈಸುತ್ತಿರೋ ಡಾಕ್ಟರ್ ಗಳು ಒಂದು ಕಡೆಯಾದರೆ,ಬಲಗಾಲಿನ ಬದಲಾಗಿ ಎಡಗಾಲು ಆಪರೇಷನ್ ಮಾಡೋ ಡಾಕ್ಟರ್ ಗಳು,ಸತ್ತಿರೋ ವ್ಯಕ್ತಿಗಳನ್ನು ಬದುಕಿದ್ದಾರೆ ಎಂದು ಸುಳ್ಳು ಹೇಳಿ,IಅU ನಲ್ಲಿಟ್ಟು ದುಡ್ಡು ಮಾಡೋ ಡಾಕ್ಟರ್ ಗಳೂ,ಯಾವುದೇ ಖಾಯಿಲೆಯಿಲ್ಲದೆ,ಆರೋಗ್ಯವಂತನಾಗಿರೋ ವ್ಯಕ್ತಿಯನ್ನು ಪರ್ಮನೆಂಟಾಗಿ ಪೇಷಂಟ್ ಆಗಿ ಮಲಗಿಸಿ ಬಿಡೋ ಡಾಕ್ಟರ್ ಗಳೂ ಇನ್ನೊಂದು ಕಡೆ.ಜೊತೆಗೆ ದಿನಕ್ಕೆ ಇಷ್ಟು ಪೇಷಂಟ್ಸ್ ಕೊಡಲೇ ಬೇಕು ಎಂಬ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಗಳ ಒತ್ತಡ ಡಾಕ್ಟರ್ ಗಳ ಮೇಲೆ..ಯಾಕೆ ಹೀಗೇ??ನಮ್ಮ ಸಮಾಜ ಇಷ್ಟೊಂದು ಹದ ಗೆಟ್ಟಿದೆಯೇ? ನೇರವಾಗಿ ಕನ್ನಹಾಕಿ ಮಾಡೋ ದರೋಡೆಗೂ ಇದಕ್ಕೂ ಯಾವುದೇ ವ್ಯತ್ಯಾಸ ಇಲ್ಲ ನೋಡಿ! ಸಮಾಜದಲ್ಲಿರೋ ಈ ಶೋಚನೀಯ ಸ್ಥಿತಿಗೆ ಪರಿಹಾರವೆಂತು? ಆಸ್ಪತ್ರೆಯೊಂದು ಜೀವದಾನ ನೀಡುವ ಪಾವಿತ್ರ್ಯ ಸ್ಥಳದ ಬದಲು ಬ್ಯುಸಿನೆಸ್ ಸೆಂಟರ್ ಆಗಿ ಬದಲಾಗುತ್ತಿದೆ ಏನೋ ಎಂದು ಭಯವಾಗುತ್ತಿದೆ!!!
ಕೇವಲ ಸಿಗೋ ಮೂರು ಕಾಸಿಗೇ ಒಂದಿಷ್ಟು ಹಾಸ್ಪಿಟಲ್ ಗಳು ತೋರೋ ಈ ಮೂರ್ಕಾಸಿನ ಬುದ್ದಿಗೆ ಮರುಭಾಮಿಯಲ್ಲಿ ಮರೀಚಿಕೆಗಳಂತೆ ಅಲ್ಲೊಂದು ಇಲ್ಲೊಂದು ಕಾಣಸಿಗೋ ಒಳ್ಳೆಯ ಡಾಕ್ಟರ್ ಗಳ ಮೇಲೂ ಈ ಅಪವಾದ ಸಾಗುವಂತಹುದಲ್ಲವೇ?? ಯಾರನ್ನ ನಂಬುವುದು ಯಾರನ್ನು ಬಿಡುವುದು? ತಿಶಂಕು ಸ್ಥಿತಿ ನಮ್ಮದಾಗುತ್ತಿದೆ ಕಣ್ರಿ!!!!
ಆದ್ರೆ ಸೂಕ್ಷ್ಮವಾಗಿ ನೋಡಿದಾಗ ಒಂದರ್ಥದಲ್ಲಿ,ಎಲ್ಲಾದಕ್ಕೂ ಕಾರಣ ನಾವೇ ಅನ್ಸತ್ತೆ ಕಣ್ರಿ….ನಮ್ಮೊಳಗಿರೋ ಭಯ.ಸಣ್ಣ ಶೀತ ಜ್ವರಕ್ಕೂ ಹೆದರಿ ಡಾಕ್ಟರ್ ಬಳಿ ಓಡುವ ಮಂದಿಗಳು,ಮಾತ್ರೆಗಳಿಗೆ ಬದಲಾಗಿ ಇಂಜೆಕ್ಷನ್ ಗೆ ಮೊರೆಹೋಗುವ ನಮ್ಮ ಫ್ಯಾನ್ಸಿ ಸಿಸ್ಟಂ, ಬರೋ ಖಾಯಿಲೆಗೆ ಮೊದಲೇ ವೆಲ್ಕಂ ಮಾಡಲು ತಯಾರಿ ನಡೆಸೋಕ್ಕೋಸ್ಕರ, ವಯಸ್ಸು 3೦ ಆಗುತ್ತಿದ್ದಂತೆ,ಕಂಪ್ಲೀಟ್ ಹೆಲ್ತ್ ಚೆಕ್ ಅಪ್ ಪ್ಯಾಕೇಜ್ ಗೊಳಪಡೋ ಮಂದಿ,ಇನ್ನು ಪೆಡಿಯಾಟ್ರೀಷನ್ ಬಳಿ ಅಳುತ್ತಿರೋ ಮಕ್ಕಳ ಜೊತೆಗೆ ಸಾಲು ಗಟ್ಟಿ ನಿಂತ ಅಪ್ಪ ಅಮ್ಮಂದಿರ ದಿನ ನಿತ್ಯದ ಕ್ಯೂ ದರ್ಷನ ಭಾಗ್ಯ..ಸಾಕೋ ಬೇಕೋ?
ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗೂ ಡಾಕ್ಟರ್ ಬಳಿ ಓಡುವುದು ಮೊದಲು ನಾವು ಮಾಡುವ ದೊಡ್ಡ ತಪ್ಪು..ಮೊದಲಿಗೆ ಮನೆ ಮದ್ದುಮಾಡಿ ನೋಡೀ..ನೆನಪಿಡಿ! ಎಲ್ಲಾ ಶೀತ ಜ್ವರಗಳೂ ಡೆಂಗ್ಯೂ ಮಲೇರಿಯಾಗಳಾಗಲ್ಲ,ಹಾಗೂ ಎಲ್ಲಾ ಖಾಯಿಲೆಗಳೂ ಕ್ಯಾನ್ಸರ್ ಆಗಲು ಸಾಧ್ಯವಿಲ್ಲ..ನಾವು ವರ್ಷಂಪ್ರತೀ ರೇಡಿಯೇಷನ್ ಗೆ ನಮ್ಮ ದೇಹನ ಒಡ್ಡುತ್ತಿದ್ದಲ್ಲಿ,ಅದರಿಂದ ಇನ್ನೂ ಹೊಸ ಖಾಯಿಲೆಗಳೂ ಹುಟ್ಟಬಹುದಲ್ಲವೇ?
ಮೊದಲಿಗೆ ಸಣ್ಣ ನೆಗಡಿ ಜ್ವರಕ್ಕೆ ಡಾಕ್ಟರ್ ಬಳಿ ಹೋಗುವುದನ್ನು ಬಿಟ್ಟು ಮನೆ ಕಷಾಯ ಮದ್ದುಗಳಿಗೆ ಮೊರೆ ಹೋಗಿ.ಮಕ್ಕಳಿಗಂತೂ ನಿಮ್ಮ ಕೈ ತೋಟದಲ್ಲಿರೋ ತುಳಸಿ,ದೊಡ್ಡ ಪತ್ರೆಗಳೇ ಸಾಕು.ಅವುಗಳೇ ರಾಮ ಬಾಣ..ಅಮ್ಮಂದಿರು ಉದಾಸೀನತೆಯನ್ನು ಬಿಡಬೇಕಷ್ಟೇ…ಅಮೇಲೆ ಯಾವುದೇ ಖಾಯಿಲೆಗೂ ಮೊದಲು ಯಾವುದಾದರೂ ಹೆಸರಾಂತ ಜನರಲ್ ಫಿಸಿಷಿಯನ್ ಬಳಿ ಹೋಗಿ.ಅವರು ನಿಮಗೇ ಬೇಕಾದ್ದನ್ನು ಸಜೆಸ್ಟ್ ಮಾಡುತ್ತಾರೆ.ಮೊದಲಿಗೆ ನೀವು ಸ್ಪೆಷಲಿಸ್ಟ್ ಬಳಿ ಹೋದಲ್ಲಿ ನಿಮ್ಮ ಖಾಯಿಲೆಯನ್ನು ಅವರು ಸ್ಪೆಷಲ್ ಅಂಗಲ್ ನಲ್ಲಿ ನೋಡುತ್ತಾರೆಯೇ ಹೊರತು,ಜನರಲ್ ಅಂಗಲ್ ಗೆ ಅಲ್ಲಿ ಅವಕಾಶವಿರುವುದಿಲ್ಲ.ಜನರಲ್ ಆಗಿ ಎಲ್ಲಾವನ್ನೂ ತಿಳಿದಿರೋ ವ್ಯಕ್ತಿಯೇ ನಮಗೆ ಚಿಕಿತ್ಸೆನೀಡಲು ಉತ್ತಮ ವೈದ್ಯ.ಎಲ್ಲಾದಕ್ಕೂ ಪ್ರತಿಷ್ಟಿತ ಹಾಸ್ಪಿಟಲ್ ಗೆ ಮೊರೆಹೋಗುವ ಕ್ರೇಜ್ ಗೆ ಅಲ್ಪವಿರಾಮ ನೀಡಿ ಅಷ್ಟೇ!ಎಲ್ಲಾದಕ್ಕೂ ಮೊದಲು ನಿಮಗೆ ಖಾಯಿಲೆಯಿದೆ ಎಂದು ಖಾತರಿಯಾದಲ್ಲಿ,ನಿಮ್ಮ ರಿಪೋರ್ಟ್ಗೆ ಬೇರೊಬ್ಬ ವೈದ್ಯರಿಂದ ಸೆಕೆಂಡ್ ಒಪೀನಿಯನ್ ತೆಗೆದುಕೊಳ್ಳಲು ಮರೆಯದಿರಿ.
ವೈದ್ಯೋ ನಾರಾಯಣೋ ಹರಿ: ಅಂತ ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಲಾಗಿತ್ತು ಅಂದು ಆದರೆ ಇಂದು ಸ್ವತಃ ಆ ನಾರಾಯಣ ಹರಿ ಧರೆಗಿಳಿದು ಬಂದರೂ ಅವರಿಗೂ ಇದೇ ಶಾಸ್ಥಿ ಖಂಡಿತ ಕಣ್ರಿ!ಅದ್ರಲ್ಲಿ ಯಾವ ಸಂಶಯವೂ ಬೇಡ ನಿಮಗೆ…ಮನುಷ್ಯ ಪರಿಸ್ಥಿತಿಯ ಕೈಗೊಂಬೆಯಾಗುತ್ತಿದ್ದಾನೆ,ಇಂತಹವರು ಈ ಬೊಂಬೆಗಳನ್ನು ತಮ್ಮ ಮನಬಂದಂತೆ ಆಟವಾಡಿಸುತ್ತಾರೆ..ಹಾಂ! ಅಂದ ಹಾಗೆ ಎಲ್ಲಾ ಗಿಡಗಳೂ ಪಾಪಸ್ ಕಳ್ಳೀ ಗಿಡ ಆಗಲ್ಲ ಹಾಗೇನೇ ಪ್ರಪಂಚದಲ್ಲಿ ಎಲ್ಲಾ ಡಾಕ್ಟರ್ ಗಳೂ ಧನ ಪಿಶಾಚಿಗಳಲ್ಲ.50% ಇಂತಹವರಿದ್ದಲ್ಲಿ ಇನ್ನುಳಿದ 50% ಒಳ್ಳೆಯವರೂ ಇರ್ತಾರೆ ನೋಡಿ!ಕೊಲ್ಲುವವನಿದ್ದಲ್ಲಿ ಕಾಯುವವನೂ ಇರುತ್ತಾನೆ,ಆದ್ರೆ ಇಂತಹವರಿಂದ ಒಳ್ಳೆಯ ಡಾಕ್ಟರ್ ಗಳನ್ನೂ ನೋಡಿ ನಾವು ಭಯ ಪಡುವ ಕಾಲ ದೂರವಿಲ್ಲ ಅನ್ಸತ್ತೆ…ನೀವೇನಂತೀರಾ???

  • ಸ್ವರ್ಣಲತ ಭಟ್

POPULAR  STORIES :

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!

ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!

ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!

ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!

ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...