ಸಹಕಾರ ಮಂತ್ರಾಲಯ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕಾರಿಯಾಗಿದೆ:ಅಮಿತ್ ಶಾ

2
4385

ಕೃಷಿ ಮಂತ್ರಾಲಯದಿಂದ ಸಹಕಾರ ಮಂತ್ರಾಲಯವನ್ನು ಪ್ರತ್ಯೇಕಿಸಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾನ್ಯ ಪ್ರಧಾನಮಂತ್ರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಭಾರತ ಸರ್ಕಾರದ ಸಹಕಾರ ಹಾಗೂ ಗೃಹ ಇಲಾಖೆ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.

*ಅವರು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ 260.90 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದರು* ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಸಹಕಾರ ಇಲಾಖೆ ಸದಸ್ಯರಿಗೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಮೆಗಾ ಡೇರಿಯಲ್ಲಿ 73 ಕೋಟಿ ಕಟ್ಟಡ ನಿರ್ಮಾಣ,183 ಕೋಟಿ ಯಂತ್ರೋಪಕರಣಗಳಿಗೆ ವೆಚ್ಚ ಮಾಡಲಾಗಿದೆ. ಇಲ್ಲಿ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ರೀತಿ ಉನ್ನತೀಕರಿಸಲಾಗುವುದು. ಹಾಲನ್ನು ಸಂಸ್ಕರಿಸುವುದರಿಂದ ಬಹಳಷ್ಟು ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಹಾಲು ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.15210 ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳಿವೆ 22 ಲಕ್ಷದ 22 ಸಾವಿರ ರೈತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 1975 ರಿಂದ 2022 ರವರೆಗೆ ಕರ್ನಾಟಕ ರಾಜ್ಯ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದೆ. 1975 ರಲ್ಲಿ
66 ಸಾವಿರ ಕಿಲೋ ಲೀಟರ್ ಹಾಲು ಸಂಸ್ಕರಿಸಲಾಗುತ್ತಿತ್ತು ಇಂದು 82 ಲಕ್ಷ ಕಿಲೋ ಲೀಟರ್ ಹಾಲು ಪ್ರತಿ ದಿನ ಸಂಸ್ಕರಿಸಲಾಗುತ್ತಿದೆ. ಮಿಲ್ಕ್ ಫೆಡರೇಷನ್ ನ ಟನ್೯ ಓವರ್ 4 ಕೋಟಿ ಇದ್ದದ್ದು, ಇಂದು 25 ಸಾವಿರ ಕೋಟಿ ತಲುಪಿದೆ ಎಂದರು.

ಹಾಲು ಉತ್ಪಾದಕರ ಸಂಘದ ಗಳಿಕೆಯ ಶೇ 80% ರಷ್ಟು ರೈತರಿಗೆ ನೀಡಲಾಗುತ್ತಿದೆ .ಗುಜರಾತ್ ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಮೂಲ್ ಹಾಗೂ ನಂದಿನಿ ಎರೆಡೂ ಒಗ್ಗೂಡಿ ಕೆಲಸ ಮಾಡಿದರೆ ಕೆಲವೇ ವರ್ಷಗಳ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಸ್ಥಾಪನೆ ಸಾಧ್ಯ ಎಂದರು.

*ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಪರಿವರ್ತಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ಹಾಲು ಉತ್ಪಾದನೆ ಡೇರಿ ಅಭಿವೃದ್ಧಿ ಮೂಲಕ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತ ಬಂಧುಗಳು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದನೆ ಮಾಡುವ ರೈತ ಮಹಿಳೆಯರಿಗೆ ವಿಶೇಷವಾಗಿ ಮುಖ್ಯ ಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

 

*1 ಲಕ್ಷ ಲೀ. ಹಾಲು ಸಂಸ್ಕರಿಸುವ ಸಾಮರ್ಥ್ಯ*
ಸಮಗ್ರ ಕೃಷಿ ಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಪ್ರೋತ್ಸಾಹ ಧನ ನೀಡುವುದು ಪ್ರಾರಂಭವಾಗಿ ಇಂದು 5.00 ರೂ.ಗಳನ್ನು ಪ್ರತಿ ಹಾಲು ಉತ್ಪಾದಕನಿಗೆ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ತನ್ನದೇ ಆದ ಸವಾಲು ಗಳಿದ್ದರೂ ಇಂದು ಅದನ್ನು ಸರಿದೂಗಿಸಿ ಮುನ್ನುಗ್ಗುತ್ತಿದೆ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ 1 ಲಕ್ಷ ಲೀ. ಹಾಲು ಸಂಸ್ಕರಣೆ ಮಾಡುವ ಸಾಮರ್ಥ್ಯ ವಿದೆ ಎಂದರು.

*ಮೆಗಾ ಡೇರಿಯಲ್ಲಿ ಸ್ವಾವಲಂಬಿ ವ್ಯವಸ್ಥೆ*
ರೈತನ ಬದುಕು ಅನಿಶ್ಚಿತತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಅವನ ಬದುಕಿಗೆ ನಿಶ್ಚಿತತೆ ತಂದುಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರ ಇಲಾಖೆ ಸೃಜಿಸಿ ಭಾರತ ದೇಶದಲ್ಲಿ ಸಹಕಾರ ರಂಗಕ್ಕೆ ಶಕ್ತಿ ತುಂಬಿದ್ದು, ಇದರಿಂದ ಒಂದು ಕ್ರಾಂತಿಯಾಗಲಿದೆ. ಹಲವಾರು ಸುಧಾರಣೆಗಳನ್ನು ತರುವ ಪ್ರಯತ್ನ ಗಳನ್ನು ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು ಬೆಂಗಳೂರಿನ ಪ್ರಥಮ ಮೆಗಾ ಡೇರಿ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಿದೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿಂದ ಪ್ರಾರಂಭವಾದ ಮೆಗಾ ಡೇರಿ ಇಂದು ಎಲ್ಲೆಡೆ ಸ್ಥಾಪನೆಯಾಗುತ್ತಿದೆ. ಸ್ವತಂತ್ರವಾಗಿ ಹಾಲು ಉತ್ಪಾದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ, ವಿವಿಧ ಪದಾರ್ಥಗಳನ್ನು ತಯಾರಿಸಿ ಸ್ವಾವಲಂಬನೆಯ ವ್ಯವಸ್ಥೆ ಮೆಗಾ ಡೇರಿಯಲ್ಲಿ ಆಗುತ್ತಿದೆ. ನಮ್ಮ ಪ್ರಧಾನಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಕನಸಿಗೆ ಕರ್ನಾಟಕದ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆಯನ್ನು ಕೊಡುತ್ತಿವೆ ಎಂದರು.

*ರೈತರ ಯೋಜನೆಗಳಿಗೆ ಒಂದು ವಾರದೊಳಗೆ ಅನುಮೋದನೆ*
ಮಂಡ್ಯ ಜಿಲ್ಲೆ ಒಕ್ಕಲುತನದಿಂದ ಕೂಡಿದೆ. ಸಕ್ಕರೆ ನಾಡು, ಭತ್ತದ ಖನಿಜ. ಮಂಡ್ಯದ ಅಭಿವೃದ್ಧಿಗೆ ಇನ್ನಷ್ಟು ನೀರಾವರಿ ಮತ್ತು ಕೈಗಾರಿಕೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಮೈ ಶುಗರ್ ಸಂಸ್ಥೆಯನ್ನು ಸರ್ಕಾರಿ ವಲಯದ ಮೂಲಕ ಪ್ರಾರಂಭಿಸಿದೆ. ವಿಶ್ವೇಶ್ವರ ನಾಲೆಯ ನೀರಾವರಿಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳನ್ನು ರೂಪಿಸುತ್ತಿದ್ದು, ಒಂದು ವಾರದಲ್ಲಿ ಅವೆಲ್ಲಕ್ಕೂ ಅನುಮೋದನೆ ನೀಡಲಾಗುವುದು ಎಂದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರೂ ಸಹ ಸಂದೇಶ ನೀಡಿ ಸಹಕಾರಿ ಬ್ಯಾಂಕುಗಳಲ್ಲಿ ನಡೆಯುತ್ತಿರುವ ಹಲವು ರೀತಿಯ ಅನ್ಯಾಯ ತಡೆಗಾಗಿ ಅಮಿತ್ ಶಾ ಅವರೇ ಸಹಕಾರ ಸಚಿವರಾಗಿ ಜವಾಬ್ದಾರಿ ತೆಗಡದುಕೊಂಡಿದ್ದಾರೆ .ಅಮಿತ್ ಶಾ ಅವರದ್ದು ದೊಡ್ಡ ವ್ಯಕ್ತಿತ್ವ ಎಂದು ಬಣ್ಣಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮೆಗಾ ಡೈರಿ ಸ್ಥಾಪನೆ ಪುಣ್ಯದ ಕೆಲಸ ಇದರಿಂದ ರೈತ ಕುಟುಂಬಕ್ಕೆ ಶಕ್ತಿ ತುಂಬಬಹುದು. ಉಕ್ಕಿನ ಮನುಷ್ಯ
ಸರ್ಧಾರ್ ವಲ್ಲಭಭಾಯಿ ಪಟೇಲ್ ರಂತೆ ಅಮಿತ್ ಶಾ ಅವರು ಧೃಡ ನಿರ್ಧಾರ ಕೈಗೊಳ್ಳುವ ಗುಣದಿಂದಲೇ ಖ್ಯಾತ ರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಸ್ವಾಮೀಜಿ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಕೃಷಿಗೆ ಹೆಚ್ಚಿನ ನೆರವು ನೀಡುವ ಅಗತ್ಯತೆ ಇದೆ ಅದಕ್ಕಾಗಿ ಸಹಕಾರ ಕ್ಷೇತ್ರ ಸುಧಾರಣೆಯಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಮಂಡ್ಯವನ್ನು ಆರ್ಥ ಮಾಡಿಕೊಂಡರೆ ಇಂಡಿಯಾವನ್ನು ಅರ್ಥ ಮಾಡಿಕೊಂಡಂತೆ . ಮಂಡ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಮೆಗಾ ಡೇರಿಯ ಸ್ಥಾಪನೆಯಿಂದ ಹಾಲು ಉತ್ಪಾದಕರಿಗೆ ಅನುಕೂಲವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮನ್ ಮುಲ್ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು

ಕಾರ್ಯಕ್ರಮದಲ್ಲಿ ಅಬಕಾರಿ ಹಾಗೂ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಯಣಗೌಡ,
ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಾಂತ ಎಲ್ ಹುಲ್ಮನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

2 COMMENTS

LEAVE A REPLY

Please enter your comment!
Please enter your name here