ನಿಮಗೆ ಕಾಡುವ ತಲೆ ಹೊಟ್ಟಿನ ಸಮಸ್ಯೆಗೆ ಈಗ ಹೇಳಿ ಗುಡ್ ಬೈ!
ಇಂದಿನ ಆಧುನಿಕ ಜೀವನ ಶೈಲಿ ಯಿಂದ ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನ ಎದುರಿಸುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ ಬಹು ಮುಖ್ಯ ಕಾರಣವಾಗುತ್ತದೆ. ತಲೆ ಹೊಟ್ಟಿನಿಂದ ಬೇಸತ್ತವರಿಗೆ ಸುಲಭವಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳುವ ಸಿಂಪಲ್ ಟಿಪ್ಸ್‌ಗಳು ಇಲ್ಲಿವೆ ನೋಡಿ..
ತೆಂಗಿನ ಎಣ್ಣೆಯಲ್ಲಿ ಹೊಟ್ಟು ನಿವಾರಕ ಗುಣಗಳಿವೆ, ಇದನ್ನು ನಿಯಮಿತವಾಗಿ ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಕೆಲವರು ತಲೆ ಸ್ನಾನ ಮಾಡುವ ಒಂದು ಗಂಟೆ ಮುಂಚೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಇದರಿಂದ ಹೊಟ್ಟು ನಿವಾರಣೆ ಆಗುವುದಿಲ್ಲ. ಕೊಬ್ಬರಿ ಎಣ್ಣೆ ತಲೆಯ ನೆತ್ತಿಗೆ ಹಾಗೂ ಕೂದಲಿಗೆ ಹಿಡಿಯುವ ಹಾಗೆ ಎಣ್ಣೆ ಹಚ್ಚಿಕೊಂಡು ನಂತರ ಕನಿಷ್ಠ 4-5 ಗಂಟೆಯ ನಂತರ ಸ್ನಾನ ಮಾಡಬೇಕು. ಇಲ್ಲವಾದರೆ ರಾತ್ರಿ ಎಣ್ಣೆ ಹಚ್ಚಿಕೊಂಡು ಮಲಗಿ ಬೆಳಗ್ಗೆ ತಲೆ ಸ್ನಾನ ಮಾಡಬಹುದು.
ಟೀ ಟ್ರೀ ಆಯಿಲ್ ಮತ್ತು ತೆಂಗಿನ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 30 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸುವುದರಿಂದ ಹೊಟ್ಟು ನಿವಾರಣೆ ಆಗುತ್ತದೆ.
ಅಲೋವೆರಾ ಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ. ಹೊಟ್ಟು ಇರುವವರು ನೆತ್ತಿಗೆ ಅಲೋವೆರಾ ಜೆಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡ 30 ನಿಮಿಷಗಳು ಬಿಡಬೇಕು. ನಂತರ ಅತಿಯಾದ ಬಿಸಿನೀರನ್ನು ಬಳಸದೇ ಸಾಮಾನ್ಯ ಬಿಸಿನೀರಿನಲ್ಲಿ ಶಾಂಪೂ ಬಳಸಿ ತೊಳೆಯಿರಿ.
ಮನೆಯಲ್ಲಿ ಅಡುಗೆಗೆ ಬಳಸುವ ಆರೋಗ್ಯಕ್ಕೂ ಉತ್ತಮವಾದ ಸಾಮಗ್ರಿ, ಮೆಂತ್ಯವನ್ನು ತಲೆ ಹೊಟ್ಟು ನಿವಾರಣೆಗೆ ಬಳಸಬಹುದು. ಮೆಂತೆ ಕಾಳುಗಳನ್ನು ಸಣ್ಣದಾಗಿ ಅರೆದು, ಅದಕ್ಕೆ ಮೊಟ್ಟೆಯ ಬಿಳಿ ಭಾಗ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ತಲೆಗೆ ಹಚ್ಚಿ. ಹದಿನೈದು ನಿಮಿಷಗಳ ನಂತರ ತೊಳೆಯಬೇಕು.
ಸಮಪ್ರಮಾಣದಲ್ಲಿ ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟು ಮತ್ತು ನೆತ್ತಿಯ ತುರಿಕೆ ನಿವಾರಣೆಯಾಗುತ್ತದೆ. ಇದು ಸುಲಭ ಆಗಿದ್ದರೂ ಕೆಲವರಿಗೆ ತಲೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದರೆ ತಲೆಯಲ್ಲಿ ಉರಿ ಕೂಡ ಕಾಣಿಸುಕೊಳ್ಳುತ್ತದೆ. ಹೀಗಾಗಿ, ತಲೆಯಲ್ಲಿ ಗಾಯಗಳಾಗಿದ್ದರೆ ಇದನ್ನು ಪ್ರಯತ್ನಿಸಬೇಡಿ.