ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತು ಬರೀ ಮಾತಾಗೇ ಉಳಿದಿದೆ. ಸರ್ಕಾರಿ ಅಧಿಕಾರಿಗಳು ಕೇವಲ ಸಂಬಳಕ್ಕಾಗಿ ಹಾಜರಿರ್ತಾರೆ, ಕೆಲಸದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂಬ ಆರೋಪ ಎಲ್ಲಾಕಡೆ ಕೇಳಿಬರ್ತಲೇ ಇರುತ್ತೆ..! ಬೆಂಕಿ ಇಲ್ಲದೆ ಹೊಗೆ ಆಡುತ್ತಾ? ಬಹುತೇಕ ಸರ್ಕಾರಿ ಅಧಿಕಾರಿಗಳು ಮಾಡೋದು ಇದನ್ನೇ..! ಆದ್ರೆ, ಇಂತಹ ಅಧಿಕಾರಿಗಳ ನಡುವೆ ಸಾರ್ವಜನಿಕರ ಸೇವೆ ನಮ್ಮ ಕರ್ತವ್ಯ, ನಾವಿರೋದೆ ಜನಸೇವೆಗೆ ಎಂದು ಹಗಲಿರುಳು ದುಡಿಯುವ ಅಧಿಕಾರಿಗಳೂ ಇದ್ದಾರೆ. ಇಂತಹ ಅಧಿಕಾರಿಗಳಲ್ಲೊಬ್ಬರು ತುಮಕೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ನಾಗಣ್ಣ..!
ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ರಾಜಲ ಹಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ಇವರಿಗೆ ಜನರಿಗಾಗಿ ಏನಾದರೂ ಒಳ್ಳೆಯದನ್ನು ಮಾಡ್ಬೇಕೆಂಬ ಆಸೆ. ಇವರ ಅದೃಷ್ಟಕ್ಕೆ ಸ್ವಂತ ಜಿಲ್ಲೆಯ ಜನರ ಸೇವೆ ಮಾಡೋ ಭಾಗ್ಯ ಸಿಕ್ತು..!
ನಾನಾ ಕಡೆಗಳಲ್ಲಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ 2016 ಜನವರಿಯಲ್ಲಿ ತುಮಕೂರು ತಾಲೂಕು ಇಒ ಆಗಿ ನೇಮಕಗೊಂಡ್ರು. ನೀವು ನಂಬ್ತೀರೋ ಬಿಡ್ತಿರೋ ಅವತ್ತಿಂದ ಇವತ್ತೊರೆಗೂ ರಜೆಪಡೆಯದೆ ಕೆಲ್ಸ ಮಾಡ್ತಿದ್ದಾರೆ. ಹೆಚ್ಚು ಕಡಿಮೆ 2 ವರ್ಷವೇ (1 ವರ್ಷ 9 ತಿಂಗಳು) ಆಯ್ತು ದಣಿವರಿಯದೆ ಕೆಲಸ ಮಾಡ್ತಾ..!
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛಭಾರತ ಅಭಿಯಾನಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿರೋ ಡಾ.ಕೆ ನಾಗಣ್ಣ,
ಜಿಲ್ಲಾ ಪಂಚಾಯತ್ ಸದಸ್ಯರು, ಸ್ಥಳಿಯ ಶಾಸಕರನ್ನು, ತಾಲೂಕು ಮಟ್ಟದ ಅಧಿಕಾರಿಗಳನ್ನು ತಮ್ಮ ಜೊತೆಯಲ್ಲಿ ಕರ್ಕೊಂಡು ಹೋಗಿ ಗ್ರಾಮವಾಸ್ತವ್ಯ ಮಾಡಿ 125ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಅರಿವು ಮೂಡಿಸೋ ಕೆಲಸ ಮಾಡಿದ್ದಾರೆ. ತಾಲೂಕಿನ ಅರೆಗುಜ್ಜನಹಳ್ಳಿ, ಮಸ್ಕಲ್, ಸಿರಿವಾರ, ಚಿಕ್ಕತೊಟ್ಲುಕೆರೆ, ಕಣಕುಪ್ಪೆ ಹಾಗೂ ಹರಳೂರು ಗ್ರಾಪಂಗಳಲ್ಲಿ ಈವರೆಗೂ ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಭಾನುವಾರವೂ ರಜೆ ಪಡೆಯದೆ ಕೆಲಸ ಮಾಡಿರೋ ನಾಗಣ್ಣ, ಬೆಳ್ಗೆ 6ಗಂಟೆಗೇ ಎದ್ದು ಗ್ರಾಮಗಳಲ್ಲಿ ಬಯಲು ಶೌಚಕ್ಕೆ ಹೋಗೋರನ್ನು ಕಾದು ಕುಳಿತು, ಅವರನ್ನು ತಡೆದು ದಮ್ಮಯ್ಯ ದಕ್ಕಯ್ಯ ಅಂದಿದ್ದೂ ಉಂಟು..! ನೀವು ಈ ಕೆಲಸನ್ನ ನಾಲ್ಕು ಗೋಡೆಗಳ ಮಧ್ಯೆ ಮುಗಿಸಿಕೊಳ್ರೋ ಅಂತ ಪರಿ ಪರಿ ಬೇಡಿದ್ದೂ ಇದೆ..!
ಇವರ ಪರಿಶ್ರಮದಿಂದ ಹೋದ್ ವರ್ಷ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ತುಮಕೂರು ತಾಲೂಕಿನ ಗಂಗೋನಹಳ್ಳಿ, ನಾಗವಲ್ಲಿ, ಕೆ.ಪಾಲಸಂದ್ರ ಈ ಮೂರು ಗ್ರಾಪಂಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ವು..!
ಈ ವರ್ಷ ಜಿಲ್ಲೆಯ 10 ಗ್ರಾಪಂಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ದು, ಈ ಪೈಕಿ ತುಮಕೂರು ತಾಲೂಕಿನವೇ 7 ಗ್ರಾಪಂಗಳಿವೆ (ತಾಲೂಕಿನ ಹರಕೆರೆ, ಊರುಕೆರೆ,ಬುಗುಡನಹಳ್ಳಿ, ಬೆಳಧರ, ಹೆಗ್ಗೆರೆ, ಹಿರೇಹಳ್ಳಿ ಹಾಗೂ ಸ್ವಾಂದೇನಹಳ್ಳಿ ಗ್ರಾಪಂಗಳಿವೆ.
ಒಟ್ಟಾರೆ ತಾಲೂಕಿನ 41 ಗ್ರಾಪಂಗಳಲ್ಲಿ ಈಗಾಗಲೇ 10 ಗ್ರಾಪಂಗಳು ಬಯಲು ಶೌಚಮುಕ್ತವಾಗಿದ್ದು, ಉಳಿದ 31 ಗ್ರಾಪಂಗಳು ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಳ್ಬೇಕು ಎಂಬುದು ಸದ್ಯಕ್ಕೆ ನಾಗಣ್ಣ ಅವರ ಗುರಿಯಂತೆ..!
ಹೀಗೆ ಭ್ರಷ್ಟ, ಸೋಮಾರಿ ಅಧಿಕಾರಿಗಳ ನಡುವೆ ಇಂತಹ ಒಳ್ಳೆಯ ಅಧಿಕಾರಿಗಳೂ ಇದ್ದಾರೆ…! ಗುರುತಿಸೋ ಕೆಲ್ಸ ನಮ್ಮಿಂದ, ನಿಮ್ಮಿಂದ ಆಗ್ಬೇಕಿದೆಯಷ್ಟೇ..!
- ಶಶಿಧರ್ ಎಸ್ ದೋಣಿಹಕ್ಲು