ಕೆಟ್ಟ ಮಕ್ಕಳು ಇರುತ್ತಾರೆ, ಕೆಟ್ಟ ಅಮ್ಮ ಇರಲ್ಲ ಎನ್ನುವುದು ಅಕ್ಷರಶಃ ಸತ್ಯ. ಈ ಮಾತು ಈಗ ಅರ್ಥ ಕಳೆದುಕೊಂಡಿದೆಯಾ..? ಅದು ಆರೋಪ ಮಾತ್ರವಲ್ಲ, ಪೂರಕವಾದ ಕೆಲವೊಂದು ಘಟನೆಗಳು ತಬ್ಬಿಬ್ಬು ಮಾಡುತ್ತಿವೆ. ಹಾಗಾದರೇ ಅಮ್ಮ ಮಮತೆಯನ್ನು ಮಾರಿಬಿಟ್ಟಿದ್ದಾಳಾ..? ನಂಬಲು ಕಷ್ಟ. ಆದರೆ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಅಮ್ಮಂದಿರು ಮಮತೆಯನ್ನು ಮಾರಿಕೊಂಡಿಲ್ಲ. ಹಣದ ಹಪಾಹಪಿಗೆ ಬಿದ್ದ ಕೆಲವು ತಾಯಿಂದಿರು ಹೆತ್ತೊಡಲನ್ನೇ ಮಾರಿಕೊಂಡುಬಿಟ್ಟಿದ್ದಾರೆ. ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್ ಭಾಗ ಒಂದರಲ್ಲಿ ಬೆಗ್ಗರ್ ಮಾಫಿಯಾದ ಅಸಲಿಯತ್ತನ್ನು ಅನಾವರಣ ಮಾಡಿದ್ದ ನಮ್ಮ ತಂಡ ಅದೇ ಕಹಾನಿಯನ್ನು ಮುಂದುವರಿಸುತ್ತಿದೆ. ಇದು ದೇಶದ ಅಸ್ತಿತ್ವದ ಪ್ರಶ್ನೆ ಮಾತ್ರವಲ್ಲ, ಸ್ವಾಭಿಮಾನಿ ಭಾರತೀಯರ ಮಾನಮರ್ಯಾದೆಯ ಸಂಗತಿ ಅಂತ ಎಳೆಎಳೆಯಾಗಿ ಬಿಡಿಸಿ ಹೇಳಿದ್ದ ನಾವು, ಬೆಗ್ಗರ್ ಮಾಫಿಯಾಕ್ಕೆ ಸಿಕ್ಕ ಎಳೆಕಂದಮ್ಮಗಳು, ಪುಟ್ಟ ಮಕ್ಕಳು ಏನೆಲ್ಲಾ ಸಂಕಷ್ಟ ಅನುಭವಿಸುತ್ತವೆ ಎನ್ನುವುದರ ವಿವರವನ್ನು ಮುಂದುವರಿಸುತ್ತೇವೆ. ಯಾರ ಮಕ್ಕಳಾದರೇನು..? ಮಕ್ಕಳು ಮಕ್ಕಳೇ. ನಮ್ಮ ಅಂತಃಕರಣ ಮಿಡಿಯಬೇಕಷ್ಟೆ..!
ಭಿಕ್ಷಾಟನೆ ನಮ್ಮ ದೇಶದ ಬಗೆಹರಿಯದ ಸಮಸ್ಯೆಯಾಗಿಬಿಟ್ಟಿದೆ. ಮಕ್ಕಳನ್ನು, ಎಳೆ ಕಂದಮ್ಮಗಳನ್ನು ಭಿಕ್ಷೆಬೇಡಲು ಬಳಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅವು ನಿಜಕ್ಕೂ ಅವರದ್ದೇ ಮಕ್ಕಳಾ ಎನ್ನುವುದನ್ನು ಯೋಚಿಸುವ ಸಮಯ ನಮಗೆಲ್ಲಿದೆ ಹೇಳಿ..? ಕಣ್ಣಿಗೆ ಕಾಣುವ ಸತ್ಯಗಳೇ ಅರ್ಥವಾಗುತ್ತಿಲ್ಲವೆಂದರೇ ಅದು ಈ ದೇಶದ ಹಣೆಬರಹ. ಅಷ್ಟಕ್ಕೂ ಇವರೆಲ್ಲಾ ನಿಜಕ್ಕೂ ಭಿಕ್ಷೆ ಬೇಡುವವರ ಮಕ್ಕಳಾ..? ಟು ಹಂಡ್ರೆಡ್ ಪಸೆಂಟ್ ಅಲ್ಲ ಎನ್ನುವುದು ನಮ್ಮ ವಾದ. ಬೇಕಾದರೇ ಪೊಲೀಸರು ತನಿಖೆ ಮಾಡಲಿ..! ಶೇಕಡಾ ಐವತ್ತರಷ್ಟು ಮಕ್ಕಳು ಬಾಡಿಗೆಗೆ ತರುತ್ತಾರೆ ಎಂಬುದು ಬಲವಾದ ಆರೋಪ. ನಮ್ಮ ತಂಡ ಸಿಕ್ಕಸಿಕ್ಕ ಮಾಹಿತಿಯ ಬೆನ್ನತ್ತಿ ಬೆಂಗಳೂರಿನ ಉದ್ದಗಲಕ್ಕೂ ಓಡಾಡಿದ್ದು ಮಾತ್ರ ಸುಳ್ಳಲ್ಲ.
ಬುರ್ಖಾ ಹಾಕಿಕೊಂಡ ಭಿಕ್ಷುಕರು ಅಸಲಿಗೆ ಭಿಕ್ಷುಕರೇ ಅಲ್ಲಾ ಎನ್ನುವುದು ಬೆಗ್ಗರ್ಸ್ ಮಾಫಿಯಾ ಭಾಗ ಒಂದರಲ್ಲಿ ನಾವು ಬಹಿರಂಗಪಡಿಸಿದ ಸತ್ಯ. `ಬುರ್ಖಾ ಹಾಕಿಕೊಂಡವರೆಲ್ಲಾ ಮುಸ್ಲೀಮರಲ್ಲ, ನಾಮ ಹಾಕಿಕೊಂಡವರೆಲ್ಲಾ ಹಿಂದೂಗಳಲ್ಲ’ ಎನ್ನುವುದು ಆಧುನಿಕ ನಾಣ್ಣುಡಿ. ಬುರ್ಖಾ ದೊಳಗಿರುವ ಗೋಮುಖಗಳು ಮಾಡುವ ಅಪಸವ್ಯಕ್ಕೆ ಮುಸ್ಲೀಂ ಧರ್ಮದ ಸಂಪ್ರದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆಯಾ..? ಗೊತ್ತಿಲ್ಲ. ಆದರೆ ಬುರ್ಖಾ ಭಿಕ್ಷುಕರು ಮಾತ್ರವಲ್ಲ, ಉಗ್ರರ ಪ್ರಮುಖ ಅಸ್ತ್ರವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಸುಮ್ ಸುಮ್ನೆ ಕುಂಟುತ್ತಾರೆ, ಸುಮ್ ಸುಮ್ನೆ ಅಳುತ್ತಾರೆ. ಒಟ್ಟಿನಲ್ಲಿ ಬೇಜಾನ್ ನಾಟಕವಾಡುವ ಈ ಭಿಕ್ಷುಕರು ಬೇರೆ-ಬೇರೆ ರಾಜ್ಯಗಳಿಂದ ಬಂದು ಭಿಕ್ಷೆ ಬೇಡುತ್ತಾರೆ. ಲಕ್ಷ-ಲಕ್ಷ ಸಂಪಾದನೆ ಮಾಡುತ್ತಾರೆ. ಅದೆಲ್ಲಕ್ಕಿಂತ ಭಿಕ್ಷಾಟನೆಗಾಗಿ ಹಾಲಿನಲ್ಲಿ ಮಾತ್ರೆ ಬೆರೆಸುವ ದುರುಳರ ಸ್ವಾರ್ಥಕ್ಕೆ ಹಸುಗೂಸುಗಳು ಹಾಗೂ ಮಕ್ಕಳು ಯಾವ ಯಾವ ಖಾಯಿಲೆಗಳಿಂದ ನರಳುತ್ತಾರೆ ಎನ್ನುವುದನ್ನೂ ತಿಳಿದುಕೊಳ್ಳಲೇಬೇಕು. ಯಶವಂತಪುರ ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ಹೆಚ್ಚಾಗಿ ಭಿಕ್ಷುಕರು ಬೀಡುಬೀಡುತ್ತಾರೆ. ಮಕ್ಕಳು ಕೂಡ ಅಲ್ಲಿಯೇ ಬಾಡಿಗೆಗೆ ಸಿಗುತ್ತಾರೆಂಬ ಮಾಹಿತಿ ಬೆನ್ನು ಹತ್ತಿದ ನಮ್ಮ ತಂಡ ಒಂದರೇ ಕ್ಷಣ ಯೋಚಿಸದೇ ಫೀಲ್ಡ್ ಗೆ ಇಳಿದಿತ್ತು.
ಯಶವಂತಪುರ ರೈಲ್ವೇ ಸ್ಟೇಷನ್ ಬಳಿ ಭಿಕ್ಷುಕರದ್ದೇ ಹಿಂಡು. ಅವರಲ್ಲಿ ಮಕ್ಕಳು, ಹೆಂಗಸರು, ವಯಸ್ಸಾದವರೇ ಅಧಿಕ. ನಮ್ಮ ತಂಡ ಇಬ್ಬರು ಹೆಂಗಸರು ಹಾಗೂ ಇಬ್ಬರು ಬಾಲಕರನ್ನು ಮಾತನಾಡಿಸಿತ್ತು. `ಹೊಟ್ಟೆ ಬಟ್ಟೆ ನೋಡ್ಕೋಬೇಕು. ದುಡ್ಡಿಲ್ಲ. ಜೀವನಕ್ಕೆ ಏನು ಮಾಡೋದು’ ಎಂದಿದ್ದು ಬಾಲಕ ಭಿಕ್ಷುಕ. `ನಾವು ದೂರದ ಹೈದರಾಬಾದಿನಿಂದ ಬಂದಿದ್ದೇವೆ. ನಾವು ಈ ಊರಿನವರಲ್ಲ’ ಅಂದಿದ್ದ ಆ ಬಾಲಕನ ವಯಸ್ಸು ಅಬ್ಬಬ್ಬಾ ಅಂದ್ರೆ ಹದಿಮೂರರಿಂದ ಹುದಿನಾಲ್ಕಿರಬಹುದು. ದುರಂತವೆಂದ್ರೆ, `ಇವ್ರೆಲ್ಲಾ ಭಿಕ್ಷೆ ಬೇಡುವುದಿಕ್ಕೆಂದೇ ಬೆಂಗಳೂರಿಗೆ ಬಂದಿದ್ದಾರೆ. ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪವೇ ಠಿಕಾಣೆ ಹೂಡಿದ್ದಾರೆ. ಅಂದರೇ ಬೆಂಗಳೂರಿನ ದಾರಿದ್ರ್ಯದಲ್ಲಿ ಪರರಾಜ್ಯದಿಂದ ವಲಸೆ ಬಂದ ಭಿಕ್ಷುಕರ ಪಾಲಿದೆ ಎನ್ನುವುದು ಖಾತ್ರಿಯಾಯಿತಲ್ಲ. ನಾವು ಮಾತನಾಡಿಸಿದ ಭಿಕ್ಷುಕರು ಪರ ರಾಜ್ಯದಿಂದ ಬಂದವರೇನೋ ಸರಿ. ಅವರ ಮುಖವಾಡ ಕಳಚುವುದು ನಮ್ಮ ಉದ್ದೇಶ ಎನ್ನುವುದೂ ಖರೆ. ಆದ್ರೆ ಮಗುವಿಗೆ ಹಾಲು ಕುಡಿಸುತ್ತಿದ್ದ ಆ ತಾಯಿ ತಿನ್ನುತ್ತಿದ್ದದ್ದು ಹುಳುಬಿದ್ದ ಮಾವಿನ ಹಣ್ಣನ್ನು..! ಸ್ವಲ್ಪ ಮಾನವೀಯತೆಯಿಂದ ಅಸಲಿಯತ್ತು ಹೇಳದಿದ್ರೆ ಹೇಗೆ ಹೇಳಿ..? ಎಲ್ಲರೂ ಮಾಫಿಯಾದವರಲ್ಲ ಎಂಬ ಧೋರಣೆ ನಮ್ಮದು.
ಪರರಾಜ್ಯದ ಜನರು ನಮ್ಮ ಮುಂದೆ ಕೈ ಚಾಚುತ್ತಿದ್ದಾರೆ ನಾವು ದಾನ ಮಾಡುತ್ತಿದ್ದೀವಿ ಅಂದುಕೊಳ್ಳುವುದು ಬೇಡ. ಹೇಗೆ ಲೆಕ್ಕ ಹಾಕಿದರೂ ಬೆಂಗಳೂರಿನಲ್ಲಿರುವ ಭಿಕ್ಷುಕರಲ್ಲಿ ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಮಂದಿ ಪ್ರತಿವಾರ ಪರರಾಜ್ಯದಿಂದ ಬರುತ್ತಾರೆ. ವಾರಗಟ್ಟಲೇ ಭಿಕ್ಷೆ ಬೇಡಿ ಮರಳಿ ಊರು ಸೇರುತ್ತಾರೆ. ಇವರು ಆಸ್ತಿವಂತರಾ..? ಬಡವರಾ..? ದಿಕ್ಕಿಲ್ಲದವರಾ..? ತನಿಖೆ ಮಾಡುವುದು ಪೊಲೀಸರಿಗೆ ಬಿಟ್ಟ ವಿಚಾರ. ಯಶವಂತಪುರ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಬಯಲೊಂದರಲ್ಲಿ, ಅಲ್ಲಲ್ಲಿ ಬಿದ್ದುಕೊಂಡಿದ್ದ ಭಿಕ್ಷುಕರಲ್ಲಿ ಅಧಿಕ ಮಂದಿ ಕಟ್ಟುಮಸ್ತಿನ ಆಳುಗಳೆನ್ನುವುದು ಅಕ್ಷರಶಃ ಸತ್ಯ. ಒಬ್ಬೊಬ್ಬರದ್ದು ಒಂದೊಂದು ಊರು, ಒಂದೊಂದು ಕೇರಿ. ಬೆಂಗಳೂರಿನ ಭಿಕ್ಷುಕರು ಅರ್ಥಾತ್ ಕರ್ನಾಟಕದ ಭಿಕ್ಷಾಂದೇಹಿಗಳು ಬೆರಳೆಣಿಕೆಯಷ್ಟು ಮಾತ್ರ. ಆಂಧ್ರಪ್ರದೇಶ, ಉತ್ತರ ಪ್ರದೇಶ… ಹೀಗೆ ಬೇರೆ-ಬೇರೆ ರಾಜ್ಯದಿಂದ ಬಂದ ಭಿಕ್ಷುಕರು ಬೆಂಗಳೂರಿನ ಉದ್ದಗಲಕ್ಕೂ ಹರಡಿಕೊಂಡಿದ್ದಾರೆ. ಅದರಲ್ಲೂ ರಂಜಾನ್ ತಿಂಗಳು ಈ ಭಿಕ್ಷುಕರಿಗೆ ಒಳ್ಳೇ ಆದಾಯ ತರುವ ಮಾಸ. ಹಾಗಾಗಿ ಈ ತಿಂಗಳಲ್ಲಿ ಮುಲಾಜಿಲ್ಲದೇ ಟ್ರೈನ್ ಹತ್ತಿ ಬಂದೇಬಿಡುತ್ತಾರೆ. ನಮ್ಮ ತಂಡ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಹೆಂಗಸೊಬ್ಬಳನ್ನು ಮಾತಾನಾಡಿಸಿದಾಗ ಆಯಮ್ಮ ಹೇಳಿದ್ದಿಷ್ಟು, `ಗಂಡಂಗೆ ಮೂರು ಜನ ಹೆಂಡ್ತೀರು, ನಾನು ಮೂರನೆಯವಳು. ಗಂಡ ಕೈ ಕೊಟ್ಟು ತಮಿಳುನಾಡಿಗೆ ಹೋಗಿದ್ದಾನೆ. ರಾತ್ರಿ ಟ್ರೈನ್ ನಲ್ಲಿ ಮಲಗಿದ್ದೆ. ಕಣ್ಣಬಿಟ್ಟಾಗ ಇಲ್ಲಿದ್ದೇ. ಇಬ್ಬರು ಮಕ್ಕಳಿದ್ದಾರೆ. ಭಿಕ್ಷೆ ಕೊಡಿ’ ಎಂದಾಕೆ ಮೂಲತಃ ತಮಿಳುನಾಡಿನವಳು ಅಂದಿದ್ದೇ ಡೌಟ್ಪಡುವ ವಿಚಾರವಾಗಿತ್ತು. ಯಾಕಂದ್ರೆ ಅವಳು ಪರ್ಫೆಕ್ಟ್ ಆಗಿ ಕನ್ನಡ ಮಾತಾಡುತ್ತಿದ್ದಳು. ಒಂದೇ ದಿನಕ್ಕೆ ಕನ್ನಡ ಕಲಿತುಬಿಟ್ಟೆಯಾ ಎಂದು ಕೇಳಿದರೇ, `ಗೋರಗುಂಟೆಪಾಳ್ಯದಲ್ಲಿ ಸ್ವಲ್ಪದಿನ ಸಂಸಾರ ಮಾಡಿದ್ದೆ’ ಅಂದಳು.
ಇನ್ನು ಮಕ್ಕಳ ವಿಚಾರಕ್ಕೆ ಬನ್ನಿ. ಅವರ ಕಣ್ಣುಗಳಲ್ಲಿ ಆಸೆ, ಆತಂಕ, ಗೊಂದಲ. ಆ ಪುಟ್ಟ ಹೃದಯಕ್ಕೆ ಈ ಸಮಾಜದ ಪಿತೂರಿಯ ಅರಿವಿಲ್ಲ. ಅರಿವಾಗುವುದೂ ಇಲ್ಲ. ಕೈಯಲ್ಲಿ ತಟ್ಟೆ, ಕಣ್ಣಲ್ಲಿ ಆಸೆ, ಚಿಲ್ರೆ ಕಾಸು ಹಾಕುವ ಮಂದಿಯ ಬೆದರುನೋಟಕ್ಕೆ ಅಂಜುತ್ತಲೇ ಕೈ ಚಾಚುವ ಮಕ್ಕಳು ಈ ದೇಶದಲ್ಲಿ ಎಲ್ಲಿಲ್ಲ ಹೇಳಿ..? ಫುಟ್ಪಾತ್, ಬೀದಿ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಹೇರಳ ಭಿಕ್ಷೆ ಬೇಡುವ ಮಕ್ಕಳು ಕಾಣಿಸುತ್ತಾರೆ. ಮಾಹಿತಿಯ ಪ್ರಕಾರ ಭಿಕ್ಷೆ ಬೇಡುವ ಮಂದಿಯ ಕಂಕುಳಲ್ಲಿ ಮರದ ತುಂಡಿನಂತೆ, ಈ ಜಗತ್ತಿಗೆ ಸಂಬಂಧವೇ ಇಲ್ಲದಂತೆ ಮಲಗುವ ಹಸುಕಂದಮ್ಮಗಳಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಮಲಗಿಸಿಬಿಡುತ್ತಾರೆ ಎಂಬ ಆರೋಪವಿದೆ. ಈ ಮಾತನ್ನು ನಮಗೆ ಹೇಳಿದ್ದು ಬೆಗ್ಗರ್ಸ್ ಮಾಫಿಯಾದವರೇ..!? ಸುಳ್ಳು ಮತ್ತು ಸತ್ಯವನ್ನ ಕೂಲಂಕಷವಾಗಿ ತನಿಖೆ ಮಾಡಬೇಕಾದವರು ಪೊಲೀಸರು.
ಹಸುಗೂಸುಗಳನ್ನು ಬಿರು-ಬಿಸಿಲು ಮಳೆಯೆನ್ನದೇ ಭಿಕ್ಷಾಟನೆಗೆ ಬಳಸಿಕೊಳ್ಳುವುದರಿಂದ, ಮಕ್ಕಳು ಅಪೌಷ್ಟಿಕತೆಯಿಂದ ನರಳುವುದು ನೂರಕ್ಕೆ ನೂರು ಖಚಿತ. ನೆನಪಿರಲಿ ಅಪೌಷ್ಟಿಕತೆ ಅಪಾಯಕಾರಿ. ನಮಗೆ ಬಂದ ಮಾಹಿತಿಯ ಪ್ರಕಾರ ಯಶವಂತಪುರದ ರೈಲ್ವೆ ಟ್ರಾಕ್ ಸಮೀಪ ಇರುವ ಸ್ಲಂ ಒಂದರಲ್ಲಿ ಮಕ್ಕಳ ಮಾರಾಟವಾಗುತ್ತಂತೆ..! ಅರ್ಥಾತ್ ಹಸುಗೂಸುಗಳು ಬಾಡಿಗೆಗೆ ಸಿಗುತ್ತದೆಯಂತೆ..!! ದಿನಕ್ಕೆ ಇಷ್ಟು ಅಂತ ಹಸುಗೂಸುಗಳನ್ನು ಭಿಕ್ಷೆ ಬೇಡುವವರ ಜೊತೆ ಕಳಿಸುವ ಬೆಗ್ಗರ್ ಮಾಫಿಯಾದ ಖತರ್ನಾಕ್ ಮಂದಿ, ಆ ಕಂದಮ್ಮಗಳಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸುತ್ತಾರಂತೆ…! ನೀವೇ ಮಗುವನ್ನು ಎತ್ತಿಕೊಂಡು ಬರುವ ಭಿಕ್ಷುಕರನ್ನು ಗಮನವಿಟ್ಟು ನೋಡಿ, ಎಂಥಾ ಬಿಸಿಲು, ಇರಿಟೆಟಿಂಗ್ ಸಂದರ್ಭದಲ್ಲೂ ಆ ಕಂದಮ್ಮಗಳು ಅಳುವುದಿಲ್ಲ. ಯಾವಾಗಲೂ ನಿದ್ರೆ ಮಾಡುತ್ತಿರುತ್ತವೆ. ಪಿಳಿಪಿಳಿ ಕಣ್ಣುಬಿಟ್ಟರೂ ಅಲ್ಲಿ ಆಯಾಸ ಕಂಡುಬರುತ್ತದೆ. ಅಪಾಯಕಾರಿ ಬೆಳವಣಿಗೆಯ ಕುರುಹು ಎದ್ದುಕಾಣುತ್ತವೆ. ಇಂತಹ ಬೆಳವಣಿಗೆಗಳಿಂದ ನಿಸ್ಸಂಶಯವಾಗಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಾರೆ. ಮಕ್ಕಳ ಷುಗರ್ ಲೆವೆಲ್ ಕಡಿಮೆಯಾಗುತ್ತದೆ. ಲವಣಾಂಶದಲ್ಲಿ ಏರುಪೇರುಂಟಾಗುತ್ತದೆ. ಹಸುಕಂದಮ್ಮಗಳು ಸೋಂಕಿನಿಂದ ನರಳುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದು ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ. ಸೋಮಶೇಕರ್.
ಭಿಕ್ಷಾಟನೆಗೆ ಹತ್ತು ಹಲವು ಮುಖ, ಇದು ನಮ್ಮ ಬೆಂಗಳೂರಿನ ಸಮಸ್ಯೆ ಮಾತ್ರವಲ್ಲ, ನಮ್ಮ ದೇಶದ ಸಮಸ್ಯೆ. ಬೆಗ್ಗರ್ ಮಾಫಿಯಾವನ್ನು ಬುಡಸಮೇತ ನಿರ್ನಾಮ ಮಾಡಬೇಕು. ಪರಿಸ್ಥಿತಿಗೆ ಸಿಲುಕಿ ಭಿಕ್ಷಾಟನೆಗೆ ಇಳಿದವರನ್ನು ಪತ್ತೆ ಹಚ್ಚಿ ಅವರ ಸಮಸ್ಯೆ ಕೇಳಬೇಕು. ಉದ್ದೇಶವೇ ಬೇರೆಯಾದರೇ ಕಾನೂನು ಪ್ರಕಾರ ದಂಡಿಸಬೇಕು. ಇದು ಅಸಾಧ್ಯವೇನಲ್ಲ. ಆದರೆ ನಮ್ಮ ವ್ಯವಸ್ಥೆ ಇನ್ನೂ ನಿದ್ರೆಯಿಂದ ಎದ್ದಿಲ್ಲವಲ್ಲ. ಅದಕ್ಕೇನು ಹೇಳೋಣ ಹೇಳಿ.
POPULAR STORIES :
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!
ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!
KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ಕೋಹ್ಲಿಗೆ ಬಿತ್ತು 24 ಲಕ್ಷ ರೂ ದಂಡ..! ದಂಡ ಕಟ್ಟೋಕೆ ಕಾರಣ ಏನ್ ಗೊತ್ತಾ..?