ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 67ಮಂದಿ ರೇಬಿಸ್ ಭೀತಿಯಲ್ಲಿದ್ದಾರೆ.
ರೇಬಿಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ ಆ್ಯಂಟಿ ರೇಬಿಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾಗಿದೆ.
ಈ ಪರಿಸ್ಥಿತಿ ನಿರ್ಮಾಣವಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ.
ಆಶಿತ್ ಎಂಬ ಯುವಕ ಆಗಸ್ಟ್ 22ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈತನ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸುವಾಗ ವೈದ್ಯರು, ಯುವಕ ರೇಬಿಸ್ ವೈರಾಣುವಿನಿಂದ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚಿಸಿದ್ದರು.
ಆದರೆ,ಕುಟುಂಬದವರು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲು ಮೃತದೇಹಕ್ಕೆ ಸುತ್ತಿದ್ದ ಬಟ್ಟೆ ಬಿಚ್ಚಿದ್ದರು. ಮನೆ ಪ್ರದೇಶದಲ್ಲಿ ಮೃತದೇಹದ ರಕ್ತ ಚೆಲ್ಲಿತ್ತು. ಭಾಗಿಯಾಗಿದ್ದ ಸಂಬಂಧಿಕರು ಮತ್ತು ಊರವರು ಈಗ ರೇಬಿಸ್ ಭೀತಿಯಲ್ಲಿದ್ದಾರೆ. ಸುಮಾರು 67ಮಂದಿ ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆ್ಯಂಟಿ ರೇಬಿಸ್ ಚುಚ್ಚುಮದ್ದು ಪಡೆದಿದ್ದಾರೆ ಎಂದು ವರದಿಯಾಗಿದೆ.