ಹಣೆಬರಹದಲ್ಲಿ ಇದ್ದರೆ ಅಣ್ಣ ಸಿಎಂ ಆಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ
ಬೆಂಗಳೂರು: “ಹಣೆಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಮುಖ್ಯಮಂತ್ರಿ ಆಗುತ್ತಾರೆ. ಹಣೆಬರಹದಲ್ಲೇ ಇಲ್ಲ ಎಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನೀವು ಶಸ್ತ್ರತ್ಯಾಗ ಮಾಡಿದ್ದೀರಾ?” ಎಂಬ ಪ್ರಶ್ನೆಗೆ, “ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು” ಎಂದು ಪ್ರತಿಕ್ರಿಯಿಸಿದರು.
“ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಾ?” ಎಂಬ ಪ್ರಶ್ನೆಗೆ, “ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ” ಎಂದರು. “ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ವಿಷಯ ಬಗೆಹರಿಯುವುದೇ?” ಎಂಬ ಪ್ರಶ್ನೆಗೆ, “ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಕುರಿತು ಕೇಳಿದಾಗ, “ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅವರನ್ನೇ ಕೇಳಿ” ಎಂದರು.
ಭೋಜನಕೂಟದಲ್ಲಿ ಭಾಗವಹಿಸಿದ್ದ ಶಾಸಕರು ನಾಯಕತ್ವದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎಂಬ ಪ್ರಶ್ನೆಗೆ, “ನಾನು ಊರಲ್ಲಿ ಇರಲಿಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ” ಎಂದು ಹೇಳಿದರು.
“ಹೀಗೆ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ಕಷ್ಟವಾಗಬಹುದೇ?” ಎಂಬ ಪ್ರಶ್ನೆಗೆ, “ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ” ಎಂದು ಉತ್ತರಿಸಿದರು.
ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಎಂಬ ಪ್ರಶ್ನೆಗೆ, “ಅವರ ವಿಚಾರಧಾರೆ ಅವರಿಗೆ ಸಂಬಂಧಿಸಿದ್ದು. ಪಕ್ಷ ಅದನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ” ಎಂದರು.






