ಬೆಂಗಳೂರು: ದದ್ದಲ್ ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಎಸ್‌ಐಟಿಯವರು ನಾಗೇಂದ್ರ, ದದ್ದಲ್ ಇಬ್ಬರನ್ನೂ ಕರೆದು ವಿಚಾರಣೆ ಮಾಡಿದ್ದಾರೆ. ಅಗತ್ಯ ಕಂಡುಬಂದರೆ ಮತ್ತೆ ಕರೆಯುತ್ತಾರೆ. ದದ್ದಲ್ ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗಿಲ್ಲ. ಇಲ್ಲೇ ಎಲ್ಲೋ ಅವರ ಕುಟುಂಬದವರ ಜೊತೆ ಇದ್ದಾರೆ.
ಶುಕ್ರವಾರವೂ ನಾನು ದದ್ದಲ್ ಬಗ್ಗೆ ಕೇಳಿದಾಗ ಅವರು ಇಲ್ಲೇ ಅವರ ಕುಟುಂಬದವರ ಜೊತೆ ಇದ್ದಾರೆ ಎಂದು ಹೇಳಿದ್ದಾರೆ. ಎಸ್‌ಐಟಿಯವರೇ ಬಂಧನ ಮಾಡಲಿ ಅಂತ ಸಿಐಡಿ ಕಚೇರಿಗೆ ದದ್ದಲ್ ಹೋಗಿದ್ದ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು. ಇನ್ನೂ ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆ ಆರೋಪದಲ್ಲಿ ಇಡಿ ದಾಳಿ ಆಗಿದೆ ಎಂಬ ವಿಚಾರದ ಕುರಿತು ಮಾತನಾಡಿ, ಇದು ನನಗೆ ಗೊತ್ತಿಲ್ಲ. ಇಡಿಯವರು ನಮ್ಮ ಪೊಲೀಸರಿಗೆ ಈ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ನಾವು ಊಹೆ ಮಾಡಿ ಹೇಳೋದು ಸರಿಯಲ್ಲ ಎಂದರು.