ಪಪ್ಪಾಯಿ ಹಣ್ಣಿನ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ ನೋಡಿ..!
ವರ್ಷ ಪೂರ್ತಿ ದೊರೆಯುವ ಪಪ್ಪಾಯಿ ಹಣ್ಣು ಆರೋಗ್ಯದ ಖಜಾನೆ ಎಂದು ಪರಿಗಣಿಸಲಾಗಿದೆ. ಫೈಬರ್ ಸಮೃದ್ಧವಾಗಿರುವ ಈ ಹಣ್ಣು ಜೀರ್ಣಕ್ರಿಯೆಗೆ ಅತ್ಯಂತ ಉಪಯುಕ್ತವಾಗಿದೆ. ಅಜೀರ್ಣ, ಹೊಟ್ಟೆ ಹುಣ್ಣು ಹಾಗೂ ಎದೆ ಉರಿ ಸಮಸ್ಯೆಗಳಿಗೆ ಪಪ್ಪಾಯಿ ಸಹಕಾರಿ. ಜೊತೆಗೆ ಪಿತ್ತಕೋಶದಲ್ಲಿನ ವಿಷ ವಸ್ತುಗಳನ್ನು ಹೊರಹಾಕಲು ಸಹ ಇದು ನೆರವಾಗುತ್ತದೆ.
ಪಪ್ಪಾಯಿ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಮತ್ತು ಉರಿಯೂತ ಕಿಣ್ವಗಳು ಸಂಧಿವಾತದ ನೋವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ನೈಸರ್ಗಿಕ ಆಹಾರವಾದ ಪಪ್ಪಾಯಿ, ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೋನ್ಯೂಟ್ರಿಯಂಟ್ಸ್ ದೇಹವನ್ನು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಪ್ರೇರೇಪಿಸುತ್ತವೆ.
ಸೌಂದರ್ಯ ವಲಯದಲ್ಲಿಯೂ ಪಪ್ಪಾಯಿ ಉಪಯುಕ್ತ. ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಈ ಹಣ್ಣು, ಕೂದಲನ್ನು ಹೊಳಪುಗೊಳಿಸುತ್ತದೆ. ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನು ಉಜ್ಜಿದರೆ ಮುಖದ ಕಲೆಗಳು ಮಾಯವಾಗುತ್ತವೆ. ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಸಹ ಪಪ್ಪಾಯಿ ಸಹಾಯಕ.
ಹೆಚ್ಚಿದ ರಕ್ತದೊತ್ತಡ ಇರುವವರು ದಿನನಿತ್ಯ ಪಪ್ಪಾಯಿ ಸೇವನೆ ಮಾಡುವುದರಿಂದ ಪ್ರಯೋಜನ. ಇದರಲ್ಲಿ ಇರುವ ವಿಟಮಿನ್ ಸಿ ಒತ್ತಡ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಪಪ್ಪಾಯಿ ಎಲೆಗಳಿಂದ ಹಲ್ಲು ಉಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುತ್ತದೆ. ಅಲ್ಲದೆ ಪಪ್ಪಾಯಿ ಎಲೆ ರಸ, ಡೆಂಗ್ಯೂ ಜ್ವರಕ್ಕೆ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ.
ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಹೆಚ್ಚಿಸುವ ಪಪ್ಪಾಯಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಲಾಭ ದೊರೆಯುತ್ತದೆ. ಬಿಪಿ ಮತ್ತು ಶುಗರ್ ಇರುವವರು ಸಹ ಸುರಕ್ಷಿತವಾಗಿ ಈ ಹಣ್ಣನ್ನು ಸೇವಿಸಬಹುದು. ಬೆಳಗಿನ ಜಾವ ತಿಂಡಿ ತಿನ್ನುವ ಮೊದಲು ಪಪ್ಪಾಯಿ ಸೇವಿಸುವುದು ಆರೋಗ್ಯಕ್ಕೆ ಇನ್ನಷ್ಟು ಹಿತಕರ ಎಂದು ತಜ್ಞರು ಸಲಹೆ ನೀಡಿದ್ದಾರೆ.