ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ!
ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ ಈವರೆಗೂ 38 ಕೋಟಿಗೂ ಅಧಿಕ ಭಕ್ತರು ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ದೇಶದ ಭಕ್ತರು,
ಗಣ್ಯರು ಮಾತ್ರವಲ್ಲದೇ 70ಕ್ಕೂ ಅಧಿಕ ದೇಶಗಳ ಜನಸಾಮಾನ್ಯರು ಮತ್ತು ಗಣ್ಯರು ಕೂಡ ಈ ಮಹೋತ್ಸವದಲ್ಲಿ ಮಿಂದೆದ್ದಿದ್ದಾರೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್ ರಾಜ್ಗೆ ಆಗಮಿಸಿ ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯವರೊಂದಿಗೆ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ವಸ್ತ್ರ ಧರಿಸಿ ರುದ್ರಾಕ್ಷಿ ಮಾಲೆ ಹಿಡಿದು ಸೂರ್ಯನಿಗೆ ನಮಸ್ಕಾರ ಮಾಡಿ ಅರ್ಘ್ಯ ಅರ್ಪಿಸಿ ಮಂತ್ರೋಚ್ಛಾರಣೆ ಮಾಡಿ ಮೂರು ಬಾರಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರು.
ಅಮೃತ ಸ್ನಾನ ಮಾಡಿದ ಬಳಿಕ ಮೋದಿ ಗಂಗೆಗೆ ಕ್ಷೀರ ಸಮರ್ಪಿಸಿ ಗಂಗಾಪೂಜೆ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು. ನರೇಂದ್ರ ಮೋದಿ ಅವರ ಜೊತೆಗೆ ಬೋಟ್ನಲ್ಲಿ ಸಂಚರಿಸಿದ ಯೋಗಿ ಆದಿತ್ಯನಾಥ್, ಈ ವೇಳೆ ಮಹಾಕುಂಭ ಮೇಳಕ್ಕೆ ನಡೆಸಿದ ತಯಾರಿ ಮತ್ತು ಇತರ ಕಾರ್ಯಗಳ ಬಗ್ಗೆ ವಿವರಿಸಿದರು.