ಅಧಿಕ ಉಪ್ಪು ಸೇವನೆಯಿಂದ ಬಾಧಿಸುವ ಆರೋಗ್ಯ ಸಮಸ್ಯೆಗಳೇನು ಗೊತ್ತಾ..?
ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ನಾಣ್ನುಡಿ ಎಲ್ಲರಿಗೂ ಗೊತ್ತೇ ಇದೆ, ಕಾರಣ ಉಪ್ಪಿಲ್ಲದೇ ಊಟ ರುಚಿಸುವುದೇ ಇಲ್ಲ. ಆದರೆ ಹಲವು ಬಾರಿ ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಅದರ ಅತಿಯಾದ ಬಳಕೆಯು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾಯಿಲೆಗಳನ್ನು ಉಂಟುಮಾಡುತ್ತದೆ. ಹಾಗಾದರೆ ಅಧಿಕ ಉಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಅನಾನುಕೂಲಗಳು ಉಂಟಾಗುತ್ತದೆ ಎಂಬುದನ್ನು ನೋಡೋಣ.
ಅಧಿಕ ಉಪ್ಪು ಸೇವನೆಯಿಂದ ಬಾಧಿಸುವ ಆರೋಗ್ಯ ಸಮಸ್ಯೆಗಳು:
ರಕ್ತದೊತ್ತಡ:
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸುವುದರಿಂದ ವ್ಯಕ್ತಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಆಹಾರದಲ್ಲಿ ಉಪ್ಪನ್ನು ಮಿತ ಪ್ರಮಾಣದಲ್ಲಿ ಬಳಸಬೇಕೆಂದು ಸಲಹೆ ನೀಡುತ್ತಾರೆ.
ಹೃದಯದ ಆರೋಗ್ಯ:
ಅತಿಯಾದ ಉಪ್ಪು ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೃದಯವನ್ನು ಆರೋಗ್ಯಕರವಾಗಿಡಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಿಗೊಳಿಸಿ. ನೀವು ದಿನಕ್ಕೆ ಐದು ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಿದರೆ, ಅದು ನಿಮ್ಮ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿರ್ಜಲೀಕರಣ:
ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ, ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಲು ಆಹಾರದಲ್ಲಿ ಮಿತ ಪ್ರಮಾಣದ ಉಪ್ಪನ್ನು ಸೇರಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ಊತ:
ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ನೀರು ವಿಪರೀತವಾಗಿ ಶೇಖರಣೆಯಾಗುತ್ತದೆ.ಇದರಿಂದಾಗಿ . ಕೈ, ಕಾಲು ಮತ್ತು ಕಣಕಾಲುಗಳಲ್ಲಿ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿಮ್ಮನ್ನು ಕಾಡಬಾರದೆಂದರೆ, ಉಪ್ಪನ್ನು ಮಿತಪ್ರಮಾಣದಲ್ಲಿ ಸೇವಿಸಿ.
ಕಿಡ್ನಿ ಸಮಸ್ಯೆ:
ಅತಿಯಾದ ಉಪ್ಪು ಸೇವನೆಯು ಕಿಡ್ನಿಯನ್ನು ಹಾನಿಗೊಳಿಸಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಉಪ್ಪಿನ ಅತಿಯಾದ ಸೇವನೆಯು ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ವವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.