ಐಸಿಸಿ ಏಕದಿನ ರ್‍ಯಾಂಕಿಂಗ್‍ನ ಈ ವಾರದ ಪಟ್ಟಿ ಬಿಡುಗಡೆಯಾಗಿದ್ದು ಅತ್ಯುತ್ತಮ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಕಳೆದ ವಾರದ ಪಟ್ಟಿಯಲ್ಲಿಯೂ ಕೂಡ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರು.
ವಿರಾಟ್ ಕೊಹ್ಲಿ 857 ಅಂಕಗಳನ್ನು ಪಡೆದುಕೊಂಡಿದ್ದರೆ, ರೋಹಿತ್ ಶರ್ಮಾ 825 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅತ್ಯುತ್ತಮ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ 690 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿಯೇ ಉಳಿದಿದ್ದಾರೆ.
ಅತ್ತ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 97 ರನ್‌ಗಳ ಅಮೋಘ ಜಯ ಸಾಧಿಸಿದ ಪರಿಣಾಮವಾಗಿ ವೇಗಿ ದುಷ್ಮಂತ ಚಮೀರ ಹಾಗೂ ಕುಸಾಲ್ ಪೆರೇರಾ ಶ್ರೇಯಾಂಕ ಪಟ್ಟಿಯಲ್ಲಿ ಏರಿಕೆಗಳನ್ನು ಕಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಗೂ ಮುನ್ನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿದ್ದ ದುಷ್ಮಂತ ಚಮೀರ ಈಗ 33ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಸರಣಿಯಲ್ಲಿ ಸೆಂಚುರಿ ಬಾರಿಸಿದ್ದ ಕುಶಾಲ್ ಪೆರೇರಾ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯಲ್ಲಿ 42ನೇ ಸ್ಥಾನಕ್ಕೆ ಜಿಗಿದಿದ್ದಾರೆ.