ಇಂದಿನಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಹತ್ತು ದಿನಗಳ ಕಾಲ ವಿಧಾನಸೌಧದಲ್ಲಿ ನಡೆಯುವ ಉಭಯ ಸದನಗಳ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಾಕಷ್ಟು ಸಿದ್ಧತೆ ಕೈಗೊಂಡಿದೆ. ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಇಂದಿನ ಅಧಿವೇಶನ ಕೇವಲ ಸಂತಾಪಕ್ಕೆ ಸೀಮಿತವಾಗಬಹುದು. ಆದ್ದರಿಂದ ಇಂದು ಸುಮ್ಮನಿದ್ದು, ನಾಳೆಯಿಂದ ತಮ್ಮ ತಂತ್ರಗಾರಿಕೆಯ ಪ್ರಯೋಗವನ್ನು ಹಂತ ಹಂತವಾಗಿ ಆದ್ಯತೆ ಮೇರೆಗೆ ಬಿಚ್ಚಿಡಲು ಕಾಂಗ್ರೆಸ್ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಸಹ ಸಾಕಷ್ಟು ವಿಸ್ತೃತವಾಗಿ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಹೆಣೆಯುವ ಕಾರ್ಯ ಆಗಲಿದೆ. ಆದರೆ ಮಂಗಳವಾರ ಬೆಳಗ್ಗೆಯೇ ಹೋರಾಟದ ಪ್ರಮುಖ ಅಸ್ತ್ರವೊಂದನ್ನು ಪ್ರಯೋಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.