ರಾಜ್ ಕುಮಾರ್ ಅವರನ್ನು ಅನುಭವಿಸಿ ನೋಡಬೇಕು, ಆರಾಧಿಸಬೇಕು, ಅಭಿಮಾನಿಸಬೇಕು. ಅವರ ಸಾಧನೆ ಅಪಾರ. ಅವರ ಬಗ್ಗೆ ಬರೆಯುತ್ತಾ ಹೋದರೇ ಸೊಗಸಾದ ಚರಿತ್ರೆಯೊಂದು ತೆರೆದುಕೊಳ್ಳುತ್ತದೆ. ಅವರ ಸಾವು, ಅವರೇ ಕರೆದ ಅಭಿಮಾನಿ ದೇವರುಗಳ ಕಲ್ಪನೆಯನ್ನೂ ಮೀರಿದ್ದು..! ಸಾಯುವಾಗ ಅವರ ವಯಸ್ಸು ಕೇವಲ ಎಪ್ಪತ್ತೆಂಟು. `ಅಣ್ಣಾ.. ಇನ್ನೊಂದಿಪ್ಪತ್ತೆರಡು ವರ್ಷ ಬದುಕಬಹುದಿತ್ತಲ್ವಾ..? ಅವಸರವೇನಿತ್ತು’ ಎಂದು ಅಭಿಮಾನಿ ದೇವರು ಈಗಲೂ ಕೇಳುತ್ತಿದ್ದಾನೆ. ಉತ್ತರಿಸಲು ಅವರಿಲ್ಲವಷ್ಟೇ. ಅವರು ತೀರಿಹೋಗಿ ಹತ್ತು ವರ್ಷ ಕಳೆದರೂ ಇವತ್ತಿಗೂ ಅಪ್ಯಾಯಮಾನವಾಗಿ ಕಾಡುತ್ತಿದ್ದಾರೆ, ಅವರಿಗೆ ಶ್ರದ್ಧಾಂಜಲಿ.
ನಿಜ, ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು, ಕನ್ನಡ ಮಣ್ಣನ್ನು ಮೆಟ್ಟಿದ ಯಾರಿಗೇ ತಾನೇ ಹೆಮ್ಮೆ ಇಲ್ಲ ಹೇಳಿ. ಅಣ್ಣಾವ್ರು ಬರೀ ಹಾಡಲಿಲ್ಲ, ಕನ್ನಡದ ಮನಸ್ಸುಗಳನ್ನು ಬಡಿದೆಬ್ಬಿಸಿದರು. ಮೊದಲೇ ಹೇಳಿದಂತೆ ಅಣ್ಣಾವ್ರ ಬಗ್ಗೆ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವಂತಿದ್ದರೇ ಹೇಳಿ ಮುಗಿಸಬಹುದಿತ್ತು. ಅವರ ಬಗ್ಗೆ ಅದೆಷ್ಟೇ ಹೇಳಿದರೂ, ಅದೇನೇ ಬರೆದರೂ ಇನ್ನೇನೋ ಬಾಕಿಯಿರುವಂತೆ ಭಾಸವಾಗುತ್ತದೆ.
ಬೇಡರ ಕಣ್ಣಪ್ಪನ ಭಕ್ತಿ, ಮಯೂರನ ಶೌರ್ಯ, ಹಿರಣ್ಯಕಶಿಪುವಿನ ದರ್ಪ, ಮಹಾರಾಜನ ಗೈರತ್ತು, ದೇವರ ಕರುಣೆ, ರೈತನ ಸೆಡವು, ತಂದೆಯ ಮಮಕಾರ, ಅಣ್ಣನ ಪ್ರೀತಿ, ಡಕಾಯಿತನ ವೈಕರಿ, ಪ್ರೇಮಿಯ ಗೊಂದಲ- ರಾಜ್ ಕುಮಾರ್ ಮಾಡದ ಪಾತ್ರಗಳಿರಲಿಲ್ಲ. ಅವರು ಕೇವಲ ಪಾತ್ರ ಮಾಡುತ್ತಿರಲಿಲ್ಲ, ಪಾತ್ರವೇ ಆಗುತ್ತಿದ್ದರು. ಚಿತ್ರರಂಗದಲ್ಲಿ ರಾಜ್ ಕುಮಾರ್ ಪರಾಕಾಷ್ಠೆ ತಲುಪಿದ್ದರು. ಅವರ ಪಾತ್ರಗಳಾದ ಕಣ್ಣಪ್ಪ, ಕನಕದಾಸ, ಮಯೂರ, ಹಿರಣ್ಯಕಶೀಪು.. ಮುಂತಾದವರು ಹೀಗೇ ಇದ್ದಿರಬಹುದೇನೋ ಎಂಬ ನಿರ್ಧಾರಕ್ಕೆ ಬರುವಂತೆ ಮಾಡುತ್ತವೆ. ಹೇಳಿ-ಕೇಳಿ ರಂಗಭೂಮಿಯಿಂದ ಬೆಳೆದು ಬಂದವರು. ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡರು. ವಿಪುಲ ಅವಕಾಶಗಳು ಸಿಕ್ಕಿತ್ತು. ಇತಿಹಾಸವನ್ನು ಬರೆದು ಹೊರಟುಹೋದರು.
ರಾಜ್ ಕುಮಾರ್ ಕೇವಲ ನಟನಾಗಿರಲಿಲ್ಲ. ಒಳ್ಳೆಯ ಮನುಷ್ಯರಾಗಿದ್ದರು. ಯಾರನ್ನೂ ನೋಯಿಸಿದವರಲ್ಲ. ಯಾರನ್ನೂ ಬೈದವರಲ್ಲ. ಗಟ್ಟಿಯಾಗಿ ಮಾತನಾಡಿದವರಲ್ಲ. ಅಭಿಮಾನಿ ದೇವರುಗಳ ಅಭಿಮಾನವನ್ನು ಅಕ್ಷರಶಃ ಅನುಭವಿಸಿದರು. ಅವರು ಕುಡಿಯುತ್ತಿರಲಿಲ್ಲ. ಅವರಿಗೆ ಸಿಗರೇಟ್ ಚಟ ಇರಲಿಲ್ಲ. ಜೀವನದುದ್ದಕ್ಕೂ ಬೆನ್ನೆಲುಬಾಗಿದ್ದ ಮಡದಿಗೆ ಒಳ್ಳೆಯ ಪತಿ, ಮಕ್ಕಳಿಗೆ ಒಳ್ಳೆ ತಂದೆ ಆಗಿದ್ದರು. ಯಾರ ಜೀವನದಲ್ಲೂ ರಾಜಕೀಯ ಮಾಡಿದವರಲ್ಲ. ಬಹುಶ ಆ ಕಾರಣಕ್ಕೇನೋ ರಾಜಕಾರಣಕ್ಕೆ ಅವರು ಹೋಗಲ್ಲಿಲ್ಲ. ಒಬ್ಬ ಮನುಷ್ಯ ವೇರಿ ವೇರಿ ಸ್ಪೆಷಲ್ ಎನಿಸಿಕೊಳ್ಳುವ ಎಲ್ಲಾ ಕ್ವಾಲಿಟಿಗಳು ಅವರಲ್ಲಿತ್ತು. ಅಣ್ಣಾವ್ರ ಜೊತೆ ನಟಿಸುವುದಕ್ಕೆ ಚಾನ್ಸ್ ಸಿಕ್ಕರೆ ಈ ಜನ್ಮ ಪಾವನವಾಗುತ್ತದೆ ಎಂದು ಅದೆಷ್ಟೋ ಚಂದದ ನಟಿಯರು ಕನಸು ಕಾಣುತ್ತಿದ್ದರು. ಪಂಡರಿಬಾಯಿ, ಲೀಲಾವತಿ, ಕಲ್ಪನಾ, ಮಂಜುಳಾ, ಅಂಬಿಕಾ, ಸರಿತಾ, ಜಯಂತಿ, ಆರತಿ, ಜಯಮಾಲ, ಜೂಲಿ ಲಕ್ಷ್ಮಿ- ಹೀಗೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿರುವ ಅನೇಕ ನಟಿಮಣಿಯರೆಲ್ಲ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದಕ್ಕೆ ಸಾರ್ಥಕಪಟ್ಟಿದ್ದಾರೆ.
ಆ ಕಾಲಕ್ಕೆ ಶ್ರೇಷ್ಟ ನಟ ಎನಿಸಿಕೊಂಡವರೊಬ್ಬರು ರಾಜ್ ಕುಮಾರ್ ಅವರನ್ನು ಕೂರುವಂತೆ ಹೇಳಿ ಚೇರನ್ನು ಪಕ್ಕಕ್ಕೆ ತಳ್ಳಿದ್ದ ಸಂಗತಿ ನಡೆದಿತ್ತಂತೆ. ಸಾವರಿಸಿಕೊಂಡು ಎದ್ದ ಅಣ್ಣಾವ್ರು ನಕ್ಕು ಸುಮ್ಮನಾದರಂತೆ. ಸರಳತೆ ಅವರ ಅಭಿನಯದ ಪ್ರಭಾವ ಅಲ್ಲ, ಅವರ ಹುಟ್ಟುಗುಣ. ಅವರು ಧರ್ಮದ ಬಗ್ಗೆ ಮಾತಾಡುತ್ತಿರಲಿಲ್ಲ, ಅವರಿಗೆ ಜಾತಿ ಗೊತ್ತಿರಲಿಲ್ಲ, ಅವರಲ್ಲಿ ಮೇಳೈಸಿದ್ದು ಮನುಷ್ಯತ್ವ. ಹೆಸರೇ ಸೂಚಿಸುವಂತೆ ಅವರು ಅಪ್ಪಟ ಮುತ್ತು..! ಅಣ್ಣಾವ್ರನ್ನು ಕಂಡ ಕೂಡಲೇ ಕೈ ಎತ್ತಿ ಮುಗಿಯಬೇಕೆನ್ನಿಸುತ್ತದೆ. ವೃತ್ತಿ ಜೀವನದಲ್ಲಿ ಎಷ್ಟು ಮೇಲಕ್ಕೆ ಹೋದರೂ, ತನ್ನ ಸರಳ ಗುಣಗಳಿಂದ ಉನ್ನತ ಶಿಖರವೇರಿದರು. ಅವರನ್ನು ಕಂಡರೇ ಗೌರವ ಮೂಡುತ್ತಿತ್ತು. ಸೂಪರ್ ಸ್ಟಾರ್ ಗಿಂತಲೂ ಎತ್ತರಕ್ಕೆ ಬೆಳೆದು ನಿಂತಿದ್ದ ಅವರಲ್ಲಿ ಗರ್ವದ ಲವಲೇಶವನ್ನು ಹುಡುಕಲು ಸಾಧ್ಯವಿರಲಿಲ್ಲ.
ರಾಜ್ ಕುಮಾರ್ ಓದಿದ್ದು 3ನೇ ತರಗತಿ ಮಾತ್ರ. ಅದೆಷ್ಟು ಸೊಗಸಾಗಿ ಕನ್ನಡ ಮಾತನಾಡುತ್ತಿದ್ದರೆಂದರೇ ಒಬ್ಬ ಅಚ್ಚ ಕನ್ನಡದ ಮೇಷ್ಟ್ರಿಗೆ ಇರುವ ಎಲ್ಲಾ ಕ್ವಾಲಿಟಿಗಳು ಅವರಲ್ಲಿತ್ತು. ಅವರು ಯಾವತ್ತು ನಟನಾ ತರಬೇತಿ ಶಾಲೆಗೆ ಹೋದವರಲ್ಲ. ಕೋರ್ಸ್, ಟ್ಯೂಷನ್ನು ಅವರಿಗೆ ಗೊತ್ತೇ ಇರಲಿಲ್ಲ. ಅವರು ಅಪ್ಪಟ್ಟ ರಂಗಭೂಮಿಯ ಕೂಸು. ಅಪ್ಪನ ಗರಡಿಯಲ್ಲಿ ಪಳಗಿದ ಶಿಲೆ. ಆ ಕಾರಣದಿಂದ ಅವರು ಚಿತ್ರರಂಗದಲ್ಲಿ ಅದ್ವಿತೀಯರಾಗಿ ಮೆರೆದರು. ಒಂದೊಮ್ಮೆ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಾಜ್ ಕುಮಾರ್ ಕೈ ಹಿಡಿದು, `ಒಂದು ವೇಳೆ ನೀವು ಹಿಂದಿ ಚಿತ್ರರಂಗಕ್ಕೆ ಬಂದಿದ್ರೆ ನಾವೆಲ್ಲ ನಿರುದ್ಯೋಗಿಗಳಾಗುತ್ತಿದ್ವಿ’ ಎಂದಿದ್ದರಂತೆ. ಅದೊಮ್ಮೆ ಇದೇ ಅಮಿತಾಬ್ ಬಚ್ಚನ್ ಹಾಗು ಸಂಜೀವ್ ಕುಮಾರ್ ಏರ್ಪಡಿಸಿದ್ದ ಔತಣಕೂಟಕ್ಕೆ ಡಾ. ರಾಜ್ ಕುಮಾರ್ ಅಥಿತಿಯಾಗಿ ಹೋಗಿದ್ದರು. ಅದೇ ಕಾರ್ಯಕ್ರಮಕ್ಕೆ ಆ ಕಾಲದ ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಬಂದಿದ್ದರು. ಔಪಚಾರಿಕ ಮಾತುಕತೆಯ ವೇಳೆ ದಿಲೀಪ್ ಕುಮಾರ್, `ನಾವೆಲ್ಲ ಒಳ್ಳೆ ನಟರು, ಆದರೆ ಐತಿಹಾಸಿಕ ಪೌರಾಣಿಕ, ಸಾಮಾಜಿಕ- ಎಲ್ಲಾ ಸ್ತರಗಳಲ್ಲೂ ಅದ್ಭುತವಾಗಿ ಅಭಿನಯಿಸುವ ನೀವು ನಮ್ಮೆಲ್ಲರಿಗಿಂತ ಶ್ರೇಷ್ಟರು’ ಎಂದು ಹೇಳಿದ್ದರಂತೆ.
ಅಭಿನಯ ಅಣ್ಣಾವ್ರಿಗೆ ರಕ್ತಗತವಾಗಿತ್ತು. ಅದು ಅವರ ಅಪ್ಪನಿಂದ ಬಂದ ಬಳುವಳಿ. ಕೊಳ್ಳೇಗಾಲದಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಂಗನಲ್ಲೂರು ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಆ ಹಳ್ಳಿಯಲ್ಲಿ ಪುಟ್ಟಸ್ವಾಮಯ್ಯನವರಿಗೆ ದೊಡ್ಡ ಹೆಸರು. ವೃತ್ತಿಯಿಂದ ನಾಟಕದ ಮೇಷ್ಟ್ರಾಗಿದ್ದರು. ಅವರು ಯಮನ ವೇಷ ಹಾಕಿ ನಟಿಸುತ್ತಿದ್ದರೇ ಪ್ರೇಕ್ಷಕರಲ್ಲಿ ಅನೇಕರು ಎದ್ದುಬಿದ್ದು ಓಡುತ್ತಿದ್ದರಂತೆ. ದೊಡ್ಡ ಗಾಜನೂರಿನ ಲಕ್ಷಮ್ಮ ಎಂಬವರನ್ನು ವಿವಾಹವಾದ ಇವರಿಗೆ ಕೆಲ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಸಿಂಗನಲ್ಲೂರಿನ ಹಿರಿಯರೊಬ್ಬರು, `ಭಗವಂತ ಮುತ್ತತ್ತಿರಾಯನಿಗೆ ಹರಕೆ ಹೊತ್ತುಕೊಳ್ಳಿ ಒಳ್ಳೆಯದಾಗುತ್ತೆ’ ಎಂದರಂತೆ. ಪ್ರಾಯಶಃ ಹಿರಿಯರ ಪ್ರಾರ್ಥನೆ ಮುತ್ತತ್ತಿರಾಯನಿಗೆ ಕೇಳಿಸಿತ್ತು. ಆ ಪುಟ್ಟ ಮನೆಯಲ್ಲಿ ಅದೊಂದು ದಿನ ಮಗುವಿನ ಅಳು ಕೇಳಿಸಿತ್ತು. ಭಗವಂತ ತಿದ್ದಿ ತಿಡ್ಡಿ ಸೃಷ್ಟಿ ಮಾಡಿದ ಗೊಂಬೆಯಂತಹ ಮಗು ಹುಟ್ಟಿತ್ತು. ಅರ್ಹವಾಗಿ ಆ ಪುಟ್ಟ ಮಗುವಿಗೆ ಮುತ್ತುರಾಜ ಎಂದು ಹೆಸರಿಡಲಾಯಿತು. ಮಗು ಹುಟ್ಟಿದ ಘಳಿಗೆಯಿಂದೇನೋ ಆನಂತರ ಪುಟ್ಟಸ್ವಾಮಯ್ಯರಿಗೆ ಮೂರು ಮಕ್ಕಳಾದವು.
ಮನೆ ತುಂಬ ಮಕ್ಕಳು. ಅರೆಹೊಟ್ಟೆಯನ್ನ ಹೊರೆಯಲಾಗದ ಬಡತನ. ಪುಟ್ಟಸ್ವಾಮಯ್ಯನವರು ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿಕೊಂಡರು. ಮೂರನೇ ತರಗತಿಯಲ್ಲಿ ಓದುತ್ತಿದ್ದ ಮುತ್ತುರಾಜನನ್ನು ನಾಟಕರಂಗಕ್ಕೆ ಕರೆತಂದರು. ಅದು ಕೃಷ್ಣಲೀಲೆ ನಾಟಕ. ಅದರಲ್ಲಿ ಮುತ್ತುರಾಜನದ್ದು ಹಸು ಸಾಕುವ ಹುಡುಗನ ಪಾತ್ರ. ಸ್ಟೇಜ್ ನಲ್ಲಿದ್ದ ಅಪ್ಪ, ಅವರ ವೇಷ, ನಟನೆ ನೋಡಿ ಮುತ್ತುರಾಜ ಗಡಗಡ ನಡುಗಿಬಿಟ್ಟಿದ್ದ. ಅಲ್ಲಿಂದ ಶುರುವಾಗಿತ್ತು ಮುತ್ತುರಾಜನ ರಂಗ ಭೂಮಿ ಯಾತ್ರೆ. ಗುಬ್ಬಿ ಕಂಪನಿಯ ನಾಟಕಗಳು ಪಥ್ಯವಾಗಿತ್ತು. ಅಭಿನಯ ನೀರು ಕುಡಿದಷ್ಟೇ ಸಲೀಸಾಗಿತ್ತು. ಮಗನಿಗೊಂದು ನೆಲೆ ಕಲ್ಪಿಸಿಕೊಡಬೇಕೆಂದು ಪುಟ್ಟಸ್ವಾಮಯ್ಯ ನಿರ್ಧಾರಕ್ಕೆ ಬಂದಿದ್ದರು. ಕನ್ನಡ ಚಿತ್ರರಂಗಕ್ಕೆ ಬಹುಕಾಲದಿಂದ ಪರಿಚಯವಿದ್ದ ಎಚ್.ಎಲ್.ಎನ್ ಸಿಂಹರವರಿಗೆ ಮಗನನ್ನು ತೋರಿಸಿ, `ಇವನು ನನ್ನ ಮಗ ನಿಮ್ಮ ಸಿನಿಮಾಗಳಲ್ಲಿ ಅವಕಾಶ ಕೊಡಿಸಿ’ ಎಂದು ಮನವಿ ಮಾಡಿದರು. ಕೆಲವು ದಿನಗಳ ನಂತರ ನಂಜನಗೂಡು ಬಸ್ಟ್ಯಾಂಡ್ ಬಳಿ ಮುತ್ತುರಾಜನನ್ನು ನೋಡಿದ ಎಚ್.ಎಲ್.ಎನ್ ಸಿಂಹ, ತಮ್ಮ ಬೇಡರ ಕಣ್ಣಪ್ಪ ಚಿತ್ರಕ್ಕೆ ಒಬ್ಬ ಸೂಕ್ತವಾಗಿರುವ ಬೇಡ ಸಿಕ್ಕ ಎಂದು ಸಂಭ್ರಮಿಸಿದರು. ಮುತ್ತುರಾಜ ಬೇಡರ ಕಣ್ಣಪ್ಪ ಚಿತ್ರದ ಕಣ್ಣಪ್ಪನ ಪಾತ್ರಕ್ಕೆ ಆಯ್ಕೆಯಾದ.
ಮುತ್ತುರಾಜ ಕಣ್ಣಪ್ಪನ ಅಪ್ಪಟ್ಟ ಭಕ್ತರಾಗಿದ್ದರು. ಹೀಗಿರುವಾಗ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದರೇ ಖುಷಿಯಾಗದಿರುತ್ತಾ..?. ಹೀಗಿರುವಾಗ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕ ಚೆಟ್ಟಿಯಾರ್, ಎಲ್ಲಾ ಸರಿಯಿದೆ. ನಿನ್ನ ಹೆಸರು ಬದಲಾಗಬೇಕು ಎಂದರಂತೆ. ಅದಕ್ಕೆ ಮುತ್ತುರಾಜ್, `ಅದು ಸಾಧ್ಯವೇ ಇಲ್ಲ, ನಾನು ಹರಕೆಯ ಕೂಸು, ನನ್ನಪ್ಪ ಅಮ್ಮ ನನಗೆ ಭಗವಂತ ಮುತ್ತತ್ತಿರಾಯನ ಹೆಸರಿಟ್ಟಿದ್ದಾರೆ’ ಅಂದರಂತೆ. ಅದೇ ಸಂಧರ್ಭದಲ್ಲಿ ಅಲ್ಲಿಗೆ ಬಂದ ನಿರ್ದೇಶಕ ಹೆಚ್.ಎಲ್.ಎನ್ ಸಿಂಹ, `ನೋಡೋದಕ್ಕೆೆ ರಾಜಕುಮಾರನ ಹಾಗೆ ಇದ್ದೀಯಾ, ನಿನಗೆ ರಾಜ್ ಕುಮಾರ್ ಅಂತ ಹೆಸರಿಡ್ತಿವಿ, ನಿನ್ನಪ್ಪ ಅಮ್ಮ ಖುಷಿಯಾಗ್ತಾರೆ, ಇವತ್ತಿನಿಂದ ನೀನು ರಾಜ್ ಕುಮಾರ್ ಸರೀನಾ’ ಎಂದರಂತೆ. ಅವತ್ತು ಒಲ್ಲದ ಮನಸಿನಿಂದ ರಾಜ್ ಕುಮಾರ್ ಆದ ಮುತ್ತುರಾಜ್ ವರನಟನಾಗಿ ಐತಿಹ್ಯವನ್ನು ಬರೆದರು.
ಕನ್ನಡ ಚಿತ್ರರಂಗದ ಅನರ್ಘ್ಯ ರತ್ನವಾದ ಡಾ. ರಾಜ್ ಕುಮಾರ್ ಅವರ ಜೊತೆ-ಜೊತೆಯಾಗಿಯೇ ಅನೇಕ ಮೇರು ಕಲಾವಿದರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು. ಅವರ ಜೊತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡ ನಾಯಕ ನಟರು, ಖಳನಟರು, ನಟಿಯರು ಇವತ್ತು ಅನೇಕ ದಾಖಲೆಗಳನ್ನು ಬರೆದಿದ್ದಾರೆ. ನಾಯಕಿಯರ ವಿಚಾರಕ್ಕೆ ಬಂದ್ರೆ, ಹೆಚ್ಎಲ್ಎನ್ ಸಿಂಹ ನಿರ್ದೇಶನದ, ರಾಜ್ ಕುಮಾರ್ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ನಾಯಕಿಯಾಗಿದ್ದವರು ಪಂಡರೀಬಾಯಿ. ಟಿ. ವಿ ಸಿಂಗ್ ಠಾಕೂರ್ ನಿರ್ದೇಶನದ, ಅಣ್ಣಾವ್ರು ಅಭಿನಯಿಸಿದ ಎರಡನೇ ಚಿತ್ರ `ಸೋದರಿ’ಗೂ ಪಂಡರಿಬಾಯಿ ನಾಯಕಿಯಾಗಿದ್ದರು. ರಾಜ್ ಕುಮಾರ್ ಜೊತೆ ಅನೇಕ ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಿ. ಸರೋಜಾದೇವಿ, ಅಣ್ಣಾವ್ರ ಜೊತೆ ಮೊದಲು ಬಣ್ಣ ಹಚ್ಚಿದ ಚಿತ್ರ ಭೂಕೈಲಾಸ. ಆ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಕೂಡ ನಟಿಸಿದ್ದರು. ಅವರಿಗೂ ರಾಜ್ ಜೊತೆ ಇದು ಮೊದಲ ಚಿತ್ರ. ಹಾಗೆಯೇ ರಾಜ್ ಕುಮಾರ್, ನರಸಿಂಹರಾಜು ಇಬ್ಬರೂ ಒಂದೇ ಚಿತ್ರದಲ್ಲಿದ್ದರೇ ಅದೆಂಥಾ ದೃಶ್ಯಕಾವ್ಯ ಸೃಷ್ಟಿಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಬ್ಬರನ್ನು `ಕೃಷ್ಣಗಾರುಡಿ’ ಚಿತ್ರದ ಮೂಲಕ ಒಟ್ಟು ಮಾಡಿದ್ದು ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಆ ಚಿತ್ರದಲ್ಲಿ ಇಬ್ಬರು ಮೇರು ಕಲಾವಿದರೂ ಮೈ ಮರೆತು ನಟಿಸಿ, ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡಿದ್ದರು. ಖ್ಯಾತನಟ ಬಾಲಕೃಷ್ಣ ಹಾಗೂ ನಟಿ ಬಿ. ಜಯಮ್ಮ ಅಣ್ಣ-ತಂಗಿ ಚಿತ್ರದ ಮೂಲಕ ರಾಜ್ ಕುಮಾರ್ ಗೆ ಜೊತೆಯಾದರು.
ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಜೋಡಿ `ರಾಜ್-ಲೀಲಾವತಿ’ ಅಭಿನಯದ ಮೊದಲ ಚಿತ್ರ `ಜಗಜ್ಯೋತಿ ಬಸವೇಶ್ವರ’. ಈ ಚಿತ್ರದಲ್ಲಿ ರಾಜ್ ಗೆ ಲೀಲಾವತಿ ಸೂಕ್ತ ನಾಯಕಿಯೆಂದು ಆಯ್ಕೆ ಮಾಡಿದ್ದು ನಿರ್ದೇಶಕ ಟಿ.ವಿ ಸಿಂಗ್ ಠಾಕೂರ್. 1959ರಲ್ಲಿ ತೆರೆಕಂಡ `ಜಗಜ್ಯೋತಿ ಬಸವೇಶ್ವರ’ ರಾಜ್ ಅಭಿನಯದ 11ನೇ ಚಿತ್ರ. ಲೀಲಾವತಿ ಅಭಿನಯದ ಮೂರನೇ ಚಿತ್ರವಿದು. ಅವರ ಮೊದಲ ಚಿತ್ರ ಮಾಂಗಲ್ಯ ಯೋಗ. ಅದೇ ವರ್ಷ ಈ ಜೋಡಿ `ಧರ್ಮವಿಜಯ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಅಣ್ಣಾವ್ರ ಜೊತೆ ಅವರ ಸೋದರ ವರದಪ್ಪ ಸಹ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದರು. 1954ರಿಂದ 1966ರವರೆಗೆ ಅಣ್ಣಾವ್ರು ನಟಿಸಿದ ಒಟ್ಟು ಎಪ್ಪತ್ತೊಂಬತ್ತು ಚಿತ್ರಗಳ ಪೈಕಿ, ಆರಂಭದ ಹನ್ನೆರಡು ಚಿತ್ರಗಳಲ್ಲಿ ಪಂಡರಿಬಾಯಿ, ಬಿ. ಸರೋಜಾ ದೇವಿ, ಹರಿಣಿ ಕ್ರಮವಾಗಿ ನಾಯಕಿಯರಾಗಿದ್ದರು. ಮಿಕ್ಕ ಅರವತ್ತೇಳು ಚಿತ್ರಗಳಲ್ಲಿ ಅನಾಮತ್ತು ಇಪ್ಪತ್ತೆಂಟು ಚಿತ್ರಗಳಿಗೆ ಲೀಲಾವತಿ ನಾಯಕಿಯಾಗಿದ್ದರು. `ಮೋಹಿನಿ ಭಸ್ಮಾಸುರ’ದ ನಂತರ ಅವರಿಗೆ ಡಾ.ರಾಜ್ ಜೊತೆ ನಟಿಸುವ ವಿಪುಲ ಅವಕಾಶಗಳು ಸಿಗಲಿಲ್ಲ. ಯಾಕಂದ್ರೆ `ಚಂದವಳ್ಳಿಯ ತೋಟ’ದ ಹೂವೊಂದು ಅವರ ಜಾಗವನ್ನು ಆಕ್ರಮಿಸಿತ್ತು.
ಜಯಂತಿ, ನಿಜಕ್ಕೂ ಆ ಕಾಲದಲ್ಲಿ ಚಂದದ ನಟಿ. ಮತ್ತೆ-ಮತ್ತೆ ನೋಡುವಂತಿದ್ದ ಚೆಲುವೆ. ಅವರ ಆಗಮನವಾಗಿದ್ದೇ ಲೀಲಾವತಿ ಪರ್ವದ ಅಂತ್ಯದ ಲಕ್ಷಣ ಕಾಣಿಸಿತ್ತು. ಆಗಲೇ ಪಂಡರಿಬಾಯಿ, ಹರಿಣಿ, ಮೈನಾವತಿ, ಬಿ. ಸರೋಜಾದೇವಿ ಅವಕಾಶವನ್ನು ಕ್ಷೀಣಿಸಿಕೊಂಡಿದ್ದರು. ಚಂದವಳ್ಳಿಯ ತೋಟದಿಂದ ಬಂದ ಚಂದದ ನಟಿ, ರಾಜ್ ಜೊತೆ ಮಿಕ್ಕ ಯಾವ ನಟಿಯೂ ನಟಿಸದಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಈ ಮಧ್ಯೆ ರಾಜ್ ಕುಮಾರ್, ಲೀಲಾವತಿ ಜೋಡಿ ಶಿವರಾತ್ರಿ ಮಹಾತ್ಮೆ, ಸಂತ ತುಕಾರಂ, ತುಂಬಿದ ಕೊಡ, ನಾಗಪೂಜಾ, ಚಂದ್ರಹಾಸ ಚಿತ್ರದಲ್ಲಿ ನಟಿಸಿದರು. 1966ರಲ್ಲಿ ತೆರೆಕಂಡ `ಮೋಹಿನಿ ಭಸ್ಮಾಸುರ’ದವರೆಗೆ ರಾಜ್-ಲೀಲಾವತಿ ಜೋಡಿಯದ್ದೇ ಅಬ್ಬರ. ಇದರ ನಡುವೆ ಜಯಂತಿ, ರಾಜ್ ಕುಮಾರ್ ಜೊತೆ ಪ್ರತಿಜ್ಞೆ, ವಾತ್ಸಲ್ಯ ಎಂಬೆರಡು ಚಿತ್ರಗಳಲ್ಲಿ ನಟಿಸಿದರು. ಇದೇ ಹೊತ್ತಿಗೆ ಕಲ್ಪನಾ, ರಾಜ್ ಕುಮಾರ್ ಅವರ `ನಾಂದಿ’ ಚಿತ್ರದ ಮೂಲಕ ಬಣ್ಣ ಹಚ್ಚಿದರು.
ಡಾ. ರಾಜ್ ಕುಮಾರ್ ಜೊತೆ ನಟಿಸಲು ನಟಿಯರಲ್ಲಿ ಕಾಂಪಿಟೇಶನ್ ನಡೀತಾ ಇತ್ತಾ..? ನಿರ್ದೇಶಕರು ಹೊಸ ಮುಖಗಳನ್ನು ಪರಿಚಯಿಸಲು ತವಕಿಸಿದ್ರಾ..?. ಅಪ್ಪಟ ಪ್ರತಿಭೆಗಳ ಪ್ರವೇಶವಾಗುತ್ತಿತ್ತು. ಇವೆಲ್ಲದರ ಮಧ್ಯೆ ರಾಜ್ ಕುಮಾರ್ ಎಂಬ ಕಡಲು ಮಾತ್ರ ಲಯ ಕಳೆದುಕೊಳ್ಳದೇ ಭೋರ್ಗರೆಯುತ್ತಿತ್ತು. ಲೆಕ್ಕವಿಲ್ಲದಷ್ಟು ಚಿತ್ರಗಳು, ಖ್ಯಾತನಾಮರ ಸಹಯೋಗ. ಈ ಹೊತ್ತಿಗೆ ತೆರೆಗೆ ಅಪ್ಪಳಿಸಿದ್ದು ಸತ್ಯ ಹರಿಶ್ಚಂದ್ರ. ಪಂಡರಿಬಾಯಿ ಕಂಬ್ಯಾಕ್ ಚಿತ್ರವಿದು.
ಸಹನಟರ ಪೈಕಿ ರಾಜ್ ಕುಮಾರ್ ಜೊತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಉದಯ್ ಕುಮಾರ್. 1959ರಲ್ಲಿ ತೆರೆಕಂಡ `ಮಹಿಷಾಸುರ ಮರ್ಧಿನಿ’ ಚಿತ್ರದಲ್ಲಿ ರಾಜ್ ಕುಮಾರ್ ಜೊತೆ ಮೊದಲಬಾರಿ ಬಣ್ಣ ಹಚ್ಚಿದ ಈ ಮೇರು ನಟ, ರಣಧೀರ ಕಂಠೀರವ, ದಶಾವತಾರ, ಭಕ್ತ ಕನಕದಾಸ, ಭೂದಾನ, ನಂದಾದೀಪ, ಮಲ್ಲಿಮದುವೆ, ವೀರಕೇಸರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿದರು. ಹಾಗೆಯೇ ಕೆ. ಎಸ್ ಅಶ್ವತ್ ಹಾಗೂ ಡಾ. ರಾಜ್ ಒಟ್ಟಾಗಿ ನಟಿಸಿದ ಚಿತ್ರಗಳಿಗೆ ಲೆಕ್ಕವಿಲ್ಲ. ಅವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಚಿತ್ರ `ಸೋದರಿ’. `ಭೂ ಖೈಲಾಸ’, `ಮಹಿಷಾಸುರ ಮರ್ಧಿನಿ’, `ರಣದೀರ ಕಂಠೀರವ’ ಸೇರಿದಂತೆ, ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಶಬ್ಧವೇದಿಯಲ್ಲೂ ಜೊತೆಯಾಗಿ ಅಭಿನಯಿಸಿದರು. ಪೌರಾಣಿಕ ಚಿತ್ರ `ಸತ್ಯ ಹರಿಶ್ಚಂದ್ರ’ ಮೂಲಕ ರಾಜ್ ಕುಮಾರ್ ಜೊತೆ ಮೊದಲ ಬಾರಿ ಎಂಪಿ ಶಂಕರ್ ನಟಿಸಿದರು. ರಾಜ್ ಕುಮಾರ್ ನಟಿಸಿದ ಹಲವಾರು ಅದ್ಭುತ ಚಿತ್ರಗಳ ಪೈಕಿ ತುಂಬಾ ಕಾಡುವ ಚಿತ್ರಗಳ ಸಂಖ್ಯೆಯೂ ಯಥೇಚ್ಚವಾಗಿದೆ. ಅವುಗಳಲ್ಲಿ `ಸಂತ ತುಕಾರಾಂ’ ಚಿತ್ರವೂ ಒಂದು. ಈ ಚಿತ್ರದಲ್ಲಿ ರಾಜ್ ಕುಮಾರ್ ಅವರಿಗೆ ಲೀಲಾವತಿ ಜೋಡಿಯಾಗಿದ್ದರು. ಅದೇ ಚಿತ್ರದಲ್ಲಿ ಸಾಹಿತ್ಯ ಬ್ರಹ್ಮ ಚಿ. ಉದಯ್ಶಂಕರ್ ಅವರ ತಂದೆ ಚಿ. ಸದಾಶಿವಯ್ಯ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು.
ಮಿನುಗುತಾರೆ ಕಲ್ಪನಾ ಅಣ್ಣಾವ್ರ ಜೊತೆ ನಟಿಸಿದ ವೃತ್ತಿಜೀವನದ ಮೊದಲ ಚಿತ್ರ `ನಾಂದಿ’ಯೂ ಸಹ ತೀರಾ ಅಪರೂಪದ ಚಿತ್ರಗಳ ಸಾಲಿಗೆ ಸೇರಿತ್ತು. ಎಲ್ಲಾ ರೀತಿಯ ಪಾತ್ರಗಳನ್ನು ರಾಜ್ ನಿಭಾಯಿಸತೊಡಗಿದರು. ಈ ಹಂತದಲ್ಲಿ ಕಮರ್ಷಿಯಲ್ ನೆರಳಿರುವ ಚಿತ್ರಗಳ ಪರ್ವ ನಿಧಾನವಾಗಿ ಶುರುವಾಗತೊಡಗಿತ್ತು. ಅವುಗಳಲ್ಲಿ ವಿಭಿನ್ನ ಕಥಾಹಂದರವಿದ್ದ ಎ. ವಿ ಶೇಷಗಿರಿ ರಾವ್ ನಿರ್ದೇಶನದ `ಬೆಟ್ಟದ ಹುಲಿ’ ಚಿತ್ರವೂ ಒಂದು. ಈ ಚಿತ್ರದಲ್ಲಿ ಉದಯ್ ಕುಮಾರ್, ಅಶ್ವತ್, ಎಂಪಿ ಶಂಕರ್ ಹಾಗೂ ಲೀಲಾವತಿ ಅಭಿನಯಿಸಿದ್ದರು. ಮುಂದೆ ಸತಿ ಸಾವಿತ್ರಿ, ಮದುವೆ ಮಾಡಿ ನೋಡು, ಪತಿವ್ರತೆ, ಮಂತ್ರಾಲಯ ಮಹಾತ್ಮೆ ಚಿತ್ರಗಳು ಯಶಸ್ಸನ್ನು ತಂದುಕೊಟ್ಟಿತ್ತು. `ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ರಾಜ್ ಕುಮಾರ್ ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳಂತೆ ಕಂಡುಬರುತ್ತಾರೆ ಎಂದು ಅಭಿಮಾನಿ ದೇವರು ಇವತ್ತಿಗೂ ಭಕ್ತಿಯಿಂದ ಕೈ ಮುಗಿಯುತ್ತಾರೆ.
ವೈ. ಆರ್ ಸ್ವಾಮಿ ನಿರ್ದೇಶನದ `ಕಠಾರಿವೀರ’ ಚಿತ್ರದಲ್ಲಿ ರಾಜ್ ಕುಮಾರ್ ಉದಯೋನ್ಮುಖ ಸಂಗೀತ ನಿರ್ದೇಶಕರೊಬ್ಬರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅವರು ಮುಂದೊಂದು ದಿನ ಕನ್ನಡ ಚಿತ್ರರಂಗದಲ್ಲಿ ಮಧುರ ಹಾಡುಗಳ ಐತಿಹ್ಯವನ್ನೇ ಬರೆದುಬಿಟ್ಟಿದ್ದರು. ಅವರು ಉಪೇಂದ್ರಕುಮಾರ್. ಈ ಮಧ್ಯೆ ಹಿಂದಿ ಹಾಗೂ ಕನ್ನಡದ ತಲಾ ಒಂದು ಚಿತ್ರದಲ್ಲಿ ಅಭಿನಯಿಸಿ ತೆವಳುತ್ತಿದ್ದ ಮೋಹಕತಾರೆ ಭಾರತಿ, ರಾಜ್ ಕುಮಾರ್ ಅವರ `ಎಮ್ಮೆ ತಮ್ಮಣ್ಣ’ ಚಿತ್ರದ ಮೂಲಕ ಬಣ್ಣ ಹಚ್ಚಿದರು. ಮುಂದೆ ಅವರ ಜೊತೆ `ಸಂಧ್ಯಾರಾಗ’ದಲ್ಲೂ ಕಾಣಿಸಿಕೊಂಡರು. ಗಂಗೇಗೌರಿ, ರಾಜಶೇಕರ, ಬೀದಿ ಬಸವಣ್ಣನವರೆಗೂ ರಾಜ್-ಭಾರತಿ ಜೋಡಿ ಮುಂದುವರಿಯಿತು. ಇದೆಲ್ಲದರ ಆಚೆಗೆ ರಾಜ್ ಕುಮಾರ್ ಮತ್ತು ಅಭಿಮಾನಿ ದೇವರುಗಳ ನಡುವೆ ಅತ್ಯುತ್ತಮ ಸಂಬಂಧದ ಕೊಂಡಿಯೊಂದು ಬೆಸೆದುಕೊಂಡಿತ್ತು.
`ನೆಲವನ್ನು ಉತ್ತು ಬೆಳೆ ತೆಗೆಯಬೇಕು, ಅಂತಿಮ ದಿನಗಳಲ್ಲಿ ರೈತನಾಗಿ ಬದುಕಬೇಕು’ ಇದು ರಾಜ್ ಕುಮಾರ್ ಅವರಿಗಿದ್ದ ಕಟ್ಟಕಡೆಯ ಆಸೆಯಾಗಿತ್ತು. ಅವರು ತೀರಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡಿದರು. ಸತ್ತನಂತರ ಅವರೇ ಕರೆಯುತ್ತಿದ್ದ ಲಕ್ಷಾಂತರ ಅಭಿಮಾನಿ ದೇವರುಗಳ ನಡುವೆಯೇ ಬದುಕಿದ್ದಾರೆ. ಇವತ್ತಿಗೂ ಅವರು ಗಾಢ ನೆನಪಾಗಿ ಕಾಡುತ್ತಿದ್ದಾರೆ. ಅದಕ್ಕೆ ಅವರಿಗಿದ್ದ ವಿಶಿಷ್ಠ ಗುಣಗಳೇ ಕಾರಣ. ಅವರನ್ನು ಮೆಚ್ಚದವರಿಲ್ಲ, ಕೊಂಡಾಡದವರಿಲ್ಲ, ಪ್ರೀತಿಸದವರಿಲ್ಲ, ಅವರ ಅಂಗೈಯನ್ನು ಹಿಡಿದು ಮುತ್ತಿಡಲು ತವಕಿಸಿದ್ದು ಅದೆಷ್ಟು ಅಭಿಮಾನಿ ಹೃದಯಗಳೋ..? ಅಗಣಿತ. ವೃದ್ದರನ್ನು ಗೌರವಿಸಬೇಕು, ಕುರುಡರನ್ನು ರಸ್ತೆ ದಾಟಿಸಬೇಕು, ಒಳ್ಳೆ ಅಪ್ಪನಾಗಬೇಕು, ಒಳ್ಳೇ ಮಗನಾಗಬೇಕು, ಮಾದರಿ ರೈತನಾಗಬೇಕು, ದೇಶ ಕಾಯುವ ಸೈನಿಕನಾಗಬೇಕು, ಇವೆಲ್ಲವನ್ನು ಜೀವನದಲ್ಲಿ ಒಂದಲ್ಲ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಯಸಿದ ಅದೆಷ್ಟೋ ಜನರು, ಶಾಲೆಯಲ್ಲಿ ಪಾಠ ಕಲಿತು, ಹಿರಿಯರ ಅಣಿಮುತ್ತುಗಳನ್ನು ಕೇಳಿ ಹೀಗೊಂದು ನಿರ್ಧಾರಕ್ಕೆ ಬರಲಿಲ್ಲ. ಅವರೆಲ್ಲರೂ ರಾಜ್ ಕುಮಾರ್ ಸಿನಿಮಾಗಳಿಂದ ಪ್ರಭಾವಿತರಾದವರು..!
ರಾಜ್ ಕುಮಾರ್ ಬೇಕಾಬಿಟ್ಟಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಆಯ್ದುಕೊಳ್ಳುತ್ತಿದ್ದ ಕಥೆಯಲ್ಲಿನ ಮೌಲ್ಯವನ್ನು ಗ್ರಹಿಸುತ್ತಿದ್ದರು. ತಾನು ನಟಿಸುವ ಚಿತ್ರ ಚರಿತ್ರೆ ಆಗದಿದ್ದರೂ, ಒಂದೊಳ್ಳೇ ಸಂದೇಶ ಸಾರುವಂತಿರಬೇಕು ಎಂದು ಬಯಸಿದರು. ಅವರು ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ವಿಶಿಷ್ಟ ವ್ಯಕ್ತಿಯಾಗಿ ರೂಪುಗೊಳ್ಳಲಿಲ್ಲ. ಅವರ ವ್ಯಕ್ತಿತ್ವ ರಕ್ತಗತವಾಗಿತ್ತು. ರಾಜ್ ಕುಮಾರ್ ಸಭ್ಯರಂತೆ ನಟಿಸಲಿಲ್ಲ. ಅವರ ವ್ಯಕ್ತಿತ್ವದಲ್ಲೇ ಸಭ್ಯತೆಯಿತ್ತು. ಒಮ್ಮೆ ರಾಜ್ ಕುಮಾರ್ ಅವರಿಗೆ `ಕರ್ನಾಟಕ ರತ್ನ’ ಬಿರುದು ಕೊಡುವುದರ ಬಗ್ಗೆ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ರಾಜ್ ಕುಮಾರ್, `ಮೊದಲು ಆ ಬಿರುದನ್ನು ಕುವೆಂಪು ಅವರಿಗೆ ಕೊಡಿ, ಆಮೇಲೆ ಬೇಕಾದ್ರೆ ನನಗೆ ಕೊಡಿ’ ಎಂದಿದ್ದರು.
ಅದು `ಚಲಿಸುವ ಮೋಡಗಳು’ ಚಿತ್ರದ ಚಿತ್ರೀಕರಣದ ಸಂದರ್ಭ. ಚಿ. ಉದಯ್ಶಂಕರ್ ಅವರು ಬರೆದ `ಜೇನಿನ ಹೊಳೆಯೋ’ ಹಾಡಿನ ಚಿತ್ರೀಕರಣವಾಗಬೇಕಿತ್ತು. ಆ ಚಿತ್ರದ ನಿರ್ದೇಶಕ ಶ್ರೀನಿವಾಸ್ ಹಾಗೂ ನಿರ್ಮಾಪಕ ಸಾ. ರಾ ಗೋವಿಂದು ಅವರಿಗೆ ದೊಡ್ಡ ಗಾಜಿನಲ್ಲಿ ಕರ್ನಾಟಕದ ಮ್ಯಾಪ್ ಬರೆದು ಅದರ ಒಳಗಿಂದ ರಾಜ್ ಕುಮಾರ್ ನಡೆದು ಬರುವ ದೃಶ್ಯವನ್ನು ಶೂಟ್ ಮಾಡುವ ಇರಾದೆಯಿತ್ತು. ಆದರೆ ಇದಕ್ಕೆ ರಾಜ್ ಕುಮಾರ್ ಒಪ್ಪುತ್ತಾರಾ..? ಎಂಬ ಅನುಮಾನವೂ ಇತ್ತು. ಸಾ. ರಾ ಗೋವಿಂದು ದೈರ್ಯ ಮಾಡಿ ಈ ವಿಚಾರವನ್ನು ರಾಜ್ ಕುಮಾರ್ ಅವರ ಮುಂದೆ ಹೇಳಿಬಿಟ್ಟರಂತೆ. ಅದಕ್ಕೆ ರಾಜ್ ಕುಮಾರ್, `ಕುವೆಂಪು ಅವರಂಥ ಮಹಾನ್ ಕವಿಗಳಿದ್ದಾರೆ, ನಮ್ಮ ನಾಡಿನ ಕೀರ್ತಿಗೆ ಕಾರಣರಾದ ರಾಜ-ಮಹಾರಾಜರಿದ್ದಾರೆ, ಮಹಾನ್ ವ್ಯಕ್ತಿಗಳು ನಮ್ಮ ನಾಡಿನ ಭೂಪಟಕ್ಕೆ ಅರ್ಹರು, ನಾನಲ್ಲ’ ಎಂದರಂತೆ.
ಕಲಾವಿದ ಮಂಡ್ಯ ರಮೇಶ್ ಅವರಿಗೆ ರಾಜ್ ಕುಮಾರ್ ಅವರನ್ನು ನೋಡಬೇಕೆಂಬ ಅದಮ್ಯ ಆಸೆಯಿತ್ತು. ಅವಕಾಶವು ಸಿಕ್ಕಿತ್ತು. ಅವತ್ತು ರಾಜ್ ಕುಮಾರ್ ತಮ್ಮ ಮನೆಯ ಅರಳಿಮರಕ್ಕೆ ನಮಸ್ಕರಿಸುತ್ತಾ ನಿಂತಿದ್ದರು. ಸೀದಾ ಅಲ್ಲಿಗೆ ಹೋದ ಮಂಡ್ಯ ರಮೇಶ್ ಏನು ಎತ್ತ ಯೋಚಿಸದೇ ಅವರ ಕಾಲಿಗೆ ಬಿದ್ದು ಬಿಟ್ಟಿದ್ದರು. ಇದ್ಯಾರಪ್ಪ ಎಂದು ರಾಜ್ ಕುಮಾರ್ ಸಾವರಿಸಿಕೊಳ್ಳುವಷ್ಟರಲ್ಲಿ, ಮಂಡ್ಯ ರಮೇಶ್ `ಅಣ್ಣಾ… ನಿಮ್ಮ ಕೈಯ್ಯನ್ನು ಒಂದೇ ಒಂದು ಸಲ ಮುಟ್ಲಾ..” ಎಂದು ಕೇಳಿದ್ರಂತೆ. `ಆಯ್ತು ಕಂದ..’ ಎಂದ ರಾಜ್ ಕುಮಾರ್ ಅವರ ಕೈಯ್ಯನ್ನು ಬಿಗಿಯಾಗಿ ಹಿಡಿದ ಮಂಡ್ಯ ರಮೇಶ್, `ಅಂಥದ್ದೊಂದು ಸ್ಪರ್ಶವನ್ನು ಇನ್ನು ನನ್ನ ಜೀವಿತದಲ್ಲೇ ಅನುಭವಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ. ಅದೆಷ್ಟೋ ಜನರು, ಕೆಲ ಒಳ್ಳೇ ಗುಣಗಳನ್ನು ಹೆತ್ತವರಿಂದ, ಪುಸ್ತಕಗಳಿಂದ ಕಲಿಯದಿದ್ದರೂ ರಾಜ್ ಕುಮಾರ್ ಅವರಿಂದ ಪ್ರಭಾವಿತರಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.
ದಿವಂಗತ ಕೆ. ಎಸ್ ಅಶ್ವತ್. ಕನ್ನಡ ಚಿತ್ರರಂಗ ಕಂಡ ಮೇರುನಟ. ಈ ನಟ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ರಾಜ್ ಕುಮಾರ್ ಜೊತೆ ಅಭಿನಯಿಸಿದ ಪ್ರತಿಯೊಂದು ಚಿತ್ರವೂ, ಅವರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಅದ್ಭುತ. ಅವರಂಥ ನಟನನ್ನು ನಾನು ಕಂಡೇ ಇಲ್ಲ ಎಂದಿದ್ದರು ಕೆ. ಎಸ್ ಅಶ್ವತ್. ಅದು `ದಾರಿ ತಪ್ಪಿದ ಮಗ’ ಚಿತ್ರದ ಶೂಟಿಂಗ್ ಸಮಯ. ಆ ಚಿತ್ರದಲ್ಲಿ ರಾಜ್ ಕುಮಾರ್ ನಾಯಕ ಹಾಗೂ ಖಳನಾಯಕನ ಪಾತ್ರಗಳನ್ನು ನಿಭಾಯಿಸಿದ್ದರು. ಆ ಚಿತ್ರದ ಒಂದು ಸನ್ನಿವೇಶದಲ್ಲಿ ಜೀಪೊಂದು ವೇಗವಾಗಿ ಬಂದು ಟ್ರಕ್ ನೊಳಗೆ ಸೇರಿಕೊಳ್ಳುವ ದೃಶ್ಯವಿತ್ತು. ಎಲ್ಲರೂ ನೋಡುತ್ತಿರುವಂತೆ ಅತೀ ವೇಗವಾಗಿ ಬಂದ ಜೀಪ್ ಟ್ರಕ್ಕ್ ಸಮೀಪ ಬರುತ್ತಿದ್ದಂತೆ ಎಲ್ಲರೂ ಭಯಭೀತರಾಗಿ ಕಿರುಚಿದ್ದರು. ಯಾಕಂದ್ರೆ ಅಷ್ಟು ವೇಗವಾಗಿ ಜೀಪನ್ನು ಡ್ರೈವ್ ಮಾಡಿಕೊಂಡು ಬರುತ್ತಿದ್ದದ್ದು ರಾಜ್ ಕುಮಾರ್. ಬಂದಷ್ಟೇ ವೇಗವಾಗಿ ಟ್ರಕ್ಕ್ ಒಳಗೆ ಜೀಪ್ ನುಗ್ಗಿತ್ತು. ಆದರೆ ಎಲ್ಲವೂ ಸಾವಾಕಾಶವಾಗಿ ಅಂತ್ಯವಾಗಿತ್ತು. ಎಲ್ಲರೂ ನಿಟ್ಟುಸಿರುಬಿಟ್ಟಿದ್ದರು. ಯಾವುದೇ ಡ್ಯೂಪ್ ಇಲ್ಲದೇ ಸಾಹಸ ಮಾಡಿದ್ದರು ರಾಜ್ ಕುಮಾರ್.
ಅದು 1982ರ ಸಮಯ. ಅವತ್ತು ಇಡೀ ಕರ್ನಾಟಕ ಮಾತ್ರವಲ್ಲ, ಇಡೀ ಪ್ರಪಂಚವೇ ಭಾರತದತ್ತ ಆಸ್ಥೆಯಿಂದ, ಅಷ್ಟೇ ಅಚ್ಚರಿಯಿಂದ ನೋಡುತ್ತಿತ್ತು. ಅವತ್ತು ಸೇರಿದ್ದ ಲಕ್ಷ-ಲಕ್ಷ ಜನರನ್ನು ಕಂಡು ಸರ್ಕಾರವೇ ಬೆಚ್ಚಿಬಿದ್ದಿತ್ತು. ಅಂಥದ್ದೊಂದು ಮಿಂಚಿನ ಸಂಚಲನಕ್ಕೆ ಕಾರಣವಾಗಿದ್ದು ಅಣ್ಣಾವ್ರು. ಕಣ್ಣು ಹಾಯಿಸಿದ ಕಡೆ ಜನ, ಅದೆಷ್ಟು ಲಕ್ಷವೋ ಲೆಕ್ಕವಿಟ್ಟವರಿಲ್ಲ. ಗುಂಡೂರಾವ್ ನೇತೃತ್ವದ ಸರ್ಕಾರವೇ ತಬ್ಬಿಬ್ಬಾಗಿತ್ತು. ಸುಮ್ಮನೇ ಇದ್ದರೇ ಅನಾಹುತ ಖಾತ್ರಿ ಅಂತ ಕಾಂಪ್ರಮೈಸ್ಗೆ ಇಳಿದಿತ್ತು. ಲಕ್ಷಾಂತರ ಜನರನ್ನು ಒಂದು ಕಡೆ ಸೇರಿಸುವ ಸಾಮರ್ಥ್ಯವಿದ್ದ ಆ ಅಗಾಧ ಶಕ್ತಿಯ ಹೆಸರು ಡಾ.ರಾಜ್ ಕುಮಾರ್. ಅದು ಗೋಕಾಕ್ ಚಳುವಳಿ. ನಾಡಿನ ಜನ ಅದೆಷ್ಟು ಭಾವುಕರೆಂದರೇ ಕೇವಲ ರಾಜ್ ಕುಮಾರ್ ಗಾಗಿ ಅವರು ಚಳುವಳಿಗೆ ಧುಮುಕಿದ್ದರು. ಅಷ್ಟಕ್ಕೂ ಅವರಿಗೆ ಯಾವ ಚಳುವಳಿಯ ಹುಕಿ ಇರಲಿಲ್ಲ. ಅವರಿಗೆ ಅಣ್ಣಾವ್ರನ್ನ ನೋಡಬೇಕಿತ್ತು. ಅವರನ್ನು ಮನಸಾರೆ ಮಾತಾಡಿಸಬೇಕಿತ್ತು. ಅವಕಾಶ ಸಿಕ್ಕರೇ ಒಂದೇ ಒಂದು ಅಪ್ಪುಗೆಗಾಗಿ ಹಾತೊರೆದಿದ್ದರು.
ಆಗ ಕರ್ನಾಟಕದಲ್ಲಿ ಆರ್. ಗುಂಡೂರಾವ್ ಸರ್ಕಾರವಿತ್ತು. ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಏಕೈಕ ಪ್ರೌಢಭಾಷೆಯನ್ನಾಗಿ ಮಾಡಬೇಕೆಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ವಿನಾಯಕ ಕೃಷ್ಣ ಗೋಕಾಕ್, ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ವರದಿಯನ್ನು ಜಾರಿಗೆ ತರಲು ಸರ್ಕಾರ ನಿರಾಕರಿಸಿತ್ತು. ಆ ಕಾರಣಕ್ಕೆ ಸಾಹಿತಿಗಳು, ಪತ್ರಕರ್ತರು, ಸಂಘಟಕರು ಸೇರಿಕೊಂಡು ಗೋಕಾಕ್ ಚಳುವಳಿಗೆ ಕರೆ ನೀಡಿದರು. ಆದರೆ ಗೋಕಾಕ್ ಚಳುವಳಿಗೆ ಜನರ ಬೆಂಬಲ ಸಿಗಲಿಲ್ಲ. ನೀರಸ ಆರಂಭ ಕಂಡಿತ್ತು. ಸಪ್ಪೆಯಾಗಿದ್ದ ಚಳುವಳಿಯನ್ನು ಕಂಡು ಸರ್ಕಾರ ತಲೆ ಕೆಡಿಸಿಕೊಳ್ಳದೇ ಸುಮ್ಮನಾಯಿತು. ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯರಿಗೆ ಆಗೊಂದು ಉಪಾಯ ಹೊಳೆದಿತ್ತು. ಚಳುವಳಿಗೆ ಜನರನ್ನು ಸೆಳೆಯಲು, ಅವರನ್ನು ಭಾವನಾತ್ಮಕವಾಗಿ ಗೆದ್ದ ವ್ಯಕ್ತಿಯಿಂದ ಮಾತ್ರ ಸಾಧ್ಯ..! ಅಂಥವರು ಚಳುವಳಿಗೆ ಧುಮುಕಿಬಿಟ್ಟರೇ ತಮ್ಮ ಉದ್ದೇಶ ಖಂಡಿತಾ ಈಡೇರುತ್ತದೆ. ಹಾಗಾದ್ರೆ ಅಂಥ ವ್ಯಕ್ತಿ ಯಾರು..? ಒಬ್ಬ ರಾಜ್ ಕುಮಾರ್ ಬಿಟ್ಟರೇ ಇನ್ಯಾರು ಇರಲು ಸಾಧ್ಯ..?. ಯಾವಾಗ ರಾಜ್ ಕುಮಾರ್ ಗೋಕಾಕ್ ಚಳುವಳಿಗೆ ಧುಮುಕಿದರೋ, ಲಕ್ಷ-ಲಕ್ಷ ಜನರು ಚಳುವಳಿಯಲ್ಲಿ ಭಾಗವಹಿಸಿದರು. ಚಳುವಳಿ ಉಗ್ರಸ್ವರೂಪ ಕಾಣುವ ಲಕ್ಷಣ ಗೋಚರಿಸಿದಾಗ ಬೆದರಿದ ಸರ್ಕಾರ ಹೊಸಭಾಷ್ಯ ನೀತಿಸೂತ್ರ ರಚಿಸಿತ್ತು. ಅಲ್ಲಿಗೇ ಗೋಕಾಕ್ ಚಳುವಳಿ ತಣ್ಣಗಾಗಿತ್ತು. ಇಡೀ ಚಳುವಳಿ ಡಾ.ರಾಜ್ ಕುಮಾರ್ ಕಾರಣಕ್ಕೆ ಯಶಸ್ವಿಯಾಗಿತ್ತು.
ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ `ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ರಾಜ್ ಕುಮಾರ್ ಶಿವನ ಪಾತ್ರ ಮಾಡಿದ್ದರು. ಶಿವನ ಕೊರಳಿಗೆ ಡ್ಯೂಪ್ ಹಾವು ಬೇಡ, ಒರಿಜಿನಲ್ ಹಾವೇ ತರಿಸಿ ಎಂದರು ರಾಜ್ ಕುಮಾರ್. ರಾಜ್ ಕುಮಾರ್ ನಟನೆಯ ವಿಚಾರದಲ್ಲಿ ಒಂದ್ ಸಾರಿ ಕಮಿಟ್ ಆದರೆಂದರೇ, ದೂಸ್ರಾ ಮಾತೇ ಇರಲಿಲ್ಲ. ಒರಿಜಿನಲ್ ಹಾವನ್ನು ತರಿಸಿ ಅವರ ಕುತ್ತಿಗೆಗೆ ಸುತ್ತಲಾಯಿತು. ಆದರೆ ಇದರಿಂದ ನಿಜಕ್ಕೂ ಹೆದರಿದ್ದು ಪಾರ್ವತಿ ಪಾತ್ರಧಾರಿ ಗೀತಾ. ಹಾವು ಹೊರಡಿಸುತ್ತಿದ್ದ ಶಬ್ಧ, ಅದು ಕತ್ತನ್ನು ಆಚೀಚೆ ಹೊರಳಿಸುತ್ತಿದ್ದ ವೈಖರಿ ನೋಡಿ, ಚಿತ್ರೀಕರಣದುದ್ದಕ್ಕೂ ಅವರು ರಾಜ್ ಕುಮಾರ್ ಅವರಿಂದ ಗಾವುದ ಕಾಯ್ದುಕೊಂಡರು. ರಾಜ್ ಕುಮಾರ್ ಜೊತೆ ನಟಿಸಿದ ಅನೇಕ ಕಲಾವಿದರಿಗೆ ಇಂತಹ ಅನುಭವಗಳಾಗಿವೆ. ಅವರ ಜೊತೆ ಕಳೆದ ಪ್ರತಿಯೊಂದು ಕ್ಷಣಗಳೂ ಅದ್ಭುತ, ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯ ಎಂದವರಿದ್ದಾರೆ. ಅಂಥ ರಾಜ್ ಕುಮಾರ್ ಅವರ ಬಗ್ಗೆ ಅಭಿಮಾನಿ ದೇವರು ಕಣ್ಣೀರು ಹಾಕುವ ದಿನವೂ ಹೊಂಚು ಹಾಕಿತ್ತು. ಅದು ವೀರಪ್ಪನ್ ರೂಪದಲ್ಲಿ ಬಂದೆರಗಿದ ಆಘಾತ..!!
ತನ್ನ ಕೆಲವು ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ವೀರಪ್ಪನ್ ಅದೊಂದು ದಿನ ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ. ಈ ಘಟನೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಭಿಮಾನಿಗಳು ಉದ್ರೇಕಗೊಂಡಿದ್ದರು. ಮುಂದೊಂದು ದಿನ ನೂರ ಎಂಟು ದಿನಗಳ ಅಜ್ಞಾತವಾಸ ಮುಗಿಸಿ ರಾಜ್ ಕುಮಾರ್ ಬಿಡುಗಡೆಯಾಗಿಯೂ ಬಂದರು. ಆದರೆ ಆ ನೂರೆಂಟು ದಿನಗಳಲ್ಲಿ ಅವರು ವೀರಪ್ಪನ್ ಒಳಗಿದ್ದ ಮನುಷ್ಯತ್ವವನ್ನು ಬಡಿದೆಬ್ಬಿಸಿದ್ದರು. ಅವನಿಗೆ ಬದುಕಿನ ಮೌಲ್ಯಗಳ ಪಾಠ ಹೇಳಿದರು. ಅಲ್ಲಿದ್ದಷ್ಟು ದಿನ ಅವರು ನಿಷ್ಟಾವಂತ ಮೇಷ್ಟ್ರಾಗಿದ್ದರು. ವೀರಪ್ಪನ್ ವಿಧೇಯ ವಿದ್ಯಾರ್ಥಿಯಾಗಿದ್ದ. ಅಲ್ಲಿದ್ದಾಗಲು ರಾಜ್ ಕುಮಾರ್ ಬೆಳಿಗ್ಗೆ ಬೇಗ ಎದ್ದು ಯೋಗ ಮಾಡುತ್ತಿದ್ದರು. ಸೂರ್ಯ ನಮಸ್ಕಾರ ಮಾಡುತ್ತಿದ್ದರು. ಅವರ ದಿನಚರಿಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಇವೆಲ್ಲವನ್ನು ಗಮನಿಸುತ್ತಿದ್ದ ವೀರಪ್ಪನ್ ಒಂದು ದಿನ ಕಣ್ತುಂಬಿ, `ನಾನೆಂಥಾ ಕೆಲಸ ಮಾಡಿಬಿಟ್ಟೇ, ದೇವರನ್ನು ಅಪಹರಿಸಿ ತಂದೇನಲ್ಲ, ನನ್ನ ಎಲ್ಲಾ ಪಾಪಗಳಿಗೆ ಪ್ರಾಯಶಃ ಕ್ಷಮೆಯಿರಬಹುದೇನೋ, ಈ ಪಾಪಕ್ಕೆ ಮಾತ್ರ ಕ್ಷಮೆಯಿಲ್ಲ’ ಎಂದು ಹೇಳಿದ್ದನಂತೆ. ರಾವಣನ ಮನಸ್ಸಿನಲ್ಲೂ ರಾಜ್ ಕುಮಾರ್ ಹೂವಾಗಿ ಅರಳಿದ್ದರು. ಒಮ್ಮೆ ಸದಾಶಿವನಗರದ ಮನೆಯಲ್ಲಿ ರಾಜ್ ಕುಮಾರ್, ಅವರ ಪತ್ನಿ ಪಾರ್ವತಮ್ಮ, ಪುತ್ರ ರಾಘವೇಂದ್ರ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಮಾತಿನ ಮಧ್ಯೆ ರಾಜ್ ಕುಮಾರ್, `ನಾನು ಸತ್ತ ಮೇಲೆ ನನ್ನನ್ನು ಸುಡ್ತಾರಾ..? ಎಂದು ಕೇಳಿದ್ದರಂತೆ. ಅದಕ್ಕೆ ಪಾರ್ವತಮ್ಮ, `ಹೀಗೆಲ್ಲಾ ಮಾತಾಡಬೇಡಿ’ ಎಂದು ಗದರಿದಾಗ, `ಹಾಗಲ್ಲ ಪಾರ್ವತಿ, ನನ್ನನ್ನು ಸುಟ್ಟು ಆ ನೆಲ ಹಾಳು ಮಾಡಬಾರದು, ಬೆಳೆ ಬೆಳೆಯೋ ಜಾಗ ಗಬ್ಬೆಬ್ಬಿಸಬಾರದು’ ಅಂದರಂತೆ. ಮುಂದೆ, ತೀರಿದ ನಂತರ ಕಣ್ಣುಗಳು ಮತ್ತೊಬ್ಬರಿಗೆ ಉಪಯೋಗವಾಗಲಿ ಅಂತ ದಾನಮಾಡಿದ ಸರ್ವಶ್ರೇಷ್ಟರಲ್ಲಿ ಒಬ್ಬರಾದರು.
ಅಣ್ಣಾವ್ರು ನಿಶ್ಟೇಷ್ಟಿತರಾಗಿ ಮಲಗಿದ್ದ ದಿನವದು. ಅವತ್ತು ಅಣ್ಣಾವ್ರ ಸದಾಶಿವನಗರದ ಬಂಗಲೆಗೆ ಸಾವಿರಾರು ಜನರು ನುಗ್ಗಿದ್ದರು. ಬಾಲ್ಕನಿಯ ತುಂಬಾ ಜನ, ಸಜ್ಜಾದ ಮೇಲೂ ಜನ, ಅಕ್ಕಪಕ್ಕದ ಮನೆಯವರ ಪರಿಸ್ಥಿತಿಯಂತೂ ದೇವರಿಗೇ ಪ್ರೀತಿ. ಅಲ್ಲೆಲ್ಲೋ ಮಾಜಿ ಪೊಲೀಸ್ ಕಮೀಷನರ್ ಅಜಯ್ ಕುಮಾರ್ ಸಿಂಗ್, ಜನರನ್ನು ನಿಯಂತ್ರಿಸಲಾಗದೇ ಒದ್ದಾಡುತ್ತಿದ್ದರೇ, ಅಣ್ಣಾವ್ರ ಮಕ್ಕಳು ದೈನೇಸಿಯಾಗಿ ಜನರಿಗೆ ಕೈ ಮುಗಿಯುತ್ತಿದ್ದರು. `ಪ್ಲೀಜ್.. ನಮ್ಮ ಬದುಕನ್ನು ರೂಪಿಸಿದ, ಅದಕ್ಕಿಂತಲೂ ಮಿಗಿಲಾಗಿ ಪೂಜಿಸುವ ಅಪ್ಪಾಜಿಯನ್ನು ಹತ್ತಿರದಿಂದ ನೋಡಲು, ಒಂದೇ ಒಂದು ಸಾರಿ ಅವರನ್ನು ಮನಸಾರೆ ಅಪ್ಪಿಕೊಳ್ಳಲು ಅವಕಾಶ ಮಾಡಿಕೊಡಿ’ ಎಂಬ ಅವರ ಅಳಲನ್ನು ಯಾವೊಬ್ಬ ಅಭಿಮಾನಿ ದೇವರು ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. `ಅಣ್ಣಾ… ನಮ್ಮ ಸ್ವತ್ತು, ಅವರು ನಮ್ಮ ಹಕ್ಕು’ ಅಂದುಬಿಟ್ಟಿದ್ದರು. ಅವತ್ತಾಗಿದ್ದು ಕೇವಲ ಅವಸರ. ಯಾವುದೇ ಪೂರ್ವ ಸಿದ್ದತೆಯಿಲ್ಲದೇ ನಡೆದುಹೋದ ಅನಾಹುತ. ನಿಜವಾದ ಅಭಿಮಾನಿ ಅಣ್ಣಾವ್ರ ಅಂತಿಮ ಸ್ಪರ್ಶಕ್ಕೆ ಮಾತ್ರ ತವಕಿಸುತ್ತಿದ್ದ. ಗಲಾಟೆ ಸೃಷ್ಟಿಸಿದ್ದು ರಾಜ್ ಕುಮಾರ್ ಅವರ ಒಂದೇ ಒಂದು ಸಿನಿಮಾ ನೋಡದ, ರಾಜ್ ಕುಮಾರ್ ಎಂದರೇನು ಗೊತ್ತೇ ಇರದ ಕೆಲ ಕಿಡಿಗೇಡಿಗಳು. ಅವರೇ ಸಿಕ್ಕ ಸಿಕ್ಕ ವಾಹನಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಟ್ಟರು. ಅನಗತ್ಯ ವಯೊಲೆನ್ಸ್ ಸೃಷ್ಟಿ ಮಾಡಿದ್ದರು. ಇವೆಲ್ಲ ಆದ ಮೇಲೆ ಕಂಠೀರವ ಸ್ಟುಡಿಯೋ ಸಮೀಪದ ಸಮಾಧಿಯಲ್ಲಿ ಅಣ್ಣಾವ್ರು ತಣ್ಣಗೆ ಮಲಗಿದ್ದರು. ಅವರು ತೀರಿಹೋಗಿ ಹತ್ತು ವರ್ಷ ಕಳೆದರೂ ಇವತ್ತಿಗೂ ಅವರನ್ನು ಆರಾಧಿಸುವುದನ್ನು ಅಭಿಮಾನಿ ದೇವರು ಮರೆತಿಲ್ಲ. ಅವರ ಸ್ಮಾರಕದಲ್ಲಿ ಮದುವೆ ನಡೆಯುತ್ತದೆ. ಮಗುವಿನ ನಾಮಕರಣ ನಡೆಯುತ್ತದೆ. ವೃದ್ಧರಿಂದ ಹಿಡಿದು ಚಿಕ್ಕಮಕ್ಕಳ ತನಕ ಅವರನ್ನು ಅಭಿಮಾನಿಸದವರಿಲ್ಲ, ಅನುಸರಿಸದವರಿಲ್ಲ.
ರಾಜ್ ಪರ್ವ ಮುಗಿದಿರೋದು ನಿಜ, ಆದರೆ ಅವರು ಬಿಟ್ಟು ಹೋದ ನೆನಪುಗಳು ಯಾವತ್ತಿಗೂ ಜೀವಂತ. ಅಂತಿಮವಾಗಿ ಅಣ್ಣಾವ್ರ ಬಗ್ಗೆ ಏನಾದ್ರೂ ಹೇಳಬೇಕು ಅಂತಿದ್ರೆ, ಹೀಗೆ ಹೇಳಬಹುದಷ್ಟೇ. `ಅಣ್ಣಾ.. ಒಂದು ಸಾರಿ ಹುಟ್ಟಿ ಬಾ… ಪ್ಲೀಜ್..’
- ರಾ ಚಿಂತನ್
POPULAR STORIES :
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!






