ನಿರೂಪಕಿ ಶ್ವೇತಾ ಅವರಿಗೆ ಉಪೇಂದ್ರ ಕೊಟ್ಟ ಬಿರುದೇನು…?

0
564

ತಾಯಿಯನ್ನು ಆದರ್ಶವಾಗಿಟ್ಟುಕೊಂಡು ಬೆಳೆದು, ಅವರ ಹಾದಿಯಲ್ಲೇ ನಡೆದು ಬಂದವರು. ತಾಯಿ ಜನಮೆಚ್ಚಿದ ಹಾಸ್ಯ ಭಾಷಣಗಾರರು, ಮಗಳು ನಿರೂಪಕಿ…! ಹಾಸ್ಯ ಭಾಷಣಗಾರರು ಎಂದೊಡನೆ ನೆನಪಾಗುವ ಹೆಸರುಗಳಲ್ಲಿ ಇಂದುಮತಿ ಸಾಲಿಮಠ್ ಅವರ ಹೆಸರು ಪ್ರಮುಖವಾದುದು.

ಈ ಇಂದುಮತಿ ಅವರ ಮಗಳೇ ಜನಪ್ರಿಯ ನಿರೂಪಕಿ ಶ್ವೇತಾ ಜಗದೀಶ್ ಮಠಪತಿ. ತಂದೆ ಗುರುಪಾದಯ್ಯ ಮಠ್, ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರು. ಪತಿ ಜಗದೀಶ್ ಮಠಪತಿ.


ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಹುಟ್ಟಿದ ಶ್ವೇತಾ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಿಜಾಪುರದಲ್ಲಿ ಪಡೆದರು. ನಂತರ ಗುಲ್ಬರ್ಗಾದಲ್ಲಿ ಪಿಯುಸಿ ಹಾಗೂ ಬಿಎಸ್‍ಸಿ ಪದವಿಯನ್ನು ಪಡೆದರು.
ಮೊದಲ ವರ್ಷದ ಪದವಿ ಓದುತ್ತಿರುವಾಗಲೇ ಚಂದನ ವಾಹಿನಿಯಲ್ಲಿ ಕವಿಕಂಡ ಯುಗಾದಿ ಎಂಬ ಕಾರ್ಯಮದ ನಿರೂಪಣೆಯನ್ನು ಮಾಡುವ ಅವಕಾಶ ಸಿಕ್ತು. ತನ್ನ ಮೊದಲ ಕಾರ್ಯಕ್ರಮದಲ್ಲೇ ತಾನೊಬ್ಬ ಕನ್ನಡ ಮಾಧ್ಯಮ ಲೋಕದಲ್ಲಿ ಮುಂದೊಂದು ದಿನ ಪ್ರಮುಖ ನಿರೂಪಕರ ಸಾಲಿನಲ್ಲಿ ನಿಲ್ತೀನಿ ಎನ್ನುವ ಭರವಸೆಯನ್ನು ಮೂಡಿಸಿದ್ದರು.


ಇದೇವೇಳೆ ಗುಲ್ಬಾರ್ಗದಲ್ಲಿ ಜಿಸಿಟಿ ಎಂಬ ಕೇಬಲ್ ಚಾನಲ್ ಕಾರ್ಯಾರಂಭ ಮಾಡಿತು. ಈ ಚಾನಲ್ ಮೂಲಕ ನ್ಯೂಸ್ ರೀಡರ್ ಆಗಿ ಮಾಧ್ಯಮ ಜಗತ್ತಿಗೆ ಮೊದಲ ಹೆಜ್ಜೆಯನ್ನಿಟ್ಟರು ಶ್ವೇತಾ…
ಮೂರು ವರ್ಷ ಶಿಕ್ಷಣದ ಜೊತೆಗೆ ಅರೆಕಾಲಿಕ ನ್ಯೂಸ್ ರೀಡರ್ ಆಗಿ ಆ ಕೇಬಲ್ ಚಾನಲ್‍ನಲ್ಲಿ ಕೆಲಸ ಮಾಡಿದ್ರು. ಓದಿದ್ದು ಬಿಎಸ್‍ಸಿ ಆದರೂ ಪ್ರಾಯೋಗಿಕ ಪಾಠ ನಿರೂಪಣೆಯಲ್ಲಾಗಿತ್ತು…! ಆದ್ದರಿಂದ ನಿರೂಪಕಿಯಾಗಿಯೇ ಮುಂದುವರೆಯಲು ತೀರ್ಮಾನಿಸಿದ್ರು.
ಡಿಗ್ರಿ ಮುಗಿಯುತ್ತಿದ್ದಂತೆ ಉದಯ ಟಿವಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಅದು 2006ನೇ ಇಸವಿ. ಒಂದು ವರ್ಷಗಳ ಕಾಲ ಉದಯದಲ್ಲಿ ಕೆಲಸ ಮಾಡಿದ ಇವರು 2007ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಮುಂದಿನ ಪಯಣ ಸುವರ್ಣ ಎಂಟರ್‍ಟೈನ್ಮೆಂಟ್‍ನತ್ತ ಸಾಗಿತು. ನಂತರ ಅದೇ ಸಂಸ್ಥೆಯಿಂದ ಹೊಸದಾಗಿ ಆರಂಭವಾದ ಸುವರ್ಣ ನ್ಯೂಸ್ 24*7ನಲ್ಲೂ ಪರದೆ ಮೇಲೆ ಮಿಂಚಿದ್ರು.


ಇವರು ಸುವರ್ಣ ನ್ಯೂಸ್ 24*7ನಲ್ಲಿ ನಡೆಸಿಕೊಟ್ಟ ‘ಚಹಾ ಚೂಡ ಸುದ್ದಿ ನೋಡ’ ಎಂಬ ಕಾರ್ಯಕ್ರಮ ನಿಮಗೆ ಗೊತ್ತಿರಬಹುದು. ಇಲ್ಲಿ ಬರೀ ಉತ್ತರ ಕರ್ನಾಟಕದ ಸುದ್ದಿಗಳನ್ನು ಆಯ್ದುಕೊಂಡು ಅದೇ ಭಾಷೆಯಲ್ಲಿ ವಾಚಿಸುತ್ತಿದ್ದರು.


ಇದಲ್ಲದೆ 6 ಜನ ನಿರೂಪಕಿಯರು ಸೇರಿ ನಡೆಸಿಕೊಡುತ್ತಿದ್ದ ‘ಸ್ಟಾರ್ಸ್ ವಿತ್ ಸುವರ್ಣ’ ಬಹು ಜನಪ್ರಿಯತೆಯನ್ನು ಪಡೆಯಿತು. ಕಮಲ ಹಾಸನ್, ಅಂಬರೀಷ್, ಅನಂತನಾಗ್, ರಮೇಶ್ ಅರವಿಂದ್ , ಉಪೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟರ ಸಂದರ್ಶನವನ್ನು ಈ ಕಾರ್ಯಕ್ರಮದ ಮೂಲಕ ಮಾಡಿದ್ದರು. ಇರದಲ್ಲಿ ಪ್ರತಿಯೊಬ್ಬ ಅತಿಥಿಯ ಪರಿಚಯವನ್ನು ಶ್ವೇತಾ ಅವರು ಮಾಡಿಕೊಡುತ್ತಿದ್ದರು. ಇವರ ಮಾತುಗಳಿಗೆ, ನಿರೂಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ, ‘ ನೀವು ಡೈಲಾಗ್ ಕ್ವೀನ್’ ಅಂತ ಹೇಳಿದ್ದರು. ಉಪೇಂದ್ರ ಕೊಟ್ಟ ಈ ಬಿರುದೇ ಸಾಕಲ್ವೇ..ಶ್ವೇತಾ ಅವರೆಂಥಾ ಶ್ರೇಷ್ಠ ನಿರೂಪಕಿ ಅನ್ನೋದಕ್ಕೆ.


2007ರಿಂದ 2014ರ ತನಕ ಸುವರ್ಣ ಬಳಗದಲ್ಲಿದ್ದ ಶ್ವೇತಾ ಅವರು 2014ರ ಕೊನೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಅದಾದ ಬಳಿಕ ಯಾವ ಸುದ್ದಿವಾಹಿನಿಯಲ್ಲೂ ಕಾಣಿಸಿಕೊಂಡಿಲ್ಲ.
ವೈಯಕ್ತಿಕ ಕಾರಣಗಳಿಂದ ನಿರೂಪಣೆಗೆ ಬ್ರೇಕ್ ನೀಡಿರುವ ಶ್ವೇತಾ ಅವರು ಒಳ್ಳೆಯ ಹಾಡುಗಾರರೂ ಹೌದು. ಈಗ ಸ್ಮ್ಯೂಲ್ ಆ್ಯಪ್‍ನಲ್ಲಿ (smule app) ಹಾಡ್ತಿದ್ದಾರೆ.
ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ನನಗೆ ಕನ್ನಡ ಭಾಷೆಯ ಮೇಲೆ ಪ್ರೀತಿ ಹುಟ್ಟಲು ಮನೆಯ ಪರಿಸರ ಕಾರಣವಾಯ್ತು. ಅಮ್ಮನಿಂದ ಕನ್ನಡ ಚೆನ್ನಾಗಿ ಮಾತಾಡುವುದನ್ನು, ಬರೆಯುವುದನ್ನು ಕಲಿತೆ. ಇವತ್ತು ನಾನು ಕನ್ನಡ ನಿರೂಪಕಿ ಆಗಲು ಅಮ್ಮ ಇಂದುಮತಿ ಸಾಲಿಮಠ್ ಅವರೇ ಕಾರಣ ಎನ್ನುತ್ತಾರೆ ಶ್ವೇತಾ.


ಇವರಿಗೆ ಈಗಲೂ ಬಹುಬೇಡಿಕೆ ಇದೆ. ಇನ್ನು 2-3 ತಿಂಗಳಲ್ಲಿ, ಅಂದ್ರೆ 2018ರಲ್ಲಿ ಮತ್ತೆ ನಿರೂಪಕಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಯಾವ ಚಾನಲ್ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

LEAVE A REPLY

Please enter your comment!
Please enter your name here