ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಲೆನಾಡ ಹುಡುಗ

Date:

ಬಾಡಿ ಪವರ್ ಎಕ್ಸ್ ಪೋದಲ್ಲಿ ಭರತ್ ಗೌಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಅವರಾದ ಭರತ್ ಗೌಡ ಅವರು ಹೈದರಾಬಾದ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಟಾಪ್ 4 ರಲ್ಲಿ ಸ್ಥಾನಪಡೆದು ನೇರವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.‌

50 ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಅವರನ್ನು ಹಿಂದಿಕ್ಕಿರುವ ಭರತ್ ಮುಂಬೈಯಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬಾಡಿ ಪವರ್ ಎಕ್ಸ್ಪೋದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

 

(ಭರತ್ ಕುರಿತು 2017 ಸೆಪ್ಟೆಂಬರ್ 26 ರಂದು ಪ್ರಕಟಿಸಿದ್ದ ಲೇಖನ. ಮತ್ತೊಮ್ಮೆ..ಇಲ್ಲಿದೆ)

ಹುಟ್ಟೂರಲ್ಲಿ ಅಂದು ಅವಮಾನ ಇಂದು ಸನ್ಮಾನ…! ಕಾಲೇಜಿನಿಂದ ಡಿಬಾರ್ ಆದ ಮಲೆನಾಡ ಹುಡುಗ ಇವತ್ತು…?
ಯಾರ ಲೈಫ್‍ಗೆ ಎಲ್ಲಿ? ಹೇಗೆ? ಒಂದೊಳ್ಳೆ ಟರ್ನಿಂಗ್ ಪಾಯಿಂಟ್ ಸಿಗುತ್ತೆ ಅಂತ ಯಾರಿಗೂ ಹೇಳಕ್ಕಾಗಲ್ಲ! ಇವತ್ತು ಯಾರಿಗೂ ಬೇಡವಾದವನು ನಾಳೆ ಎಲ್ಲರಿಗೂ ಬೇಕಾದ ಅತ್ಯಮೂಲ್ಯ ವ್ಯಕ್ತಿಯಾಗಬಹುದು! ಅವಮಾನ ಎದುರಿಸಿದ ಜಾಗದಲ್ಲೇ ಮುಂದೊಂದು ದಿನ ಸನ್ಮಾನಿತನೂ ಆಗಬಹುದು! ಒಳ್ಳೆಯತನ, ತಪ್ಪು ಅರಿವಾದಾಗ ತಿದ್ದಿಕೊಂಡು ಮುನ್ನಡೆಯುವ ಗುಣವಿದ್ದು, ಛಲದಿಂದ ಗುರಿಯತ್ತ ನುಗ್ಗಿ ಹೊರಟರೆ ಖಂಡಿತಾ ಯಶಸ್ಸು ಸಿಕ್ಕೇ ಸಿಗುತ್ತೆ! ಇದಕ್ಕೆ ನಮ್ಮ ನಡುವೆಯೇ ಇರುವ ಮಲೆನಾಡ ಹುಡುಗ ಉದಾಹರಣೆಯಾಗಿದ್ದಾನೆ. ಅವನೇ ಭರತ್ ಗೌಡ.


ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಕೋಗಿನ ಬೈಲು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಭರತ್ ಗೌಡ ಇವತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಹುಡುಗ. ಭರತ್ ಮಾಡಲಿಂಗ್ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಾನೆ. ಮಹಾನಗರಿಗಳಲ್ಲಿ ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರೆ ಅಥವಾ ಈ ಕ್ಷೇತ್ರಕ್ಕೆ ಪೂರಕವಾದ ವಾತಾವರಣದಲ್ಲಿ ಬೆಳೆದವರಾಗಿದ್ದರೆ ಅಂತಹ ದೊಡ್ಡ ಸಾಧನೆಯೆಂದು ಬಿಂಬಿಸುವ ಅಗತ್ಯವಿರಲಿಲ್ಲವೇನೋ? ಬಾಲ್ಯದಿಂದಲೂ ಇವನು ಈ ಕ್ಷೇತ್ರದ ಕನಸುಕಂಡು ಎಲ್ಲರ ಪ್ರೋತ್ಸಾಹ ದೊರೆತು ಮಾಡೆಲ್ ಆಗಿದ್ದರೆ ನಾನಿಲ್ಲಿ ಭರತ್ ಬಗ್ಗೆ ಇಷ್ಟು ಬೇಗ ಬರೆಯುತ್ತಿರಲಿಲ್ಲವೇನೋ? ಇವತ್ತು ಭರತ್ ಬಗ್ಗೆ ಬರೆಯಲು ಕಾರಣ ಹಿಂದೆ ಭರತ್ ಎದುರಿಸಿದ ಅವಮಾನಗಳು, ಅಪಹಾಸ್ಯಕ್ಕೀಡದ ದಿನಗಳ ಬಗ್ಗೆ ಒಬ್ಬ ಗೆಳೆಯನಾಗಿ ನಂಗೂ ಗೊತ್ತಿದೆ!


ಕೋಗಿನಬೈಲು ನಾಗೇಶ್ ಮತ್ತು ಪದ್ಮಾವತಿಯವರ ಮುದ್ದಿನ ಮಗ ಭರತ್. ಇವರ ಸಹೋದರಿ ಬಿಂಬ. ಎಲ್‍ಕೆಜಿಯಿಂದ ಹಿಡಿದು ಎಸ್‍ಎಸ್‍ಎಲ್‍ಸಿವರೆಗೆ ಶೃಂಗೇರಿಯ ಜೇಸಿಸ್ ಶಾಲೆಯಲ್ಲಿ ಓದಿದ ಭರತ್, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಮಾಡಿದ. ಬಳಿಕ ಮತ್ತೆ ತವರೂರಿನತ್ತ ಮುಖಮಾಡಿದ ಇವರು ಶೃಂಗೇರಿಯ ಪ್ರತಿಷ್ಠಿತ ಶ್ರೀ ಜಿಸಿಬಿಎಂ ಕಾಲೇಜಿಗೆ ಬಿಕಾಂ ಪದವಿ ಪಡೆಯಲು ಸೇರಿಕೊಳ್ತಾನೆ. ಕಾಲೇಜು ದಿನಗಳೆಂದರೆ ಅಲ್ಲಿ ಆಟ-ಪಾಠದ ಜೊತೆಗೆ ಒಂದಿಷ್ಟು ಕಿರಿಕ್, ಜಗಳ ಎಲ್ಲಾ ಆಗ್ತಿರುತ್ತೆ. ಕಾಲೇಜು ದಿನಗಳಲ್ಲಿ ಓದುವುದರ ಜೊತೆ ಎಂಜಾಯ್ ಕೂಡ ಮಾಡಬೇಕು. ಯಾಕೆಂದ್ರ ಆ ದಿನಗಳು ಮತ್ತೆ ಬಾರವು.
ಈ ಕಿರಿಕ್-ಗಿರಿಕ್ ಎಲ್ಲಾ ಆ ದಿನಗಳಲ್ಲಿ ಕಾಮನ್. ಆದರೆ, ಕೆಲವೊಮ್ಮೆ ಅತಿರೇಕಕ್ಕೆ ಹೋದಲ್ಲಿ ಕಷ್ಟ. ಜೊತೆಗಿದ್ದು ನಗ್ತಾ ನಗ್ತಾ ಇರೋರು ಬೆನ್ನಿಗೆ ಚೂರಿನೂ ಹಾಕಬಹುದಲ್ಲವೇ?


ಭರತ್ ಜೀವನದಲ್ಲೂ ಹೀಗೆ ಆಯಿತು. ಭರತ್ ಗೆಳೆಯರೆನಿಸಿಕೊಂಡವರ ಜೊತೆ ಸೇರಿ ಕಾಲೇಜಿನಲ್ಲಿ ಕಿರಿಕ್ ಮಾಡಿದ, ಗಲಾಟೆ ಮಾಡಿದ. ಪರಿಣಾಮ ಮೊದಲ ವರ್ಷದ ಪದವಿಯೇ ಕೊನೆಯಾಯ್ತು! ಕಾಲೇಜಿಂದ ಡಿಬಾರ್ ಆದ. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕರೆಸ್‍ಪಾಂಡೆಂಟ್ಸ್‍ನಲ್ಲಿ 2 ಮತ್ತು 3ನೇ ವರ್ಷದ ಬಿಕಾಂ ಮುಗಿಸಿದ ಎನ್ನುವುದು ಬೇರೆ ವಿಷಯ.


ಜೆಸಿಬಿಎಂ ಕಾಲೇಜಿನಿಂದ ಪ್ರಥಮ ವರ್ಷದ ಬಿಕಾಂ ಮುಗಿದ ಬಳಿಕ ಡಿಬಾರ್ ಆದ ಭರತ್ ತನ್ನೂರಿನಲ್ಲಿ ಭಾರಿ ಅವಮಾನ ಎದುರಿಸಿದ. ಹತ್ತಿರದವರಿಂದಲೇ ಅಪಹಾಸ್ಯಕ್ಕೀಡಾದ. ಇವನನ್ನು ಸಮಾಧಾನ ಪಡಿಸಿ, ಮತ್ತೊಂದು ಅವಕಾಶ ಕಲ್ಪಿಸಿ ಕೊಡುವ ಕೆಲಸವನ್ನು ಯಾರೂ ಮಾಡಲಿಲ್ಲ. ಸಿಕ್ಕಾಪಟ್ಟೆ ಮಾನಸಿಕ ನೋವು ಅನುಭವಿಸಿದ. ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಸರಗೊಂಡ. ದಿನ ದಿನ ಚುಚ್ಚು ಮಾತುಗಳು ಹೆಚ್ಚಾಗಿ ಕೇಳಬರ ತೊಡಗಿದವು. ಆಗ ಭರತ್ ನಾನಿಲ್ಲಿ ಇರುವುದೇ ಬೇಡ ಎಂದು ಹೊಸ ಬದುಕನ್ನು ಹುಡುಕಿಕೊಂಡು ರಾಜಧಾನಿ ಬೆಂಗಳೂರಿನತ್ತ ಹೊರಟ.


ಬೆಂಗಳೂರಿಗೆ ಬಂದ ಮೇಲೆ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆಯೇ? ಸಾಧ್ಯವಿಲ್ಲ. ಅಪರಿಚಿತ ಊರಲ್ಲಿ ಒಂದು ತುತ್ತು ಊಟ ಸಿಗುವುದೂ ಕಷ್ಟ! ಭರತ್ ಸಾಕಷ್ಟು ಕಷ್ಟಗಳು ಎದುರಿಸಿದ. ನಿಜ ಹೇಳಬೇಕೆಂದರೆ ದುರ್ಬಲ ಮನಸ್ಸಿನವರಾಗಿದ್ದರೆ ಅವತ್ತೇ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ತಾ ಇದ್ರೇನೋ? ಆದರೆ, ಭರತ್ ಸೋಲನ್ನೇ ಸೋಲಿಸುವ ನಿರ್ಧಾರ ತೆಗೆದುಕೊಂಡ. ಹೋಟೆಲ್ ಸೇರಿದಂತೆ ಹತ್ತು ಹಲವು ಕಡೆಗಳಲ್ಲಿ ಕೆಲಸ ಮಾಡಿದ. ಕಷ್ಟಪಟ್ಟ.


ನಂತರ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೆವೆಟ್ ಲಿಮಿಟೆಡ್‍ನ ಕೃಷ್ಣದಾಸ್ ಎಂಬುವವರ ಪರಿಚಯ ಆಗುತ್ತೆ. ಅವರು ಭರತ್‍ಗೆ ಬೆನ್ನೆಲುಬಾಗಿ ನಿಲ್ತಾರೆ. ಭರತ್ ದೇಹದಾಡ್ರ್ಯ ಪ್ರದರ್ಶನದಲ್ಲಿ ಭಾಗಿಯಾಗಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಫಿಟ್‍ನೆಸ್ ಮಾಡೆಲ್ ಆಗಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ಫಿಟ್ನೆಸ್ ಇನ್ಸ್ಟ್ರಕ್ಟರ್ ಆಗಿ ಫಿಟ್‍ನೆಸ್ ಒನ್, ಸ್ನ್ಯಾಪ್ ಫಿಟ್‍ನೆಸ್, ಗೋಲ್ಡ್ಸ್ ಜಿಮ್, ಗುಡ್‍ಲೈಫ್ ಫಿಟ್‍ನೆಸ್‍ನಲ್ಲಿ ವರ್ಕ್ ಮಾಡಿದ. ಇದೀಗ ಫಿಟ್‍ನೆಸ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸ್ತಾ ಇದ್ದಾನೆ.


ಇವನ ಪರಿಶ್ರಮಕ್ಕೆ ಹತ್ತು ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಜೆರಾಯ್ ಮೇಲ್ ಮಾಡೆಲ್ ನಲ್ಲಿ 4ನೇ ಸ್ಥಾನ ಪಡೆದಿದ್ದಾನೆ. ಮುಂಬೈಯಲ್ಲಿ ನಡೆದ ಬಾಡಿ ಪವರ್ ಎಕ್ಸ್‍ಪೋ ಕರ್ನಾಟಕದಲ್ಲಿ ಜಯಗಳಿಸಿದ್ದಾನೆ. ಇತ್ತೀಚೆಗೆ ಮಿ. ಇಂಡಿಯಾ ಮೇಲ್ ಮಾಡೆಲ್ ಸ್ಪರ್ಧೆಯಲ್ಲಿ ನಮ್ಮ ಕರ್ನಾಟಕವನ್ನು ಪ್ರತಿನಿಧಿಸಿದ ಹಿರಿಮೆ ಇವನದ್ದು. ಪ್ರತಿಷ್ಠಿತ ಎಡ್ ಹಾರ್ಡಿ ಗಾರ್ಮೆಂಟ್ಸ್ ಬ್ರಾಂಡ್ ಗೆ ಭಾರತದ ಮೇಲ್ ಮಾಡೆಲ್ ಆಗಿ ಆಯ್ಕೆಯಾಗಿದ್ದಾನೆ. ಇವೆಲ್ಲಾ ಕೇವಲ ಉದಾಹರಣೆ ಮಾತ್ರ. ಇನ್ನು ನಾನಾ ಕಡೆಗಳಲ್ಲಿ ಭರತ್ ಮಿಂಚಿದ್ದಾನೆ.
ಸುದ್ದಿ ಟಿವಿಯಲ್ಲ್ಲಿ ಫಿಟ್ನೆಸ್ ಗುರು ಎಂಬ ಕಾರ್ಯಕ್ರಮ ನಡೆಸಿಕೊಡತ್ತಿರುವ ಭರತ್ ಫಿಟ್ನೆಸ್ ಸೆಂಟರ್ ನ ಓಪನ್ ಮಾಡಲು ಮುಂದಾಗಿದ್ದಾನೆ. ಇದರ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಫಿಟ್ನೆಸ್ ಮಾಡಲ್ ಆಗಿ ಭಾರತವನ್ನು ಪ್ರತಿನಿಧಿಸಬೇಕೆಂಬ ಗುರಿಯನ್ನಿಟ್ಟುಕೊಂಡಿರುವ ಗೆಳೆಯ ಭರತ್‍ಗೆ ಶುಭವಾಗಲಿ. ಈಗ ತಾನು ಅವಮಾನಕ್ಕೀಡದ ಊರಲ್ಲೇ, ಕಾಲೇಜಿನಲ್ಲೇ ಸನ್ಮಾನ ಸ್ವೀಕರಿಸಿದ ಹೆಗ್ಗಳಿಕೆ ಭರತ್‍ನದ್ದು.
ಅವಮಾನ, ಅಪಹಾಸ್ಯವನ್ನು ಮೆಟ್ಟಿನಿಂತು ಗೆಲ್ಲಬೇಕೆಂಬ ಹಠದಲ್ಲಿ ಮುನ್ನುಗ್ಗಲು ನಿಜಕ್ಕೂ ಭರತ್ ಎಲ್ಲರಿಗೂ ಸ್ಪೂರ್ತಿ.
-ಶಶಿಧರ್ ಎಸ್ ದೋಣಿಹಕ್ಲು

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...