ಬೋಪಾಲ್ ನ ಘನಘೋರ ಅನಿಲ ದುರಂತ ನಡೆದದ್ದು ಡಿಸೆಂಬರ್ 3ನೇ ತಾರೀಕು. ದುರಂತಕ್ಕೆ ಕಾರಣವಾಗಿದ್ದು ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಕಂಪನಿ. ಅವತ್ತಿಗೆ ಅದು ಸಾವಿನ ಮನೆ. ವಾರೆನ್ ಆಂಡರ್ ಸನ್ ಯೂನಿಯನ್ ಕಾರ್ಬೈಡ್ ನ ಮುಖ್ಯಸ್ತನಾಗಿದ್ದ. ಅದೊಂದು ಬಹುರಾಷ್ಟ್ರೀಯ ಕಂಪನಿ. ಕೀಟನಾಶಕ ಹಾಗೂ ರಸಗೊಬ್ಬರ ಕಾರ್ಖಾನೆಯಾಗಿತ್ತು. 1969ರಲ್ಲಿ ಈ ಕಾರ್ಖಾನೆ ಸ್ಥಾಪಿತವಾಗಿತ್ತು. ಆದರೆ 1984ರಲ್ಲಿ ಅನಿಲಸೋರಿಕೆಯಾಗಿ ಆಗಬಾರದ ದುರಂತ ಸಂಭವಿಸಿಹೋಯಿತು. ಪಾಪದ ಜೀವಗಳು ವಿಲಗುಟ್ಟಿಹೋದವು. ಸಾವಿರಾರು ಜನರ ಉಸಿರನ್ನು ಮಿಥೇಲ್ ಐಸೋಸೈನೆಟ್ ಹಾಗೂ ಲೀಥೆಲ್ ಎಂಬ ವಿಷಾನಿಲ ಜಂಟಿಯಾಗಿ ನಿಲ್ಲಿಸಿಬಿಟ್ಟಿತ್ತು. ಅದೊಂದು ಉದ್ದೇಶಪೂರ್ವಕ ಕೃತ್ಯವೋ..? ಅಥವಾ ಆಕಸ್ಮಿಕವೋ..? ಇವತ್ತಿಗೂ ಬಹಿರಂಗವಾಗಿಲ್ಲ. ಆದರೆ ವಿಷಾನಿಲ ಹರಡಿಕೊಳ್ಳುತ್ತಿದ್ದಂತೆ ಜನರು ಸಾಮೂಹಿಕವಾಗಿ ಕೆಮ್ಮತೊಡಗಿದರು. ಗಂಟಲೊಳಗೆ ಬೆಂಕಿ ಉರಿದಂತೆ ನರಳತೊಡಗಿದರು. ಉರಿ ತಾಳಲಾಗದೇ ಕಣ್ಣು ಕೆಂಪಾಗಿ ನೀರು ಸುರಿಯತೊಡಗಿತ್ತು. ಎದೆ ಹಿಡಿದುಕೊಂಡು ಕಾರ್ಖಾನೆಯಿಂದ ಹೊರಗೋಡಿ ಬರುತ್ತಿದ್ದಂತೆ ಒಬ್ಬೊಬ್ಬರೇ ಬಿದ್ದು ಸಾಯತೊಡಗಿದರು. ಕಾರ್ಖಾನೆಯ ಅಕ್ಕಪಕ್ಕದ ನಿವಾಸಿಗಳು ಕೂಡ, ತಮ್ಮದಲ್ಲದ ತಪ್ಪಿಗೆ ಸಾವಿಗೀಡಾದರು. ವಯಸ್ಸಾದವರು ಹಾಸಿಗೆಯಲ್ಲಿ ಮಲಗಿದಂತೆ ಸಾವಿಗೀಡಾದರು. ಗರ್ಭೀಣಿಯರು ಗರ್ಭಪಾತದಿಂದ ಸಾವೀಗೀಡಾದರು. ಆಸ್ಪತ್ರೆಯಲ್ಲಿ ಜನಿಸಿ ಆಗತಾನೆ ಕಣ್ಣುಬಿಟ್ಟು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿದ್ದ ಕಂದಮ್ಮಗಳು ತಮಗರಿವಿಲ್ಲದೆ ನರಳಿಸತ್ತವು. ವಿಷಾನಿಲ ಯಾವ ಯಾವ ದಿಕ್ಕುಗಳನ್ನು ಹೊಕ್ಕಿತೋ ಅಲ್ಲೆಲ್ಲಾ ಹೆಣಗಳು ಉರುಳಿದವು.
ದಾರಿಯಲ್ಲಿ ಹೋಗುತ್ತಿದ್ದವರು, ಬೀದಿಯಲ್ಲಿ ಮಲಗಿದವರು ಎಲ್ಲರೂ ಸತ್ತರು. ಕೆಲವರು ದಿಗ್ಭ್ರಾಂತರಾಗಿ ಏನು ಅರ್ಥವಾಗದೇ ಅನಿಲ ಸೋರಿಕೆಯಾಗುತ್ತಿದ್ದ ಕಡೆಯೇ ಓಡಿ ಸತ್ತರು. ಕಾಲ್ತುಳಿತಕ್ಕೀಡಾಗಿ ಸತ್ತರು. ಸಾವಿರಾರು ಜನರು ಗಾಯಗೊಂಡರು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಭೋಪಾಲ್ನಲ್ಲಿ ರಾಶಿ-ರಾಶಿ ಹೆಣಗಳು. ಲೆಕ್ಕ ಹಾಕಿದಾಗ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹೆಣಗಳು ಬಿದ್ದಿದ್ದವು. ಒಟ್ಟು ಲಕ್ಷಾಂತರ ಜನರು ಖಾಯಿಲೆ ಬಿದ್ದರು. ರಸ್ತೆಯಲ್ಲಿ ರಕ್ತವಾಂತಿಯೇ ಹರಿದುಹೋಗಿತ್ತು. ಅವರಿಗೆ ಚಿಕಿತ್ಸೆ ಕೊಡಲು ವೈದ್ಯರು ಇರಲಿಲ್ಲ. ಏಕೆಂದರೇ ಅವರೂ ಸತ್ತು ಹೋಗಿದ್ದರು. ಹೆಣಗಳನ್ನು ಎತ್ತುವವರೂ ಇರಲಿಲ್ಲ. ಊರಿಗೆ ಊರೇ ಸ್ಮಶಾನವಾಗಿತ್ತು. ಆದರೆ ಅನಿಲ ದುರಂತದ ಎಫೆಕ್ಟ್ ಇಲ್ಲಿಗೆ ಮುಗಿದಿಲ್ಲ. ಇವತ್ತಿಗೂ ದಿನಕ್ಕೆ ಕಡಿಮೆಯೆಂದರೂ ಐದರಿಂದ ಹತ್ತು ಜನರು ಸಾಯುತ್ತಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅದೆಷ್ಟು ಮಂದಿ ಸತ್ತಿದ್ದಾರೋ ಲೆಕ್ಕವಿಟ್ಟವರಿಲ್ಲ.
ಅಲ್ಲಿ ಜನಿಸುವ ಮಕ್ಕಳು ಇವತ್ತಿಗೂ ಅಂಗವೈಕಲ್ಯ, ಮಾನಸಿಕ ಅಸ್ವಸ್ಥತೆ, ಇತರೆ ಖಾಯಿಲೆಗಳಿಂದ ನರಳುತ್ತಿದ್ದಾರೆ. ಅಂದಾಜು ಐದು ಲಕ್ಷಕ್ಕೂ ಹೆಚ್ಚು ಜನರು ಇಲ್ಲಿಯವರೆಗೆ ಈ ಬಾಧೆಯನ್ನು ಅನುಭವಿಸಿದ್ದಾರೆ. ಇಷ್ಟೆಲ್ಲಾ ಆದರೂ ಸಕರ್ಾರ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಪ್ರಮುಖ ಆರೋಪಿ ವಾರೆನ್ ಆಂಡರ್ಸನ್ನನ್ನು ಶಿಕ್ಷಿಸಲಿಲ್ಲ. ಪರಿಹಾರದ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. 1998ರಿಂದ ಭೋಪಾಲ್ ಅನಿಲ ದುರಂತದ ದಿನವಾದ ಡಿಸೆಂಬರ್ ಮೂರನೇ ತಾರೀಕಿನಿಂದ, ಡಿಸೆಂಬರ್ ಹತ್ತರವರೆಗೆ ವಿಶ್ವ ಕೀಟನಾಶಕರಹಿತ ಸಪ್ತಾಹ ಆಚರಿಸಲಾಗುತ್ತಿದೆ. ಅಷ್ಟರ ಮಟ್ಟಿಗೆ ದುರಂತವನ್ನು ಕಾಯ್ದಿರಿಸಿಕೊಂಡಿದ್ದೇವೆ.
ವಾರೆನ್ ಅಂಡರ್ಸನ್. ಬೋಪಾಲ್ ಅನಿಲ ದುರಂತದ ಕಾರಣಕರ್ತ. ಅಮೆರಿಕಾದ ಉದ್ಯಮಿ. ಆತ ಭಾರತದಲ್ಲಿ ಬಹುರಾಷ್ಟ್ರೀಯ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರ ತಯಾರಿಕ ಕಾರ್ಖಾನೆ ಯೂನಿಯನ್ ಕಾರ್ಬಯ್ಡ್ ಕಾರ್ಪೋರೇಷನ್ ಕೆಮಿಕಲ್ ಕಂಪೆನಿಯನ್ನು ತೆರೆಯುತ್ತಾನೆ. ಇದು 1969ರಲ್ಲಿ ಭೋಪಾಲ್ನಲ್ಲಿ ಶುರುವಾಗುತ್ತದೆ. ಹೀಗಿರುವಾಗ ಡಿಸೆಂಬರ್ 3ನೇ ತಾರೀಖು 1984ರ ಮದ್ಯರಾತ್ರಿ ಇದ್ದಕ್ಕಿದ್ದಂತೆ ವಿಷಾನಿಲ ಗಾಳಿಯಲ್ಲಿ ಹರಡಿತ್ತು. ಜನರು ವಿಷಯುಕ್ತ ಗಾಳಿ ಸೇವಿಸುತ್ತಿದ್ದಂತೆ ಎಚ್ಚರತಪ್ಪಿಬೀಳತೊಡಗಿದರು. ಮರುಕ್ಷಣದಲ್ಲೇ ಹೆಣವಾಗಿ ಬಿಟ್ಟಿದ್ದರು. ಇಡೀ ಊರಿಗೆ ಊರೇ ಸ್ಮಶಾನವಾಗಿತ್ತು. ಕಾರ್ಖಾನೆಯಲ್ಲಿ ಕೀಟನಾಶಕ ಹಾಗೂ ಗೊಬ್ಬರ ತಯಾರಿಸಲು ಬಳಸುತ್ತಿದ್ದ ಮಿಥೇಲ್ ಐಸೋಸೈನೇಟ್ ಮತ್ತು ಲೀಥೆಲ್ ಎಂಬ ವಿಷಾನಿಲ ಸೋರಿಕೆಯಾಗಿ ದೊಡ್ಡ ದುರಂತವನ್ನೇ ಸೃಷ್ಟಿಸಿತ್ತು.
ವಿಷಾನಿಲದ ಯಮನರ್ತನಕ್ಕೆ ಬಲಿಯಾದವರು 25,000ಕ್ಕೂ ಹೆಚ್ಚು ಮಂದಿ. ಈ ಘಟನೆಗೆ ಕಾರಣಕರ್ತನಾದ ವಾರೆನ್ ದುರಂತ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದ. ಅದಾಗಿ ನಾಲ್ಕು ದಿನಕ್ಕೆ ಆತನನ್ನು ಭೋಪಾಲ್ನಲ್ಲಿ ಬಂಧಿಸಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದ್ದ ಕೊಠಡಿಯಲ್ಲಿದ್ದ ಸ್ಥಿರ ದೂರವಾಣಿಯನ್ನು ಬಳಸಿಕೊಂಡು ಅಮೆರಿಕಾಕ್ಕೆ ಹೋದ. ಅವತ್ತು ವಾರೆನ್ ವಿರುದ್ಧ ಕ್ರಮ ಕೈಗೊಳ್ಳದಂತೆ ವಿದೇಶಾಂಗ ಸಚಿವಾಲಯ ಸಿಬಿಐ ಮೇಲೆ ಒತ್ತಡ ಹೇರಿತ್ತು ಎಂದು ಸ್ವತಃ ಅಂದಿನ ಸಿಬಿಐ ಮಾಜಿ ನಿರ್ದೇಶಕ ಬಿ. ಆರ್. ಲಾಲ್ ಆರೋಪಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋದವನು ಮತ್ತೆ ಭಾರತದ ಕೈಗೆ ಸಿಗಲಿಲ್ಲ. ಅಂಡರ್ಸನ್ ಇದ್ದ ಕೊಠಡಿಯಲ್ಲಿದ್ದ ಸ್ಥಿರ ದೂರವಾಣಿಯ ಸಂಪರ್ಕ ಕಿತ್ತು ಹಾಕಿದ್ದಲ್ಲಿ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆತ ಬಹುಶಃ ಆ ಫೋನ್ ಮುಖಾಂತರ ಅಂದಿನ ಪ್ರಧಾನಿ ರಾಜೀವ್ ಗಾಂಧಿಯ ಆಪ್ತರನ್ನು ಸಂಪರ್ಕಿಸಿ, ಅಮೆರಿಕ ರಾಯಭಾರಿ ಕಚೇರಿಯ ನೆರವಿನಿಂದ ಕೆಲವೇ ಘಂಟೆಗಳಲ್ಲಿ ಅಮೆರಿಕಾಕ್ಕೆ ಎಸ್ಕೇಪ್ ಆಗಿದ್ದ. ಹಾಗಂತ ಅಂದಿನ ಭೋಪಾಲ್ನ ಜಿಲ್ಲಾಧಿಕಾರಿ ಮೋತಿ ಸಿಂಗ್ ಹೇಳಿದ್ದರು.
ಈಗ್ಗೆ ಎರಡು ವರ್ಷದ ಹಿಂದೆ ಈ ದುರಂತ ಸಂಭವಿಸಿ 30 ವರ್ಷ ಕಳೆದರೂ ಪ್ರಮುಖ ಆರೋಪಿಗಳಿಗೆ ಶಿಕ್ಷೆ ಆಗಿರಲಿಲ್ಲ. ಅದರಲ್ಲೂ ಪ್ರಮುಖ ಆರೋಪಿ ವಾರೆನ್ಗಂತೂ ಶಿಕ್ಷೆ ಎಂಬುದು ಅವನ ಹಣೆಯಲ್ಲೇ ಬರೆದಿರಲಿಲ್ಲ. ಏಕೆಂದರೇ 2014ರ ಸೆಪ್ಟೆಂಬರ್ 29ರಂದು 93 ವರ್ಷದ ವಾರೆನ್ ಅಂಡರ್ಸನ್ ತನ್ನ ಅಮೇರಿಕಾದ ನಿವಾಸದಲ್ಲಿ ಮೃತಪಟ್ಟಿದ್ದ. ಘನಘೋರ ದುರಂತದ ಹಿಂದಿದ್ದ ಈತನನ್ನು ಒಂದೇಒಂದು ಬಾರಿ ಭಾರತಕ್ಕೆ ಕರೆಸಿ ವಿಚಾರಣೆ ಮಾಡುವಷ್ಟು ದಮ್ಮು ನಮ್ಮ ಸರ್ಕಾರಕ್ಕಿರಲಿಲ್ಲ. ಸ್ವಿಡಿಷ್ ಮೂಲದ ವಲಸಿಗರ ಕುಟುಂಬಕ್ಕೆ ಸೇರಿದ್ದ ಆಂಡರ್ಸನ್ ನವಂಬರ್ 21ರಂದು ಬ್ರೂಕ್ಲೀನ್ನಲ್ಲಿ ಜನಿಸಿದ. ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದ ಈತ ಸತ್ತಾಗ ಮಾತ್ರ ಸುದ್ದಿಯೇ ಆಗಲಿಲ್ಲ. ಆತನ ಪತ್ನಿ ಲಿಲಿಯಾನ್ ಈತ ಸತ್ತಿದ್ದನ್ನು ಯಾರಿಗೂ ತಿಳಿಸಲಿಲ್ಲ. ಪ್ರಮುಖ ಸುದ್ದಿ ಮಾಧ್ಯಮಗಳಿಗೆ ವಿಷಯ ಮುಟ್ಟಿದ್ದೇ ಆತ ಸತ್ತು ಐದು ತಿಂಗಳು ಕಳೆದ ನಂತರ..! ಭಾರತದ ವಾಂಟೆಡ್ ಲಿಸ್ಟ್ ನಲ್ಲಿ ಈಗಲೂ ಈತನ ಹೆಸರಿದೆ. ಆತ ಸಾಯುವವರೆಗೂ ವಾರೆಂಟ್ ಜಾರಿಯಾಗುತ್ತಲೇ ಇತ್ತು. ಈಗಲೂ ಅರೆಬೆಂದ ಸ್ಥಿತಿಯಲ್ಲಿ ಜೀವಂತ ಶವಗಳಂತೆ ಬದುಕುತ್ತಿರುವ ಭೋಪಾಲ್ನ ಜನಕ್ಕೆ ನ್ಯಾಯ ಎನ್ನುವುದು ಹಣಬಲದ ಮುಂದೆ ಬೆತ್ತಲಾಗಿದೆ.
ಅವತ್ತು ದುರಂತದಲ್ಲಿ ಮಡಿದ ಕುಟುಂಬ ಸದಸ್ಯರಿಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಕಂಪನಿ ಮುಂದಾಗಿದ್ದರೂ ಅದು ಕೇವಲ ವಿಮೆಯ ಹಣ ಮಾತ್ರವಾಗಿತ್ತು. ಈ ವಿವಾದ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಬಡ್ಡಿ ಹಣ ಸೇರಿಸಿ ಕಂಪನಿ ಪರಿಹಾರ ನೀಡಲು ನಿಗಧಿಗೊಳಿಸಿದ್ದ ಒಟ್ಟು ಮೊತ್ತ 470 ದಶಲಕ್ಷ ಡಾಲರ್. ಅಂದರೆ ೫ ರಿಂದ ೧೦ ಲಕ್ಷ ಪರಿಹಾರ ನೀಡಬೇಕೆಂದು ಹೇಳಲಾಗಿತ್ತು. ಆದರೆ ನಮ್ಮ ನ್ಯಾಯಾಲಯ ಕೇವಲ 25,000 ರೂಪಾಯಿ ಶ್ಯೂರಿಟಿ ಪಡೆದು ಆಂಡರ್ಸನ್ಗೆ ಜಾಮೀನು ನೀಡಿತ್ತು. ಅಲ್ಲಿನ ಸಂತ್ರಸ್ತ್ರರಿಗೆ ವಾರೆನ್ಗಿಂತಲೂ ನಮ್ಮ ದೇಶದ ಸರ್ಕಾರಗಳು ಮಾಡಿದ್ದು ಅತೀದೊಡ್ಡ ದೋಖಾ. ಅನಿಲ ದುರಂತದಲ್ಲಿ ನೊಂದವರೆಲ್ಲರ ಪರವಾಗಿ ಯೂನಿಯನ್ ಕಾರ್ಬಯ್ಡ್, ಆ ಕಂಪನಿಯಿಂದ 3.3 ಲಕ್ಷಕೋಟಿ ಡಾಲರ್ ಪರಿಹಾರವನ್ನು ಬೇಡಿತ್ತು. ಆದರೆ ದಕ್ಕಿದ್ದು ಕೇವಲ 470 ದಶಲಕ್ಷ ಡಾಲರ್ ಮಾತ್ರ. ಬೇಡಿಕೆ ಮೊತ್ತಕ್ಕೆ ಯೂನಿಯನ್ ಕಾರ್ಬಯ್ಡ್ ಜೊತೆ ಕೇಂದ್ರ ಸರ್ಕಾರವು ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪರಿಣಾಮವಾಗಿ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಹೊಣೆಗಾರಿಕೆಯಿಂದ ಯೂನಿಯನ್ ಕಾರ್ಬೈಡ್ ಅನ್ನು ಮುಕ್ತಮಾಡುವ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಭಾಗವಾಗಿ ಮಾಡಲಾಗಿತ್ತು. ಈ ಒಪ್ಪಂದವಾದಾಗ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿದ್ದ ರಾಮ್ ಜೇಠ್ಮಲಾನಿ ಮಾಡಿದ ಟೀಕೆ ಗಮನಾರ್ಹ. ನ್ಯಾಯಾಲಯ ಹಾಗೂ ಕಂಪನಿ ಮಾಡಿಕೊಂಡ ಈ ಒಪ್ಪಂದದ ಹಿಂದೆ ಬೃಹತ್ ಭ್ರಷ್ಟಾಚಾರ ಆಡಗಿದೆ ಎಂದು ಜೇಠ್ಮಲಾನಿ ಆರೋಪಿಸಿದ್ದರು.
ಈ ದುರಂತ ನಡೆದು ದಶಕಗಳೇ ಉರುಳಿದರೂ ಕಾರ್ಖಾನೆಯ ಸುತ್ತಮುತ್ತ ಬಿದ್ದಿರುವ 350 ಮೆಟ್ರಿಕ್ ಟನ್ ತ್ಯಾಜ್ಯ ಇನ್ನೂ ವಿಲೇವಾರಿಯಾಗಿಲ್ಲ. ಮಧ್ಯಪ್ರದೇಶದ ಸರಕಾರಗಳು ನೀಡಿದ ಭರವಸೆಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಹೀಗಾಗಿ ಇಡೀ ಪ್ರದೇಶದ ನೆಲ-ಜಲ ಕಲುಷಿತಗೊಂಡಿವೆ. ಇಂದಿನ ಪೀಳಿಗೆಯಲ್ಲೂ ಅಂಗವೈಕಲ್ಯ ಸಮಸ್ಯೆ ಕಂಡು ಬರುತ್ತಿದೆ ಎಂದು ಭೋಪಾಲ್ ಅನಿಲ ಪೀಡಿತ ಮಹಿಳಾ ಉದ್ಯೋಗ ಸಂಘ ಆರೋಪಿಸಿದೆ. ಮೊದಲು ಈ ತ್ಯಾಜ್ಯವನ್ನು ಗುಜರಾತ್ನ ಅಂಕಲೇಶ್ವರ ಹಾಗೂ ಪೀತಾಮ್ಪುರದಲ್ಲಿ ವಿಲೇವಾರಿ ಮಾಡಲು ಮಧ್ಯಪ್ರದೇಶ ಸರಕಾರ ಚಿಂತಿಸಿತ್ತು. ಇದಕ್ಕೆ ಉಭಯ ರಾಜ್ಯಗಳು ಸಮ್ಮತಿ ಸೂಚಿಸಿದ್ದವು. ಆದರೆ ಕ್ರಮೇಣ ತನ್ನ ನೆಲದಲ್ಲಿ ನಡೆದ ಪರಿಸರ ಹೋರಾಟದ ಪರಿಣಾಮ ಗುಜರಾತ್ ಸರಕಾರ ವಿಲೇವಾರಿಗೆ ವಿರೋಧವ್ಯಕ್ತಪಡಿಸಿತ್ತು. ಇದಾದ ನಂತರ ಕೇಂದ್ರಸರ್ಕಾರ ತ್ಯಾಜ್ಯ ಹೊರಸಾಗಿಸಲು ಜರ್ಮನಿ ಕಂಪನಿ ಗೀಜ್ ಗೆ ಅನುಮತಿ ನೀಡಿತ್ತು. ಇದಕ್ಕಾಗಿ ಕಂಪನಿ 4 ಸಾವಿರ ಪೆಟ್ಟಿಗೆಗಳು ಬೇಕು ಎಂದು ಹೇಳಿತ್ತು. ಆದರೆ ಮುಂದೇನಾಯಿತು ಎನ್ನುವುದು ಯಾರಿಗೂ ಗೊತ್ತಿಲ್ಲ.
POPULAR STORIES :
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?