ಬೆಂಗಳೂರು: ಅತ್ಯಾಚಾರ ಆರೋಪದಲ್ಲಿ ಬಂಧನವಾಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ವಿಮಾನ ನಿಲ್ದಾಣದಿಂದ ಯಾವ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯದೇ ನೇರವಾಗಿ ಎಸ್‌ಐಟಿ ಕಚೇರಿಗೆ ಕರೆತರಲಾಗಿದೆ. ಎಸ್‌ಐಟಿ ಹಲವು ನೋಟೀಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಸಾಕಷ್ಟು ಹಿನ್ನೆಡೆ ಉಂಟಾಗಿತ್ತು. ಇಡೀ ಪ್ರಕರಣದ ಮುಖ್ಯ ಆರೋಪಿ ಆಗಿರೋ ಪ್ರಜ್ವಲ್ ರೇವಣ್ಣನನ್ನು ಇಂದು ಬೆಳಗ್ಗೆಯಿಂದ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಿದ್ದಾರೆ.
ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಲ್ಲಿನ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದಂತಹ ಎಲ್ಲ ವಸ್ತುಗಳನ್ನು ಹಾಗೂ ಪ್ರಜ್ವಲ್ ವಿದೇಶದಿಂದ ಬರುವಾಗ ತಂದಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರು ಬಳಸ್ತಿದ್ದ ಮೊಬೈಲ್ ಅನ್ನೂ ಎಸ್‌ಐಟಿ ವಶಕ್ಕೆ ಪಡೆದಿದೆ. ಪ್ರಾಥಮಿಕ ಹಂತದ ವಿಚಾರಣೆ ನಡೆಸಲಿದ್ದು, ನಂತರ ಮೆಡಿಕಲ್ ಟೆಸ್ಟ್ ಮಾಡಿಸುವಂತಹ ಸಾಧ್ಯತೆಯಿದೆ. ಈಗಾಗಲೇ ಪ್ರಜ್ವಲ್ ರೇವಣ್ಣರನ್ನ ವಿಚಾರಣೆ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡಸಿದ್ದಾರೆ. ಎಸ್‌ಪಿಪಿ ಜಗದೀಶ್ ಹಾಗೂ ತನಿಖಾ ತಂಡವು ಎರಡು ಆಯಾಮಗಳಲ್ಲಿ ಪ್ರಶ್ನೆಗಳನ್ನ ತಯಾರು ಮಾಡಿಕೊಂಡಿದೆ. ಇನ್ನು ತನಿಖಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆಯೂ ಪ್ರಶ್ನೆ ಮಾಡಲಿದ್ದಾರೆ.
ಮಧ್ಯರಾತ್ರಿ ನಿದ್ದೆಗೆಟ್ಟು ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಿಟ್ಟ 2,000 ಜನ
ಅತ್ಯಾಚಾರ ಆರೋಪದ ದೂರು ದಾಖಲಾದರೂ ತಲೆ ಮರೆಸಿಕೊಳ್ಳಲು ಯಾರಾದರೂ ನಿಮಗೆ ಸಹಾಯ ಮಾಡಿದ್ದರಾ ಎಂಬ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಒಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಬಳಸ್ತಿದ್ದ ಮೊಬೈಲ್ ನಾಶ ಮಾಡಿರೋ ಸಾಧ್ಯತೆಯಿದೆ. ಪ್ರಕರಣ ದಾಖಲಾಗ್ತಿದ್ದಂತೆಯೇ ಸಾಕಷ್ಟು ಬೆಳವಣಿಗೆ ಆಗಿತ್ತು. ವಿದೇಶದಲ್ಲಿ ಮೊಬೈಲ್ ಬಿಸಾಕಿ ಸಾಕ್ಷ್ಯ ನಾಶ ಮಾಡಿರುವ ಸಾಧ್ಯತೆಯೂ ಇದ್ದಂತಿದೆ. ಈ ಎಲ್ಲದರ ಬಗ್ಗೆಯೂ ಎಸ್‌ಐಟಿ ಇಂಟ್ರಾಗೇಷನ್ ಮಾಡಲಿದ್ದಾರೆ.






