ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ
ಪ್ರತಿದಿನ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಎದ್ದು ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸೂರ್ಯೋದಯದ ವೇಳೆಯಲ್ಲಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಸೂರ್ಯನ ಬೆಳಕು ದೇಹಕ್ಕೆ ಮಾತ್ರವಲ್ಲದೆ, ಮನಸ್ಸಿನ ಆರೋಗ್ಯಕ್ಕೂ ಸಹಕಾರಿ ಎಂದು ಹೇಳಲಾಗುತ್ತದೆ.
ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್–ಡಿ ಸೂರ್ಯನ ಬೆಳಕಿನಿಂದಲೇ ದೊರೆಯುತ್ತದೆ. ಸೂರ್ಯನ ಬೆಳಕಿನಲ್ಲಿ ಯುವಿ–ಎ, ಯುವಿ–ಬಿ ಹಾಗೂ ಯುವಿ–ಸಿ ಎಂಬ ಮೂರು ವಿಧದ ಕಿರಣಗಳಿದ್ದು, ಅವುಗಳಲ್ಲಿ ಯುವಿ–ಬಿ ಕಿರಣಗಳು ವಿಟಮಿನ್–ಡಿ ಉತ್ಪಾದನೆಗೆ ಮುಖ್ಯವಾಗಿವೆ. ಸೂರ್ಯನ ಬೆಳಕು ಚರ್ಮದ ಮೇಲೆ ಬೀಳುವಾಗ, ಚರ್ಮದಲ್ಲಿರುವ 7–ಡೈಹೈಡ್ರೋಕೊಲೆಸ್ಟರಾಲ್ ಎಂಬ ರಾಸಾಯನಿಕವು ಪ್ರೊ–ವಿಟಮಿನ್ ಡಿ3 ಆಗಿ ಪರಿವರ್ತಿತವಾಗುತ್ತದೆ. ನಂತರ ಅದು ವಿಟಮಿನ್–ಡಿ3 ಆಗಿ ರೂಪುಗೊಳ್ಳುತ್ತದೆ.
ವಿಟಮಿನ್–ಡಿ ನಮ್ಮ ಮೂಳೆಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶಗಳನ್ನು ಕರುಳು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಎಳೆ ಬಿಸಿಲಿನಲ್ಲಿ ಅರ್ಧ ಗಂಟೆಯಷ್ಟು ಕಾಲ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ, ಅಗತ್ಯವಿರುವಷ್ಟು ವಿಟಮಿನ್–ಡಿ ದೊರೆಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಮಧ್ಯಾಹ್ನದ ತೀವ್ರ ಬಿಸಿಲಿಗೆ ದೇಹವನ್ನು ಒಡ್ಡಿದರೆ ಚರ್ಮ ಸುಡುವುದು, ಕಪ್ಪಾಗುವುದು ಮಾತ್ರವಲ್ಲದೆ ಚರ್ಮ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಗಾದರೆ ಸೂರ್ಯನಿಗೆ ನಮಸ್ಕಾರ ಮಾಡಬೇಕು ಅಥವಾ ಅರ್ಘ್ಯ ನೀಡಬೇಕು ಎಂದು ಪ್ರಾಚೀನರು ಏಕೆ ಹೇಳಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೇವಲ ‘ಬೆಳಗಿನ ಬಿಸಿಲಿನಲ್ಲಿ ಅರ್ಧ ಗಂಟೆ ನಿಲ್ಲಿ’ ಎಂದು ಹೇಳಿದರೆ ಎಷ್ಟು ಜನ ಅದನ್ನು ಪಾಲಿಸುತ್ತಾರೆ ಎಂಬುದೇ ಕಾರಣ. ನಮ್ಮ ಆರೋಗ್ಯಕ್ಕೆ ಒಳಿತಾಗುವ ಆಚರಣೆಗಳಿಗೆ ದೇವಭಕ್ತಿಯನ್ನು ಜೋಡಿಸಿದಾಗ ಜನ ಹೆಚ್ಚು ಅನುಸರಿಸುತ್ತಾರೆ ಎಂಬ ನಂಬಿಕೆ ಪ್ರಾಚೀನರಿಗೆ ಇತ್ತು. ಅದಕ್ಕಾಗಿ ಸೂರ್ಯನಿಗೆ ನಮಸ್ಕಾರ ಮಾಡಿದರೆ ಒಳಿತು, ಅರ್ಘ್ಯ ನೀಡಿದರೆ ಪುಣ್ಯ ದೊರೆಯುತ್ತದೆ ಎಂದು ಅವರು ಹೇಳಿದರೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






