ನೀ ಎಸೆದ ಮೊದಲ ಗೂಗ್ಲಿ ನೋಟಕ್ಕೆ ಕ್ಲಿಯರ್ ಬೌಲ್ಡ್ ನಾನು. ಮನಸ್ಸಿನ ಪಿಚ್ ನಲ್ಲಿ ಭಾವನೆಗಳು 140-150km/h ವೇಗದಲ್ಲಿ ಬರುತ್ತಿರಲು ಬುದ್ಧಿಯು ಸಮಯವನರಿತು ಸೊಗಸಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದೆ. ಅದೆಷ್ಟೇ ಕಷ್ಟದ ಯಾರ್ಕರ್ ಬಂದರೂ third man ಗೆ ಸಲೀಸಾಗಿ ಕಳುಹಿಸಲು ಕಲಿತಿರುವೆ. ಇಷ್ಟಕ್ಕೆಲ್ಲಾ ನೀನಲ್ಲದೆ ಇನ್ಯಾರು ಕಾರಣ ಓ ಮನದರಸಿ…..
ಅಷ್ಟಕ್ಕೂ ನನ್ನೆದೆಯಲ್ಲಿ ಲವ್ ಪ್ರೀಮಿಯರ್ ಲೀಗ್ ಆರಂಭ ಆಗಿದ್ದಾರೂ ಯಾವಾಗ??? ಅದಂತೂ ಉತ್ತರ ಸಿಗದ ಪ್ರಶ್ನೆ ಬಿಡು.. ಅದೇಕೋ ಇತ್ತೀಚೆಗೆ ಗೆಲ್ಲುವ ಮನಸೇ ಆಗುತ್ತಿಲ್ಲ . ಅಷ್ಟು ಸೋತಿರುವೆ ನಾನು ನಿನಗೆ ..
ನಿನ್ನ ಹಿಂದೆ ಒಂದು ದಿನವೂ ಸುತ್ತಿದವ ನಾನಲ್ಲ. ಐಸ್ ಕ್ರೀಮ್ ಶಾಪ್ , ಬಸ್ ಸ್ಟ್ಯಾಂಡ್ ,ಬ್ಯೂಟಿ ಪಾರ್ಲರ್ ಎಂದು ಪಾದಯಾತ್ರೆ ಮಾಡಿದವ ನಾನಲ್ಲ.ಏಕೆಂದರೆ ನೀನು ಯಾವಾಗಲೂ ನನ್ನ ಪಕ್ಕದಲ್ಲೇ ಹೆಜ್ಜೆ ಹಾಕಿದವಳು.ಅದೇ ಗುಂಗಿನಲ್ಲಿ ಎಂದೆಂದೂ ಹೀಗೆ ಹೆಜ್ಜೆ ಹಾಕುವೆಯಾ ಎಂದು ಕೇಳಬೇಕು ಎಂದಾಗಲೆಲ್ಲಾ ನನಗೆ ಕಾಡುವ ಭಯವೊಂದೇ… ನೀನೆಲ್ಲಿ ” ನಾವಿಬ್ಬರೂ ಜೊತೆಯಲ್ಲಿ ಬೆಳೆದ್ವಿ. ಜೊತೆಯಲ್ಲಿ ಆಟ ಆಡಿದ್ವಿ. ಒಂದೇ ಕಾಲೇಜು, ಒಂದೇ ಕ್ಲಾಸ್ ಅದೆಲ್ಲಾ ಹೌದು. ನಾವಿಬ್ಬರೂ ಅದೆಷ್ಟೋ personal ವಿಚಾರಗಳನ್ನು ಶೇರ್ ಮಾಡ್ಕೊಂಡಿದಿವಿ. ಇದೆಲ್ಲಾ ಒಬ್ಬ ಸ್ನೇಹಿತೆಯಾಗಿ ಶೇರ್ ಮಾಡ್ಕೊಂಡಿದಿನಿ. ಇದಕ್ಕೆ ನೀನು ಪ್ರೀತಿಯ ಅರ್ಥ ಕಲ್ಪಿಸುತ್ತಿಯಾ ಅಂತ ಕನಸು ಮನಸಿನಲ್ಲೂ ಅಂದುಕೊಂಡವಳಲ್ಲ. ” ಅಂತ ಅಂದುಬಿಟ್ಟರೇ…
ಅದಕ್ಕೂ ಉತ್ತರಿಸಲು ತಯಾರಾಗಿರುವೆ ನಾನೀಗ. ” ನಮ್ಮಿಬ್ಬರ ಸ್ನೇಹ ಯಾಕೆ ಪ್ರೀತಿಯಾಗಬಾರದು .ಯಾವುದೇ ಒಂದು ಉತ್ತಮ ಸಂಬಂಧ ಅನ್ನೋದು ಇದ್ದರೆ ಅದರಲ್ಲಿ ಸ್ನೇಹ ಇದ್ದೇ ಇರುತ್ತೆ. ಅಂತಹ ಸ್ನೇಹ -ಸಂಬಂಧ ನಮ್ಮ ನಡುವೆ ಇದೆ. ನಾವ್ಯಾಕೆ ಜೀವನ ಸಂಗಾತಿಗಳಾಗಬಾರದು?? ” ಎಂದು ಕೇಳಬೇಕೆಂದುಕೊಂಡಿರುವೆ.
ರಾತ್ರಿಯಾಕಾಶದಲ್ಲಿ ನಕ್ಷತ್ರಗಳಿಲ್ಲದೇ ಬರೀ ಚಂದ್ರನೊಂದೇ ಇದ್ದರೆ ಹೇಗೆ ಶೋಭಿಸುವುದಿಲ್ಲವೋ ಹಾಗೆ ನನ್ನ ಜೀವನ ನೀನಿಲ್ಲದೆ ಶೋಭಿಸುವುದಿಲ್ಲ ಕಣೇ …
ಬರುವೆಯಾ ನನ್ನ ಬದುಕಿನಲ್ಲಿ ತಾರೆಯಾಗಿ
ಕಾದಿರುವೆ ನಾ ನಿನ್ನ ಉತ್ತರಕಾಗಿ
ಪ್ರೇಮಿಯಾಗದಿದ್ದರೂ ಕೊನೆವರೆಗೂ ಜೊತೆಯಾಗಿರು
ಜೀವಸ್ನೇಹಿತೆಯಾಗಿ…..
- ದರ್ಶನ್ ಭಟ್