ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಜೀವನಶೈಲಿ ಬದಲಾವಣೆ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಒತ್ತಡದಿಂದಾಗಿ 40 ವರ್ಷಕ್ಕೂ ಕಡಿಮೆ ವಯಸ್ಸಿನವರಲ್ಲೂ ಈ ರೋಗ ಕಂಡುಬರುತ್ತಿದೆ. ಹೆಚ್ಚು ಕಳವಳಕಾರಿ ಸಂಗತಿಯೇನಂದರೆ ಅನೇಕರಿಗೆ ತಮಗೆ ಮಧುಮೇಹವಿದೆ ಅಥವಾ ಅದು ಬರುವ ಅಪಾಯವಿದೆ ಎಂಬುದೇ ತಿಳಿದಿರುವುದಿಲ್ಲ.
ವೈದ್ಯರ ಪ್ರಕಾರ ಮಧುಮೇಹ ಬರುವ ಮೊದಲು ದೇಹವು ಕೆಲವು ಸ್ಪಷ್ಟ ಸೂಚನೆಗಳನ್ನು ನೀಡುತ್ತದೆ. ಆದರೆ ಅನೇಕರಿಗೆ ಅವು ಗೊತ್ತಾಗದೇ ಹೋಗುತ್ತದೆ. ಆದ್ದರಿಂದ ಈ ಲಕ್ಷಣಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.
- ಆಗಾಗ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ, ಮೂತ್ರಪಿಂಡಗಳು ಹೆಚ್ಚುವರಿ ಸಕ್ಕರೆಯನ್ನು ದೇಹದಿಂದ ಹೊರಹಾಕಲು ಹೆಚ್ಚು ಕೆಲಸ ಮಾಡುತ್ತವೆ. ಇದರಿಂದಾಗಿ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಮೂತ್ರದ ಮೂಲಕ ನೀರು ನಷ್ಟವಾಗುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ.
- ಯಾವಾಗಲೂ ದಣಿವಿನ ಭಾವನೆ
ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದ ಜೀವಕೋಶಗಳಿಗೆ ಶಕ್ತಿ ಸಿಗುವುದಿಲ್ಲ. ಇದರ ಪರಿಣಾಮವಾಗಿ ಸಾಕಷ್ಟು ನಿದ್ರೆ ಮಾಡಿದರೂ ದೇಹದಲ್ಲಿ ಶಕ್ತಿ ಇಲ್ಲದ ಭಾವನೆ, ಆಲಸ್ಯ ಮತ್ತು ದಣಿವನ್ನು ಅನುಭವಿಸಬಹುದು.
- ದೃಷ್ಟಿ ಮಸುಕಾಗುವಿಕೆ
ಸಕ್ಕರೆ ಮಟ್ಟ ಹೆಚ್ಚಾದರೆ ಕಣ್ಣಿನ ಮಸೂರು ಊದಿಕೊಳ್ಳುತ್ತದೆ. ಇದರಿಂದ ದೃಷ್ಟಿ ಮಸುಕಾಗುತ್ತದೆ. ಕೆಲವರು ಇದನ್ನು ಕನ್ನಡಕದ ಬದಲಾವಣೆಯೆಂದು ತಪ್ಪಾಗಿ ಭಾವಿಸಬಹುದು, ಆದರೆ ಇದು ಮಧುಮೇಹದ ಪ್ರಮುಖ ಸಂದೇಶವಾಗಿರಬಹುದು.
- ತೂಕ ತೀವ್ರವಾಗಿ ಕಡಿಮೆಯಾಗುವುದು
ಜೀವಕೋಶಗಳಿಗೆ ಸಕ್ಕರೆ ದೊರಕದಿದ್ದಾಗ ದೇಹವು ಶಕ್ತಿಗಾಗಿ ಸ್ನಾಯು ಮತ್ತು ಕೊಬ್ಬನ್ನು ಒಡೆಯಲು ಪ್ರಾರಂಭಿಸುತ್ತದೆ. ಇದರಿಂದ ಬೇಗನೆ ತೂಕ ಕಡಿಮೆಯಾಗುತ್ತದೆ. ವಿಶೇಷವಾಗಿ ಇದು ಟೈಪ್ 1 ಮಧುಮೇಹದಲ್ಲಿ ಸಾಮಾನ್ಯ.
- ಗಾಯಗಳು ನಿಧಾನವಾಗಿ ವಾಸಿಯಾಗುವುದು
ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವು ರಕ್ತನಾಳಗಳನ್ನು ಹಾನಿಗೊಳಿಸಿ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ಸಣ್ಣ ಗಾಯಗಳೂ ಸಹ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಮಾರ್ಗದರ್ಶನದೊಂದಿಗೆ ಜೀವನಶೈಲಿಯಲ್ಲಿ ಬದಲಾವಣೆ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಯ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ತಡೆಯಬಹುದು.






