ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಇಂದು ಸಂಸ್ಥೆಯಿಂದ ಹೊರಬಂದಿದ್ದಾರೆ.
ವಿಆರ್‍ಎಲ್ ಒಡೆತನದ ವಿಜಯವಾಣಿ ದಿನಪತ್ರಿಕೆಯ ಆರಂಭದಿಂದಲೂ ಜೊತೆಗಿದ್ದ ಹರಿಪ್ರಕಾಶ್ ಕೋಣೆಮನೆಯವರು ಇಂದು ವಿಆರ್‍ಎಲ್ ಬಸ್ ಇಳಿದಿದ್ದಾರೆ. ಇವರ ಮುಂದಿನ ಪಯಣ ಇನ್ನೂ ತಿಳಿದುಬಂದಿಲ್ಲ.
2015ರಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಸಂಪಾದಕರು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಯತ್ತ ಮುಖಮಾಡಿದ್ರು.
ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ಸುಗತ ಶ್ರೀನಿವಾಸ್‍ರಾಜ್ ಅವರು ಕನ್ನಡ ಪ್ರಭದ ಅಧಿಕಾರವಹಿಸಿಕೊಂಡರು. ಕನ್ನಡಪ್ರಭದ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ವಿಶ್ವವಾಣಿ ಪತ್ರಿಕೆಯನ್ನು ಹುಟ್ಟುಹಾಕಿದ್ರು. ವಿಜಯವಾಣಿಯ ಅಂದಿನ ಸಂಪಾದಕರಾಗಿದ್ದ ತಿಮ್ಮಪ್ಪ ಭಟ್ ವಿಜಯ ಕರ್ನಾಟಕ ಚುಕ್ಕಾಣಿ ಹಿಡಿದ್ರು. ಈ ವೇಳೆ ವಿಜಯವಾಣಿಯ ಸಂಪಾಕೀಯ ವಿಭಾಗದ ಹೊಣೆ ಹೊತ್ತವರು ಹರಿಪ್ರಕಾಶ್ ಕೋಣೆಮನೆ.
ನಂತರ ಇದೇ ವಿಆರ್‍ಎಲ್ ಸಂಸ್ಥೆಯ ದಿಗ್ವಿಜಯ ಸುದ್ದಿವಾಹಿನಿಯನ್ನು ಹರಿಪ್ರಕಾಶ್ ಕೋಣೆಮನೆ ಅವರು ಮುನ್ನಡೆಸಿದ್ದರು. ರಾತ್ರಿ 9 ಗಂಟೆಗೆ ದಿಗ್ವಿಜಯದ ಔಟ್‍ಲುಕ್‍ನಲ್ಲಿ ಇಡೀ ದಿನದ ಸುದ್ದಿ ವಿಶ್ಲೇಷಣೆಯನ್ನು ಮಾಡ್ತಿದ್ದ ಎಡಿಟರ್ ಇನ್ ಚೀಫ್ ಹರಿಪ್ರಕಾಶ್ ಕೋಣೆಮನೆಯವರು ಕೆಲವು ದಿನಗಳಿಂದ ಕಾಣುತ್ತಿರಲಿಲ್ಲ. ಅಷ್ಟರಲ್ಲಾಗಲೇ ಆ ವಾಹಿನಿಯ ಸಂಪಾದಕ ಶರತ್ ಸಂಸ್ಥೆಯಿಂದ ಹೊರಬಂದಿದ್ದರು.
ಈ ವೇಳೆಗಾಗಲೇ ಹರಿಪ್ರಕಾಶ್ ಕೋಣೆಮನೆ ಅವರ ರಾಜೀನಾಮೆ ಸುದ್ದಿ ದಟ್ಟವಾಗಿ ಹರಡಿತ್ತು. ಆದರೆ, ದಿಗ್ವಿಜಯದ ಉಸಾಬರಿ ಬಿಟ್ಟು ಕೇವಲ ವಿಜಯವಾಣಿಯನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತಿನ ಪತ್ರಿಕೆಯಲ್ಲೂ ಎಡಿಟರ್ ಇನ್ ಚೀಫ್ ಹರಿಪ್ರಕಾಶ್ ಕೋಣೆಮನೆ ಎಂದೇ ಇತ್ತು. ರಾತ್ರಿ ಅವರು ತಮ್ಮ ಫೇಸ್‍ಬುಕ್ ನಲ್ಲಿ ‘ವಿಜಯವಾಣಿ ಮತ್ತು ದಿಗ್ವಿಜಯದ ಪ್ರೀತಿಯ ಸಹದ್ಯೋಗಿ ಬಂಧುಗಳಿಗೆ ಆತ್ಮೀಯ ವಿದಾಯ’ ಎಂದು ಸ್ಟೇಟಸ್ ಹಾಕುವ ಮೂಲಕ ರಾಜೀನಾಮೆ ನೀಡಿ ಹೊರಬಂದಿರುವುದನ್ನು ಖಚಿತಪಡಿಸಿದ್ದಾರೆ.
ವಿಜಯವಾಣಿಗೆ ವಿದಾಯ ಹೇಳಿರೋ ಹರಿಪ್ರಕಾಶ್ ಕೋಣೆಮನೆಯವರ ಮುಂದಿನ ನಡೆ ಗೊತ್ತಿಲ್ಲ. ಆರಂಭದಿಂದಲೂ ವಿಜಯವಾಣಿ ಜೊತೆ ಇರುವ ಚನ್ನೆಗೌಡ ಕೌಡ್ಲೆ ಅವರು ಸಂಪಾದಕರಾಗಿ ಬಡ್ತಿ ಪಡೆದಿದ್ದಾರೆ.