ಚನ್ನಪಟ್ಟಣದಲ್ಲಿ ಡಿ ಕೆ ಸುರೇಶ್, ಸಂಡೂರುನಲ್ಲಿ ಅನ್ನಪೂರ್ಣ ಸ್ಪರ್ಧೆ! ಇಂದು ಘೋಷಣೆ ಸಾಧ್ಯತೆ
ಬೆಂಗಳೂರು: ರಾಜ್ಯದ 3 ಬೈ ಎಲೆಕ್ಷನ್ ಕ್ಷೇತ್ರಗಳಾದ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಪೈಕಿ ಶಿಗ್ಗಾವಿ, ಸಂಡೂರಿಗೆ ಬಿಜೆಪಿ ಹೈಕಮಾಂಡ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿಗ್ಗಾವಿಯಲ್ಲಿ ಮಾಜಿ ಸಿಎಂ ಪುತ್ರ ಬರತ್ ಬೊಮ್ಮಾಯಿಗೆ ಟಿಕೆಟ್ ಒಲಿದಿದ್ದು, ಸಂಡೂರಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತುಗೆ ಟಿಕೆಟ್ ಕೊಡಲಾಗಿದೆ. ಇದರ ಬೆನ್ನಲ್ಲೇ ಚನ್ನಪಟ್ಟಣಕ್ಕೆ ಡಿಕೆ ಸುರೇಶ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಚನ್ನಪಟ್ಟಣಕ್ಕೆ ಡಿಕೆ ಸುರೇಶ್ 99% ಸ್ಪರ್ಧೆ ಮಾಡುತ್ತಾರೆ. ಒಂದು ವೇಳೆ ಕಣದಿಂದ ಹಿಂದಕ್ಕೆ ಸರಿದರೆ ಮಾತ್ರ ಬೇರೆಯವರು ಸ್ಪರ್ಧೆ ಮಾಡುತ್ತಾರೆ ಎಂದು ಸಭೆಯಲ್ಲಿ ಸಿಎಂ, ಡಿಸಿಎಂ ತಿಳಿಸಿದ್ದಾರೆ. ಸಂಡೂರು ಕ್ಷೇತ್ರಕ್ಕೆ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ಫೈನಲ್ ಎಂಬ ಮಾಹಿತಿ ನೀಡಲಾಗಿದೆ. ಮೂರು ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಎರಡು ದಿನದಲ್ಲಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.