ಬೆಂಗಳೂರು: ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಮುಖ್ಯ ಆರೋಪಿಗಳಾಗಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇಂದು ಪೊಲೀಸರು ನ್ಯಾಯಾಧೀಶರ ಎದುರು ಹಾಜರಿಪಡಿಸೋ ಸಾಧ್ಯತೆ ಇದೆ. ಆಗ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ. ದರ್ಶನ್ ಪ್ರಭಾವಿ ವ್ಯಕ್ತಿ. ಒಂದೊಮ್ಮೆ ಇವರನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಪೊಲೀಸರು ನ್ಯಾಯಾಧೀಶರ ಎದುರು ಹೇಳಬಹುದು. ಆಗ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು.
ಕೋರಮಂಗಲದ ಜಡ್ಜ್ ನಿವಾಸದಲ್ಲಿ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ. ಸದ್ಯಕ್ಕಂತೂ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ. ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಸ್ವಇಚ್ಛಾ ಹೇಳಿಕೆ ದಾಖಲು ಮಾಡಲಾಗಿದೆ. ಕೊಲೆ ನಡೆದ ಸ್ಥಳ, ಮೃತದೇಹ ಪತ್ತೆಯಾದ ಸ್ಥಳ, ಕಿಡ್ನ್ಯಾಪ್ ಆದ ಸ್ಥಳದಲ್ಲಿ ಮಹಜರು ಕೆಲಸ ಪೂರ್ಣಗೊಂಡಿದೆ. ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮುಗಿದಿದೆ. ಸಾಂಧರ್ಬಿಕ ಸಾಕ್ಷ್ಯಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹೀಗಾಗಿ, ಭಾನುವಾರ ಆರೋಪಿಗಳನ್ನ ಜಡ್ಜ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.