ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್' ಹೊಸತಲ್ಲ..!

1
46

raaa

ಇಂಡಿಯನ್ ಪ್ರೀಮಿಯರ್ ಲೀಗ್. ದೇಶ ವಿದೇಶದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿ ಅವರನ್ನು ಅಂಗಣಕ್ಕೆ ಬಿಟ್ಟು ಕಾಸು ಮಾಡಿಕೊಳ್ಳುವ ಬಿಸಿನೆಸ್. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಐಪಿಎಲ್ ಹುಟ್ಟಿಸಿದ್ದ ಕ್ರೇಜ್ ಕೂಡ ಸಣ್ಣದಲ್ಲ. ಆಟಗಾರರು ರೊಚ್ಚಿಗೆದ್ದರು. ಅಭಿಮಾನಿಗಳು ಹುಚ್ಚೆದ್ದರು. ಅತ್ತ ಇವರನ್ನು ಆಡಿಸುತ್ತಿದ್ದವರು ವಾಮಾಮಾರ್ಗದಲ್ಲಿ ಕಾಸು ಮಾಡಿಕೊಳ್ಳುವ ಹುಕಿಗೆ ಬಿದ್ದರು. ಆಟ ಕೇವಲ ಆಟವಾಗಿ ಉಳಿಯಲಿಲ್ಲ. ಅಲ್ಲಿ ನಡೆದದ್ದು ಶುದ್ಧ ಆಟಾಟೋಪ.

ಏಪ್ರಿಲ್ ಏಳನೇ ತಾರೀಕು ಒಂಬತ್ತನೇ ಐಪಿಎಲ್ ಆವೃತ್ತಿ ಆರಂಭವಾಗಿದೆ. ಆಟಗಾರರು ಅಬ್ಬರಿಸುತ್ತಿದ್ದಾರೆ. ಆರ್.ಸಿ.ಬಿ ಆಟಗಾರರಾದ ಕೊಹ್ಲಿ, ವಿಲಿಯರ್ಸ್ ರಾಕ್ಷಸರಂತೆ ಆಡುತ್ತಿದ್ದಾರೆ. ಬಿಸಿನೆಸ್ ಲೆಕ್ಕಾಚಾರದಲ್ಲಿ ಆರ್.ಸಿ.ಬಿ ಮ್ಯಾಚ್ ಸಖತ್ ಕಾಸು ಹುಟ್ಟಿಸುತ್ತಿದೆ. ಈ ಬಾರಿ ಎರಡು ಬಲಿಷ್ಠ ತಂಡಗಳು ಕಣಕ್ಕಿಳಿದಿಲ್ಲ. ಕಳೆದ ವರ್ಷ 2013ರ ಐಪಿಎಲ್ನಲ್ಲಿ ನಡೆದಿದ್ದ ದೊಡ್ಡ ಮಟ್ಟದ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಪಟ್ಟಂತೆ ಸುಪ್ರಿಂ ಕೋರ್ಟ್ ನೇಮಿಸಿದ್ದ ನ್ಯಾಯಮೂತರ್ಿ ಲೋಧ ನೇತೃತ್ವದ ತ್ರಿಸದಸ್ಯ ಸಮಿತಿ ಕೊಟ್ಟ ತೀರ್ಪಿನಲ್ಲಿ ರಾಜಸ್ತಾನ್ ರಾಯಲ್, ಚೆನ್ನೈ ಸೂಪರ್ ಕಿಂಗ್ ತಂಡಕ್ಕೆ ಎರಡು ವರ್ಷ ನಿಷೇಧ ಹೇರಿರುವುದರಿಂದ ಒಂಬತ್ತು ಮತ್ತು ಹತ್ತನೇ ಆವೃತ್ತಿಯಲ್ಲಿ ಆ ತಂಡಗಳು ಆಡುವಂತಿಲ್ಲ. ಆ ತಂಡಗಳಲ್ಲಿ ಮಿಂಚು ಹರಿಸಿದ್ದ ಧೋನಿ ಮುಂತಾದವರು ಈ ಐಪಿಎಲ್ನಲ್ಲಿ ಸಣ್ಣ ಸದ್ದು ಮಾಡದೇ ಠುಸ್ ಆಗಿದ್ದಾರೆ. ಇನ್ನು ಇವೆರಡು ತಂಡವನ್ನು ಜಗತ್ತಿನ ಮುಂದೆ ಬೆತ್ತಲು ಮಾಡಿದ ರಾಜಸ್ಥಾನ್ ತಂಡದ ರಾಜ್ ಕುಂದ್ರಾ, ಚೆನೈನ ಗುರುನಾಥ್ ಮಯ್ಯಪ್ಪನ್ ಇಬ್ಬರಿಗೆ ಐಪಿಎಲ್ ನಿಂದ ಅಜೀವ ನಿಷೇಧ ಹೇರಲಾಗಿದೆ. ಹಾಗೆ ನೋಡಿದ್ರೇ ಈ ಐಪಿಎಲ್ ಆರಂಭವಾದಾಗಿನಿಂದ ಹಗರಣದ ಸುಳಿಯಲ್ಲಿ ಸಿಲುಕಿದ್ದೇ ಹೆಚ್ಚು. ಹಲವಾರು ವಿವಾದಗಳನ್ನು ಮೈಗೆಳೆದುಕೊಂಡಿದೆ. ಐಪಿಎಲ್ಗಿದ್ದ ಗತ್ತು, ಗಾಂಭೀರ್ಯ ಹಂತಹಂತವಾಗಿ ಕುಸಿಯುತ್ತ ಹೋಗಿದ್ದು ಸುಳ್ಳಲ್ಲ. ಆರಂಭದಲ್ಲಿದ್ದ ಕ್ರೇಜ್ ಕೂಡ ಈಗಿಲ್ಲ. ಅದಕ್ಕೆ ಅದರ ಸ್ವಯಂಕೃತಪರಾಧಗಳೇ ಕಾರಣ.

ಅದು 2008ರ ಏಪ್ರಿಲ್ ತಿಂಗಳು. ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸದೊಂದು ಅಧ್ಯಾಯ ಶುರುವಾದ ಸಮಯ. ಲಲಿತ್ ಮೋದಿ ಎಂಬ ಪಕ್ಕಾ ವ್ಯಾಪಾರಿ ಮನೋಭಾವದ ವ್ಯಕ್ತಿ ಭಾರತೀಯ ಕ್ರಿಕೆಟ್ ರಂಗಕ್ಕೆ ಐಪಿಎಲ್ ಎಂಬ ಹೊಸ ಕ್ರಿಕೆಟ್ ವ್ಯಾಪಾರವನ್ನು ಪರಿಚಯ ಮಾಡಿಸಿಕೊಟ್ಟ. ದೇಶಿ ಕ್ರಿಕೆಟ್ ಪ್ರತಿಭೆಗಳ ಅನ್ವೇಷಣೆಯ ಮುಸುಕು ಧರಿಸಿ ಪರಿಚಯವಾದ ಈ ಹೊಸ ಕ್ರಿಕೆಟ್ ಅವೃತ್ತಿ ಗಳಿಸಿದ ಯಶಸ್ಸು ಅಷ್ಟಿಷ್ಟಲ್ಲ. ಅದುವರೆಗೂ ಜಾಗತಿಕ ಕ್ರಿಕೆಟ್ನ ದೊಡ್ಡಣ್ಣನಾಗಿ ಮೆರೆಯುತ್ತಿದ್ದ ಬಿಸಿಸಿಐಗೆ, ಈ ಕ್ರಿಕೆಟ್ ಮಾದರಿ ಆನೆ ಬಲ ತಂದಿತ್ತು. ಆಟಗಾರರ ಪಾಲಿಗೆ ಸಹ ಐಪಿಎಲ್ ಎಂಬುದು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಬಿಸಿಸಿಐಗೆ ಖಜಾನೆಗೆ ಇದರಿಂದಾಗಿ ಕೋಟಿ ಕೋಟಿ ಹಣ ಹರಿದು ಬರಲಾರಂಭಿಸಿತು. ದೇಶಿ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಸಹ ಐಪಿಎಲ್ ಎಂದರೆ ಬಾಯಿ ಬಿಡುವಂತಾಯಿತು. ಕೆಲ ಕ್ರಿಕೆಟಿಗರಂತೂ ತಮ್ಮ ದೇಶದ ಪರ ಆಡದಿದ್ದರೂ ಐಪಿಎಲ್ ಅನ್ನು ಮಾತ್ರ ಮಿಸ್ ಮಾಡುತ್ತಿರಲಿಲ್ಲ. ಹೀಗೆ ಐಪಿಎಲ್ ಎಂಬುದು ಭಾರತೀಯ ಕ್ರಿಕೆಟ್ ರಂಗವನ್ನು ಆರ್ಥಿಕವಾಗಿ ಬಹಳಷ್ಟು ಸಧೃಡವಾಗಿಸಿತ್ತು. ಇದನ್ನು ಗಮನಿಸಿದ ಬೇರೆ ದೇಶದ ಕ್ರಿಕೆಟ್ ಮಂಡಳಿಗಳು ಸಹ ಐಪಿಎಲ್ ಮಾದರಿಯಲ್ಲಿಯೇ ದೇಶಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾರಂಭಿಸಿದವು. ಆದರೆ ಐಪಿಎಲ್ನಷ್ಟು ಅದ್ದೂರಿಯಾಗಿ ಬೇರಾವ ದೇಶದ ಟೂರ್ನಿಯು ನಡೆಯುವುದಿಲ್ಲ. ಐಪಿಎಲ್ ಯಾವ ಪರಿ ಪ್ರಖ್ಯಾತಿಯಾಯಿತೆಂದರೆ ಪ್ರಪಂಚದ ಅತಿ ಶ್ರೀಮಂತ ದೇಶಿ ಕ್ರಿಕೆಟ್ ಟೂರ್ನಿ ಎಂಬ ಹೆಗ್ಗಳಿಕೆ ಪಡೆಯಿತು. ಆದರೆ ಐಪಿಎಲ್ ಮೊದಲ ಅವೃತ್ತಿಯಲ್ಲೇ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಅದ್ದೂರಿ ಆರಂಭದ ಮುಂದೆ ಅದು ಅಷ್ಟು ದೊಡ್ಡದಾಗಿ ಕಾಣಲಿಲ್ಲ. ಇಲ್ಲಿಂದ ಶುರುವಾದ ಐಪಿಎಲ್ ಸಮಸ್ಯೆಗಳ ಆಗರವಾಯಿತು.

2008ರಲ್ಲಿ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹರ್ಭಜನ್ ಸಿಂಗ್ ಎದುರಾಳಿ ಪಂಜಾಬ್ ತಂಡದ ಶ್ರೀಶಾಂತ್ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದರು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಬ್ಬರು ಆಟಗಾರರು ಈ ಪರಿ ಕಿತ್ತಾಡಿಕೊಂಡ ಮೊದಲ ದೃಷ್ಟಾಂತವಾಯಿತು. ಐಪಿಎಲ್ಗೆ ಕಳಂಕ ಅಲ್ಲಿಂದ ಅಂಟಿಕೊಂಡಿತ್ತು. 2009ರ ಎರಡನೆ ಐಪಿಎಲ್ಗೆ ಮುಂಬೈ ಬಾಂಬ್ ಸ್ಫೋಟದ ಕರಿನೆರಳು ಅವರಿಸಿಕೊಂಡಿತು. ಇದರಿಂದಾಗಿ ಐಪಿಎಲ್ ಎರಡನೆ ಅವೃತ್ತಿ ದಕ್ಷಿಣ ಅಫ್ರಿಕಾದಲ್ಲಿ ಆಯೋಜನೆಗೊಂಡಿತ್ತು. ಟೂರ್ನಿಯಿಂದ ಪಾಕಿಸ್ತಾನದ ಆಟಗಾರರನನ್ನು ಕೈಬಿಡಲಾಯಿತು. ಪಾಕಿಸ್ತಾನದ ಆಟಗಾರರನ್ನು ಕೈಬಿಟ್ಟಿದ್ದು ಹಲವರ ಟೀಕೆಗೆ ಕಾರಣವಾಯಿತು. ಅಲ್ಲದೇ ಟೂರ್ನಿಯನ್ನು ದಕ್ಷಿಣ ಅಫ್ರಿಕಾದಲ್ಲಿ ಆಯೋಜಿಸುವ ವಿಚಾರವಾಗಿ ಅಲ್ಲಿಯ ಕ್ರಿಕೆಟ್ ಮಂಡಳಿಯಲ್ಲಿ ಅಂತರಿಕ ಭಿನ್ನಾಭಿಪ್ರಾಯಕ್ಕೆ ಬಿಸಿಸಿಐ ನಾಂದಿ ಹಾಡಿತು ಎಂಬ ಅಪವಾದವು ಬಿಸಿಸಿಐ ಹಾಗೂ ಐಪಿಎಲ್ ಎರಡಕ್ಕೂ ಅಂಟಿಕೊಂಡಿತ್ತು.

2010ರಲ್ಲಿ ಸಣ್ಣಪುಟ್ಟ ವಿವಾದಗಳಲ್ಲಿದ್ದ ಐಪಿಎಲ್ ಟೂರ್ನಿ ದೊಡ್ಡದೊಂದು ವಿವಾದಕ್ಕೆ ನಾಂದಿಯಾಯಿತು. ಶ್ರೀಮಂತ ಕ್ರಿಕೆಟ್ ಟೂರ್ನಿಯ ಹುಟ್ಟಿಗೆ ಕಾರಣರಾಗಿದ್ದ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯನ್ನು ಬಿಸಿಸಿಐ ಟೂರ್ನಿಯಿಂದ ಹೊರಹಾಕಿತ್ತು. ಐಪಿಎಲ್ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಲಲಿತ್ ಮೋದಿಯ ಹೆಸರು ಕೇಳಿಬಂದಿತ್ತು. ಮೂರನೇ ಆವೃತ್ತಿಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯುವ ಸ್ವಲ್ಪ ಸಮಯದ ಮುಂಚೆ ಲಲಿತ್ ಮೋದಿಯನ್ನು ಐಪಿಎಲ್ ಟೂರ್ನಿಯಿಂದ ಕಿಕ್ಔಟ್ ಮಾಡಲಾಯಿತು. ಅಲ್ಲದೆ ಇದೇ ಪ್ರಕರಣದಲ್ಲಿ ಸಚಿವ ಶಶಿ ತರೂರ್ ಹೆಸ್ರು ಸಹ ಕೇಳಿ ಬಂದಿತ್ತು. ಹೀಗೆ ಮೂರನೇ ಆವೃತ್ತಿಯ ಐಪಿಎಲ್ ಟೂರ್ನಿ ಐಪಿಎಲ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಅಲ್ಲದೆ ಇದೇ ಟೂರ್ನಿಯಲ್ಲಿ ಐಪಿಎಲ್ ಒಪ್ಪಂದಗಳ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಲ್ರೌಂಡರ್ ರವೀಂದ್ರ ಜಡೇಜಾ ಒಂದು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಕ್ಕೊಳಗಾದರು.

ಇಷ್ಟೆಲ್ಲಾ ವಿವಾದಗಳ ನಡುವೆಯೂ 2011ರಲ್ಲಿ ನಾಲ್ಕನೆ ಆವೃತ್ತಿಯ ಐಪಿಎಲ್ ಅದ್ದೂರಿಯಾಗಿಯೇ ಆಯೋಜನೆಗೊಂಡಿತ್ತು. ಅದರಲ್ಲೂ ಈ ಬಾರಿ ಮತ್ತೆರಡು ತಂಡಗಳು ಐಪಿಎಲ್ಗೆ ರಂಗಪ್ರವೇಶ ಮಾಡಿದ್ದವು. ಕೇರಳದ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ಐಪಿಎಲ್ಗೆ ಸೇರ್ಪಡೆಗೊಂಡವು. ಈ ಟೂರ್ನಿಯಲ್ಲಿ ಕೋಲ್ಕತ್ತಾ ತಂಡದಿಂದ ಸೌರವ್ ಗಂಗೂಲಿಯನ್ನು ಕೈಬಿಡುವ ಮೂಲಕ ಶಾರುಖ್ ಖಾನ್ ವಿರುದ್ದ ಸಾಕಷ್ಟು ಪ್ರತಿಭಟನೆಗಳಾದವು. ಇನ್ನೂಂದು ದುರಾದೃಷ್ಟವೆಂದರೆ ಈ ಆವೃತ್ತಿಗೆ ಪಾದಾರ್ಪಣೆ ಮಾಡಿದ್ದ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ಎರಡೂ ಇದೇ ವರ್ಷ ತಮ್ಮ ಅಭಿಯಾನ ಮುಗಿಸಿದ್ದವು. ಆ ಮೂಲಕ ಆ ತಂಡಗಳಲ್ಲಿದ್ದ ಆಟಗಾರರನ್ನು ಮತ್ತೆ ಬಿಕರಿ ಮಾಡಬೇಕಾಗಿ ಬಂದಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. 2012ರ ಐಪಿಎಲ್ ಸಹ ವಿವಾದಗಳಿಂದ ದೂರ ಉಳಿಯಲಿಲ್ಲ. ಹಲವು ವಿವಾದಗಳು ಈ ಐಪಿಎಲ್ನಲ್ಲಿ ಕಾಣಿಸಿಕೊಂಡು ಸಾಕಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿತ್ತು. ಪುಣೆ ವಾರಿಯರ್ಸ್ ತಂಡದ ರಾಹುಲ್ ಶರ್ಮ ಹಾಗೂ ವೇಯ್ನ್ ಪಾರ್ನಲ್ ರೇವ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದಾಗ ಪೊಲೀಸರು ಬಂಧಿಸಿದ್ದರು. ಪಾರ್ಟಿ ವೇಳೆ ಇವರು ಮಾದಕ ವಸ್ತುಗಳ ಸೇವನೆ ಮಾಡಿದ್ದರು ಎಂಬ ಅಪವಾದವೂ ಕೇಳಿ ಬಂದಿತ್ತು. ಇದಲ್ಲದೆ ಆರ್ಸಿಬಿ ತಂಡದ ಆಸ್ಟ್ರೇಲಿಯಾ ಆಟಗಾರ ಲ್ಯೂಕ್ ಪಾಮರ್ಬಾಷ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸ್ರು ಬಂಧಿಸಿದ್ದರು. ಇದಲ್ಲಕ್ಕಿಂತ ಹೆಚ್ಚು ಸುದ್ದಿ ಮಾಡಿದ ವಿವಾದವೆಂದರೆ ಶಾರೂಖ್ ಖಾನ್ ಮೇಲೆ ವಾಂಖಡೆ ಕ್ರೀಡಾಂಗಣಕ್ಕೆ ಬರದಂತೆ ನಿಷೇಧ ಹೇರಿದ್ದು. ವಾಂಖಡೆಯಲ್ಲಿ ನಡೆದ ಪಂದ್ಯವೊಂದರ ವೇಳೆ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಶಾರೂಖ್ ಖಾನ್ಗೆ 5 ವರ್ಷ ಕ್ರೀಡಾಂಗಣಕ್ಕೆ ಬರದಂತೆ ನಿಷೇಧ ಹೇರಿತ್ತು.

ಸಣ್ಣ ಪ್ರಮಾಣದ ವಿವಾದಗಳಿಗೆ ಸಾಕ್ಷಿಯಾಗಿದ್ದ ಐಪಿಎಲ್ 2013ರಲ್ಲಿ ಭಾರತೀಯ ಕ್ರಿಕೆಟ್ ಹಾಗೂ ವಿಶ್ವ ಕ್ರಿಕೆಟ್ ಬೆಚ್ಚಿಬೀಳುವಷ್ಟು ದೊಡ್ಡ ಪ್ರಮಾಣದ ವಿವಾದವನ್ನು ಹುಟ್ಟುಹಾಕಿತ್ತು. ಮೂವರು ಭಾರತೀಯ ಕ್ರಿಕೆಟ್ ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದರು. ರಾಜಸ್ತಾನ್ ರಾಯಲ್ಸ್ನ ಶ್ರೀಶಾಂತ್, ಅಂಕಿತ್ ಚೌಹಾಣ್, ಹಾಗೂ ಅಜೀತ್ ಚಾಂಡಿಲಾ ಪಂದ್ಯವೊಂದರಲ್ಲಿ ಸ್ಪಾಟ್ಫಿಕ್ಸಿಂಗ್ ಮಾಡಿಕೊಂಡ ಆರೋಪದಲ್ಲಿ ದೆಹಲಿ ಪೊಲೀಸ್ರು ಮೂವರು ಆಟಗಾರರನ್ನು ಬಂಧಿಸಿ ಜೈಲಿಗಟ್ಟಿದ್ದರು. ಚೆನ್ನೈ ಸೂಪರ್ ಕಿಂಗ್ಸ್ನ ಗುರುನಾಥನ್ ಮೇಯಪ್ಪನ್, ರಾಜಸ್ತಾನ್ನ ರಾಯಲ್ಸ್ನ ಮಾಲೀಕ ರಾಜ್ ಕುಂದ್ರಾ, ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನಗಳು ಕಾಣಿಸಿಕೊಂಡವು. ಇವರ ಹೆಸರುಗಳೊಂದಿಗೆ ಬಿಸಿಸಿಐನ ಅಂದಿನ ಅಧ್ಯಕ್ಷ ಶ್ರೀನಿವಾಸನ್ ಹೆಸರು ತಳುಕು ಹಾಕಿಕೊಂಡು ವಿವಾದ ಮತ್ತಷ್ಟು ರಂಗೇರಿತು. ಪ್ರಕರಣವನ್ನು ತನಿಖೆ ಮಾಡಲು ಮುಕುಲ್ ಮದ್ಗಲ್ ಸಮಿತಿ ಕೂಡ ನೇಮಕವಾಯಿತು. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇದ್ದ ಹಿನ್ನಲೆಯಲ್ಲಿ ಈ ಟೂರ್ನಿಯ ಅರ್ಧ ಭಾಗವನ್ನು ಯುನೈಟೆಡ್ ಎಮಿರೇಟ್ಸ್ ಅರಬ್ನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಟೂರ್ನಿಯಲ್ಲಿ ಯಾವುದೇ ವಿವಾದಗಳು ಸೃಷ್ಠಿಯಾಗಲಿಲ್ಲ. ಆದರೆ 2013ರ ವಿವಾದಗಳ ಕರಿನೆರಳು ಈ ಟೂನರ್ಿಯನ್ನು ಅವರಿಸಿಕೊಂಡಿತ್ತು. 2013ರ ಪ್ರಕರಣವನ್ನು ಅಧ್ಯಯನ ಮಾಡಿದ್ದ ಮುಕುಲ್ ಮುದ್ಗಲ್ ಸಮಿತಿ ಸುಪ್ರೀಂ ಕೋರ್ಟ್ ಗೆ ತನ್ನ ವರದಿಯನ್ನು ನೀಡಿತ್ತು. ಹಾಗಾಗಿ ಸುಪ್ರೀಂ ಯಾವ ತೀರ್ಪು ನೀಡಬಹುದು ಟೂರ್ನಿಯ ಅಸ್ತಿತ್ವ ಏನಾಗಬಹುದು ಎಂಬ ಭಯದಲ್ಲೆ ಟೂರ್ನಿ ನಡೆಯಿತು.

2013ರ ಐಪಿಎಲ್ನಲ್ಲಿ ನಡೆದಿದ್ದ ದೊಡ್ಡಮಟ್ಟದ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಹಗರಣದ ರೂವಾರಿ ಲಲಿತ್ ಮೋದಿಯ ಜೊತೆ ಬಿಜೆಪಿಯ ಸುಷ್ಮಾ ಸ್ವರಾಜ್, ವಸುಂಧರ ರಾಜೆಯ ಹೆಸರೂ ಕೇಳಿಬಂದಿತ್ತು. ಆತ ದೇಶಬಿಟ್ಟು ಎರಡು ವರ್ಷ ಕಳೆಯುತ್ತಾ ಬಂದರೂ ಅವನನ್ನು ಬಂಧಿಸಲು ಕೇಂದ್ರ ಸರ್ಕಾರದಿಂದ ಆಗಿಲ್ಲ. ಲಲಿತ್ ಮೋದಿಯನ್ನೇ ಹಿಡಿಯದ ಸರ್ಕಾರ ದಾವೂದ್ ಇಬ್ರಾಹಿಂನನ್ನು ಹಿಡಿಯುತ್ತಾ ಅಂತ ವಿರೋಧಿಗಳು ಕುಟುಕುತ್ತಲೇ ಇದ್ದಾರೆ. ಇದೀಗ ಸಾವಿರಾರು ಕೋಟಿಗೆ ಉಂಡೆನಾಮ ತಿಕ್ಕಿ ಪರಾರಿಯಾಗಿರುವ ಮಲ್ಯನಿಗೂ ಐಪಿಎಲ್ ನಂಟಿದೆ. ಆರ್ಸಿಬಿ ಮೇಲೂ ಕೋಟಿಗಟ್ಟಲೇ ಸಾಲ ಎತ್ತಿದ್ದಾರೆ. ಕಾಲಾಂತರದಲ್ಲಿ ಆರ್ಸಿಬಿಗೆ ಇದರ ಎಫೆಕ್ಟ್ ತಟ್ಟುತ್ತಾ..? ಗೊತ್ತಿಲ್ಲ. ಇದೀಗ ಮೋದಿಯಂತೆ ಮಲ್ಯ ಕೂಡ ಲಂಡನ್ನಲ್ಲಿದ್ದಾರೆ. ಮೋದಿ, ಮಲ್ಯ ಆರಾಮಾಗಿ ಅಲ್ಲಿ ಐಪಿಎಲ್ ಆಡುತ್ತಿರಬಹುದೇನೋ..? ಖಾತ್ರಿಯಿಲ್ಲ.

2015ರಲ್ಲೂ ಐಪಿಎಲ್ ವಿವಾದಗಳಿಂದ ದೂರ ಉಳಿಯಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೌಲ್ಯದ ಕುರಿತು ವಿವಾದ ಎದ್ದಿತ್ತು. ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿದ ಆರೋಪದ ಮೇಲೆ ಸುನೀಲ್ ನರೇನ್ ಕೆಲ ಪಂದ್ಯಗಳ ನಿಷೇಧ ಅನುಭವಿಸಿದರು. ಹಾಗೆ ಲಲಿತ್ ಮೋದಿ ಸೇರಿದಂತೆ ಕೆಲ ಆಟಗಾರರು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಟ್ವಿಟ್ ಮಾಡುವ ಮೂಲಕ ವಿವಾದಗಳನ್ನು ಎಬ್ಬಿಸಿದ್ದರು. ಆಮೇಲೆ 2013 ಸ್ಪಾಟ್ಫಿಕ್ಸಿಂಗ್ ಕುರಿತು ಲೋಧಾ ಸಮಿತಿ ತೀರ್ಪು ನೀಡಿ ರಾಜ್ಕುಂದ್ರಾ ಹಾಗೂ ಗುರುನಾಥನ್ ಮೇಯಪ್ಪನ್ ಗೆ ಅಜೀವ ನಿಷೇಧ ಹೇರಿದೆ. ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ಅನ್ನು ಟೂರ್ನಿಯಿಂದ ಹೊರಗಟ್ಟಿದೆ. ಇದೀಗ ಏಪ್ರಿಲ್ ನಲ್ಲಿ ಒಂಬತ್ತನೇ ಆವೃತ್ತಿಯ ಟೂರ್ನಿ ನಡೆಯುತ್ತಿದೆ. ಇಲ್ಲೂ ಫಿಕ್ಸಿಂಗ್ ಭೂತ ವಕ್ಕರಿಸಿರುವ ಸುದ್ದಿಯಿದೆ.

POPULAR  STORIES :

ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?

ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!

ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…

25000 ಜನರು ಎದೆ ಹಿಡಿದುಕೊಂಡು ಉಸಿರು ಕಟ್ಟಿ ಸತ್ತರು..! ಆದರೆ ಕೊಲೆಗಡುಕ ವಾರೆನ್ ಆಯುಷ್ಯ ಮುಗಿದೇ ಸತ್ತ..!?

1 COMMENT

LEAVE A REPLY

Please enter your comment!
Please enter your name here