ಶೋಕಿಗಾಗಿ ಸಿನಿಮಾ; ಇಂಥಾ ಸೋ ಕಾಲ್ಡ್ ಡೈರೆಕ್ಟರ್‍ಗಳಿಂದಲೇ ಸಿನಿರಂಗ ಹಾಳಾಗ್ತಿರೋದು…!

Date:

ಶ್ರಮವಿಲ್ಲದೆ ದಕ್ಕುವ ವಸ್ತುವಲ್ಲ ಯಶಸ್ಸು. ಅದು ನಿರಂತರ ಪರಿಶ್ರಮದ ಫಲ…! ನಾವು ಯಾವುದೇ ಕೆಲಸವನ್ನು ಮಾಡಿದ್ರು ಅದರಲ್ಲಿ ಪರಿಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಶೋಕಿಗಾಗಿ ಯಾವುದನ್ನು ಮಾಡಬಾರದು…!ತಿರ್ಪೆ ಶೋಕಿಗಾಗಿ ಏನ್ ಮಾಡಿದ್ರೂ ಉದ್ಧಾರ ಆಗಲ್ಲ.


ನಮ್ ಚಿತ್ರರಂಗ ಯಕ್ಕುಟ್ಟು ಹೋಗ್ತಾ ಇರೋದಕ್ಕೆ ಮೊಟ್ಟ ಮೊದಲ ಕಾರಣವೇ ಈ ಹುಚ್ಚು ಶೋಕಿ. ಕ್ಷೇತ್ರದ ಬಗ್ಗೆ ಗಂಧಗಾಳಿ ಗೊತ್ತಿರದೆ ಸಿನಿಮಾ ಮಾಡ್ತೀವಿ ಅಂತ ಬಂದು ಕಲೆಯನ್ನು ಕೊಲೆ ಮಾಡ್ತಾರೆ. ಅವ್ರುಗಳು ಬೇಕಾಬಿಟ್ಟಿ ಮಾಡಿದ ಸಿನಿಮಾವನ್ನು ಒಮ್ಮೆ ನೋಡಿದ ವೀಕ್ಷಕ ಮತ್ತೆ ಹೊಸಬರ ಚಿತ್ರಗಳಿಗೆ ಥಿಯೇಟರ್ ಹತ್ತಿರ ಸುಳಿಯೋಕೆ ಯೋಚ್ನೆ ಮಾಡ್ತಾನೆ…! ಯೋಚ್ನೆ ಮಾಡೋದೇನ್ ಬಂತು ಬರೋದೇ ಇಲ್ಲ.


ನಟನೆ, ನಿರ್ದೇಶನ ಎಲ್ಲವೂ ಒಂದು ಕಲೆ. ಅದು ರಕ್ತಗತವಾಗಿ ಬರದೇ ಇದ್ದರೂ ಅದನ್ನು ನಿರಂತರ ತಪಸ್ಸಿನಿಂದ ಸಿದ್ಧಿಸಿಕೊಳ್ಬೇಕು. ತರಬೇತಿ ಪಡೀಬೇಕು. ಅನುಭವಿಗಳ ಕೈಕೆಳಗೆ ಒಂದಿಷ್ಟು ಕೆಲಸ ಮಾಡ್ಬೇಕು. ಆದ್ರೆ, ಇವತ್ತು ಎಷ್ಟು ಮಂದಿ ನಿರ್ದೇಶಕರು ಬೇರೊಬ್ಬರ ಕೈಕೆಳಗೆ ಕೆಲಸ ಮಾಡಿ ಅನುಭವ ಪಡೆದಿದ್ದಾರೆ? ತರಗತಿ ಅಟೆಂಡ್ ಮಾಡಿ ಅಷ್ಟೋ ಇಷ್ಟೋ ಕಲಿತ್ತಿದ್ದಾರೆ…?


ಊಹ್ಞೂಂ, ಊಹ್ಞೂಂ…! ಅಂತವರು ಸಿಗೋದು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಇದ್ದಕ್ಕಿದ್ದಂತೆ ಸಿನಿಮಾ ಮಾಡ್ಬೇಕು ಅಂತ ಅನ್ಕೊಳ್ತಾರೆ. ಒಂದಿಷ್ಟು ಜನ ಸಮಾನ ಮನಸ್ಕರನ್ನು ಸೇರಿಸಿಕೊಳ್ತಾರೆ. ಸರಿ, ನಾವೂ ಒಂದ್ ಸಿನಿಮಾ ಮಾಡೇ ಬಿಡಣ ಅಂತ ಡಿಸೈಡ್ ಮಾಡ್ತಾರೆ.


ಸ್ವಂತ ಕಥೆ ಎನ್ನೋದು ಅವರಪ್ಪನ ಆಣೆಗೂ ಅವರ ತಲೆಯಲ್ಲಿ ಬರಲ್ಲ. ಪರಭಾಷೆಗಳ ಸಿನಿಮಾಗಳಿಂದ ಸ್ವಲ್ಪ ಸ್ವಲ್ಪ ಎತ್ತಾಕಿ ಕೊಳ್ತಾರೆ. ಲ್ಯಾಂಡ್ ಡೀಲರೋ, ಫೈನಾನ್ಸ್ ವ್ಯವಹಾರ ಮಾಡೋನೋ, ಹೋಟೆಲ್ ಬ್ಯುಸ್ ನೆಸ್ಸೋ ಅಥವಾ ಯಾರ ತಲೆ ಮೇಲಾದ್ರು ಕೈ ಇಟ್ಟು ಒಂದಿಷ್ಟು ದುಡ್ಡು ಮಾಡಿಕೊಂಡಿರೋನು ನನ್ನ ಮಗನನ್ನೇ ಹೀರೋ ಮಾಡಿ, ನಾನು ಬಂಡವಾಳ ಹಾಕ್ತೀನಿ ಅಂತಾನೆ.


ಇಲ್ಲಿಗೆ ಮುಗಿದೇ ಹೋಯ್ತು…! ನಿರ್ದೇಶಕ, ನಿರ್ಮಾಪಕ, ನಟ ಎಲ್ಲರೂ ಕೂಡ ಸಿನಿಮಾ ಕ್ಷೇತ್ರದ ಬಗ್ಗೆ ಒಂಚೂರು ಗೊತ್ತೇ ಇರದವರು. ಹಿಂಗಾದ್ರೆ ಒಳ್ಳೆಯ ಸಿನಿಮಾ ಬರಲು ಹೇಗೆ ಸಾಧ್ಯ ಆಗುತ್ತೆ?
ನಮ್ಮ ಸ್ಯಾಂಡಲ್ ವುಡ್ ಅನ್ನೇ ತೆಗೆದುಕೊಳ್ಳಿ. ವಾರಕ್ಕೆ ಎಷ್ಟೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿವೆ. ಆದ್ರೆ, ಜನರನ್ನು ತಲುಪುತ್ತಿರೋ ಸಿನಿಮಾಗಳು ಎಷ್ಟು…?


ತೆಲುಗು, ತಮಿಳು, ಹಿಂದಿ ಸಿನಿಮಾಗಳಿಂದ ಕೆಲವೊಂದು ವಿಷಯಗಳನ್ನು ತಗೊಂಡು ಸ್ವಮೇಕ್ ಸಿನಿಮಾ ಮಾಡ್ತೀನಿ ಅಂತ ಕೆಲವು ನಿರ್ದೇಶಕರು ಬರ್ತಾರೆ. ಮಗನನ್ನು ಹೀರೋ ಮಾಡ್ಬೇಕು ಎಂಬ ಗುಂಗಲ್ಲಿರೋ ಆಸಾಮಿ ದುಡ್ಡು ಹಾಕ್ತಾನೆ. ಸಿನಿಮಾ ಅಂತ ಹಳಸನ್ನು ವೀಕ್ಷರ ಮುಂದೆ ಇಡ್ತಾರೆ.


ಸಿನಿಮಾ ಅನ್ನೋದು ಒಂದು ಉತ್ಪನ್ನ, ಇದು ವೀಕ್ಷಕನೆಂಬ ಗ್ರಾಹಕನಿಗೆ ರುಚಿಸಬೇಕು. ಅವನು ಕೋಡೋ ದುಡ್ಡಿಗೆ ಮೋಸ ಆಗಬಾರದು. ಗ್ರಾಹಕ ಅಂಗಡಿ, ಮಾರುಕಟ್ಟೆಯಲ್ಲಿ ತಾನು ಖರೀದಿಸುವ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಲ್ಲ ಅಂತಾದ್ರೆ ಕನ್ಸೂಮರ್ ಕೋರ್ಟ್/ ಗಾಹಕರ ನ್ಯಾಯಾಲಕ್ಕೆ ಹೋಗ್ತಾರೆ. ತನಾಗಾದ ಅನ್ಯಾಯಕ್ಕೆ ನ್ಯಾಯ ಕೊಡಿ ಅಂತಾರೆ.


ಆದ್ರೆ, ಒಂದು ಸಿನಿಮಾಕ್ಕೆ ವೀಕ್ಷಣೆಗೆ ದುಡ್ಡುಕೊಟ್ಟು ಚಿತ್ರಮಂದಿರಗಳಿಗೆ ಹೋಗುವ ಸಿನಿಪ್ರಿಯರಿಗೆ ಸಿನಿಮಾ ಇಷ್ಟವಾಗದೇ ಇದ್ದರೆ ಅವರು ಪ್ರಶ್ನಿಸ ಬೇಕಾಗಿರೋದು ಯಾರನ್ನು…? ಸಿನಿಮಾ ವೀಕ್ಷಣೆಗೆ ನೀಡಿದ ದುಡ್ಡು ಹಾಗೂ ಮನರಂಜನೆಗಾಗಿ ಕಳೆದ ಅಮೂಲ್ಯ ಸಮಯವನ್ನು ಮರಳಿ ನೀಡೋರು ಯಾರು…?


ಜನ ಥಿಯೇಟರ್ ಗಳಿಗೆ ಬರೋದು ಕಡಿಮೆ ಆಗ್ತಿದೆ, ಹೊಸಬರು ಮಾಡಿದ ಒಳ್ಳೆಯ ಸಿನಿಮಾಗಳೂ ಸಹ ಯಾಕ್ ಓಡ್ತಿಲ್ಲ ಅಂದ್ರೆ, ಇದಕ್ಕೇ…!
ಸ್ಕ್ರೀನ್ ಪ್ಲೇ ಗೊತ್ತಿರಲ್ಲ, ಸ್ಕ್ರಿಪ್ಟ್ ಕೂಡ ಸರಿಯಾಗಿ ಮಾಡ್ಕೊಂಡಿರಲ್ಲ. ತಲೇಲಿ ನಾಲ್ಕೈದು ಫಿಲ್ಮ್ ಕಥೆ ಸೇರಿಸಿ ಸ್ವಂತ ಅಂತ ಒಂದ್ ಕಿತ್ತೋದ್ ಸ್ಟೋರಿ ಮಾಡಿಕೊಂಡಿರ್ತಾರೆ. ಅದನ್ನೇ ಇಟ್ಕೊಂಡು ಸಿನಿಮಾ ಎಂಬ ಪ್ರಾಡೆಕ್ಟ್ ನ ಕೊಡ್ತಾರೆ.


ಇಲ್ಲಿ ನಿರ್ದೇಶಕ, ನಿರ್ಮಾಪಕ, ನಟರು ಸೇರಿದಂತೆ ಇಡೀ ಚಿತ್ರತಂಡ ತಮ್ಮ ತೀಟೆ ತೀರಿಸಿಕೊಳ್ತಾರೆ. ಮತ್ತೆ ಅವ್ರು ಸಿನಿಮಾ ಮಾಡೋದು ಡೌಟೇ…!? ಇದನ್ನು ನೋಡೋ ಗ್ರಹಚಾರ ಸಿನಿಪ್ರಿಯನದ್ದು…! ಸೋಲೋದು ಇಡೀ ಸಿನಿಮಾರಂಗ. ಹಾಗಾಗಿ ಸೋ ಕಾಲ್ಡ್ ಡೆರೆಕ್ಟರ್ ಗಳಿಗೆ, ಬೇಕಾಬಿಟ್ಟಿ ಸಿನಿಮಾಗಳನ್ನು ಮಾಡ್ತಿರೋರಿಗೆ, ಸಿನಿಮಾ ಹೆಸರಲ್ಲಿ ಕಲೆ ಮೇಲೆ ಅತ್ಯಾಚಾರ ಮಾಡ್ತಿರೋರಿಗೆ, ಸಿನಿ ಹಾದಾರ ಮಾಡ್ತಿರೋರಿಗೆ ಕಡಿವಾಣ ಹಾಕಲೇ ಬೇಕು. ಈ ಬಗ್ಗೆ ವೃತ್ತಿಪರರು, ಸಂಬಂಧಪಟ್ಟವರು ದನಿ ಎತ್ತಲೇ ಬೇಕು.
-ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...