
“ಹಲವು ದಶಕಗಳಿಂದ ಹಿಂದುತ್ವವನ್ನು ಉಸಿರಾಗಿಸಿಕೊಂಡಿರುವ ಬಿಜೆಪಿಗೆ ಅದೇ ಮಂತ್ರದಿಂದ ಉತ್ತರ ಕೊಡುತ್ತೇವೆ ಎಂದು ಕಾಂಗ್ರೆಸ್ ಹೊರಟಿರುವುದು ಉತ್ತಮವಾದ ಬೆಳವಣಿಗೆ ಎನ್ನುವುದಕ್ಕಿಂತ ತಡವಾದ, ಅನಿವಾರ್ಯವಾದ ಕಾರಣವಿರಬಹುದೆಂಬುದು ಒಂದು ಬದಿಯ ವಾದ. ಹಿಂದುತ್ವದ ಆಧಾರದಲ್ಲಿ ಮತಬೇಟೆಗೆ ಹೊರಡುತ್ತೇವೆ ಎಂದು ಜಾತ್ಯಾತೀತ ವಾದವನ್ನು ಬದಿಗಿಟ್ಟು ನಡೆಯುವುದಾದರೇ, ಕಾಂಗ್ರೆಸ್ ಎರಡು ಬಾರಿ ನಿಷೇಧಿಸಿದ, ಕ್ಷಣಕ್ಷಣವೂ ವಿರೋಧಿಸುವ ಆರೆಸ್ಸೆಸ್ ಅನ್ನು ಒಪ್ಪಿಕೊಳ್ಳಲೇಬೇಕು. ಆರೆಸ್ಸೆಸ್ ಹೊರತುಪಡಿಸಿದ ಹಿಂದುತ್ವ ಎನ್ನುವುದಾದರೇ, ಅಷ್ಟೇ ಪರಿಣಾಮಕಾರಿಯಾದ ಹಿಂದುತ್ವವನ್ನು ಪ್ರತಿಪಾದಿಸಬೇಕು. ಅದು ಸಾಧ್ಯವಿಲ್ಲ.

ಮುಂದೆ ಓದಿ…
ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ವಿಷಮಿಸಿರುವುದಕ್ಕೆ ಮತ್ಯಾವ ಚರ್ಚೆಗಳ ಅಗತ್ಯವಿಲ್ಲ. ಕಾಂಗ್ರೆಸ್ ಸಧ್ಯಕ್ಕೆ ಐಸಿಯೂನಲ್ಲಿದೆ. ಸರಿಯಾದ ಚಿಕಿತ್ಸೆ ಆಗದಿದ್ದರೇ ಮರಣಶಯ್ಯೆಯನ್ನು ತಲುಪುತ್ತದೆ. ಇಲ್ಲಿಯವರೆಗೆ ಅಧಿಕೃತ ಆದೇಶವಿರಲಿಲ್ಲ ಅನ್ನೋದು ಬಿಟ್ಟರೇ ರಾಹುಲ್ ಗಾಂಧಿಯೇ ಕಾಂಗ್ರೆಸ್ ಸೋನಿಯಾ ಬದಲಿಗೆ ಅಖಾಡಕ್ಕಿಳಿದಿದ್ದರು. ಈಗ ಅಧಿಕೃತವಾಗಿಯೇ ಎಐಸಿಸಿಗಾದಿಗೇರಿದ್ದಾರೆ. ಇದೇ ಹೊತ್ತಿನಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಮತಗಳನ್ನು ಗ್ಯಾರಂಟಿ ಮಾಡಿಕೊಂಡಿರುವ ಕಾಂಗ್ರೆಸ್ ಹಿಂದುತ್ವದ ಮಂತ್ರ ಜಪಿಸತೊಡಗಿದೆ. ಹೇಗಾದರೂ ಅಧಿಕಾರ ಹಿಡಿಯಲೇಬೇಕೆಂಬ ಹಠ ಶುರುವಾಗಿದೆ.

ಕಾಂಗ್ರೆಸ್ ಬಿಜೆಪಿಯ ಚಕ್ರವ್ಯೂಹದಲ್ಲಿ ಸಿಲುಕಿ ಹೊರಬರಲಾಗದೇ ಪೇಚಾಡುತ್ತಿದೆ. ಇದಕ್ಕೆ ಕಾರಣ ಯಾರು ಎಂದು ಹುಡುಕಿದರೇ; ರಾಹುಲ್ ಗಾಂಧಿಯ ಹೊರತು ಬೇರೆ ಯಾರೂ ಕಾಣಿಸುವುದಿಲ್ಲ. ಹೀಗಿದ್ದೂ ಕಾಂಗ್ರೆಸ್ ಈಗ ಸೋನಿಯಾ ಗಾಂಧಿ ಕೈಲಿರುವ ಅಧ್ಯಕ್ಷ ಪಟ್ಟವನ್ನು ರಾಹುಲ್ಗೆ ಕೊಟ್ಟಾಗಿದೆ. ಕಾಂಗ್ರೆಸ್ ಯಶಸ್ವಿಯಾಗುತ್ತದೆ ಎಂಬುದು ಭ್ರಮೆ ಎಂದು ಖುದ್ದು ಬಿಜೆಪಿಯೇ ಕಾಲೆಳೆದಿದೆ. ಔರಂಗಜೇಬ್ ಅಂತೆಲ್ಲಾ ಕುಟುಕಿದೆ. ಆದರೆ ರಾಹುಲ್ ಬಿಜೆಪಿ ಅಂದುಕೊಂಡಷ್ಟು ವೀಕ್ ಅಲ್ಲ ಎಂಬುದಕ್ಕೆ ನಿದರ್ಶನವಾಗಿ, ಬಿಜೆಪಿಯ ಸ್ಟ್ರಾಂಗ್ ವೋಟ್ಬ್ಯಾಂಕ್ ಹಿಂದುತ್ವದ ಮೊರೆ ಹೋಗುವ ಸಿದ್ದತೆ ನಡೆಸಿದೆ.

ಕಾಂಗ್ರೆಸ್ ನೆಚ್ಚಿಕೊಂಡಿರುವ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತಗಳಿಂದ ಅಧಿಕಾರ ಸಾಧ್ಯವಿಲ್ಲ. ‘ಕಾಂಗ್ರೆಸ್ ಹಿಂದೂಗಳ ವಿರುದ್ಧವಾಗಿದೆ, ನಾವು ಹಿಂದುತ್ವಕ್ಕಾಗಿ ಪ್ರಾಣ ಬಿಡುತ್ತೇವೆ’ ಎಂದು ಬಿಂಬಿಸಿಕೊಂಡು ಬಂದಿರುವ ಬಿಜೆಪಿ ಅದೇ ಮಂತ್ರದಿಂದ ಗೆಲ್ಲುತ್ತಿದೆ. ಬಿಜೆಪಿ ಸೋಶಿಯಲ್ ಮೀಡಿಯಾ ತಂತ್ರವನ್ನು ಯಶಸ್ವಿಯಾಗಿ ಹೈಜಾಕ್ ಮಾಡಿರುವ ಕಾಂಗ್ರೆಸ್ ಈಗ, ಬಿಜೆಪಿಯ ಹಿಂದುತ್ವದ ಬುಡಕ್ಕೂ ಕೈ ಹಾಕಿದೆ. ಹಾಗೆಯೇ ಕರ್ನಾಟಕ ಚುನಾವಣೆಯಲ್ಲಿ ಹಿಂದುತ್ವದ ಮಂತ್ರ ಮೊಳಗಿಸುವ ಕುರಿತು ಕೈ ನಾಯಕರು ತಂತ್ರಗಳನ್ನು ಹೆಣೆದಿದ್ದಾರೆ.

ನಾವು ಹಿಂದೂಗಳ ವಿರೋಧಿಯಲ್ಲ, ಹಿಂದುತ್ವದ ವಿರೋಧಿ ಎನ್ನುತ್ತಿದ್ದ ಪಕ್ಷವೊಂದು ಅಧಿಕಾರಕ್ಕಾಗಿ ಹಾದಿ ತಪ್ಪುತ್ತಿದೆಯೇ..? ಅಥವಾ ಹಿಂದೂಗಳ ಮತವನ್ನು ಕಡೆಗಣಿಸುವ ಪ್ರವೃತ್ತಿ ನಮ್ಮದಲ್ಲ ಎನ್ನುವುದನ್ನು ತೋರಿಸುವ ಪ್ರಯತ್ನವಾಗುತ್ತಿದೆಯೇ..? ಗೊತ್ತಿಲ್ಲ. ಆದರೆ ಅಧಿಕಾರಕ್ಕಾಗಿ ಕಾಂಗ್ರೆಸ್ ಪಥ ಬದಲಿಸಿದೆ ಎನ್ನುವುದು ಮಾತ್ರ ಅತ್ಯಂತ ಸ್ಪಷ್ಟವಾಗಿದೆ.

ಪ್ರಸ್ತುತ ದೇಶದ ಪರಿಸ್ಥಿತಿಯಲ್ಲಿ ಹಿಂದುತ್ವ ಬಲಾಢ್ಯವಾಗಿರುವುದರಿಂದ, ಕೇವಲ ಜಾತ್ಯಾತೀತ ಶಕ್ತಿಗಳನ್ನಿಟ್ಟುಕೊಂಡು ಬಿಜೆಪಿಯನ್ನು ಬಗ್ಗು ಬಡಿಯುವುದು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ಗೆ ಮನದಟ್ಟಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಹಿಂದುತ್ವದ ಮನೆ ಕಟ್ಟಲು ನಿರ್ಧರಿಸಿದೆ.

ಅತ್ತ ಮೋದಿ ಜನಪ್ರಿಯತೆಗೆ ಕುಂದು ತರಬಹುದು ಎನ್ನಲಾದ ಪ್ರಿಯಾಂಕ ಗಾಂಧಿಗೆ ಅದ್ಯಾಕೋ ರಾಜಕಾರಣದ ಬಗ್ಗೆ ಆಸಕ್ತಿಯಿಲ್ಲ. ರಾಹುಲ್ ಗಾಂಧಿಗೆ ಎಲ್ಲಾ ಆಕಾಂಕ್ಷೆಗಳಿದ್ದರೂ ಅವರನ್ನು ಪ್ರೌಢ ಎಂದು ಜನರು ನಿನ್ನೆ ಮೊನ್ನೆಯವರೆಗೂ ಒಪ್ಪಿಕೊಂಡಿರಲಿಲ್ಲ. ಒಂದು ಕಡೆ ಅಸ್ತಿತ್ವ, ಇನ್ನೊಂದು ಕಡೆ ಅಧಿಕಾರ- ಎರಡನ್ನೂ ಉಳಿಸಿಕೊಳ್ಳಲು ರಾಹುಲ್ ಯಾವ ಹೆಜ್ಜೆಯನ್ನಾದರೂ ತುಳಿಯಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಆದರೆ ಹಿಂದುತ್ವದ ಹೆಜ್ಜೆಯಲ್ಲಿರುವ ವಾಸ್ತವವೇ ಬೇರೆ..?

ಹಿಂದುತ್ವವನ್ನೇ ಉಸಿರಾಗಿಸಿಕೊಂಡು ಬಲಿಷ್ಠ ಹಿಂದೂ ಸಂಘಟನೆಗಳ ಶಕ್ತಿಯಾಗಿ ಹೊರಹೊಮ್ಮಿದ್ದು ಬಿಜೆಪಿ. ಆರೆಸ್ಸೆಸ್ ಹುಟ್ಟುಹಾಕಿದ ಪಕ್ಷವದು. ಇವತ್ತಿಗೆ ಬಿಜೆಪಿ ಆರೆಸೆಸ್ ಅಣತಿಯಂತೆ ನಡೆಯುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಆರೆಸೆಸ್ನಲ್ಲಿ ಸಕ್ರಿಯರಾಗಿದ್ದವರೇ ಆಡಳಿತ ನಡೆಸುತ್ತಿದ್ದಾರೆ. ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿಯೇ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು.

ಹಲವು ದಶಕಗಳಿಂದ ಹಿಂದುತ್ವವನ್ನು ಉಸಿರಾಗಿಸಿಕೊಂಡಿರುವ ಬಿಜೆಪಿಗೆ ಅದೇ ಮಂತ್ರದಿಂದ ಉತ್ತರ ಕೊಡುತ್ತೇವೆ ಎಂದು ಕಾಂಗ್ರೆಸ್ ಹೊರಟಿರುವುದು ಉತ್ತಮವಾದ ಬೆಳವಣಿಗೆ ಎನ್ನುವುದಕ್ಕಿಂತ ತಡವಾದ, ಅನಿವಾರ್ಯವಾದ ಕಾರಣವೆಂಬುದು ಒಂದು ಬದಿಯ ವಾದ. ಹಿಂದುತ್ವದ ಆಧಾರದಲ್ಲಿ ಮತಬೇಟೆಗೆ ಹೊರಡುತ್ತೇವೆ ಎಂದು ಜಾತ್ಯಾತೀತ ವಾದವನ್ನು ಬದಿಗಿಟ್ಟು ನಡೆಯುವುದಾದರೇ, ಕಾಂಗ್ರೆಸ್ ಎರಡು ಬಾರಿ ನಿಷೇಧಿಸಿದ, ಕ್ಷಣಕ್ಷಣವೂ ವಿರೋಧಿಸುವ ಆರೆಸ್ಸೆಸ್ ಅನ್ನು ಒಪ್ಪಿಕೊಳ್ಳಲೇಬೇಕು. ಆರೆಸೆಸ್ ಹೊರತುಪಡಿಸಿದ ಹಿಂದುತ್ವ ಎನ್ನುವುದಾದರೇ, ಅಷ್ಟೇ ಪರಿಣಾಮಕಾರಿಯಾದ ಹಿಂದುತ್ವವನ್ನು ಪ್ರತಿಪಾದಿಸಬೇಕು. ಅದು ಸಾಧ್ಯವಿಲ್ಲ.

ಒಳ್ಳೆ ಹಿಂದುತ್ವ, ಕೆಟ್ಟ ಹಿಂದುತ್ವ ಎಂದು ಹಿಂದುತ್ವವನ್ನೇ ಎರಡು ಭಾಗ ಮಾಡಿ ಅಖಾಢಕ್ಕಿಳಿಯುವುದು ಅಷ್ಟು ಸುಲಭವಲ್ಲ. ನೂರಾರು ವರ್ಷಗಳಿಂದ ಎಲ್ಲಾ ರೀತಿಯ ಹೋರಾಟಗಳ ಮೂಲಕ ಇವತ್ತಿಗೆ ದೇಶದಲ್ಲೇ ಬಲಿಷ್ಠ ಶಕ್ತಿಯಾಗಿ ರೂಪುಗೊಂಡಿರುವ ಆರೆಸೆಸ್ ಅನ್ನು, ಅದೇ ಹಿಂದುತ್ವದಿಂದ ಹೊಡೆಯುತ್ತೇನೆ ಎಂದು ತದ್ವಿರುದ್ಧ ಸಂಘಟನಾತ್ಮಕ ಶಕ್ತಿ ಕಟ್ಟಲು ಈಗ ಹೊರಟರೂ ಅದು ಫಲಪ್ರದವಾಗಲು ಕೆಲವು ದಶಕಗಳೇ ಬೇಕಾದೀತು. ಕಾಂಗ್ರೆಸ್ ತಡವಾಗಿ ದೊಡ್ಡ ಹುತ್ತಕ್ಕೆ ಕೈ ಹಾಕಿದೆ. ಹೆಬ್ಬಾವು ಹಿಡಿಯಲು ಹೊರಟಿರುವ ಅದಕ್ಕೆ ಕೆರೆ ಹಾವು ಕೂಡ ಸಿಗುವುದು ಅನುಮಾನ. ಆದರೆ ಅಸಲಿಯತ್ತು ಇದಲ್ಲ.

ದೇಶದಲ್ಲಿ ಹಿಂದುತ್ವ ಶಕ್ತಿ ಹಾಗೂ ಜಾತ್ಯಾತೀತ ಶಕ್ತಿಗಳೆಂಬ ಎರಡು ಪ್ರಬೇಧಗಳ ನಡುವೆಯಷ್ಟೇ ಪೈಪೋಟಿ ನಡೆಯಬೇಕಿದೆ. ಹಿಂದುತ್ವಕ್ಕೆ ಬಹುಸಂಖ್ಯಾತ ಬುನಾದಿಯಿದ್ದರೂ, ದೇಶದ ಎಲ್ಲಾ ಹಿಂದೂಗಳು ಬಿಜೆಪಿಯ ಶಾಶ್ವತ ವೋಟ್ ಬ್ಯಾಂಕ್ಗಳಲ್ಲ. ಸಂಘಟನಾ ಶಕ್ತಿಯಾಗಿ ಗುರುತಿಸಿಕೊಂಡವರು, ರೂಪುಗೊಂಡವರ ಜೊತೆ ಜಾತಿಯ ಲೆಕ್ಕಾಚಾರದಲ್ಲಿ ಬಿಜೆಪಿಗೆ ಲಾಭವಾಗಿ ಪರಿಣಮಿಸುತ್ತಾರೆಯೇ ಹೊರತು, ಕೇವಲ ಹಿಂದುತ್ವ ಒಂದರಿಂದಲೇ ಬಿಜೆಪಿ ಅಧಿಕಾರಕ್ಕೇರುತ್ತಿದೆ ಎಂದು ಭಾವಿಸಿರುವುದೇ ಕಾಂಗ್ರೆಸ್ನ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಆದರೆ ಹಕೀಕತ್ತು ಇದೂ ಅಲ್ಲ.

ಬಿಜೆಪಿ ವ್ಯವಸ್ಥಿತವಾಗಿ ಕಾಂಗ್ರೆಸ್ ಅನ್ನು ಹಿಂದೂಗಳ ವಿರೋಧಿಯೆಂದು ಬಿಂಬಿಸುತ್ತಿರುವುದೇ; ಕಾಂಗ್ರೆಸ್ ಇವತ್ತಿಗೆ ಹಿಂದುತ್ವದ ಹೆಜ್ಜೆಯಿಡಲು ಕಾರಣವಾಗಿದೆ. ಹಿಂದೂಗಳ ವೋಟ್ ಏನಿದ್ದರೂ ಬಿಜೆಪಿಗೆ, ಅದು ಅಪ್ಪಿತಪ್ಪಿಯೂ ಕಾಂಗ್ರೆಸ್ ಹೋಗಬಾರದು ಎಂಬ ಸಂಚನ್ನು ನಾಶಪಡಿಸಲು ಕಾಂಗ್ರೆಸ್ ಹುಡುಕಿಕೊಂಡಿರುವ ದಾರಿಯೇ ಹೊರತು, ಜಾತ್ಯಾತೀತ ಹಿನ್ನೆಲೆಯನ್ನು ಕಡೆಗಣಿಸುವ ಪ್ರಯತ್ನವಲ್ಲ. ಭವಿಷ್ಯದಲ್ಲಿ ಇದೇ ಸಂಚು ಕಾಂಗ್ರೆಸ್ ಪಕ್ಷವನ್ನೇ ಸರ್ವನಾಶ ಮಾಡಿಬಿಡಬಹುದೆಂಬ ಆತಂಕಕ್ಕೆ ಹುಡುಕಿಕೊಂಡಿರುವ ಔಷಧಿಯಿದು. ರೋಗ ಶಮನವಾಗುತ್ತಾ..? ಡೋಸ್ ಹೆವಿಯಾಗುತ್ತಾ..?- ರಿಯಾಕ್ಷನ್ ಆದಮೇಲೆ ತಿಳಿಯುತ್ತದೆ.

ಅಷ್ಟಕ್ಕೂ ಮನಮೋಹನ್ ಸಿಂಗ್ ಅಧಿಕಾರದುದ್ದಕ್ಕೂ ಮಾತೇ ಆಡಲಿಲ್ಲ. ಪ್ರಚಾರ ಬಯಸಲಿಲ್ಲ. ಆದರೆ ಕೆಲಸ ಮಾಡಿದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಿದ್ದ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಇವ್ಯಾವುದು ಜನರಿಗೆ ಅರ್ಥವಾಗಲಿಲ್ಲ. ಮನ್ಮೋಹನ್ ಸಿಂಗ್ ಜನರನ್ನು ಮುಟ್ಟಲಿಲ್ಲ. ಏಕೆಂದರೇ ಅವರು ಮಾತ್ರವಲ್ಲ, ಒಟ್ಟಾರೆ ಕಾಂಗ್ರೆಸ್ ಹಿಂದುತ್ವದ ಗಿಮಿಕ್ ಮಾಡಲೇ ಇಲ್ಲ. ಆದರೆ ಪ್ರಸ್ತುತ ಕಾಲದಲ್ಲಿ ನಮ್ಮ ದೇಶದಲ್ಲಿ ಹಿಂದುತ್ವವೇ ಪ್ರಮುಖ ಶಕ್ತಿಯಾಗಿದೆ. ಗಿಮಿಕ್ಕೋ, ಟ್ರಿಕ್ಕೋ- ಏನೋ ಒಂದು ಮಾಡಲೇಬೇಕು. ಇಲ್ಲವೆಂದರೇ ಉಳಿಗಾಲವಿಲ್ಲ.

ನಿಜ, ಕಾಂಗ್ರೆಸ್ಗೆ ಬಿಜೆಪಿಯ ಪ್ರಚಾರದ ಗಿಮಿಕ್ಗಳು, ಹಿಂದುತ್ವದ ಸೋಗುಗಳು ಬೇಕಿರಲಿಲ್ಲ. ಅದು ಎಂದಿನಂತೆ ರಾಜಗಾಂಭೀರ್ಯದಲ್ಲೇ ನಡೆಯಿತು. ಅದು ಕಾಂಗ್ರೆಸ್ನ ಸಿದ್ಧಾಂತವೂ ಹೌದು. ನಡೆದು ಬಂದ ರೀತಿಯೂ ಹೌದು. ಇನ್ನು ಆ ಪಕ್ಷದ ಅನುಭವದ ಬಗ್ಗೆ ಮಾತೇ ಆಡುವಂತಿಲ್ಲ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮದರ್ ಸೆಂಟಿಮೆಂಟ್ಗೆ ತಕರಾರು ಮಾಡದೇ ಸುಮ್ಮನಾಯಿತು. ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ರಾಹುಲ್ಗೆ ಸಡನ್ನಾಗಿ ವರ್ಲ್ಡ್ ಕಪ್ ಆಡಲು ಅವಕಾಶ ಕೊಟ್ಟಿತು. ಅವರು ಮೊದಲ ಎಸೆತಕ್ಕೆ ಇಡೀ ತಂಡವನ್ನು ಔಟ್ ಮಾಡಿದ್ದರು. ಹಿಂದುತ್ವವಿರಲಿ, ಜಾತ್ಯಾತೀತತೆಯನ್ನೇ ಅರ್ಥ ಮಾಡಿಕೊಳ್ಳುವುದರಲ್ಲಿ ರಾಹುಲ್ ಸೋತರು.

ಯಾವುದೇ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಸೋಲಿನ ಪರಾಮರ್ಶೆ ಮಾಡುತ್ತದೆ. ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತದೆ. ವಿರೋಧಪಕ್ಷವಾಗಿ ಅವಕಾಶ ಸಿಕ್ಕಾಗೆಲ್ಲಾ ಆಡಳಿತ ಪಕ್ಷದ ಮೇಲೆ ಮುಗಿಬಿದ್ದು ಜನರ ಮನಸ್ಸಿನಲ್ಲಿ ಸ್ಥಾಪಿತವಾಗಲು ಪ್ರಯತ್ನಿಸುತ್ತದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ, ಅಧಿಕಾರಕ್ಕೇರುವ ಶತಃ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಕಾಂಗ್ರೆಸ್ನಲ್ಲಿ ಇವ್ಯಾವುದೇ ಲಕ್ಷಣ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕಾಣಿಸಲಿಲ್ಲ. ಗತಕಾಲದ ರಾಜಕಾರಣ, ಹಲ್ಲುಕಿತ್ತ ಹಾವಿನಂತಾಗಿತ್ತು. ಈಗ ಬದಲಾವಣೆಯ ಗಾಳಿ ಬೀಸಿದೆ. ಅದನ್ನು ಹಿಂದುತ್ವವಾದರೂ ಅನ್ನಿ, ಸನ್ಯಾಸತ್ವ ಆದರೂ ಅನ್ನಿ. ಪಟ್ಟಕ್ಕೇರಲೇಬೇಕು..!?

ಬಿಜೆಪಿ ಹಿಂದುತ್ವಕ್ಕಾಗಿ ಜನ್ಮ ತಾಳಿದರೇ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಠಿಸುವ ಉದ್ದೇಶದೊಂದಿಗೆ 1885ರಲ್ಲಿ ಸ್ಥಾಪಿಸಲಾಯಿತು. ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟೀಷ್ ವಿರೋಧಿಯಾಗಿರಲಿಲ್ಲ. ಆಮೇಲೆ ಬ್ರಿಟೀಷ್ ಸರ್ಕಾರದ ವಿರುದ್ಧ ಸೆಟೆದು ನಿಂತಿತ್ತು. ಸ್ವಾತಂತ್ರಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಸಾರಥ್ಯವನ್ನು ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ವಹಿಸಿಕೊಂಡಿದ್ದರು. ಸ್ವಾತಂತ್ರ್ಯನಂತರ ಜವಾಹರ್ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೇಕ ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಮಟ್ಟಿಗೆ ನೆಹರು ಪ್ರಮುಖವಾಗಿದ್ದರಿಂದ ಅದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯನ್ನು ಮುಗಿಸಿಕೊಂಡು ರಾಹುಲ್ ಗಾಂಧಿಯವರೆಗೆ ಬಂದುನಿಂತಿದೆ. ಇದೇ ಕ್ಲೈಮ್ಯಾಕ್ಸ್ ಆಗುತ್ತಾ ಎಂಬುದು ಕೆಲ ತಿಂಗಳ ಹಿಂದಿನವರೆಗೆ ಇದ್ದ ಆತಂಕ. ಈಗ ಪಥ ಬದಲಾಗಿದೆ. ಉದ್ದೇಶ ಸ್ಪಷ್ಟವಾಗಿದೆ. ಅಧಿಕಾರವೊಂದೇ ಗುರಿಯಾಗಿದೆ.

ಕಾಂಗ್ರೆಸ್ ಆರು ದಶಕಗಳಿಗೂ ಹೆಚ್ಚು ಕಾಲ ಜಾತ್ಯಾತೀತ ಅಂಶಗಳನ್ನೇ ಉಸಿರಾಡಿಕೊಂಡು ಅಧಿಕಾರಕ್ಕೇರಿದೆ. ಕೇವಲ ಹಿಂದುತ್ವ ಒಂದರಿಂದ ಅಧಿಕಾರ ಸಿಗುವುದಿಲ್ಲ ಎಂಬುದಕ್ಕೆ ಇದು ದೃಷ್ಠಾಂತವಾಗಿದೆ. ಆದರೆ ಪ್ರಸ್ತುತ ಸ್ಥಿತಿ ಬದಲಾಗಿದೆ. ಗೋ ಮಂದಿರದಂತಹ ವಿಚಾರಗಳು ಮುಖ್ಯ ನೆಲೆಗೆ ಬಂದಿದೆ. ಅಸಹಿಷ್ಣುತೆಗೆ ಕಾರಣವಾದ ವರ್ಗವಾದದ ಕೈ ಮೇಲಾಗುತ್ತಿದೆ. ರಾಜಕಾರಣದ ದುರುದ್ದೇಶದಿಂದ ಜಾತ್ಯಾತೀತ ಶಕ್ತಿಗಳನ್ನು ದಮನಗೊಳಿಸಲಾಗುತ್ತಿದೆ. ಪ್ರಶ್ನಿಸಿದರೇ ಶಿಕ್ಷಿಸುತ್ತೇವೆಂಬ ಪರಿಸ್ಥಿತಿ. ಬದಲಾಗಬೇಕಲ್ಲವೇ..? ಮುಳ್ಳನ್ನು ಮುಳ್ಳಿನಿಂದಲೇ ಕೀಳುವ ತಂತ್ರಗಾರಿಕೆ ಇತಿಹಾಸವಿರುವ ಪಕ್ಷಕ್ಕಲ್ಲದೇ ಮತ್ಯಾರಿಗೆ ಬರಬೇಕು..?- ಫಲಿತಾಂಶದ ನಿರೀಕ್ಷೆಯಷ್ಟೇ ಉಳಿದಿದೆ.
( ಲೇಖನದ ಆಚೆಗೊಂದು ಮಾತು: ಅಷ್ಟಕ್ಕೂ ಹಿಂದುತ್ವವಿಲ್ಲದೆ ಬಾಬ್ರಿ ಮಸೀದಿ ನೆಲಕ್ಕೆ ಬಿತ್ತಾ..?. ಅವತ್ತು ಅಧಿಕಾರದಲ್ಲಿದ್ದದ್ದು ಯಾರು..?. ಬಿಜೆಪಿಯದ್ದು ಬಹಿರಂಗ ಹಿಂದುತ್ವ. ಕಾಂಗ್ರೆಸ್ ನದ್ದು ಮುಖವಾಡ. ಇಷ್ಟೇ ವ್ಯತ್ಯಾಸ )






