ಮೇವು ತಿಂದ ಲಾಲೂ ಜೈಲು ಪಾಲು ; ಇದನ್ನು ಪೊಲಿಟಿಕಲ್ ಗೇಮ್ ಎನ್ನುವುದೇಕೆ..?

Date:

ಅದನ್ನು ಪೊಲಿಟಿಕಲ್ ಗೇಮ್ ಎನ್ನುತ್ತೀರಾ..? ಅಭ್ಯಂತರವಿಲ್ಲ. ಹಾಗಂತ ಲಾಲೂ ಮೇವು ತಿಂದೇ ಇಲ್ವೇ..? ಇಲ್ಲವೆಂಬ ವಾದ ನ್ಯಾಯಾಂಗ ನಿಂದನೆಯಾಗುತ್ತದೆ. ಖಜಾನೆಯಿಂದ ನೂರಾರು ಕೋಟಿ ಕಣ್ಮರೆಯಾಗಿದ್ದು ನಿಜವೆಂದ ಮೇಲೆ ಹಗರಣ ಆಗಿಯೇ ಇರುತ್ತದೆ. ಒಟ್ಟು ಆರು ಕೇಸುಗಳ ಪೈಕಿ ಎರಡೂ ಕೇಸಲ್ಲಿ ಲಾಲೂ ಅಪರಾಧಿ ಎಂದು ತೀರ್ಮಾನವಾಗಿದೆ. ಬಾಕಿಯಿರುವುದು ನಾಲ್ಕು ಕೇಸು. ಅದರಲ್ಲೂ ಲಾಲೂ ಮುಕ್ತಿಯಾಗುವ ಭರವಸೆಯಿಲ್ಲ. ಆರ್‍ಜೆಡಿ ಎಂಬ ಬಲಿಷ್ಠ ಪಕ್ಷವೊಂದರ ಬೆನ್ನೆಲುಬು ಮುರಿದಿರುವುದು ನಿಖರ.

ಈಗ್ಗೆ ಮೂರು ವರ್ಷದ ಹಿಂದೆ ಮೇವಿನ ಮೊದಲ ಅಧ್ಯಾಯ ಮುಕ್ತಾಯವಾಗಿತ್ತು. ಅವತ್ತು `ಸಾರ್ವಜನಿಕರ ಹಣ ಲೂಟಿ ಮಾಡಲು ಮುಖ್ಯಮಂತ್ರಿಯಿಂದ ಕಾರಕೂನನವರೆಗೆ ಕೈ ಜೋಡಿಸಿದ ಅತ್ಯಂತ ಹೇಯ ಪ್ರಕರಣವಿದು. ದೇವರು ಸರ್ವಾಂತರ್ಯಾಮಿ, ಸರ್ವಶಕ್ತ , ಸರ್ವಜ್ಞ ಎಂಬುದನ್ನು ನಾವು ಹಿಂದೆ ಕೇಳುತ್ತಿದ್ದೆವು. ಆದರೆ ಇವತ್ತಿನ ರಾಜಕಾರಣಿಗಳು ದೇವರ ಜಾಗದಲ್ಲಿ ಭ್ರಷ್ಟಾಚಾರವನ್ನು ಪ್ರತಿಷ್ಠಾಪಿಸಿದ್ದಾರೆ ಎಂದಿದ್ದು ಸಿಬಿಐ ವಿಶೇಷ ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್. ಲಾಲೂ ಮೇವಿನ ಮೊದಲ ಕೇಸಿನಲ್ಲಿ ತೀರ್ಪನ್ನು ಓದುವ ಮುನ್ನ ಪ್ರವಾಸ್ ಕುಮಾರ್ ಸಿಂಗ್ ಹೇಳಿದ್ದ ಮಾತಿದು.

`ಸ್ವಾಮಿ, ನಾನು ನಿರಪರಾಧಿ. ಮೇವು ಹಗರಣವನ್ನು ಮೊದಲು ಬೆಳಕಿಗೆ ತಂದು, ತನಿಖೆಗೆ ಆದೇಶಿಸಿದ್ದವನೇ ನಾನು. ಆದರೆ ಪ್ರಕರಣದ ಹೊಣೆಯನ್ನು ನನ್ನ ತಲೆಗೇ ಕಟ್ಟಲಾಯಿತು. ನನ್ನ ವಿರುದ್ಧದ ತೀರ್ಪು ನ್ಯಾಯಕ್ಕೆ ವಿರುದ್ಧವಾದುದು. ತಪ್ಪೇ ಮಾಡದ ನನಗೆ ಹೇಗೆ ಶಿಕ್ಷೆ ವಿಧಿಸುತ್ತೀರಿ?”- ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿದ್ದುಕೊಂಡೇ ವಿಡಿಯೊ ಕಾನ್ಫರೆನ್ಸ್ ಮೂಲಕ ಕೈ ಮುಗಿದು ನ್ಯಾಯಾಧೀಶರನ್ನು ಬೇಡಿಕೊಳ್ಳುತ್ತಿರುವ ದೃಶ್ಯವನ್ನು ನೋಡಿದ್ದ ನ್ಯಾಯಾಧೀಶರು ಗುನುಗಿದ್ದು ಹೀಗೆ- ಇವತ್ತಿನ ರಾಜಕಾರಣಿಗಳು ದೇವರ ಜಾಗದಲ್ಲಿ ಭ್ರಷ್ಟಾಚಾರವನ್ನು ಪ್ರತಿಷ್ಠಾಪಿಸಿದ್ದಾರೆ.

ಆದರೆ ಪ್ರವಾಸ್ ಕುಮಾರ್ ಸಿಂಗ್ ಲಾಲೂ ಕಣ್ಣೀರಿಗೆ ಕರಗಲಿಲ್ಲ. ಮನವಿಯನ್ನು ಪುರಸ್ಕರಿಸಲಿಲ್ಲ. ಇಂತಹ ಬೇಡಿಕೆಗಳನ್ನು ಉನ್ನತ ನ್ಯಾಯಾಲಯದಲ್ಲಿಟ್ಟುಕೊಳ್ಳಿ ಎಂದು ನಿರ್ವಿಕಾರ ಚಿತ್ತದಿಂದ ತೀರ್ಪು ಓದಲು ಆರಂಭಿಸಿದರು. ಅಲ್ಲಿಗೆ ದಶಕಗಳ ಕಾಲ ಬಿಹಾರವನ್ನು ತನ್ನ ಕಣ್ಣಿನ ಇಶಾರೆಯಲ್ಲಿ ತಿರುಗಿಸಿದ್ದ ಲಾಲೂ ಕಂಬಿ ಹಿಂದೆ ಸೇರುವುದು ಖಚಿತವಾಯಿತು. ಆರ್‍ಜೆಡಿ ನಾಯಕನಿಗೆ ಐದು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು 25 ಲಕ್ಷ ರೂಪಾಯಿ ದಂಡ ಪ್ರಕಟವಾಯಿತು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಅವರ ಸಂಸತ್ ಸದಸ್ಯತ್ವವೂ ರದ್ದುಗೊಂಡಿತು. ಜೈಲು ಶಿಕ್ಷೆ ಮುಗಿದ ಬಳಿಕದ ಆರು ವರ್ಷ, ಅಂದರೇ ಒಟ್ಟು ಹನ್ನೊಂದು ವರ್ಷ ರಾಜಕೀಯ ನಿಷೇಧಕ್ಕೊಳಗಾದರು.

ಇದೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರಿಗೆ ನ್ಯಾಯಾಧೀಶರು ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ಎರಡು ಲಕ್ಷ ರೂಪಾಯಿ ದಂಡ ವಿಧಿಸಿದರು. ದೋಷಿಗಳೆಂದು ಪರಿಗಣಿತರಾಗಿದ್ದ ನಾಲ್ವರು ಐಎಎಸ್ ಅಧಿಕಾರಿಗಳಾದ ಫೂಲ್ಚಂದ್ ಸಿಂಗ್, ಮಹೇಶ್ ಪ್ರಸಾದ್, ಬೆಕ್ ಜೂಲಿಯಸ್, ಕೆ. ಆರ್ಮುಗಂ ಮತ್ತು ಮಾಜಿ ಶಾಸಕ ಆರ್.ಕೆ. ರಾಣಾ ಅವರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದರು. ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಲಾಲೂ ಸೇರಿದಂತೆ ಒಟ್ಟು ನಲವತ್ತೈದು ಆಪಾದಿತರು ದೋಷಿಗಳು ಎಂದು ನ್ಯಾಯಾಧೀಶ ಪಿ.ಕೆ. ಸಿಂಗ್ ತೀರ್ಪಿತ್ತಿದ್ದು, ಅಂದಿನಿಂದ ಎಲ್ಲ ದೋಷಿಗಳು ರಾಂಚಿಯ ಹೊರವಲಯದಲ್ಲಿರುವ ಬಿರ್ಸಾಮುಂಡಾ ಜೈಲಿನಲ್ಲಿದ್ದರು. ಎರಡೂವರೆ ತಿಂಗಳು ಜೈಲಿನಲ್ಲಿದ್ದ ಲಾಲೂ 2013ರಲ್ಲಿ ಸುಪ್ರಿಂ ಕೋರ್ಟ್‍ನಿಂದ ಜಾಮೀನು ಪಡೆದು ಹೊರಬಂದರು. ಮೇಲ್ಮನವಿ ಸಲ್ಲಿಕೆಯಾಗಿದೆ.

ಇದಾಗಿ ಮೂರು ವರ್ಷದ ನಂತರ ಅಂದರೇ ಈಗ ಎರಡನೇ ಪ್ರಕರಣದ ತೀರ್ಪನ್ನು ಓದಿರುವ ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್, ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಒಟ್ಟು ಹದನೈದು ಮಂದಿ ದೋಷಿಗಳು ಎಂದು ತೀರ್ಪು ಕೊಟ್ಟಿದ್ದಾರೆ. ಆದರೆ ಮೊದಲ ಪ್ರಕರಣದಲ್ಲಿ ಆರೋಪಿಯೆಂದು ಸಾಬೀತಾಗಿದ್ದ ಜಗನ್ನಾಥ್ ಮಿಶ್ರಾ ಹಾಗೂ ಮಿಕ್ಕ ಏಳು ಮಂದಿಯನ್ನು ಖುಲಾಸೆಗೊಳಿಸಿದ್ದಾರೆ. ಆರೋಪ ಸಾಬೀತಾಗಿರುವ ಲಾಲು ಅಂಡ್ ಗ್ಯಾಂಗ್‍ಗೆ ಶಿಕ್ಷೆ ಹಾಗೂ ದಂಡದ ಪ್ರಮಾಣವಿನ್ನೂ ಪ್ರಕಟವಾಗಿಲ್ಲ. ಜನವರಿ ಮೂರನೇ ತಾರೀಕು ಶಿಕ್ಷೆ ಪ್ರಮಾಣ ಪ್ರಕಟವಾಗುವುದರಿಂದ, ಜನವರಿ ಎರಡರವರೆಗೆ ರಾಂಚಿಯ ಬಿರ್ಸಾಮುಂಡ ಜೈಲಿನಲ್ಲಿ ಲಾಲು ಗ್ಯಾಂಗ್ ಇರಬೇಕಿದೆ.

ಈ ಹಿಂದೆ ಲಾಲೂ ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟ ನಂತರ, ಅದನ್ನು ಪ್ರಶ್ನಿಸಿ ಸಿಬಿಐ, ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು. ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳು ಪ್ರತ್ಯೇಕ ವಿಚಾರಣೆ ಎದುರಿಸಬೇಕು. ಅಷ್ಟೇ ಅಲ್ಲದೇ ಹಾಗೂ ಒಂಬತ್ತು ತಿಂಗಳೊಳಗೆ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ಸುಪ್ರೀಂ ಆದೇಶದಲ್ಲಿ ಹೇಳಿತ್ತು.

ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಮೇಲಿದ್ದ ಆರು ಪ್ರಕರಣಗಳನ್ನು ಬೇರೆಬೇರೆಯಾಗಿ ವಿಚಾರಣೆ ನಡೆಸುವಂತೆ ಸುಪ್ರಿಂ ಕೋರ್ಟ್ ಸೂಚಿಸಿದ್ದರಿಂದ, ಎಲ್ಲಾ ಪ್ರಕರಣಗಳನ್ನು ಒಂದೇ ಅವಧಿಗೆ ಮುಗಿಸಿಕೊಳ್ಳುವ ಲಾಲೂ ಆಸೆಗೆ ತಣ್ಣೀರು ಎರೆದಂತಾಗಿತ್ತು. ಈ ಪೈಕಿ ಮೊದಲ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೀಡಾದ ಲಾಲೂ ಎರಡೂವರೆ ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದರು. ಈಗ ಎರಡನೇ ಪ್ರಕರಣದಲ್ಲೂ ಆರೋಪ ಸಾಬೀತಾಗಿದೆ. ಬಾಕಿ ನಾಲ್ಕು ಪ್ರಕರಣಗಳೂ ಲಾಲೂಗೆ ವಿರುದ್ಧವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ದೇವಗಢ ಸರಕಾರಿ ತಿಜೋರಿಯಿಂದ 1991 ಮತ್ತು 1994ರ ನಡುವಿನ ಅವಧಿಯಲ್ಲಿ 95 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಪಡೆದುಕೊಂಡ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಜಗನ್ನಾಥ ಮಿಶ್ರಾ ಹಾಗೂ ಇತರ ಇಪ್ಪತ್ತು ಮಂದಿಯ ಹಣೆ ಬರಹವನ್ನು ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಶಿವಪಾಲ್ ಸಿಂಗ್ ಬರೆದಿದ್ದಾರೆ. ಈ ಪೈಕಿ ಜಗನ್ನಾಥ್ ಮಿಶ್ರಾ ಅಚ್ಚರಿಯೆಂಬಂತೆ ಪ್ರಕರಣದಲ್ಲಿ ನಿರ್ದೋಷಿಯೆಂದು ಸಾಬೀತಾಗಿದ್ದಾರೆ.

ಸಣ್ಣ ಅವಧಿಗೆ ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಜಗನ್ನಾಥ್ ಮಿಶ್ರಾ ಈಗ ಜೆಡಿಯೂನಲ್ಲಿದ್ದಾರೆ. ಸಧ್ಯ ಬಿಹಾರದಲ್ಲಿ ಜೆಡಿಯೂ ಬಿಜೆಪಿ ಸಮ್ಮಿಶ್ರ ಸರ್ಕಾರವಿದೆ. ಮೊದಲ ಪ್ರಕರಣದ ತೀರ್ಪು ಬಂದಾಗ ಮಿಶ್ರಾ ಲಾಲೂ ಬತ್ತಳಿಕೆಯಲ್ಲಿದ್ದಿದ್ದರಿಂದ, ಅವರಿಗೆ ಶಿಕ್ಷೆಯಾಗಿದೆ. ಈಗ ನಿತೀಶ್ ಬಳಗದಲ್ಲಿರುವುದರಿಂದ ಅವರಿಗೆ ಬಿಡುಗಡೆಯಾಗಿದೆ. ಇದು ಮೋದಿ ಸರ್ಕಾರದ ಕೈವಾಡವೆಂದು ಆರ್‍ಜೆಡಿ ಟೀಕಿಸಿದೆ. ಬಿಜೆಪಿಗೆ ದಿಟ್ಟ ಎದುರಾಳಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಅವನತಿಗೆ ಕೇಂದ್ರ ಸರ್ಕಾರ ಹೆಣೆದಿರುವ ಜಾಲವಿದು ಎಂಬುದು ಆರೋಪ.

ದೇವಘಡ ಕೇಸಿನ ತೀರ್ಪಿಗೂ ಮುನ್ನ, `ನನಗೆ ವಿಶ್ವಾಸವಿದೆ. ನನಗೆ ಮೇವು ಹಗರಣದಲ್ಲಿ ಕ್ಲೀನ್‍ಚಿಟ್ ಸಿಗುತ್ತದೆ. ನಾವು ನ್ಯಾಯಾಂಗದಲ್ಲಿ ನಂಬಿಕೆ ಮತ್ತು ಗೌರವನ್ನು ಇಟ್ಟಿದ್ದೇವೆ. ಬಿಜೆಪಿಯ ಪಿತೂರಿ ನಡೆಯಲು ನಾವು ಬಿಡುವುದಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ, ಅಂದರೆ ಕಳೆದ 25 ವರ್ಷಗಳಿಂದಲೂ, ಬಿಜೆಪಿ ನನ್ನ ಮತ್ತು ನನ್ನ ಕುಟುಂಬದವರು ವಿರುದ್ಧ ಸಿಬಿಐ ಅಸ್ತ್ರವನ್ನು ದುರ್ಬಳಕೆ ಮಾಡಿ ಕಿರುಕುಳ ನೀಡುತ್ತಾ ಬಂದಿದೆ’ ಎಂದು ಲಾಲು ಹೇಳಿದ್ದಕ್ಕೂ, ಮಿಶ್ರಾ ಖುಲಾಸೆಗೂ ಸಂಬಂಧ ಬೆಸೆದುಕೊಂಡರೂ.. ಯಾವುದೂ ಖಾತ್ರಿಯಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು 900 ಕೋಟಿ ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. ಆದರೆ ಆ ಹಗರಣ ಬಯಲಿಗೆ ಬರಲು ಹಲವಾರು ವರ್ಷಗಳೇ ಬೇಕಾಯಿತು. ಇವತ್ತು ಜೈಲಿಗೆ ಹೋಗಿರುವ ಲಾಲೂ ಪ್ರಸಾದ್ ಯಾದವ್ ಸರ್ಕಾರವೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಇವತ್ತಿಗೆ ಕಳ್ಳತನದ ವಿರುದ್ಧ ಕಳ್ಳನೇ ತನಿಖೆಗೆ ಆದೇಶಿಸಿದಂತಾಗಿದೆ.

ಮೇವು ಹಗರಣ ಸಂಬಂಧ ಒಟ್ಟು ಐವತ್ಮೂರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ನಲವತ್ನಾಲ್ಕು ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಇದರ ಜೊತೆ ಛಾಯ್ ಬಾಸಾ ಖಜಾನೆಯಿಂದ ಮೂವತ್ತೇಳು ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನೂ ಲಾಲು ಎದುರಿಸುತ್ತಿದ್ದಾರೆ. ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು ಲಾಲೂ ಪ್ರಸಾದ್ ಯಾದವ್.

ಲಾಲೂ ಪ್ರಸಾದ್ ಯಾದವ್ ಆರು ಪ್ರಕರಣಗಳ ಪೈಕಿ ಐದರ ವಿಚಾರಣೆ ಜಾರ್ಖಂಡ್‍ನಲ್ಲಿ, ಒಂದು ಪ್ರಕರಣದ ವಿಚಾರಣೆ ಬಿಹಾರದಲ್ಲೂ ನಡೆಯುತ್ತಿದೆ. ಜಾರ್ಖಂಡ್ ರಚನೆಯಾದ ಬಳಿಕ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು. ಜಾರ್ಖಂಡ್‍ನಿಂದ ಹಾಗೂ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಮತ್ತೆ ರಾಜಕೀಯರಂಗಕ್ಕೆ ಇಳಿದಿದ್ದರು. ಅಂದರೇ ಕಿಂಗ್ ಮೇಕರ್ ಆಗಿ ಕಾರ್ಯನಿರ್ವಹಿಸತೊಡಗಿದರು. ಇತ್ತಿಚೆಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಸೇರಿ ಸರ್ಕಾರ ರಚಿಸಿದ ನಂತರ, ನಿತೀಶ್ ಲಾಲೂ ಕೈಗೆ ಕಹಿ ಪ್ರಸಾದ ಕೊಟ್ಟು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.

ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ತನ್ನ ಮಗ ತೇಜ್‍ಪಾಲ್ ಯಾದವ್‍ನನ್ನು ನೇಮಿಸಿದ ಲಾಲೂ, ಎಲ್ಲವೂ ತನ್ನಳತೆಯಲ್ಲಿ ನಡೆಯಬೇಕೆಂಬ ಫರ್ಮಾನು ಹೊರಡಿಸಿದ್ದರು. ಸ್ವಾಭಿಮಾನಿ, ಅದರಲ್ಲೂ ಬಿಜೆಪಿ ಪಕ್ಷದಿಂದ ಬಂದಿದ್ದ ನಿತೀಶ್ ಕುಮಾರ್ ಲಾಲ್ ಸಲಾಂ ಹಾಕಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದರು. ಅದಕ್ಕೂ ಮುನ್ನ ಲಾಲೂ ಪುತ್ರ, ಪುತ್ರಿಯ ಮನೆಯ ಮೇಲೆ ನಡೆದ ಸಿಬಿಐ ದಾಳಿಯನ್ನು ನೆಪ ಮಾಡಿಕೊಂಡರು. ಅವತ್ತಿನಿಂದ ಲಾಲೂ ಪ್ರಸಾದ್ ಯಾದವ್ ನಿತೀಶ್ ಹಾಗೂ ಮೋದಿಯನ್ನು ತರಾಟೆ ತೆಗೆದುಕೊಳ್ಳತೊಡಗಿದರು. ವ್ಯಂಗ್ಯವಾಗಿ ಟೀಕಿಸತೊಡಗಿದರು.

ಆಗಲೇ ಮೇವು ಹಗರಣದ ಒಂದು ಪ್ರಕರಣದಲ್ಲಿ ಜೈಲು ಶಿಕ್ಷೆಗೀಡಾಗಿ ಜಾಮೀನಿನ ಮೇಲೆ ಹೊರಬಂದಿದ್ದರೂ ಮರೆತಂತಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ಮೋದಿ ಸರ್ಕಾರ ಸುಳ್ಳಿನ ಸರ್ಕಾರ ಎಂದು ಒಂದೇ ಸಮನೇ ಅಬ್ಬರಿಸುತ್ತಿದ್ದ ಲಾಲೂ ಪ್ರಸಾದ್ ಯಾದವ್‍ರನ್ನು ಸುಮ್ಮನೇ ಕೂರಿಸಲೇಬೇಕಿತ್ತು. ಅಧಿಕಾರ ಕಸಿದುಕೊಂಡರೂ ಅಬ್ಬರಿಸುತ್ತಿದ್ದ ಲಾಲೂ ಈಗ ಎರಡನೇ ಪ್ರಕರಣದಲ್ಲೂ ದೋಷಿ ಎಂದು ಸಾಬೀತಾಗಿದ್ದಾರೆ. ಶಿಕ್ಷೆಯಿನ್ನೂ ಪ್ರಕಟವಾಗಬೇಕಿದೆ. ಬಾಕಿಯಿರುವ ನಾಲ್ಕು ಪ್ರಕರಣಗಳಲ್ಲೂ ವಿಶ್ವಾಸವಿಲ್ಲ. ಲಾಲೂ ಪರ್ವ ಮುಗಿದಂತೇ ಲೆಕ್ಕ. ಮೇವು ತಿಂದಿದ್ದಕ್ಕೇ ನೀರು ಕುಡಿಯುತ್ತಿದ್ದಾರೆ. ಜೆಡಿಯೂ ಸೇರಿದ್ದರಿಂದ ಜಗನ್ನಾಥ್ ಮಿಶ್ರಾ ಬಚಾವಾಗಿರಬಹುದು. ಖಾತ್ರಿಯಿಲ್ಲ.

ಅಂತಿಮವಾಗಿ ಲಾಲೂ ಪ್ರಸಾದ್ ಹೇಳಿರುವಂತೆ ಇದು ಬಿಜೆಪಿಯ ಪಿತೂರಿ ಎನ್ನುವುದಾದರೇ, ಆ ಸಾಧ್ಯತೆಯನ್ನು ಈ ರೀತಿಯಾಗಿ ವಿಮರ್ಶಿಸಬಹುದು. ಮೊನ್ನೆಯಷ್ಟೇ 2ಜಿ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ ರಾಜಾ, ಕರುಣಾನಿಧಿ ಪುತ್ರಿ ಕನ್ನಿಮೊಳಿ ಸೇರಿದಂತೆ ಹದಿನೇಳು ಮಂದಿ ಖುಲಾಸೆಯಾಗುತ್ತಿದ್ದಂತೆ, 2ಜಿ ಸ್ಕ್ಯಾಮ್ ನಡೆದೇ ಇಲ್ಲವೆಂಬ ಮೆಸೇಜ್ ಪಾಸ್ ಆಗಿದೆ. ಈ ಹಗರಣದ ವಿಚಾರಣೆಯ ಹಂತದಲ್ಲೇ ಸೋನಿಯಾ ಗಾಂಧಿ, ಚಿದಂಬರಂ, ಮನಮೋಹನ್ ಸಿಂಗ್ ಹೆಸರು ಕೇಳಿಬಂದರೂ, ವಿಚಾರಣೆ ಹಂತದಲ್ಲಿ ಕೈಬಿಟ್ಟಿದ್ದರಿಂದ ಉಳಿದುಕೊಂಡವರು ಡಿಎಂಕೆಯ ನಾಯಕರು ಮಾತ್ರ. ಅತ್ತ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟು ಡಿಎಂಕೆ ಜೊತೆ ಮಾತುಕತೆ ನಡೆಸಿದ್ದು, ಕರುಣಾನಿಧಿಯನ್ನು ಪ್ರಧಾನಿ ಮನೆಗೆ ವಾಸ್ತವ್ಯಕ್ಕೆ ಕರೆದಿದ್ದು – ಎಲ್ಲವೂ ತಮಿಳುನಾಡಿನಲ್ಲಿ ಕಮಲ ಅರಳಿಸುವ ಹುನ್ನಾರ ಎನ್ನಲಾಯಿತು.

ಹೀಗಾಗಿ 2ಜಿ ಪ್ರಕರಣದಲ್ಲಿ ಕೇಂದ್ರದ ಹಸ್ತಕ್ಷೇಪ ನಡೆದಿರಬಹುದು ಎಂಬುದು ಚರ್ಚೆ. ಆದರೆ ಇದರಿಂದ ಬಿಜೆಪಿಯ ಮುಜುಗರ ಒಳಗಾಗುವುದಿಲ್ಲವೇ…? ಕಾಂಗ್ರೆಸ್‍ಗೆ ವರವಾಗುವುದಿಲ್ಲವೇ..? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದರೆ ಅದು ಸಧ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ. ಮುಂದಿನ ಲೋಕಸಭೆ ಚುನಾವಣೆಯ ಉದ್ದೇಶದಿಂದ ಲಾಲೂ ಪ್ರಸಾದ್ ಯಾದವ್‍ರನ್ನು ಹಣಿಯಲು ಕೇಂದ್ರ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಲಾಲೂ ಅವರೇ ಹೇಳುತ್ತಿರುವುದರಿಂದ ಈ ವಿಮರ್ಶೆ. ಸಾಂವಿಧಾನಿಕ ಸಂಸ್ಥೆಗಳು ಶಾಸಕಾಂಗದ ಇಷಾರೆಗೆ ಕೆಲಸ ಮಾಡುವುದು ಮೊದಲು ನಿಗೂಢವಾಗಿತ್ತು. ಈಗ ಬಹಿರಂಗವಾಗುತ್ತಿದೆ ಎಂಬುದು ವಿರೋಧಿಗಳ ಟೀಕೆ. ಏನೇ ಲೆಕ್ಕಾಚಾರವಿದ್ದರೂ ಮೇವಿನ ದಾಹಕ್ಕೆ ನೀರು ಕುಡಿಯುವ ಪರಿಸ್ಥಿತಿ ಲಾಲೂಗೆ ಬಂದಿದ್ದು ಖರೆ. ಲಾಲ್ ಕ್ಯಾ ತೇರೇ ಹಾಲ್ ಎನ್ನುವಂತಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...