ಬೆಂಗಳೂರು: ಪಿಜಿ ಒಳಗೆ ರೂಮ್ ಬಳಿಯೇ ಯುವಕನೋರ್ವ ಯುವತಿಯನ್ನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಅಭಿಷೇಕ್ನನ್ನು ಮಧ್ಯಪ್ರದೇಶದಲ್ಲಿ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಜುಲೈ 23ರ ರಾತ್ರಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್, ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.
ಇನ್ನೂ ಕೋರಮಂಗಲದ ಮಹಿಳಾ ಪಿಜಿ ಹಾಸ್ಟೆಲ್ ನಲ್ಲಿ ನಡೆದ ಕೃತಿ ಕುಮಾರಿ ಎಂಬ ಯುವತಿಯ ಕೊಲೆ ಕೃತ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಕೊಲೆ ಮಾಡುತ್ತಿರುವ ದೃಶ್ಯ ಭಯಾನಕವಾಗಿದೆ. ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕಾಗಿ ಆರ್ತನಾದ ಮಾಡುತ್ತಿದ್ದರೂ ಅಲ್ಲಿದ್ದ ಇತರ ಯುವತಿಯರು ಸಹಾಯಕ್ಕೆ ಬರದೆ ತಮ್ಮಷ್ಟಕ್ಕೇ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.